ಭಾರತ, ಚೀನಾ ಸಂಘರ್ಷ ಸ್ಥಳಕ್ಕೆ ರಾಹುಲ್‌ ಸಂಸದೀಯ ಸಮಿತಿ?

By Suvarna NewsFirst Published Feb 14, 2021, 9:39 AM IST
Highlights

ಭಾರತ, ಚೀನಾ ಸಂಘರ್ಷ ಸ್ಥಳಕ್ಕೆ ರಾಹುಲ್‌ ಸಂಸದೀಯ ಸಮಿತಿ?| ಗಲ್ವಾನ್‌ ಕಣಿವೆಗೆ ಭೇಟಿ ನೀಡಲು ಇಂಗಿತ| ಕೇಂದ್ರ ಸರ್ಕಾರ ಅನುಮತಿ ನೀಡಿದರೆ ಭೇಟಿ

ನವದೆಹಲಿ(ಫೆ.14): ಭಾರತ ಹಾಗೂ ಚೀನಾ ನಡುವೆ ಕಳೆದ 9 ತಿಂಗಳಿನಿಂದ ಹಿಂಸಾರೂಪದ ಸಂಘರ್ಷಕ್ಕೆ ಸಾಕ್ಷಿಯಾಗಿರುವ ಪೂರ್ವ ಲಡಾಖ್‌ನ ಗಲ್ವಾನ್‌ ಕಣಿವೆ ಹಾಗೂ ಪ್ಯಾಂಗಾಂಗ್‌ ಸರೋವರ ಪ್ರದೇಶಕ್ಕೆ ರಕ್ಷಣೆಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿ ಭೇಟಿ ನೀಡುವ ಒಲವು ವ್ಯಕ್ತಪಡಿಸಿದೆ. ಕೇಂದ್ರದ ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಜುವಲ್‌ ಓರಂ ಅಧ್ಯಕ್ಷತೆಯ ಈ ಸಮಿತಿಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರೂ ಇದ್ದಾರೆ.

ಗಲ್ವಾನ್‌ ಕಣಿವೆ ಹಾಗೂ ಪ್ಯಾಂಗಾಂಗ್‌ ಸರೋವರ ಪ್ರದೇಶಗಳು ವ್ಯೂಹಾತ್ಮಕವಾಗಿ ಮಹತ್ವದ್ದಾಗಿರುವುದರಿಂದ ಅಲ್ಲಿಗೆ ಭೇಟಿ ನೀಡಲು ಸರ್ಕಾರದ ಅನುಮತಿಯನ್ನು ಸಂಸದೀಯ ಸಮಿತಿ ಪಡೆದುಕೊಳ್ಳಬೇಕಾಗುತ್ತದೆ. ಸರ್ಕಾರ ಈ ಕೋರಿಕೆಗೆ ಅನುಮತಿ ನೀಡುತ್ತಾ ಎಂಬುದು ಕುತೂಹಲ ಕೆರಳಿಸಿದೆ.

ರಕ್ಷಣಾ ಸ್ಥಾಯಿ ಸಮಿತಿಯಲ್ಲಿ 30 ಸದಸ್ಯರು ಇದ್ದಾರೆ. ಪೂರ್ವ ಲಡಾಖ್‌ ಪ್ರದೇಶಕ್ಕೆ ಭೇಟಿ ನೀಡಲು ಇತ್ತೀಚೆಗೆ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ. ಮೇ ಕೊನೆಯ ವಾರ ಅಥವಾ ಜೂನ್‌ನಲ್ಲಿ ಭೇಟಿ ನೀಡುವ ಬಯಕೆಯನ್ನು ಸಮಿತಿ ವ್ಯಕ್ತಪಡಿಸಿದೆ. ಈ ಸಮಿತಿ ಈ ಸಭೆಗೆ ರಾಹುಲ್‌ ಅವರು ಗೈರಾಗಿದ್ದರು.

ಪೂರ್ವ ಲಡಾಖ್‌ ಸಂಘರ್ಷ ತಗ್ಗಿಸುವ ನಿಟ್ಟಿನಲ್ಲಿ ಭಾರತ- ಚೀನಾ ಒಪ್ಪಂದ ಮಾಡಿಕೊಂಡಿದ್ದು, ಸೇನಾ ಪಡೆಗಳನ್ನು ವಾಪಸ್‌ ಕರೆಸಿಕೊಳ್ಳುತ್ತಿವೆ. ಆದರೆ ಸರ್ಕಾರ ಈ ಒಪ್ಪಂದಕ್ಕಾಗಿ ಭಾರತದ ಭೂಭಾಗವನ್ನು ಚೀನಾಕ್ಕೆ ಬಿಟ್ಟುಕೊಟ್ಟಿದೆ ಎಂದು ರಾಹುಲ್‌ ಆರೋಪಿಸಿದ್ದರು. ಆದರೆ ರಾಹುಲ್‌ ಹೇಳಿಕೆಯೇ ತಪ್ಪು ಎಂದು ರಕ್ಷಣಾ ಸಚಿವಾಲಯ ವಾದಿಸಿತ್ತು.

click me!