
ಚಿನ್ನದ ಬೆಲೆ ಗಗನಕ್ಕೇರುತ್ತಿದೆ. ದಿನದಿಂದ ದಿನಕ್ಕೆ ಬೆಲೆ ಏರುತ್ತಲೇ ಇದೆ. ಅಪರಂಜಿ ಚಿನ್ನದ ಬೆಲೆ ಮತ್ತೊಮ್ಮೆ ಗ್ರಾಂಗೆ 12,200 ರೂ ಗಡಿ ದಾಟಿದ್ದರೆ, ಆಭರಣ ಚಿನ್ನದ ಬೆಲೆ 11,200 ರೂ ಗಡಿ ಮೀರಿದೆ. ಹಾಗೆಂದು ಚಿನ್ನವನ್ನು ಖರೀದಿ ಮಾಡುವವರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಹಬ್ಬದ ಸಮಯದಲ್ಲಿ ಚಿನ್ನದ ಮಳಿಗೆಗಳಿಗೆ ಲಗ್ಗೆ ಇಡುವವರನ್ನು ನೋಡಿದರೆ, ನಿಜಕ್ಕೂ ನಮ್ಮ ಭಾರತದಲ್ಲಿ ಈ ಪರಿಯಲ್ಲಿ ಶ್ರೀಮಂತರು ಇದ್ದಾರೆಯೇ ಎಂದು ಎನ್ನಿಸಬೇಕು, ಆ ಮಟ್ಟಿನ ಸ್ಥಿತಿ ಇರುತ್ತದೆ. ಕೆಲವು ಆಭರಣ ಮಳಿಗೆಗಳಲ್ಲಿ ಕಾಲಿಡುವುದಕ್ಕೂ ಜಾಗ ಇಲ್ಲದಷ್ಟು ಜನ ಕಿಕ್ಕಿರಿದು ತುಂಬಿರುತ್ತಾರೆ. ಇದಕ್ಕೆ ಕಾರಣ, ಚಿನ್ನದ ಮೇಲಿನ ವ್ಯಾಮೋಹ. ಅದು ವರ್ತಮಾನಕ್ಕೇ ಆಗಿರಬಹುದು, ಭವಿಷ್ಯದ ದೃಷ್ಟಿಯಿಂದಲೇ ಆಗಿರಬಹುದು. ಒಟ್ಟಿನಲ್ಲಿ ಚಿನ್ನ ಬೇಕು, ಅಷ್ಟೇ.
ಚಿನ್ನದ ಬೇಡಿಕೆ ಹೆಚ್ಚುತ್ತಿರುವುದಕ್ಕೆ ಕಾರಣ, ಶೋಕಿ ಕೂಡ ಒಂದು ಎಂದು ಪರಿಗಣಿಸಿರುವ ಒಂದು ಘಟನೆಯಲ್ಲಿ, ಮದುವೆಯ ಸಂದರ್ಭದಲ್ಲಿ ಮದುಮಗಳೂ ಸೇರಿದಂತೆ ಯಾರು ಕೂಡ ಮೂರಕ್ಕಿಂತ ಹೆಚ್ಚು ಆಭರಣ ಧರಿಸುವಂತಿಲ್ಲ, ಹೀಗೊಮ್ಮೆ ಧರಿಸಿದರೆ, 50 ಸಾವಿರ ರೂಪಾಯಿಗಳ ದಂಡ ವಿಧಿಸಲಾಗುತ್ತಿದೆ. ಚಿನ್ನದ ಪ್ರದರ್ಶನವು ಅಸೂಯೆ ಮತ್ತು ಕೌಟುಂಬಿಕ ಕಲಹದ ಭಾವನೆಗಳನ್ನು ಪ್ರಚೋದಿಸುತ್ತದೆ ಎನ್ನುವ ಕಾರಣವನ್ನು ನೀಡಲಾಗಿದ್ದು, ಹೆಚ್ಚು ಚಿನ್ನ ಧರಿಸುವುದಕ್ಕೆ ನಿಷೇಧ ಹೇರಲಾಗಿದೆ.
ಹಾಗೆಂದು ಎಲ್ಲ ಚಿನ್ನಪ್ರಿಯರು ಹೆದರಬೇಕಾದ ಅಗತ್ಯವಿಲ್ಲ. ಇಂಥದ್ದೊಂದು ಆದೇಶ ಹೊರಬಂದಿರುವುದು ಡೆಹ್ರಾಡೂನ್ ಜಿಲ್ಲೆಯ ಯಮುನಾ ಮತ್ತು ಟನ್ಸ್ ನದಿಗಳ ನಡುವೆ ಇರುವ ಕಂಧರ್ ಮತ್ತು ಇಂದ್ರಾಣಿ ಗ್ರಾಮದಲ್ಲಿ. ಇಲ್ಲಿನ ಪಂಚಾಯಿತಿ ಇಂಥದ್ದೊಂದು ಆದೇಶವನ್ನು ಹೊರಡಿಸಿದೆ. ಜಾನ್ಸರ್ ಪರಿಶಿಷ್ಟ ಪಂಗಡ ಪ್ರದೇಶವಾಗಿರುವ ಇಲ್ಲಿ, ಹೆಚ್ಚಿನ ಚಿನ್ನ ಧರಿಸಿ ಶೋಕಿ ಮಾಡುವುದು ಸಾಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಹಾಗೆಂದು ಮೂರೇ ಆಭರಣ ತಾನೆ ಎಂದು ಈ ಮೂರು ಆಭರಣದಲ್ಲಿಯೇ ಕೆಜಿಗಟ್ಟಲೆ ಚಿನ್ನ ಹಾಕುವಂತೆಯೂ ಇಲ್ಲ. ಮದುವೆಗಳಲ್ಲಿ ಮಹಿಳೆಯರು ಮೂಗುತಿ, ಕಿವಿಯೋಲೆಗಳು ಮತ್ತು ಮಂಗಳಸೂತ್ರವನ್ನು ಮಾತ್ರ ಧರಿಸಲು ಅವಕಾಶವಿರುತ್ತದೆ.
ಈ ಬಗ್ಗೆ ಪಿಟಿಐಗೆ ಮಾಹಿತಿ ನೀಡಿರುವ ಪಂಚಾಯಿತಿಯ ಪ್ರಮುಖ ಅರ್ಜುನ್ ಸಿಂಗ್ ಅವರು, "ಚಿನ್ನದ ಬೆಲೆ ಹೆಚ್ಚಿರುವುದರಿಂದ, ಅನೇಕ ಮಹಿಳೆಯರಿಗೆ ಇದು ಕಷ್ಟವಾಗಿದೆ. ಆದರೆ ಚಿನ್ನ ಖರೀದಿಸುವ ಅನಿವಾರ್ಯತೆ ಮದುವೆ ದಿನಗಳಲ್ಲಿ ಅಗತ್ಯವಾಗುತ್ತದೆ. ಇದರಿಂದ ಅವರು ಒತ್ತಡಕ್ಕೆ ಒಳಗಾಗುತ್ತಾರೆ. ಇದು ಕೌಟುಂಬಿಕ ಸಂಘರ್ಷಗಳು ಮತ್ತು ಆರ್ಥಿಕ ಒತ್ತಡಕ್ಕೆ ಕಾರಣವಾಗುತ್ತದೆ. ಈ ಅಸಮಾನತೆಯನ್ನು ಕಡಿಮೆ ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ ಎಂದಿದ್ದಾರೆ. ಆದರೆ ಈ ಆದೇಶ ಪರ-ವಿರೋಧಗಳಿಗೂ ಕಾರಣವಾಗಿದೆ. ಹಲವರು ಇದನ್ನು ಸ್ವಾಗತಿಸಿದ್ದಾರೆ. ಆದರೆ ಮತ್ತೆ ಕೆಲವರು, ಚಿನ್ನವನ್ನು ಖರೀದಿ ಮಾಡುವುದು ಭವಿಷ್ಯದ ದೃಷ್ಟಿಯಿಂದ. ಇದಕ್ಕೆ ನಿಷೇಧ ಯಾಕೆ, ಹಾಗಿದ್ದರೆ ಪುರುಷರ ಬ್ರಾಂಡೆಡ್ ಮದ್ಯ ಸೇವನೆಯನ್ನು ಸಹ ನಿಲ್ಲಿಸಿದರೆ ಸಮಾನತೆ ಬರುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ಜಾನ್ಸನ್ & ಜಾನ್ಸನ್ ಪೌಡರ್‌ನಿಂದ ಕ್ಯಾನ್ಸರ್: ಮತ್ತೊಂದು ಕೇಸ್- 80 ಬಿಲಿಯನ್ ರೂ. ದಂಡಕ್ಕೆ ಕೋರ್ಟ್ ಆದೇಶ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ