
ರಾಜಸ್ಥಾನ: ಅತೀ ಚಿಕ್ಕ ವಯಸ್ಸಿನಲ್ಲೇ ಸಂಭವಿಸುತ್ತಿರುವ ಹೃದಯಾಘಾತಗಳು ದೊಡ್ಡ ಆತಂಕ ಸೃಷ್ಟಿಸುತ್ತಿವೆ. ಸಣ್ಣ ಸಣ್ಣ ಮಕ್ಕಳಿಂದ ಹಿಡಿದು ಯುವಕರು ಹಠಾತ್ ಕುಸಿದುಬಿದ್ದು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದೀಗ ಇಂತಹುದೇ ಒಂದು ಘಟನೆ ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ಸಂಭವಿಸಿದೆ. ಇಡೀ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ.
ಸ್ನೇಹಿತರ ಜೊತೆ ಖುಷಿ ಖುಷಿಯಾಗಿ ಕ್ರಿಕೆಟ್ ಆಡುತ್ತಿದ್ದ ಹುಡುಗ ಇನ್ನಿಲ್ಲ ಅನ್ನೋದನ್ನ ಯಾರೂ ಊಹಿಸಿಕೊಳ್ಳಲು ಸಾಧ್ಯವಿಲ್ಲ. 25 ವರ್ಷದ ಯುವಕ ಎದೆನೋವಿನಿಂದ ಕುಸಿದು ಬಿದ್ದು ದುರಂತ ಅಂತ್ಯ ಕಂಡಿದ್ದಾನೆ. ದೌಸಾ ಜಿಲ್ಲೆಯ ಸ್ಯಾಮ್ಲೇಟಿ ಗ್ರಾಮದಲ್ಲಿ ಕೆಲವು ಯುವಕರು ಕ್ರಿಕೆಟ್ ಆಡುತ್ತಿದ್ದ. ಅದೇ ಗ್ರಾಮದ ರಾಮರಾಜ್ ಮೀನಾ ಕ್ಯಾಪ್ಟನ್ ಆಗಿ ತಂಡ ಒಂದನ್ನ ಮುನ್ನಡೆಸುತ್ತಿದ್ದ.
ಪಂದ್ಯಕ್ಕೂ ಮುನ್ನ ಟಾಸ್ ಗೆದ್ದ ರಾಮರಾಜ್ ಮೈದಾನಕ್ಕೆ ಇಳಿದಿದ್ದ. ಬ್ಯಾಟಿಂಗ್ ಆರಂಭಿಸಿದ ಸ್ವಲ್ಪ ಸಮಯದಲ್ಲೇ ತೀವ್ರ ನೋವು ಕಾಣಿಸಿಕೊಂಡಿದೆ. ನೋವು ತಡೆಯಲಾಗದೇ ರಾಮರಾಜ್ ಇದ್ದಕ್ಕಿದ್ದಂತೆ ಮೈದಾನದಲ್ಲಿ ಕುಸಿದು ಬಿದ್ದ. ಗಾಬರಿಯಾದ ಸ್ನೇಹಿತರು ಆತನನ್ನು ಆಸ್ಪತ್ರೆಗೆ ದಾಖಲಿಸಲು ಮುಂದಾದರು. ಹತ್ತಿರ ಇರುವ ಮಹ್ವಾ ಆಸ್ಪತ್ರೆಗೆ ಕರೆದೊಕೊಂಡು ಹೋದರು. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಜೈಪುರಕ್ಕೆ ಕರೆದೊಯ್ಯಲು ಸಲಹೆ ನೀಡಿದರು.
ಆಗಲೇ ಸ್ನೇಹಿತರು ಮನೆಯವರಿಗೆ ಸುದ್ದಿ ಮುಟ್ಟಿಸಿದ್ದರಿಂದ ಅವರೂ ಕೂಡ ಆಸ್ಪತ್ರೆಗೆ ಆಗಮಿಸಿದ್ದರು. ವಿಳಂಬ ಮಾಡಲಿಲ್ಲ. ಕೂಡಲೇ ಕುಟುಂಬದ ಸದಸ್ಯರು ರಾಮರಾಜ್‌ನನ್ನು ಜೈಪುರದ ಎಸ್‌ಎಂಎಸ್ ಆಸ್ಪತ್ರೆಗೆ ಕರೆದೊಯುದ್ದು ಚಿಕಿತ್ಸೆ ಕೊಡಿಸುವ ಪ್ರಯತ್ನ ಮಾಡಿದ್ದರು. ಆದರೆ ದುರಾದೃಷ್ಟವಶಾತ್ ಅಲ್ಲಿಗೆ ಹೋಗುವಷ್ಟರಲ್ಲಿ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಪ್ರಾಥಮಿಕ ತನಿಖೆಗಳು ಘಟನೆ ಹೃದಯಾಘಾತ ಕಾರಣ ಎಂದು ಹೇಳಿವೆ. ರಾಮರಾಜ್‌ಗೆ ಈ ಮೊದಲು ಆರೋಗ್ಯ ಸಮಸ್ಯೆ ಇತ್ತೇ? ಹಠಾತ್ ಸಾವಿಗೆ ನಿಖರ ಕಾರಣ ಏನು ಅನ್ನೋದ್ರ ಬಗ್ಗೆ ವೈದ್ಯಾಧಿಕಾರಿಗಳು ತನಿಖೆ ನಡೆಸ್ತಿದ್ದಾರೆ ಎಂದು ವರದಿಯಾಗಿದೆ.
ಪ್ರಕರಣ ಬೆನ್ನಲ್ಲೇ ಮಹ್ವಾ ಪೊಲೀಸರು ಕ್ರಿಕೆಟ್ ಆಡುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕ್ರಿಕೆಟ್ ಆಡುವಾಗ ಯುವಕನಿಗೆ ಹೃದಯಾಘಾತವಾಗಿದೆ ಎಂಬ ಮಾಹಿತಿ ಸಿಕ್ಕಿದೆ ಎಂದು ಮಹ್ವಾ ಪೊಲೀಸ್ ಠಾಣೆಯ ಉಸ್ತುವಾರಿ ಮಹೇಂದ್ರ ಸಿಂಗ್ ಯಾದವ್ ಹೇಳಿದ್ದಾರೆ. ಘಟನೆಯ ಬಗ್ಗೆ ಕುಟುಂಬ ಸದಸ್ಯರಿಂದ ಇದುವರೆಗೆ ಯಾವುದೇ ದೂರು ಬಂದಿಲ್ಲ ಎಂದು ಅವರು ತಿಳಿಸಿದ್ದಾರೆ. ಇನ್ನೊಂದು ತುಂಬಾ ನೋವಿನ ವಿಚಾರ ಏನೆಂದರೆ ರಾಮರಾಜ್ ಕೇವಲ ಐದು ತಿಂಗಳ ಹಿಂದೆ ಮದುವೆ ಆಗಿದ್ದ. ಪತಿಯನ್ನ ಕಳೆದುಕೊಂಡ ನವ ವಧು ದುಃಖದಲ್ಲಿ ಮುಳುಗಿದ್ದಾರೆ. ಮಗನನ್ನು ಕಳೆದುಕೊಂಡ ಪೋಷಕರು ಕಂಗಾಲಾಗಿದ್ದಾರೆ. ಇತ್ತ, ಸ್ನೇಹಿತನ ಸಾವನ್ನು ಕಣ್ಣಾರೆ ಕಂಡ ಗೆಳೆಯರು ಕಂಗಾಲಾಗಿದ್ದಾರೆ.
ಇನ್ನು ರಾಮರಾಜ್ ಸರ್ಕಾರಿ ನೇಮಕಾತಿ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ ಎಂದು ತಿಳಿದುಬಂದಿದೆ. ಪಂದ್ಯಕ್ಕೂ ಮುನ್ನ ರಾಮರಾಜ್ ತಮ್ಮ ಸ್ನೇಹಿತರೊಂದಿಗೆ ಟಾಸ್ ಎಸೆಯುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಟಾಸ್ ನಂತರ ಹಠಾತ್ ದುರಂತ ಸಂಭವಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ