ಜೆಇಇ, ನೀಟ್‌ ಪ್ರವೇಶ ಪರೀಕ್ಷೆ ರದ್ದು ಆಗುತ್ತಾ? ಕೇಂದ್ರ ಸರ್ಕಾರದ ಮುಂದೆ ಹೊಸ ಪ್ರಸ್ತಾಪ

Published : May 23, 2026, 05:33 AM IST
JEE NEET

ಸಾರಾಂಶ

ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕಾಗಿ ಜೆಇಇ ಮತ್ತು ನೀಟ್‌ ಪರೀಕ್ಷೆಗಳನ್ನು ರದ್ದುಗೊಳಿಸಿ, ಒಂದೇ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿದೆ. ನೀಟ್‌ ಪತ್ರಿಕೆ ಸೋರಿಕೆ ನಂತರ ಪರೀಕ್ಷಾ ಸುಧಾರಣೆಯ ಭಾಗವಾಗಿ ಈ ಚಿಂತನೆ ನಡೆದಿದೆ.

ನವದೆಹಲಿ: ವೈದ್ಯಕೀಯ ಮತ್ತು ಎಂಜಿನಿಯರಿಂಗ್‌ ಕೋರ್ಸ್‌ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ದೇಶಾದ್ಯಂತ ಜಂಟಿ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸುವ ಪ್ರಸ್ತಾಪವೊಂದರ ಕುರಿತು ಸರ್ಕಾರದ ಹಂತದಲ್ಲಿ ಗಂಭೀರ ಪರಿಶೀಲನೆ ನಡೆಯುತ್ತಿದೆ.

ಸದ್ಯ ಈ ಪ್ರಸ್ತಾಪ ಚರ್ಚೆ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಇದು ನೀಟ್‌ ಮತ್ತು ಜೆಇಇ ಪರೀಕ್ಷೆ ಜಾಗದಲ್ಲಿ ಅನುಷ್ಠಾನಕ್ಕೆ ಬರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಶ್ನೆಪತ್ರಿಕೆ ಸೋರಿಕೆ ಬೆನ್ನಲ್ಲೇ ಅಲರ್ಟ್

ನೀಟ್‌ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಬೆನ್ನಲ್ಲೇ ದೇಶಾದ್ಯಂತ ಪರೀಕ್ಷಾ ಸುಧಾರಣೆ ಕುರಿತು ವ್ಯಾಪಕ ಬೇಡಿಕೆ ಬಂದಿರುವ ಹೊತ್ತಿನಲ್ಲೇ ಹಾಲಿ ಎಂಜಿನಿಯರಿಂಗ್‌ ಮತ್ತು ವೈದ್ಯಕೀಯ ಕೋರ್ಸ್‌ ಪ್ರವೇಶ ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆಗೆ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ.

ಇದೀಗ ಸರ್ಕಾರದ ಮುಂದಿರುವ ಪ್ರಸ್ತಾಪದಲ್ಲಿ ಎಂಜಿನಿಯರಿಂಗ್‌ ಮತ್ತು ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದಲ್ಲಿ ಒಂದೇ ಪರೀಕ್ಷೆ ಎದುರಿಸಲಿದ್ದಾರೆ. ಈ ಪ್ರವೇಶ ಪರೀಕ್ಷೆಯಲ್ಲಿ ಎಂಜಿನಿಯರಿಂಗ್‌ ಪ್ರವೇಶಾಕಾಂಕ್ಷಿಗಳಿಗೆ ಗಣಿತ ಮತ್ತು ವೈದ್ಯಕೀಯ ಕಾಲೇಜು ಪ್ರವೇಶಾಕಾಂಕ್ಷಿಗಳಿಗೆ ಜೀವಶಾಸ್ತ್ರ ಈ ಎರಡು ವಿಷಯಗಳ ಪ್ರತ್ಯೇಕ ಸೆಕ್ಷನ್‌ಗಳಿರಲಿವೆ ಎಂದು ಹೇಳಲಾಗಿದೆ.

ವಯೋಮಿತಿ ಹೇರಲೂ ನಿರ್ಧಾರ

ಪರೀಕ್ಷೆ ಬರೆಯಲು ವಯಸ್ಸಿನ ಮಿತಿ ಮತ್ತು ಇಂತಿಷ್ಟೇ ಬಾರಿಯಷ್ಟೇ ಪರೀಕ್ಷೆ ಅವಕಾಶ ನೀಡುವ ಕುರಿತೂ ಸರ್ಕಾರ ಚಿಂತನೆ ನಡೆಸುತ್ತಿದೆ. ಇಷ್ಟೇ ಅಲ್ಲದೆ, ವಿದ್ಯಾರ್ಥಿಗಳ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಬಹುಹಂತದ, ಬಹು ಅವಧಿಯಲ್ಲಿ ಪರೀಕ್ಷೆ ನಡೆಸುವ ಕುರಿತೂ ಚರ್ಚೆ ನಡೆಯುತ್ತಿದೆ.

ಈ ಪ್ರಸ್ತಾಪದ ಕುರಿತು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು(ಎನ್‌ಟಿಎ) ನಿರ್ದೇಶಕ ಜನರಲ್‌ ಅಭಿಷೇಕ್‌ ಸಿಂಗ್‌ ಮತ್ತು ಉನ್ನತ ಶಿಕ್ಷಣ ಕಾರ್ಯದರ್ಶಿ ವಿನೀತ್‌ ಜೋಶಿ ಅವರು ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌ ನೇತೃತ್ವದ ಸಂಸದೀಯ ಸಮಿತಿಗೆ ಡಾ.ರಾಧಾಕೃಷ್ಣನ್‌ ಸಮಿತಿಯ ಪರೀಕ್ಷಾ ಸುಧಾರಣೆಗಳು ಮತ್ತು ಶಿಫಾರಸುಗಳ ಕುರಿತು ವಿವರಣೆ ನೀಡುವ ವೇಳೆ ಈ ಕುರಿತು ಮಾಹಿತಿ ನೀಡಿದರು.

ಸಂಸದೀಯ ಸಮಿತಿ ಸದಸ್ಯರು ಹಾಲಿ ವ್ಯವಸ್ಥೆಗಿಂತ ಇದು ಹೆಚ್ಚು ಸಮರ್ಥ ಆಡಳಿತಾತ್ಮಕ ವ್ಯವಸ್ಥೆ ಎಂದು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ. ಇದರ ಜತೆಗೆ ಅಕ್ರಮಗಳಿಗೆ ಕಡಿವಾಣ ಹಾಕುವ ಸಂಬಂಧ ಪ್ರಶ್ನಾಪತ್ರಿಕೆ ಸಿದ್ಧತಾ ಪ್ರಕ್ರಿಯೆ ಮೇಲೆ ಹೆಚ್ಚಿನ ನಿಯಂತ್ರಣ ಹೇರಲು ಮತ್ತು ಪರೀಕ್ಷೆಯಲ್ಲಿ 3ನೇ ವ್ಯಕ್ತಿ ಮೇಲಿನ ಅವಲಂಬನೆ ಕಡಿಮೆ ಮಾಡಲು ತನ್ನದೇ ಆದ ತಂತ್ರಜ್ಞಾನ ಮೂಲಸೌಲಭ್ಯ ಮತ್ತು ವ್ಯವಸ್ಥೆ ಬಲಪಡಿಸಲೂ ಎನ್‌ಟಿಎ ಯೋಜನೆ ಹಾಕಿಕೊಂಡಿದೆ ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾಕ್ರೋಚ್ ಜನತಾ ಪಾರ್ಟಿ ಸ್ಥಾಪಕ ಅಭಿಜೀತ್ ದೀಪ್ಕೆ ಪೋಷಕರಿಗೆ ಆತಂಕ; ತಂದೆ ಹೇಳಿದ್ದೇನು?
India Latest News Live: ಜೆಇಇ, ನೀಟ್‌ ಪ್ರವೇಶ ಪರೀಕ್ಷೆ ರದ್ದು ಆಗುತ್ತಾ? ಕೇಂದ್ರ ಸರ್ಕಾರದ ಮುಂದೆ ಹೊಸ ಪ್ರಸ್ತಾಪ