* ಗೋವಾ ಬಿಜೆಪಿಗೆ ಗೊಂದಲ, ಉತ್ಪಲ್ ಹೊಸ ರಾಗ
* ಕಣದಿಂದ ಹಿಂದೆ ಸರಿಯಲು ಸಿದ್ಧ: ಉತ್ಪಲ್ ಪರ್ರಿಕರ್
* ಆದರೆ ಮಾನ್ಸರೇಟ್‌ಗೆ ಪಣಜಿ ಟಿಕೆಟ್ ನೀಡದಂತೆ ಷರತ್ತು
ಪಣಜಿ(ಜ.23): ‘ಟಿಕೆಟ್ ನಿರಾಕರಿಸಿದ ಕಾರಣಕ್ಕೆ ಬಿಜೆಪಿಯನ್ನು ತೊರೆಯಲು ತೆಗೆದುಕೊಂಡ ನಿರ್ಧಾರ ಅತ್ಯಂತ ಕಠಿಣ ತೀರ್ಮಾನವಾಗಿತ್ತು. ಒಂದು ವೇಳೆ, ಬಿಜೆಪಿ ಈಗಲೂ ಪಣಜಿ ಕ್ಷೇತ್ರದಿಂದ ಉತ್ತಮರಿಗೆ ಟಿಕೆಟ್ ನೀಡಿದರೆ ಕಣದಿಂದ ಹಿಂದೆ ಸರಿಯಲು ಸಿದ್ಧ’ ಎಂದು ಮಾಜಿ ಮುಖ್ಯಮಂತ್ರಿ ಮನೋಹರ ಪರ್ರಿಕರ್ ಪುತ್ರ ಉತ್ಪಲ್ ಪರ್ರಿಕರ್ ತಿಳಿಸಿದ್ದಾರೆ. ತನ್ಮೂಲಕ ಅತ್ಯಾಚಾರ ಸೇರಿ ಹಲವು ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ಪಣಜಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಾಬುಷ್ ಮಾನ್ಸರೇಟ್‌ಗೆ ಟಾಂಗ್ ಕೊಟ್ಟಿದ್ದಾರೆ.
‘ಬಿಜೆಪಿ ನನ್ನ ಹೃದಯದಲ್ಲಿದೆ. ಅದರ ಆತ್ಮಕ್ಕಾಗಿ ನಾನು ಹೋರಾಡುತ್ತಿದ್ದೇನೆ. ನನ್ನ ನಿರ್ಧಾರದಿಂದ ನನಗೆ ಸಂತೋಷವಾಗಿಲ್ಲ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ’ ಎಂದು ಉತ್ಪಲ್ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಮನೋಹರ ಪರ್ರಿಕರ್ ಪ್ರತಿನಿಧಿಸುತ್ತಿದ್ದ ಪಣಜಿ ಕ್ಷೇತ್ರದಿಂದ 2019ರಲ್ಲಿ 10 ಶಾಸಕರೊಂದಿಗೆ ಬಿಜೆಪಿಗೆ ಸೇರ್ಪಡೆಯಾದ ಪರ್ರಿಕರ್ ಅವರ ರಾಜಕೀಯ ವಿರೋಧಿ ಅಟಾನಾಸಿಯೋ (ಬಾಬುಷ್) ಮಾನ್ಸೆರೇಟ್ ಅವರಿಗೆ ಪಕ್ಷ ಟಿಕೆಟ್ ನೀಡಿದೆ. ಆದರೆ ಅವರ ವಿರುದ್ಧ ಅಪ್ರಾಪ್ತೆಯ ಅತ್ಯಾಚಾರ ಸೇರಿದಂತೆ ಹಲವು ಕ್ರಿಮಿನಲ್ ಪ್ರಕರಣಗಳು ಇವೆ. ಮಾನ್ಸರೇಟ್‌ಗೂ ಪರ್ರಿಕರ್ ಕುಟುಂಬಕ್ಕೂ ಸಂಬಂಧ ಅಷ್ಟಕ್ಕಷ್ಟೇ ಇದೆ.