ಐಎಎಸ್‌ ವಿರುದ್ಧದ ಕ್ರಮಕ್ಕೆ ಆಗ್ರಹಿಸುತ್ತಿರುವ ರೈತರಿಗೆ ಎಚ್ಚರಿಕೆ ಕೊಟ್ಟ ಗೃಹ ಸಚಿವ!

By Suvarna NewsFirst Published Sep 10, 2021, 2:12 PM IST
Highlights

* ತಪ್ಪಿದ್ದರೆ ರೈತರ ವಿರುದ್ಧವೂ ಕ್ರಮ: ಹರ್ಯಾಣ ಗೃಹ ಸಚಿವ

* ಐಎಎಸ್‌ ವಿರುದ್ಧದ ಕ್ರಮಕ್ಕೆ ಆಗ್ರಹಿಸುತ್ತಿರುವ ರೈತರಿಗೆ ಎಚ್ಚರಿಕೆ

ಚಂಡೀಗಢ(ಸೆ.10): ರೈತರ ಮೇಲೆ ಲಾಠಿ ಪ್ರಹಾರಕ್ಕೆ ಆದೇಶಿಸಿದ ಐಎಎಸ್‌ ಅಧಿಕಾರಿ ಆಯುಷ್‌ ಸಿನ್ಹಾ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿರುವ ನಡುವೆಯೇ, ಕರ್ನಾಲ್‌ ಜಿಲ್ಲೆಯಲ್ಲಿ ನಡೆದ ಎಲ್ಲಾ ಘಟನಾವಳಿಗಳ ಬಗ್ಗೆ ತನಿಖೆ ಕೈಗೊಳ್ಳಲಾಗುತ್ತದೆ ಎಂದು ಹರ್ಯಾಣ ಗೃಹ ಸಚಿವ ಅನಿಲ್‌ ವಿಜ್‌ ತಿಳಿಸಿದ್ದಾರೆ.

ಈ ಬಗ್ಗೆ ಗುರುವಾರ ಮಾತನಾಡಿದ ಅವರು, ‘ತನಿಖೆ ನಡೆಸದೆಯೇ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗದು. ಹೀಗಾಗಿ ಕೇವಲ ಅಧಿಕಾರಿ ಆಯುಷ್‌ ಸಿನ್ಹಾ ವಿರುದ್ಧವಷ್ಟೇ ಅಲ್ಲದೆ, ಈ ಇಡೀ ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುತ್ತದೆ. ಈ ವೇಳೆ ರೈತ ಮುಖಂಡರು ತಪ್ಪಿತಸ್ಥರು ಎಂಬುದು ಕಂಡುಬಂದಲ್ಲಿ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಮಿನಿ ವಿಧಾನಸೌಧದ ಎದುರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೂ ಎಚ್ಚರಿಕೆ ನೀಡಿದ್ದಾರೆ.

ಆಗಸ್ಟ್‌ 28ರಂದು ರೈತರು ನಡೆಸುತ್ತಿದ್ದ ಪ್ರತಿಭಟನೆ ವೇಳೆ ಪೊಲೀಸರು ನಡೆಸಿದ ಲಾಠಿ ಪ್ರಹಾರದ ವೇಳೆ ರೈತನೋರ್ವ ಬಲಿಯಾಗಿದ್ದ. ಜೊತೆಗೆ ಐಎಎಸ್‌ ಅಧಿಕಾರಿ ಹದ್ದು ಮೀರಿ ವರ್ತಿಸುವ ರೈತರ ತಲೆ ಒಡೆಯಿರಿ ಎಂದು ಹೇಳಿದಂತಿದ್ದ ವಿಡಿಯೋ ವೈರಲ್‌ ಆಗಿತ್ತು. ಆ ಬಳಿಕ ಆ ಅಧಿಕಾರಿಯನ್ನು ಮತ್ತೊಂದು ಇಲಾಖೆಗೆ ವರ್ಗಾವಣೆ ಮಾಡಲಾಗಿದೆ. ಆದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ರೈತರ ಆಗ್ರಹ.

click me!