
ನವದೆಹಲಿ(ಮೇ.06): ಕೊರೋನಾ ಸೋಂಕು ಇನ್ನೇನು ನಿಯಂತ್ರಣಕ್ಕೆ ಬಂತು ಎಂಬ ಭರವಸೆಯಲ್ಲಿ ಕೇಂದ್ರ ಸರ್ಕಾರ ದೇಶವ್ಯಾಪಿ ಲಾಕ್‌ಡೌನ್ ಸಡಿಲಿಕೆ ಮಾಡಿದ ಬೆನ್ನಲ್ಲೇ, ಮಂಗಳವಾರ ದೇಶದಲ್ಲಿ ಭಾರೀ ‘ಕೊರೋನಾ ಸ್ಫೋಟ’ ಸಂಭವಿಸಿದೆ. ಮಂಗಳವಾರ ಒಂದೇ ದಿನ ದೇಶಾದ್ಯಂತ 4885 ಹೊಸ ಕೊರೋನಾ ಕೇಸು ದೃಢಪಟ್ಟಿದೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 49336ಕ್ಕೆ ತಲುಪಿದೆ. ಇನ್ನು ಮಂಗಳವಾರ 156 ಜನರು ಸೋಂಕಿಗೆ ಬಲಿಯಾಗಿದ್ದು, ಈ ವರೆಗೆ ದೇಶದಲ್ಲಿ ಬಲಿಯಾದವರ ಸಂಖ್ಯೆ 1614ಕ್ಕೆ ತಲುಪಿದೆ. ಹೊಸ ಸೋಂಕು ಮತ್ತು ಸಾವಿನ ಪ್ರಮಾಣ ಒಂದೇ ದಿನದಲ್ಲಿ ಇಷ್ಟುದೊಡ್ಡ ಪ್ರಮಾಣದಲ್ಲಿ ದಾಖಲಾಗಿದ್ದು ಇದೇ ಮೊದಲು.
ಮೇ 4ರಿಂದ ದೇಶಾದ್ಯಂತ ಹಸಿರು ಮತ್ತು ಕಿತ್ತಳೆ ವಲಯದಲ್ಲಿ ಬಹುತೇಕ ಚಟುವಟಿಕೆ ಮತ್ತು ಸೇವೆಗಳಿಗೆ, ಕೆಂಪು ವಲಯದಲ್ಲಿ ಸೀಮಿತ ಚಟುವಟಿಕೆಗಳಿಗೆ ಕೇಂದ್ರ ಸರ್ಕಾರ ಅವಕಾಶ ಕೊಟ್ಟಬೆನ್ನಲ್ಲೇ ಈ ಆಘಾತಕಾರಿ ಅಂಕಿ ಅಂಶಗಳು ಬೆಳಕಿಗೆ ಬಂದಿದೆ. ಮತ್ತೊಂದೆಡೆ ದೇಶಾದ್ಯಂತ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಕಾರ್ಮಿಕರು, ಉದ್ಯೋಗಿಗಳ ಆಂತರಿಕ ವಲಸೆ, ಮತ್ತೊಂದೆಡೆ ವಿದೇಶಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಾರತೀಯರ ಆಗಮನಕ್ಕೆ ಕ್ಷಣಗಣನೆ ಆರಂಭವಾಗಿರುವುದು, ದೇಶದಲ್ಲಿ ಮತ್ತೆ ಕೊರೋನಾ ‘ಮೆಘಾಸ್ಫೋಟ’ದ ಭೀತಿಯನ್ನು ಹುಟ್ಟುಹಾಕಿದೆ.
ತವರಿಗೆ ಬರಲು 58000 ಕನ್ನಡಿಗರು ರೆಡಿ, ಕ್ವಾರಂಟೈನ್ ಮಾಡುವುದೇ ಸವಾಲು!
ಇದೇ ವೇಳೆ ಕಳೆದ 24 ಗಂಟೆಗಳಲ್ಲಿ 1020 ಕೊರೋನಾ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈವರೆಗೆ 13,161 ಜನ ಗುಣಮುಖರಾಗಿದ್ದಾರೆ. ಗುಣ ಹೊಂದಿದವರ ಪ್ರಮಾಣ ಶೇ.27.41ಕ್ಕೂ ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಭಾರೀ ಸ್ಫೋಟ:
ದೇಶದಲ್ಲೇ ಅತಿ ಹೆಚ್ಚು ಸೋಂಕು ಮತ್ತು ಸಾವು ದಾಖಲಾಗಿರುವ ಟಾಪ್ 5 ರಾಜ್ಯಗಳಲ್ಲಿ ಮಂಗಳವಾರವೂ ಅದೇ ಕಥೆ ಮುಂದುವರೆದಿದೆ. ಮಹಾರಾಷ್ಟ್ರದಲ್ಲಿ ಮಂಗಳವಾರ 841 ಹೊಸ ಕೇಸು, 34 ಸಾವು, ತಮಿಳುನಾಡಲ್ಲಿ 508 ಕೇಸು 02 ಸಾವು, ಗುಜರಾತ್‌ನಲ್ಲಿ 441 ಕೇಸು, 49 ಸಾವು, ದೆಹಲಿಯಲ್ಲಿ 206 ಕೇಸು, ಮಧ್ಯಪ್ರದೇಶದಲ್ಲಿ 107 ಕೇಸು, 11 ಸಾವು ದಾಖಲಾಗಿದೆ.
ಮೋದಿ ಸಭೆ:
ಈ ನಡುವೆ ಭಾರತದಲ್ಲಿ ಸೋಂಕು ನಿಯಂತ್ರಣ, ಪತ್ತೆ ಹಚ್ಚುವಿಕೆ, ಲಸಿಕೆ ಅಭಿವೃದ್ಧಿ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು. ಈ ವೇಳೆ ಭಾರತದಲ್ಲಿ ಲಸಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಾಯೋಗಿಕ ಹಂತದಲ್ಲಿ. ದೇಶಾದ್ಯಂತ 30 ಭಾರತೀಯ ಲಸಿಕೆಗಳು ಅಭಿವೃದ್ಧಿಯ ವಿವಿಧ ಹಂತಗಳಲ್ಲಿದೆ ಎಂದು ಸಭೆಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗುಡ್ ನ್ಯೂಸ್ : ವಿಶ್ವದ ಮೊದಲ ಕೊರೋನಾ ಲಸಿಕೆ ರೆಡಿ!
ಲಾಕ್‌ಡೌನ್ ವಿಸ್ತರಣೆ: ಇದೇ ವೇಳೆ ತೆಲಂಗಾಣ ರಾಜ್ಯ ಸರ್ಕಾರ ರಾಜ್ಯದಲ್ಲಿ ಮೇ 29ರವರೆಗೂ ಲಾಕ್‌ಡೌನ್ ವಿಸ್ತರಿಸಿ ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರ ಮೇ 17ರವರೆಗೆ ಮಾತ್ರ ದೇಶವ್ಯಾಪಿ ಲಾಕ್‌ಡೌನ್ ವಿಸ್ತರಿಸಿದೆ.
ಭಾರತದಲ್ಲಿ ಕೊರೋನಾವತಾರ
1ನೇ ಕೇಸ್: ಜನವರಿ 30
1000: ಮಾಚ್‌ರ್ 29
10000: ಏಪ್ರಿಲ್ 13
20000: ಏಪ್ರಿಲ್ 21
30000: ಏಪ್ರಿಲ್ 28
40000: ಮೇ 3
50000: ಮೇ 6?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ