2022ಕ್ಕೆ ಯೋಗಿ ಆದಿತ್ಯನಾಥ್ ‘ಸಿಎಂ ಮುಖ’ ಅಲ್ಲ?

By Suvarna NewsFirst Published Jun 21, 2021, 7:58 AM IST
Highlights

* 2022ಕ್ಕೆ ಯೋಗಿ ‘ಸಿಎಂ ಮುಖ’ ಅಲ್ಲ?

* ಯಾರು ಬೇಕಾದರೂ ಸಿಎಂ ಆಗಬಹುದು: ಸಚಿವ ಮೌರ‍್ಯ

* ಈ ನಡುವೆ ಮೋದಿ ಆಪ್ತನಿಗೆ ಉ.ಪ್ರ. ಬಿಜೆಪಿ ಉಪಾಧ್ಯಕ್ಷ ಹೊಣೆ

* ಇಂದು ಲಖನೌನಲ್ಲಿ ಬಿ.ಎಲ್‌. ಸಂತೋಷ್‌, ರಾಧಾಮೋಹನ್‌ ಸಭೆ

ಲಖನೌ(ಜೂ.21): ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು, ಬಿಜೆಪಿ ಜಯಿಸಿದರೆ ಮುಂದಿನ ಅವಧಿಗೂ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರಾ ಎಂಬ ಪ್ರಶ್ನೆಗಳು ಈಗ ಉದ್ಭವಿಸಿವೆ. ಇದಕ್ಕೆ ಇಂಬು ಕೊಡುವಂತೆ ವಾರಾಣಸಿ ಸಂಸದರೂ ಆಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಪ್ತ ಹಾಗೂ ನಿವೃತ್ತ ಐಎಎಸ್‌ ಅಧಿಕಾರಿ ಎ.ಕೆ. ಶರ್ಮಾ ಅವರನ್ನು ಬಿಜೆಪಿ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಇದರ ಬೆನ್ನಲ್ಲೇ ಮಾತನಾಡಿರುವ ಯೋಗಿ ಸಂಪುಟದ ಸಚಿವ ಸ್ವಾಮಿಪ್ರಸಾದ್‌ ಮೌರ್ಯ ಅವರು, ‘2022ರ ಚುನಾವಣೆ ಬಳಿಕ ಯಾರು ಬೇಕಾದರೂ ಮುಖ್ಯಮಂತ್ರಿ ಆಗಬಹುದು. ಎಲ್ಲ ಆಯ್ಕೆಗಳು ಮುಕ್ತವಾಗಿವೆ’ ಎಂದು ಹೇಳಿದ್ದಾರೆ.

‘ಈಗ ಯೋಗಿ ಮುಖ್ಯಮಂತ್ರಿಗಳು. ಮುಂದೆ ಏನಾಗುತ್ತೋ ಗೊತ್ತಿಲ್ಲ. 2022ರ ಚುನಾವಣೆ ಬಳಿಕ ಇನ್ನೊಬ್ಬರು ಮುಖ್ಯಮಂತ್ರಿ ಅಭ್ಯರ್ಥಿ ಆಗಬಹುದು. ಬಿಜೆಪಿ ಪ್ರಜಾಸತ್ತಾತ್ಮಕ ಪಕ್ಷ. ಶಾಸಕಾಂಗ ಪಕ್ಷ ಹಾಗೂ ವರಿಷ್ಠರು ಎಲ್ಲ ನಿರ್ಣಯಿಸುತ್ತಾರೆ’ ಎಂದು ಮೌರ್ಯ ತಿಳಿಸಿದ್ದಾರೆ.

ಈ ನಡುವೆ ಎ.ಕೆ. ಶರ್ಮಾ ಅವರನ್ನು ರಾಜ್ಯ ಬಿಜೆಪಿ ಉಪಾಧ್ಯಕ್ಷರನ್ನಾಗಿ ಮಾಡಿರುವುದು ನಾನಾ ಊಹಾಪೋಹಕ್ಕೆ ನಾಂದಿ ಹಾಡಿದೆ. ಶರ್ಮಾ ಅವರನ್ನು ಈ ಮುನ್ನ ಸಚಿವರನ್ನಾಗಿ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಪಕ್ಷದಲ್ಲಿ ಒಬ್ಬರಿಗೆ ಒಂದೇ ಹುದ್ದೆ ಎಂಬ ನೀತಿ ಇರುವ ಕಾರಣ ಅವರು ಸಚಿವರಾಗುವ ಸಾಧ್ಯತೆ ಕ್ಷೀಣಿಸಿದ್ದು, ಪಕ್ಷ ಸಂಘಟನೆಯ ಹೊಣೆ ವಹಿಸಲಾಗಿದೆ.

ಇನ್ನು ಸೋಮವಾರ ಬಿಜೆಪಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್‌. ಸಂತೋಷ್‌ ಹಾಗೂ ಉಪಾಧ್ಯಕ್ಷ ರಾಧಾಮೋಹನ ಸಿಂಗ್‌ ಅವರು ಮತ್ತೊಂದು ಸುತ್ತಿನ ಸಭೆ ನಡೆಸಲು ಲಖನೌಗೆ ಆಗಮಿಸುತ್ತಿದ್ದಾರೆ. ಈ ವಿದ್ಯಮಾನಗಳು ಕುತೂಹಲಕ್ಕೆ ಕಾರಣವಾಗಿವೆ.

ಇತ್ತೀಚೆಗೆ ಯೋಗಿ ಕುರ್ಚಿಗೆ ಸಂಚಕಾರ ಬಂದಿದೆ ಎನ್ನಲಾಗಿತ್ತು. ಆದರೆ ಮೋದಿ ಭೇಟಿ ಬಳಿಕ ಈ ಊಹಾಪೋಹಕ್ಕೆ ತೆರೆ ಬಿದ್ದಿತ್ತು.

click me!