ಆಗ್ರಾ: ನಾಯಿಯನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು ಸೆಕ್ಯೂರಿಟಿ ಗಾರ್ಡ್ ಓರ್ವರ ಮೇಲೆ ಮಹಿಳೆಯೊಬ್ಬರು ಲಾಠಿಯಿಂದ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರು ಮಹಿಳೆಯ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗೆ ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ಮಾಡಿದ ಮಹಿಳೆಯನ್ನು ಡಿಂಪಿ ಮಹೇಂದ್ರ ಎಂದು ಗುರುತಿಸಲಾಗಿದೆ. ಡಿಂಪಿಯವರು ಬಿಜೆಪಿ ಸಂಸದೆ ಹಾಗೂ ಪ್ರಾಣಿ ದಯಾ ಸಂಘದಲ್ಲಿ ಗುರುತಿಸಿಕೊಂಡಿರುವ ಮೇನಕಾ ಗಾಂಧಿಗೆ ದೂರು ನೀಡುವುದಾಗಿ ಸೆಕ್ಯೂರಿಟಿ ಗಾರ್ಡ್‌ಗೆ ಬೆದರಿಸುತ್ತಿರುವುದು ವಿಡಿಯೋದಲ್ಲಿ ಸೆರೆ ಆಗಿದೆ.
ಇನ್ನು ಹಲ್ಲೆಗೊಳಗಾದ ಸೆಕ್ಯೂರಿಟಿ ಗಾರ್ಡ್, ನ್ಯೂ ಆಗ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಎಲ್ಐಸಿ ಅಧಿಕಾರಿ ಕಾಲೋನಿಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದು, ಅವರೊಬ್ಬ ಮಾಜಿ ಸೈನಿಕರು ಆಗಿದ್ದಾರೆ ಎಂದು ತಿಳಿದು ಬಂದಿದೆ. ಬೀದಿನಾಯಿಗಳನ್ನು ಅಪಾರ್ಟ್‌ಮೆಂಟ್‌ನಿಂದ ಹೊರಗೆ ಓಡಿಸಿದ್ದಕ್ಕೆ ಹಲ್ಲೆ ಮಾಡಿರುವುದಾಗಿ ತಿಳಿದು ಬಂದಿದೆ.
ಈ ವಿಡಿಯೋವನ್ನು ಪರಿಶೀಲಿಸಿದ ಆಗ್ರಾ ಪೊಲೀಸರು ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಎಂದು ಹೇಳಿಕೊಂಡಿರುವ ಈ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ (ನಗರ) ವಿಕಾಸ್ ಕುಮಾರ್, ಮಹಿಳೆಯೊಬ್ಬಳು ಸಿಬ್ಬಂದಿಯನ್ನು ಕೋಲಿನಿಂದ ಹೊಡೆಯುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಆಗ್ರಾ ಪೊಲೀಸರು ವಿಡಿಯೋವನ್ನು ಗಮನದಲ್ಲಿಟ್ಟುಕೊಂಡು ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಹೇಳಿದರು.
ರೈಲು ಬರುವುದನ್ನು ಲೆಕ್ಕಿಸದೇ ಹಳಿಯಲ್ಲಿದ್ದ ಬೀದಿನಾಯಿಯ ರಕ್ಷಣೆ: ಯುವಕನ ಕಾರ್ಯಕ್ಕೆ ಶ್ಲಾಘನೆ
ಈ ಬಗ್ಗೆ ಪಿಟಿಐಗೆ ಮಾತನಾಡಿದ ಹೊಸ ಆಗ್ರಾ ಪೊಲೀಸ್ ಠಾಣೆಯ ಎಸ್‌ಹೆಚ್‌ಒ ವಿಜಯ್ ವಿಕಾರಮ್ ಸಿಂಗ್, ಮಹಿಳೆ ಕೋಲಿನಿಂದ ಹಲ್ಲೆ ನಡೆಸಿದ ಬಗ್ಗೆ ಎಲ್‌ಐಸಿ ಅಧಿಕಾರಿ ಕಾಲೋನಿಯಲ್ಲಿ ಕೆಲಸ ಮಾಡುತ್ತಿರುವ ಗಾರ್ಡ್ ಅಖಿಲೇಶ್ ಸಿಂಗ್ ಅವರು ದೂರು ನೀಡಿದ್ದಾರೆ. ವೈರಲ್ ವಿಡಿಯೋದಲ್ಲಿ ಕಾವಲುಗಾರನಿಗೆ ಥಳಿಸಿದ ಮಹಿಳೆಯ ವಿವರಗಳನ್ನು ಪಡೆಯಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದರು. ಇನ್ನು ಹಲ್ಲೆ ಮಾಡಿದ ಮಹಿಳೆ, ಡಿಂಪಿ ಅವರು ಕಳೆದ 15 ರಿಂದ 18 ವರ್ಷಗಳಿಂದ ಪ್ರಾಣಿಗಳ ಮೇಲಿನ ಕ್ರೌರ್ಯದ ವಿರುದ್ಧ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಎರಡು-ಮೂರು ದಿನಗಳ ಹಿಂದೆ ತನಗೆ ಕಾಲೋನಿಯಲ್ಲಿ ನಾಯಿಗಳ ಮೇಲಿನ ಕ್ರೌರ್ಯ ನಡೆಯುತ್ತಿರುವ ಬಗ್ಗೆ ಕರೆ ಬಂದಿತ್ತು, ಆದರೆ ತಾನು ಪಟ್ಟಣದಲ್ಲಿಲ್ಲದ ಕಾರಣ ಬರಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
ಬೆಂಗ್ಳೂರಲ್ಲಿ ಬೀದಿ ನಾಯಿ ಕಾಟ: ನಿತ್ಯ 400 ಶ್ವಾನಗಳಿಗೆ ಸಂತಾನಹರಣ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ