
ನವದೆಹಲಿ(ಮೇ.25): ಉದಯಪುರದಲ್ಲಿ ನಡೆದ ಚಿಂತನಾ ಶಿಬಿರದ ನೀತಿಗಳನ್ನು ಜಾರಿಗೆ ತರಲು ಕಾಂಗ್ರೆಸ್ ಮೊದಲ ಹೆಜ್ಜೆ ಇಟ್ಟಿದೆ. ಕಾಂಗ್ರೆಸ್‌ನ ಭವಿಷ್ಯದ ದೃಷ್ಟಯಿಂದ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ 3 ಸಮಿತಿಗಳನ್ನು ರಚನೆ ಮಾಡಿದ್ದಾರೆ. ರಾಜಕೀಯ ಸಮಿತಿ, 2024ರ ಚುನಾವಣೆಗೆ ಸಂಬಂಧಿಸಿದಂತೆ ಟಾಸ್‌್ಕ ಫೋರ್ಸ್ ಮತ್ತು ಅಕ್ಟೋಬರ್‌ನಿಂದ ಆರಂಭವಾಗುವ ಭಾರತ್ ಜೋಡೋ ಯಾತ್ರೆಯನ್ನು ನಿರ್ವಹಿಸಲು ಕೇಂದ್ರೀಯ ಯೋಜನಾ ಸಮಿತಿ ರಚನೆ ಮಾಡಲಾಗಿದೆ.
ಕಾಂಗ್ರೆಸ್ ಪಕ್ಷದಲ್ಲಿ ಆಮೂಲಾಗ್ರ ಬದಲಾವಣೆ ಬಯಸಿದ್ದ ಜಿ23 ಗುಂಪಿನ ನಾಯಕರಾದ ಗುಲಾಂ ನಬಿ ಆಜಾದ್, ಆನಂದ ಶರ್ಮಾ ಅವರಿಗೂ ಸಮಿತಿಯಲ್ಲಿ ಸ್ಥಾನ ನೀಡಲಾಗಿದೆ. ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ, ಸಲೀಂ ಅಹ್ಮದ್, ಕೆ.ಜೆ. ಜಾಜ್‌ರ್ ಹಾಗೂ ಕರ್ನಾಟಕ ಕಾಂಗ್ರೆಸ್ ಚುನಾವಣಾ ತಂತ್ರಗಾರ ಸುನೀಲ್ ಕಾನುಗೋಲು ಸಮಿತಿಗಳಲ್ಲಿ ಇರುವುದು ವಿಶೇಷ.
ರಾಜಕೀಯ ವ್ಯವಹಾರ ಸಮಿತಿ:
ಸೋನಿಯಾ ಗಾಂಧಿ ಈ ಸಮಿತಿಯ ಅಧ್ಯಕ್ಷರಾಗಿದ್ದು, ಉಳಿದಂತೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಆಜಾದ್, ಅಂಬಿಕಾ ಸೋನಿ, ದಿಗ್ವಿಜಯ ಸಿಂಗ್, ಆನಂದ್ ಶರ್ಮಾ, ಕೆ.ಸಿ.ವೇಣುಗೋಪಾಲ್, ಜಿತೇಂದ್ರ ಸಿಂಗ್ ಅವರನ್ನು ಈ ಸಮಿತಿಗೆ ನೇಮಿಸಲಾಗಿದೆ. ಈ ಸಮಿತಿಯಲ್ಲಿ ಸೋನಿಯಾ ಬಗ್ಗೆ ಮುನಿಸಿಕೊಂಡಿದ್ದ ಜಿ-23 ಗುಂಪಿನ ನಾಯಕರಾದ ಆಜಾದ್ ಹಾಗೂ ಆನಂದ ಶರ್ಮಾ ಅವರು ಇರುವುದು ವಿಶೇಷ.
2024ರ ಟಾಸ್ಕ್ ಫೋರ್ಸ್:
2024ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಟಾಸ್‌್ಕಫೋರ್ಸ್ ರಚಿಸಲಾಗಿದೆ. ಚಿಂತನಾ ಶಿಬಿರದಲ್ಲಿ ಕೈಗೊಂಡ ನಿರ್ಧಾರಗಳಂತೆ ಸಂಘಟನೆ, ಸಂವಹನ ಮತ್ತು ಮಾಧ್ಯಮ, ಹಣಕಾಸು ಮತ್ತು ಚುನಾವಣಾ ನಿರ್ವಹಣೆಯ ಹೊಣೆಯನ್ನು ಈ ಸಮಿತಿಗೆ ವಹಿಸಲಾಗಿದೆ. ಪ್ರಿಯಾಂಕಾ ಗಾಂಧಿ, ಪಿ.ಚಿದಂಬರಂ, ಮುಖುಲ್ ವಾಸ್ನಿಕ್, ಜೈರಾಮ್ ರಮೇಶ್, ಕೆ.ಸಿ.ವೇಣುಗೋಪಾಲ್, ಅಜಯ್ ಮಾಖನ್, ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತು ಸುನಿಲ್ ಕಾನುಗೋಲು ಅವರಿಗೆ ಸ್ಥಾನ ನೀಡಲಾಗಿದೆ. ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರ ಆಪ್ತರಾಗಿರುವ ಕಾನುಗೋಲು, ಕರ್ನಾಟಕ ಚುನಾವಣಾ ತಂತ್ರಗಾರರಾಗಿದ್ದಾರೆ.
ಭಾರತ್ ಜೋಡೋ ಯಾತ್ರಾ ಸಮಿತಿ:
ಅ.2ರಿಂದ ದೇಶಾದ್ಯಂತ ನಡೆಸಲು ಯೋಜಿಸಿರುವ ಭಾರತ್ ಜೋಡೊ ಅಭಿಯಾನವನ್ನು ನಿರ್ವಹಿಸಲು ಈ ಸಮಿತಿಯನ್ನು ರಚನೆ ಮಾಡಲಾಗಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಜಾಥಾ ನಡೆಸಲು ಕಾಂಗ್ರೆಸ್ ಯೋಜಿಸಿದೆ. ಈ ಸಮಿತಿಗೆ ಕರ್ನಾಟಕ ಕಾಂಗ್ರೆಸ್ ನಾಯಕರಾದ ಸಲೀಂ ಅಹ್ಮದ್, ಕೆ.ಜೆ. ಜಾಜ್‌ರ್ ಹಾಗೂ ರಾಷ್ಟ್ರೀಯ ನಾಯಕರಾದ ದಿಗ್ವಿಜಯ ಸಿಂಗ್, ಸಚಿನ್ ಪೈಲಟ್, ಶಶಿ ತರೂರ್, ರವನೀತ್ ಸಿಂಗ್ ಬಿಟ್ಟು, ಜೋತಿ ಮಣಿ, ಪ್ರದ್ಯುತ್ ಬೋರ್ಡೋಲೋಯಿ, ಜಿತು ಪಟ್ವಾರಿ ಅವರನ್ನು ನೇಮಕ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ