ಇಂದು ವಿಶ್ವ ಧ್ಯಾನ ದಿನ: ಮನಸ್ಸಿನ ಓಟ ಮತ್ತು ಧ್ಯಾನದ ಮಹತ್ವದ ಕುರಿತು ರವಿಶಂಕರ್ ಗುರೂಜಿ ಮಾತು

Published : Dec 21, 2024, 12:47 PM ISTUpdated : Dec 21, 2024, 12:59 PM IST
ಇಂದು ವಿಶ್ವ ಧ್ಯಾನ ದಿನ: ಮನಸ್ಸಿನ ಓಟ ಮತ್ತು ಧ್ಯಾನದ ಮಹತ್ವದ ಕುರಿತು ರವಿಶಂಕರ್ ಗುರೂಜಿ ಮಾತು

ಸಾರಾಂಶ

ಮನಸ್ಸು ಸುಖ, ಪ್ರೀತಿ, ಮತ್ತು ಸಂತೋಷಗಳನ್ನು ಹುಡುಕುತ್ತಾ ಓಡುತ್ತದೆ. ಆದರೆ ನಿಜವಾದ ಶಾಂತಿ ಧ್ಯಾನದಲ್ಲಿದೆ. ಧ್ಯಾನದ ಮೂಲಕ ಮನಸ್ಸನ್ನು ನಿಯಂತ್ರಿಸುವ ಮತ್ತು ಏಕಾಗ್ರತೆಯನ್ನು ಸಾಧಿಸುವ ಬಗೆಯನ್ನು ಈ ಲೇಖನ ತಿಳಿಸುತ್ತದೆ.

- ಗುರುದೇವ್ ಶ್ರಿ ಶ್ರೀ ರವಿಶಂಕರ್ 

ಈ ಮನಸ್ಸು ಎಲ್ಲಿ ಓಡುತ್ತದೆ ಎಂದು ಸ್ವಲ್ಪ ನೋಡಿ. ಎಲ್ಲಿ ತನಗೆ ಒಂದು ರೀತಿಯ ರುಚಿ ಸಿಗುತ್ತಿದೆ ಅನಿಸುತ್ತದೋ, ಮನಸ್ಸು ಅಲ್ಲಿಗೇ ಓಡುತ್ತದೆ. ಯಾವುದು ಚೆನ್ನಾಗಿದೆ ಅನಿಸುತ್ತದೆ ಅಥವಾ ಯಾವುದು ಪವಿತ್ರ ಅನಿಸುತ್ತದೋ ಮನಸ್ಸು ಅಲ್ಲಿಗೇ ಓಡುತ್ತದೆ. ಎಲ್ಲಿ ಮನಸ್ಸಿಗೆ  ಸುಖ ಸಿಗುತ್ತದೋ, ಎಲ್ಲಿ ಮನಸ್ಸಿಗೆ ಪ್ರೀತಿ ದೊರಕುತ್ತದೋ, ಸಂತೋಷ ಸಿಗುತ್ತದೋ ಅಲ್ಲಿಗೇ ಮನಸ್ಸು ಓಡುತ್ತದೆ. ದೂರದರ್ಶನದ ಧಾರಾವಾಹಿಗಳನ್ನು ನೋಡಲು ಕುಳಿತಾಗ ಮನಸ್ಸನ್ನು ಏಕಾಗ್ರ ಮಾಡುವ ಪ್ರಶ್ನೆಯೇ ಬರುವುದಿಲ್ಲ! ಅದರ ಅವಶ್ಯಕತೆಯಾದರೂ ಇರುತ್ತದೆಯೇ? ಎಷ್ಟು ಗಂಟೆಗಳಾದರೂ ಒಂದಾದ ನಂತರ ಮತ್ತೊಂದು ಧಾರಾವಾಹಿಗಳನ್ನು ನೋಡುತ್ತಾ ಕುಳಿತಿರುತ್ತೀರಿ. ಸಮಯ ಹೇಗೆ ಕಳೆದುಹೋಯಿತು ಎಂದೇ ತಿಳಿಯುವುದಿಲ್ಲ. ಇಷ್ಟವಾದ ಸಿನಿಮಾ ಬಂದುಬಿಟ್ಟರೆ, ಅದರಲ್ಲೇ ಮಗ್ನರಾಗಿಬಿಟ್ಟಿರುತ್ತೀರಿ. ಮನಸ್ಸು ಅಲ್ಲಿ ಇಲ್ಲಿ ಓಡುವುದೇ ಇಲ್ಲ ಅಥವಾ ಮನೆಯಲ್ಲಿ ಒಂದು ಪುಟ್ಟ ಮೊಮ್ಮಗ ಅಥವಾ ಮೊಮ್ಮಗಳು ಬಂದುಬಿಟ್ಟರೆ, ಮಕ್ಕಳೊಡನೆ ಆಟವಾಡುತ್ತಾ ಸಮಯ ಹೇಗೆ ಕಳೆಯಿತು ಎಂದೇ ತಿಳಿಯುವುದಿಲ್ಲ.ನಮಗೆ ಬಹಳ ಪ್ರಿಯರಾದವರೊಡನೆ ಸಮಯವನ್ನು ಕಳೆಯುತ್ತಿದ್ದಾಗ, ಸಮಯ ಜಾರಿ ಹೋಗುವುದೇ ತಿಳಿಯುವುದಿಲ್ಲ. ಎಲ್ಲಿ ಖುಷಿ ಅಥವಾ ಪ್ರೇಮ ಸಿಗುತ್ತದೋ, ಮನಸ್ಸು ಅಲ್ಲಿಗೇ ಓಡುತ್ತದೆ.
              
ಆಲೋಚನೆಗಳಿಗಿಂತಲೂ ಅತೀತವಾದದ್ದೇ ಧ್ಯಾನ. ವಿಚಾರಗಳಿಗಿಂತಲೂ, ಭಾವಕ್ಕಿಂತಲೂ ಅತೀತವಾದದ್ದು ಧ್ಯಾನದ ಸ್ಥಿತಿ. ಸೂರ್ಯನು ಮುಳುಗುತ್ತಿದ್ದಾನೆ. ಮೈಮರೆತು ಆ ಸೊಬಗನ್ನೇ ನೋಡುತ್ತಾ ಕುಳಿತಾಗ ಯಾವ ವಿಚಾರಗಳೂ ಬರುವುದಿಲ್ಲ.  ಯಾವುದೇ ಆಶ್ಚರ್ಯಕರವಾದ ಸುದ್ದಿ ದೊರೆತಾಗಲೂ ಸಹ ಮನಸ್ಸು ಸ್ತಬ್ಧವಾಗಿಬಿಡುತ್ತದೆ. ಆದ್ದರಿಂದ ಕೇವಲ ಆಲೋಚಿಸುತ್ತಲೇ ಇರುವುದರಿಂದ ಏನೂ ಆಗುವುದಿಲ್ಲ. ಭಾವದ ಆಳದೊಳಗೆ ಇಳಿಯುವುದೇ ಇದರ ರಹಸ್ಯ. ಕೀರ್ತನೆ ಮಾಡುತ್ತಿರುವಾಗ, ಆಲೋಚಿಸುವುದಿಲ್ಲ. ಆ ಭಜನೆಯ ಲಯದಲ್ಲೇ ಮುಳುಗಿರುತ್ತೀರಿ. ಭಜನೆ ಹಾಡಿದ ನಂತರ ಸ್ವಲ್ಪ ಹೊತ್ತು ಸ್ತಬ್ಧವಾಗಿ. ಆಗ ಗುರುಗಳು ಹೇಳಿದ ಮಾತುಗಳು ಅನುಭವಕ್ಕೆ ಬರುತ್ತದೆ. ಪ್ರಶಾಂತವಾದ ಮನಸ್ಸಿಲ್ಲದಿದ್ದರೆ ಅದು ಯಾವುದೂ ನಿಮಗೆ ಅರ್ಥವಾಗುವುದಿಲ್ಲ. ಸ್ವಲ್ಪ ಮೌನವಾಗಿರುವುದನ್ನೂ ಕಲಿಯಿರಿ.

‘ಒಂದು ರಾಷ್ಟ್ರ, ಒಂದು ಚುನಾವಣೆ’.. ಪ್ರಜಾಪ್ರಭುತ್ವವನ್ನು ಬಲಪಡಿಸುವ ದಾರಿ: ರವಿಶಂಕರ್ ಗುರೂಜಿ
 
ಮನಸ್ಸು ಅಲ್ಲಿ ಇಲ್ಲಿ ಓಡುತ್ತಿದೆ ಅನಿಸಿದರೆ, "ಸರಿ ನಿನಗೆ ಎಲ್ಲೆಲ್ಲಿ ಹೋಗಬೇಕೋ ಅಲ್ಲೆಲ್ಲಾ ಹೋಗು!" ಎಂದು ಮನಸ್ಸಿಗೆ ಅನುಮತಿ ಕೊಟ್ಟುಬಿಡಿ. "ಗೋವಾಗೆ ಹೋಗಬೇಕೆ? ಸರಿ ಗೋವಾಗೆ ಓಡು, ಓಡು ಓಡು. ಅಲ್ಲಿಂದ ಬಿಜಾಪುರಕ್ಕೆ ಓಡಬೇಕೆ? ಸರಿ ಓಡು ಓಡು ಬಿಜಾಪುರಕ್ಕೆ ಓಡು! ಅಲ್ಲಿಂದ ಬೇಲ್ ಪುರಿಯತ್ತ ಹೋಗಬೇಕೆ? ಸರಿ ಓಡು ಓಡು. ಬೇಲ್ ಪುರಿಯತ್ತ ಓಡು" ಎಂದುಬಿಡಿ. ಮನಸ್ಸು ಎಲ್ಲೆಲ್ಲಿ ಹೋಗುತ್ತದೋ ಅದರ ಹಿಂದೆಯೇ, ಆ ದಿಕ್ಕಿನಲ್ಲೇ ತೆಗೆದುಕೊಂಡು ಹೋಗಿ. ಕೊನೆಗೂ ಅಲೆದು ಅಲೆದು ದಣಿದು ಬಂದು ಬೀಳುತ್ತದೆ!!
 
ಹೀಗೆ, ಒಂದಲ್ಲ, ಎರಡಲ್ಲ. ಅನೇಕಾನೇಕ ಉಪಾಯಗಳಿವೆ. ಯಾವುದೋ ಒಂದು ರೀತಿಯಲ್ಲಿ ಮನಸ್ಸನ್ನು ಹಿಡಿದುಕೊಂಡು ಬಂದು ಕೂರಿಸಿ. ಅನೇಕ ಉಪಾಯಗಳು ಮಾಡಬೇಕು ಎಂದೇನಿಲ್ಲ. ಮಹರ್ಷಿ ಪತಂಜಲಿಯವರು "ಯಥಾಭಿಮತ ಧ್ಯಾನಾದ್ವಾ" ಎಂದು ಬಹಳ ಸುಂದರವಾಗಿ ಹೇಳಿದ್ದಾರೆ. "ಯಾರಿಗೆ ಯಾವುದರ ಮೇಲೆ ಇಷ್ಟವೋ ಅದರ ಮೇಲೇ ಧ್ಯಾನ ಮಾಡಿ" ಎಂದರು. ಯಾರು ಮಹಾತ್ಮರೋ, ಯಾರ ಒಳಗೆ ರಾಗ-ದ್ವೇಷಗಳಿಲ್ಲವೋ, ಅಂತಹ ಸಿದ್ಧರ, ಗುರುಗಳ ಆಲೋಚನೆ ಮಾತ್ರದಿಂದಲೇ ಮನಸ್ಸು ಪ್ರಶಾಂತವಾಗಿಬಿಡುತ್ತದೆ. ಎಲ್ಲಿ ಮನಸ್ಸಿಗೆ ಪ್ರೀತಿಯಿದೆಯೋ ಅದರಿಂದಲೇ ಧ್ಯಾನ ಮಾಡಿ ಎಂದರು. ಸತ್ಸಂಗ ನಡೆಯುತ್ತಿರುವಾಗ, ಆ ಸಂಗೀತದ ತರಂಗಗಳನ್ನು ಹಾಗೆಯೇ ಸವಿಯಿರಿ; ರಸಗುಲ್ಲಾದ ಸಿಹಿಯನ್ನು ಸವಿಯುವಂತೆ. ಸತ್ಸಂಗವು ರಸಮಯವಾಗಿರುತ್ತದೆ, ಬೇಸರಿಕೆಯನ್ನು ತರಿಸುವಂತದ್ದಲ್ಲ ಅದು. ಸತ್ಸಂಗದಲ್ಲೂ ಕುಳಿತು ಮೇಲೆ-ಕೆಳಗೆ ನೋಡುತ್ತಾ, ಮೇಲ್ಛಾವಣಿಯಲ್ಲಿ ಎಷ್ಟು ಗೆರೆಗಳಿರಬಹುದು ಎಂದು ಎಣಿಸುತ್ತಾ ಕುಳಿತರೆ ಯಾವ ಪ್ರಯೋಜನವೂ ಇಲ್ಲ! ರುಚಿಯನ್ನು ಹುಟ್ಟಿಸುವುದೂ ನಿಮ್ಮ ಕೈಯಲ್ಲಿದೆ. ಇದನ್ನು ಬೇರೆ ಯಾರಿಂದಲೂ ನಿಮಗಾಗಿ ಮಾಡಲು ಸಾಧ್ಯವಿಲ್ಲ. ಇಡೀ ಸಂಸಾರವು ರಸಮಯವಾಗಿದೆ. ಒಂದೊಂದು ಕಲ್ಲಿನಲ್ಲೂ ರಸವಿದೆ. ಆ ರಸದ ಹಿಂದಿರುವ ರಸಧಾರಿಯನ್ನು ಗುರುತಿಸಬೇಕಷ್ಟೆ.

ನಿಮಗೆ ಇಂತಹ ಅನುಭವ ಆಗಿಲ್ಲವೆಂದಲ್ಲ.  "ಗುರುಗಳು ಹೀಗೆ ಹೇಳಿದ್ದನ್ನು ಮುಂದೆ ಯಾವಾಗಲೋ ಒಮ್ಮೆ ಮಾಡಬೇಕು. ಅದಕ್ಕಾಗಿ ಎಷ್ಟು ಕಷ್ಟ ಪಡಬೇಕೋ ಏನೋ!" ಎಂದುಕೊಳ್ಳುವುದಲ್ಲ. ನೀವು ಏನನ್ನೂ ಮಾಡಬೇಕಿಲ್ಲ. ಸುಮ್ಮನೆ ಖಾಲಿಯಾಗಿಬಿಡಿ, ಅಷ್ಟೇ. ಯಾವ ಯತ್ನವನ್ನೂ ಮಾಡಲು ಹೋಗಬೇಡಿ. ನಿಮಗಾಗಿ ದೀಪವನ್ನು ಹೊತ್ತಿಸಲಾಗಿದೆ. ಗುರುಗಳ ಸಾನ್ನಿಧ್ಯದಲ್ಲಿ ಕುಳಿತರಷ್ಟೇ ಸಾಕು. ಗಂಗೆಯೊಳಗೆ ಇಳಿದ ನಂತರ ಒಂದು ಕೊಳಾಯಿಯ ಅವಶ್ಯಕತೆ ಇರುವುದಿಲ್ಲ. ಗಂಗೆಯಲ್ಲಿ ಇಳಿದಿದ್ದೀರಿ. ನೀರು ವೇಗವಾಗಿ ಹರಿಯುತ್ತಿದೆ. ನಿಮ್ಮ ಮಲವೆಲ್ಲವೂ ಹಾಗೆಯೇ ಹರಿದುಹೋಗಿಬಿಡುತ್ತದೆ. ಗುರು ಸಾನ್ನಿಧ್ಯದಲ್ಲಿ ಏನನ್ನೂ ಮಾಡದೆ, ಅಪ್ರಯತ್ನಪೂರ್ವಕವಾಗಿ ವಿಶ್ರಾಂತಿ ಪಡೆದರೆ ಸಾಕು. "ನನಗೇನೂ ಬೇಡ, ನಾನು ಯಾರೂ ಅಲ್ಲ, ನಾನು ಈಗ, ಕೆಲವು ಕ್ಷಣಗಳು ಧ್ಯಾನ ಮಾಡುವವರೆಗೂ ಏನೂ ಮಾಡುವುದಿಲ್ಲ" ಎಂಬ ಈ ಮೂರು ಸೂತ್ರಗಳನ್ನು ಪಾಲಿಸಿ. ಆಗ ವಿಚಾರಗಳು ಏಳುತ್ತಿದ್ದರೆ, "ನನಗೇನೂ ಬೇಡ! ಈ ವಿಚಾರಗಳೂ ಬೇಡ!" ಎಂದು ಅವುಗಳೊಡನೆ ಸೆಣಸಾಡಬೇಡಿ. ಆದಿಶಂಕರಾಚಾರ್ಯರು, "ನಾನು ಶೂನ್ಯ, ಶೂನ್ಯ" ಎಂದುಕೊಳ್ಳುತ್ತಲೇ ಇರುವುದು ವ್ಯರ್ಥ. ಅವರಿಗೂ ಅದರ ಅನುಭವವಾಗುವುದಿಲ್ಲ" ಎಂದಿದ್ದಾರೆ.
 
15-20 ನಿಮಿಷಗಳು ಧ್ಯಾನ ಮಾಡಿದಾಗ ಮೆದುಳಿಗೆ ವಿಶ್ರಾಂತಿ ಸಿಗುತ್ತದೆ. ಅಮೆರಿಕದ ವಿಜ್ಞಾನಿಗಳು ನಡೆಸಿರುವ ಸಂಶೋಧನೆಯಲ್ಲಿ, ಎರಡು ತಿಂಗಳು ಪ್ರತಿನಿತ್ಯ 20 ನಿಮಿಷಗಳು ಧ್ಯಾನ ಮಾಡಿದರೂ ಸಾಕು ಮೆದುಳಿನ ವಿನ್ಯಾಸದಲ್ಲಿ ವ್ಯತ್ಯಾಸ ಉಂಟಾಗಿ, ಮೆದುಳಿನ ಗ್ರೇ ಮ್ಯಾಟರ್ ಹೆಚ್ಚಲು ಆರಂಭವಾಗುತ್ತದೆ ಎಂದು ಕಂಡುಹಿಡಿದಿದ್ದಾರೆ. ಇದರ ಬಗ್ಗೆ ವೈಜ್ಞಾನಿಕ ಪತ್ರಗಳನ್ನು ಬಿಡುಗಡೆ ಮಾಡಿದ್ದಾರೆ. 

ಭಗವದ್ಗೀತೆಯಿಂದ ಕಲಿಯಬಹುದಾದ 8 ಪಾಠಗಳು; ಗುರುದೇವ್ ಶ್ರೀ ಶ್ರೀ ರವಿಶಂಕರ್
 
ಇತ್ತೀಚಿನ ದಿನಗಳಲ್ಲಿ ಬಹಳ ವ್ಯಾಪಕವಾಗಿ ಹರಡುತ್ತಿರುವ ಖಾಯಿಲೆ ಎಂದರೆ “ಏಕಾಂಗಿತನ” ಬ್ರಿಟನ್ ನಲ್ಲಂತೂ “ಏಕಾಂಗಿತನದ  ಇಲಾಖೆಯನ್ನೇ” ಇದಕ್ಕಾಗಿ ತೆರೆದಿದ್ದಾರೆ. ಜನರ ಬಳಿ ಎಲ್ಲವೂ ಇರುತ್ತದೆ - ಪತ್ನಿ, ಮಕ್ಕಳು, ಮನೆ, ಕೆಲಸ, ಬ್ಯಾಂಕಿನ ಹಣ, ಇವೆಲ್ಲ ಇದ್ದರೂ ಏಕಾಂಗಿತನದಿಂದ ಬಳಲುತ್ತಿದ್ದಾರೆ. ಪ್ರತಿಯೊಂದು ಮುಂದುವರಿದ ದೇಶದಲ್ಲೂ ಇದನ್ನು ಕಾಣಬಹುದು. ಏಕಾಂಗಿತನದಿಂದ ಬಳಲುತ್ತಿರುವ ಇಬ್ಬರು ಜೊತೆಗೂಡಿದಾಗ, ಸ್ವಲ್ಪ ಸಮಯಕ್ಕೆ ಮಾತ್ರ ಒಳ್ಳೆಯದಾಗಿ ಅನಿಸುತ್ತದೆಯಷ್ಟೆ. ನಮ್ಮ ಏಕಾಂಗಿತನವನ್ನು ತುಂಬಲು ಇತರರನ್ನು ಬಳಸಲು ಸಾಧ್ಯವಿಲ್ಲ. ಭಾವನೆಗಳ ಜಗತ್ತಿನಲ್ಲಿ ಕೊಡುವವರ ಕೈಯೇ ಸದಾ ಮೇಲಿರುತ್ತದೆ. ಭಾವನೆಗಳನ್ನು ಪಡೆದುಕೊಳ್ಳುವವರು, ಪಡೆದುಕೊಂಡರೂ ಭಿಕಾರಿಗಳಾಗಿಯೇ ಉಳಿಯುತ್ತಾರೆ. ನಮ್ಮ ಹೃದಯಗಳನ್ನು ತುಂಬುವ ಒಂದೇ ದಾರಿಯೆಂದರೆ, “ಧ್ಯಾನ”. ಈ ಸೂತ್ರವನ್ನು ಪದೇ ಪದೇ ನೆನಪಿಗೆ ತಂದುಕೊಂಡು, ಧ್ಯಾನವು ಒಂದೇ ದಾರಿ ಎಂದು ತಿಳಿಯಿರಿ.
 
ಗುರುದೇವರೊಂದಿಗೆ 'ವಿಶ್ವ ಧ್ಯಾನ ದಿನ' ಆಚರಿಸಿ!
ಡಿಸೆಂಬರ್ 21, ರಾತ್ರಿ 8 ಗಂಟೆಗೆ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!