ಭಾರತದೊಡನೆ ಯುದ್ಧವಾದರೆ ಪಾಕಿಸ್ತಾನದ ಕೈ ಹಿಡಿದೀತೇ ಚೀನಾ?: ಅಭೇದ್ಯ ಮೈತ್ರಿಯ ಒಳಗುಟ್ಟು!

Published : May 02, 2025, 04:59 PM ISTUpdated : May 02, 2025, 05:38 PM IST
ಭಾರತದೊಡನೆ ಯುದ್ಧವಾದರೆ ಪಾಕಿಸ್ತಾನದ ಕೈ ಹಿಡಿದೀತೇ ಚೀನಾ?: ಅಭೇದ್ಯ ಮೈತ್ರಿಯ ಒಳಗುಟ್ಟು!

ಸಾರಾಂಶ

ಚೀನಾ ಮತ್ತು ಪಾಕಿಸ್ತಾನಗಳ ಸ್ನೇಹ ಬಹಳಷ್ಟು ಬಣ್ಣಿಸಲ್ಪಡುತ್ತದೆ. ಆದರೆ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದರೆ ಚೀನಾ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತದೆಯೇ 

ಚೀನಾ ಮತ್ತು ಪಾಕಿಸ್ತಾನಗಳ ಸ್ನೇಹ ಬಹಳಷ್ಟು ಬಣ್ಣಿಸಲ್ಪಡುತ್ತದೆ. ಉಭಯ ದೇಶಗಳು ತಮ್ಮ ಸ್ನೇಹ 'ಹಿಮಾಲಯಕ್ಕಿಂತಲೂ ಎತ್ತರ, ಮತ್ತು ಸಮುದ್ರಕ್ಕಿಂತಲೂ ಆಳವಾಗಿದೆ' ಎಂದು ಬಣ್ಣಿಸಿವೆ. ತಮ್ಮ ಸ್ನೇಹ ಎಲ್ಲ ಪರಿಸ್ಥಿತಿಯಲ್ಲೂ ಸ್ಥಿರವಾಗಿರುತ್ತದೆ ಎಂದಿವೆ. ಚೀನಾದ ಮಾಜಿ ಮಿಲಿಟರಿ ಅಧಿಕಾರಿಯೊಬ್ಬರು ಪಾಕಿಸ್ತಾನವನ್ನು 'ಚೀನಾದ ಇಸ್ರೇಲ್' ಎಂದು ಕರೆದಿದ್ದು, ತಮ್ಮೆರಡು ದೇಶಗಳ ಸಹಯೋಗ ಅಭೇದ್ಯ ಎಂಬ ಸಂದೇಶ ರವಾನಿಸಿದ್ದರು. ಆದರೆ, ಇತ್ತೀಚಿನ ಪಹಲ್ಗಾಮ್ ಭಯೋತ್ಪಾದನಾ ದಾಳಿಯ ಬಳಿಕ ಭಾರತ - ಪಾಕಿಸ್ತಾನಗಳ ಗಡಿಯಾದ್ಯಂತ ಉದ್ವಿಗ್ನತೆಗಳು ಹೆಚ್ಚಾಗಿದ್ದು, ಈಗ ಒಂದು ಮಹತ್ವದ ಪ್ರಶ್ನೆ ಎದುರಾಗಿದೆ. ಅದೇನೆಂದರೆ: ಒಂದು ವೇಳೆ ಭಾರತ ಏನಾದರೂ ಪಾಕಿಸ್ತಾನದ ಮೇಲೆ ಮಿಲಿಟರಿ ಕಾರ್ಯಾಚರಣೆ ಆರಂಭಿಸಿದರೆ, ಚೀನಾ ನಿಜಕ್ಕೂ ಪಾಕಿಸ್ತಾನದ ಜೊತೆ ನಿಲ್ಲಬಹುದೇ? ಅಥವಾ ಬೀಜಿಂಗ್ ಬೆಂಬಲ ಕೇವಲ ರಾಜತಾಂತ್ರಿಕ ಮಾತುಕತೆಗಳಿಗೆ ಸೀಮಿತವಾಗಿ, ಯುದ್ಧದ ಪರಿಣಾಮಗಳನ್ನು ಪಾಕಿಸ್ತಾನ ಏಕಾಂಗಿಯಾಗಿ ಎದುರಿಸುವಂತಾದೀತೇ?

ಪಹಲ್ಗಾಮ್ ಭಯೋತ್ಪಾದನಾ ದಾಳಿ ಭಾರತ - ಪಾಕಿಸ್ತಾನಗಳ ಹಳೆಯ ದ್ವೇಷಕ್ಕೆ ಮರು ಚಾಲನೆ ನೀಡಿದೆ. ಪಾಕಿಸ್ತಾನ ಭಯೋತ್ಪಾದನೆಗೆ ನೆರವು ನೀಡುತ್ತಿದೆ ಎಂದು ಭಾರತ ಆರೋಪಿಸುತ್ತಿದ್ದು, ಪಾಕಿಸ್ತಾನ ಭಾರತದ ಆರೋಪಗಳನ್ನು ತಳ್ಳಿಹಾಕಿದ್ದು, ಚೀನಾದ ಬೆಂಬಲವನ್ನು ಎದುರು ನೋಡುತ್ತಿದೆ. ಆದರೆ ಚೀನಾದ ಪ್ರತಿಕ್ರಿಯೆ ಬಹಳಷ್ಟು ಜಾಗರೂಕವಾಗಿತ್ತು. ಚೀನಾದ ವಿದೇಶಾಂಗ ಸಚಿವರಾದ ವಾಂಗ್ ಯಿ ಉಭಯ ದೇಶಗಳಿಗೆ ಶಾಂತಿ ಕಾಪಾಡಿಕೊಳ್ಳುವಂತೆ, ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಡುವಂತೆ ಆಗ್ರಹಿಸಿದ್ದಾರೆ. ಆದರೆ, ಚೀನಾ ಮೌನವಾಗಿಯೇ ಪಾಕಿಸ್ತಾನದೊಡನೆ ಕಾರ್ಯಾಚರಿಸಿ, ಪಹಲ್ಗಾಮ್ ದಾಳಿಯ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಹೇಳಿಕೆಯನ್ನು ದುರ್ಬಲಗೊಳಿಸಿದೆ. 2019ರ ಪುಲ್ವಾಮಾ ದಾಳಿಯ ಬಳಿಕ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಹೇಳಿಕೆ ಸಾಕಷ್ಟು ಪ್ರಬಲವಾಗಿತ್ತು. ಆದರೆ, ಈ ಬಾರಿ ಭದ್ರತಾ ಮಂಡಳಿ ಭಾರತದ ತನಿಖೆಯನ್ನು ಸಂಪೂರ್ಣವಾಗಿ ಬೆಂಬಲಿಸುವ ಹೇಳಿಕೆ ನೀಡಿಲ್ಲ. ಇದರಿಂದ ಮೇಲ್ನೋಟಕ್ಕೆ ಚೀನಾ ಪಾಕಿಸ್ತಾನವನ್ನು ಬೆಂಬಲಿಸುತ್ತಿದೆ ಎಂಬಂತೆ ಕಂಡರೂ, ಸೂಕ್ಷ್ಮವಾಗಿ ಗಮನಿಸಿದರೆ ಈ ಸುಭದ್ರ ಸ್ನೇಹದಲ್ಲೂ ಒಂದಷ್ಟು ಬಿರುಕುಗಳು ಕಂಡುಬರುತ್ತಿವೆ.

ಪಾಕಿಸ್ತಾನದ ತಪ್ಪು ಹೆಜ್ಜೆಗಳು ಮತ್ತು ಆಸಿಂ ಮುನೀರ್ ಪ್ರಮಾದ

ಪಾಕಿಸ್ತಾನಿ ಸೇನೆಯ ಮುಖ್ಯಸ್ಥ, ಜನರಲ್ ಆಸಿಂ ಮುನೀರ್ ಪಹಲ್ಗಾಮ್ ದಾಳಿಯನ್ನು ಒಂದು ಕಾರ್ಯತಂತ್ರದ ನಡೆ ಎಂಬಂತೆ ಪರಿಗಣಿಸಿರುವ ಸಾಧ್ಯತೆಗಳಿವೆ. ಆದರೆ, ಕುಸಿಯುತ್ತಿರುವ ಪಾಕಿಸ್ತಾನದ ಆರ್ಥಿಕತೆ, ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಮತ್ತು ದೇಶದ ರಾಜಕೀಯದ ಮೇಲೆ ಮಿಲಿಟರಿ ಹಿಡಿತದ ವಿರುದ್ಧ ಹೆಚ್ಚುತ್ತಿರುವ ಜನಾಕ್ರೋಶ ಮೂಡಿರುವ ಸಂದರ್ಭದಲ್ಲಿ, ಕಾಶ್ಮೀರದಲ್ಲಿ ಉದ್ವಿಗ್ನತೆ ಸೃಷ್ಟಿಸುವುದರಿಂದ ದೇಶದ ಗಮನವನ್ನು ಅತ್ತ ಸೆಳೆದು, ಜನ ಬೆಂಬಲ ಪಡೆಯಬಹುದು ಎನ್ನುವುದು ಮುನೀರ್ ಉದ್ದೇಶವಾಗಿರಬಹುದು. 2019ರ ಪುಲ್ವಾಮಾ ದಾಳಿಯ ಸಂದರ್ಭದಲ್ಲಿ ಐಎಸ್ಐ ನೇತೃತ್ವ ವಹಿಸಿದ್ದ ಆಸಿಂ ಮುನೀರ್, ಈಗಿನ ಸಂದರ್ಭದಲ್ಲಿ ಜಗತ್ತಿನ ಗಮನ ಗಾಜಾ, ಉಕ್ರೇನ್ ಮತ್ತು ತೈವಾನ್ ಕಡೆಗಿದ್ದು, ಪಾಕಿಸ್ತಾನದ ದುಷ್ಕೃತ್ಯದತ್ತ ಗಮನ ಹರಿಯದು ಎಂದು ಭಾವಿಸಿರಬಹುದು. ಅದರೊಡನೆ, ಹಿಂದೆ ರಾಜತಾಂತ್ರಿಕ ಮತ್ತು ಆರ್ಥಿಕ ನೆರವು ನೀಡಿದಂತೆ ಚೀನಾ ಈಗಲೂ ಒಂದು ನಂಬಿಕಾರ್ಹ ಸಹಯೋಗಿಯಾಗಿರಬಹುದು ಎಂದೂ ಮುನೀರ್ ಲೆಕ್ಕ ಹಾಕಿದ್ದರು.

ಆದರೆ, ಮುನೀರ್ ಲೆಕ್ಕಾಚಾರ ದುಬಾರಿಯಾಗಿ ಪರಿಣಮಿಸುವ ಸಾಧ್ಯತೆಗಳೇ ಹೆಚ್ಚಿವೆ. ಇಂದು ಜಗತ್ತು ನಿರಂತರವಾಗಿ ಬದಲಾಗುತ್ತಿದ್ದು, ಅದರೊಡನೆ ಚೀನಾದ ಆದ್ಯತೆಗಳೂ ಬದಲಾಗಿವೆ. ಚೀನಾ ಬೇಷರತ್ತಾಗಿ ತನ್ನ ಬೆಂಬಲಕ್ಕೆ ನಿಲ್ಲುತ್ತದೆ ಎನ್ನುವ ಪಾಕಿಸ್ತಾನದ ನಿರೀಕ್ಷೆ ಅದರ ಆಶಾ ಭಾವನೆಯೇ ಹೊರತು ವಾಸ್ತವವಲ್ಲ.

ಪಾಕಿಸ್ತಾನದ ಕುರಿತು ಕಡಿಮೆಯಾಗುತ್ತಿರುವ ಚೀನಾದ ಆಸಕ್ತಿ

ಪಾಕಿಸ್ತಾನದ ಜೊತೆಗಿನ ಚೀನಾದ ಸಹಯೋಗ ಮೂರು ಮುಖ್ಯ ವಿಚಾರಗಳ ಆಧಾರಿತವಾಗಿತ್ತು. ಅವೆಂದರೆ: ಅಫ್ಘಾನಿಸ್ತಾನದ ಒಳಗೆ ಪ್ರವೇಶ, ಚೀನಾ - ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ (ಸಿಪಿಇಸಿ) ಮತ್ತು ಭಾರತದ ಉತ್ಕರ್ಷವನ್ನು ತಡೆಯಲು ಪಾಕಿಸ್ತಾನವನ್ನು ಬಳಸುವುದು. ಆದರೆ, ಈ ಮೂರೂ ಅಂಶಗಳಲ್ಲೂ ಚೀನಾಗೆ ಪಾಕಿಸ್ತಾನದ ಅವಶ್ಯಕತೆ ಇರುವಂತೆ ತೋರುತ್ತಿಲ್ಲ.

ಮೊದಲನೆಯದಾಗಿ ಅಫ್ಘಾನಿಸ್ತಾನ. ಆರಂಭದಲ್ಲಿ ತಾಲಿಬಾನ್ ಸಂಬಂಧ ಸಾಧಿಸಲು ಚೀನಾಗೆ ಪಾಕಿಸ್ತಾನದ ಅವಶ್ಯಕತೆಯಿತ್ತು. ಆದರೆ, ಬಳಿಕ ಚೀನಾ ಕಾಬೂಲ್ ಜೊತೆಗೆ ನೇರ ಸಂಬಂಧ ಹೊಂದಿ, ಇಸ್ಲಾಮಾಬಾದನ್ನು ಮೂಲೆಗುಂಪು ಮಾಡಿತು. ಎರಡನೆಯದಾಗಿ, ಚೀನಾದ ಬೆಲ್ಟ್ ಆ್ಯಂಡ್ ರೋಡ್ ಯೋಜನೆಯಲ್ಲಿ ಮಹತ್ವದ್ದಾದ ಸಿಪಿಇಸಿ ಯೋಜನೆ ತನ್ನ ಹೊಳಪನ್ನು ಕಳೆದುಕೊಂಡು, ಮಂಕಾಗಿದೆ. ಒಂದು ಕಾಲದಲ್ಲಿ ದುಬೈಗೆ ಪ್ರತಿಸ್ಪರ್ಧಿಯಾಗಬಹುದು ಎಂದುಕೊಂಡಿದ್ದ ಗ್ವಾದರ್ ಬಂದರು ಇಂದಿಗೂ ಅಭಿವೃದ್ಧಿ ರಹಿತವಾಗಿಯೇ ಉಳಿದಿದೆ. ಇದಕ್ಕೆ ಸ್ಥಳೀಯ ಉದ್ವಿಗ್ನತೆಗಳು, ಕಾರ್ಮಿಕರಿಗೆ ವೇತನ ಕೊರತೆ, ಮತ್ತು ಹಿಂಸಾಚಾರಗಳು ಮುಖ್ಯ ಕಾರಣಗಳಾಗಿವೆ. ಚೀನಾದ ಜಾಗತಿಕ ಮಹತ್ವಾಕಾಂಕ್ಷೆಯನ್ನು ತೋರಿಸಬೇಕಾಗಿದ್ದ ಈ ಯೋಜನೆ ಈಗ ಚೀನಾದ ಮಿತಿಗಳನ್ನು ಜಗತ್ತಿಗೆ ತೋರಿಸುತ್ತಿದೆ.

ಮೂರನೆಯದಾಗಿ, ಭಾರತದ ಪ್ರಭಾವವನ್ನು ತಗ್ಗಿಸಲು ಪಾಕಿಸ್ತಾನವನ್ನು ಬಳಸುವ ಚೀನಾದ ಯೋಜನೆ ಅಪಾಯಕಾರಿಯಾಗಿ ಪರಿಣಮಿಸಿದೆ. ಪಾಕಿಸ್ತಾನದಲ್ಲಿ ಹೆಚ್ಚುತ್ತಿರುವ ಅಸ್ಥಿರತೆ, ಮಿಲಿಟರಿ ಪಾರಮ್ಯ, ಮತ್ತು ಪಾಕಿಸ್ತಾನದ ಸೇನಾಪಡೆ ಮತ್ತು ಜಿಹಾದಿಗಳ ನಡುವಿನ ಬಾಂಧವ್ಯ ಚೀನಾಗೆ ಆತಂಕಕಾರಿಯಾಗಿದೆ. ಪಾಕಿಸ್ತಾನದಲ್ಲಿನ ಅಶಾಂತಿ ತನ್ನ ಕ್ಸಿನ್‌ಜಿಯಾಂಗ್ ಪ್ರಾಂತ್ಯಕ್ಕೂ ಹಬ್ಬಬಹುದು ಎನ್ನುವುದು ಚೀನಾದ ಆತಂಕವಾಗಿದೆ. ಈ ಪ್ರಾಂತ್ಯದಲ್ಲಿ ಚೀನಾ ಇಸ್ಲಾಮಿಕ್ ತೀವ್ರವಾದವನ್ನು ಮಟ್ಟಹಾಕಿತ್ತು. ಚೀನಾಗೆ ಅಸ್ಥಿರ ಪಾಕಿಸ್ತಾನಕ್ಕಿಂತಲೂ, ಸುಸ್ಥಿರವಾದ ಭಾರತದ ಜೊತೆಗಿನ ಸ್ನೇಹ ಹೆಚ್ಚು ಮುಖ್ಯವಾಗಿ ತೋರುತ್ತಿದೆ.

ಇತಿಹಾಸ ಕಲಿಸುವ ಪಾಠಗಳು

ಚೀನಾದ ಬೇಷರತ್ತಾದ ಬೆಂಬಲದ ಕುರಿತು ಪಾಕಿಸ್ತಾನದ ನಿರೀಕ್ಷೆಗಳು ಹೊಸದೇನಲ್ಲ. ಆದರೆ, ಈ ನಿರೀಕ್ಷೆಗಳು ಎಂದಿಗೂ ನಿಜವಾಗಿರಲಿಲ್ಲ. 1971ರಲ್ಲಿ, ಬಾಂಗ್ಲಾದೇಶದ ನಿರ್ಮಾಣಕ್ಕೆ ಕಾರಣವಾದ ಭಾರತ - ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಚೀನಾ ಮಧ್ಯಪ್ರವೇಶ ಮಾಡಲಿದೆ ಎಂದು ಪಾಕಿಸ್ತಾನ ನಿರೀಕ್ಷಿಸಿತ್ತು. ಆದರೆ, ಚೀನಾದಿಂದ ಯಾವುದೇ ನೆರವು ಬಂದಿರಲಿಲ್ಲ. 1972ರಲ್ಲಿ, ಪಾಕಿಸ್ತಾನದ 'ಡಾನ್' ಪತ್ರಿಕೆಯ ಸಂಪಾದಕೀಯ ಪಾಕಿಸ್ತಾನದ ತಪ್ಪನ್ನು ಪ್ರಸ್ತಾಪಿಸಿತ್ತು. "ಒಂದು ವೇಳೆ ಚೀನಾ ನಮ್ಮನ್ನು ಸಂಪೂರ್ಣವಾಗಿ ಬೆಂಬಲಿಸಲಿದೆ ಎಂಬ ಅವಾಸ್ತವಿಕ ನಂಬಿಕೆಯನ್ನು ಹೊಂದಿರದಿದ್ದರೆ, ನಾವು ಯುದ್ಧದಲ್ಲಿ ಸೋಲು ತಪ್ಪಿಸಬಹುದಿತ್ತು" ಎಂದು ಸಂಪಾದಕೀಯ ಅಭಿಪ್ರಾಯ ಪಟ್ಟಿತ್ತು. ಅದಾದ ದಶಕಗಳ ಬಳಿಕವೂ ಪಾಕಿಸ್ತಾನದಲ್ಲಿ ಬದಲಾವಣೆಗಳಾದಂತೆ ತೋರುತ್ತಿಲ್ಲ. ಚೀನಾ ಇಂದಿಗೂ ಮಾತಿನಲ್ಲಿ ಭರವಸೆ ನೀಡುತ್ತಿದೆ, ಆರ್ಥಿಕ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದೆ, ಮತ್ತು ಕಾರ್ಯತಂತ್ರದ ಸಹಕಾರ ನೀಡುತ್ತಿದೆಯಾದರೂ, ಪಾಕಿಸ್ತಾನದ ಪರವಾಗಿ ಅಂಗಳಕ್ಕೆ ಇಳಿಯುತ್ತಿಲ್ಲ.

ಚೀನಾ ಯಾಕೆ ಹಿಂದೇಟು ಹಾಕಬಹುದು?

ಚೀನಾ ವಾಸ್ತವ ಸ್ಥಿತಿಗತಿಗಳನ್ನು ಅರ್ಥ ಮಾಡಿಕೊಂಡ ಕಾರಣದಿಂದ ಜಾಗರೂಕತೆಯ ನಿಲುವು ತಳೆದಿದೆ. ಮನೆಯಲ್ಲೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಮುಂದೆ ಸಾಲು ಸಾಲು ಸವಾಲುಗಳಿವೆ. ಜಿನ್‌ಪಿಂಗ್ ಪೀಪಲ್ಸ್ ಲಿಬರೇಶನ್ ಆರ್ಮಿಯ ದುರಸ್ತಿಗಿಳಿದಿದ್ದು, ಚೀನಾದ ಪರಮಾಣು ಮತ್ತು ಕ್ಷಿಪಣಿ ಪಡೆಗಳ ನಾಯಕರೂ ಸೇರಿದಂತೆ ಹನ್ನೆರಡಕ್ಕೂ ಹೆಚ್ಚು ಹಿರಿಯ ಅಧಿಕಾರಿಗಳನ್ನು ತೆಗೆದು ಹಾಕಿದ್ದಾರೆ. ಇದು ಮಿಲಿಟರಿ ಸನ್ನದ್ಧತೆಯ ಕುರಿತ ಭರವಸೆಯನ್ನೂ ನಲುಗಿಸಿದೆ. ಅಮೆರಿಕಾದ ಜೊತೆಗಿನ ಸುಂಕ ಸಮರದ ಪರಿಣಾಮವಾಗಿ ಚೀನಾದ ಆರ್ಥಿಕತೆಯೂ ಸಂಕಷ್ಟದಲ್ಲಿದ್ದು, ಆರ್ಥಿಕತೆ ಕುಂಠಿತಗೊಂಡು, ಗ್ರಾಹಕರ ವಿಶ್ವಾಸವೂ ಕಡಿಮೆಯಾಗಿದೆ. 2027ರ ಕಾಂಗ್ರೆಸ್ ಆಚೆಗೂ ಅಧಿಕಾರವನ್ನು ಕ್ರೋಢೀಕರಿಸುವತ್ತ ಜಿನ್‌ಪಿಂಗ್ ಗಮನ ಹರಿಸಿದ್ದಾರೆ.

ಜಾಗತಿಕವಾಗಿಯೂ ಚೀನಾದ ಆದ್ಯತೆಗಳು ಬೇರೆಯೇ ಆಗಿವೆ. ದಕ್ಷಿಣ ಏಷ್ಯಾಗಿಂತಲೂ, ತೈವಾನ್, ದಕ್ಷಿಣ ಚೀನಾ ಸಮುದ್ರಗಳ ವಿಚಾರ ಮತ್ತು ಆಗ್ನೇಯ ಏಷ್ಯಾದ ಜೊತೆಗಿನ ಆರ್ಥಿಕ ಬಾಂಧವ್ಯ ಚೀನಾಗೆ ಮುಖ್ಯವಾಗಿದೆ. ಭಾರತವನ್ನು ಎದುರಿಸುವುದು ಚೀನಾದ ಆದ್ಯತೆಯಾಗಿದ್ದರೂ, 2020ರ ಲಡಾಖ್ ಚಕಮಕಿಯ ಬಳಿಕ ನವದೆಹಲಿಯೊಡನೆ ಉದ್ವಿಗ್ನತೆಯನ್ನು ಕಡಿಮೆಗೊಳಿಸುವುದು ಚೀನಾಗೆ ಉತ್ತಮ ಆಯ್ಕೆಯಾಗಿ ಕಂಡಿದೆ. ಭಾರತದ ಬೆಳೆಯುತ್ತಿರುವ ಜಾಗತಿಕ ಪ್ರಭಾವ ಮತ್ತು ಆರ್ಥಿಕ ಸಾಮರ್ಥ್ಯ ಭಾರತವನ್ನು ಚೀನಾದ ದೀರ್ಘಾವಧಿಯ ಕಾರ್ಯತಂತ್ರದಲ್ಲಿ ಮುಖ್ಯವಾಗಿಸಿದೆ. ಪಾಕಿಸ್ತಾನಕ್ಕೋಸ್ಕರ ಭಾರತದ ಜೊತೆಗಿನ ಸಂಬಂಧವನ್ನು ಹದಗೆಡಿಸುವುದು ಚೀನಾದ ಯೋಜನೆಗಳಿಗೆ ತೊಂದರೆ ಕೊಡಬಹುದು.

ಭಾರತದ ಪ್ರತಿಕ್ರಿಯೆ ಮತ್ತು ಪಾಕಿಸ್ತಾನದ ಅಪಾಯ

ಭಾರತ ಈಗ ತನ್ನ ಶಕ್ತಿಯ ಕುರಿತು ಸಂದೇಶ ರವಾನಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಪಹಲ್ಗಾಮ್ ದಾಳಿಗೆ ಪ್ರತಿಕ್ರಿಯೆ ನೀಡಲು ಸೇನಾ ಪಡೆಗಳಿಗೆ ಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ. ಅದರೊಡನೆ, ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ಜಾರಿಗೆ ಬಂದ ಬಳಿಕ ಇದೇ ಮೊದಲ ಬಾರಿಗೆ ಭಾರತ ಅದನ್ನು ಅಮಾನತಿನಲ್ಲಿ ಇಟ್ಟಿರುವುದು ಸ್ಪಷ್ಟವಾದ ಸಂದೇಶ ರವಾನಿಸಿದೆ. ಪ್ರಬಲ ಸಾಂಪ್ರದಾಯಿಕ ಪಡೆಗಳು ಮತ್ತು ಬೃಹತ್ ರಕ್ಷಣಾ ಬಜೆಟ್ ಹೊಂದಿರುವ ಭಾರತ ಪಾಕಿಸ್ತಾನದೆದುರು ಸ್ಪಷ್ಟ ಮಿಲಿಟರಿ ಪಾರಮ್ಯ ಹೊಂದಿದೆ. ಒಂದು ವೇಳೆ ಉದ್ವಿಗ್ನತೆಗಳು ಹೆಚ್ಚಾದರೆ, ಪಾಕಿಸ್ತಾನ ಭಾರತದ ಸಾಮರ್ಥ್ಯಕ್ಕೆ ಸಾಟಿಯಾಗಲು ಸಾಧ್ಯವಿಲ್ಲ.

ಈಗ ಜನರಲ್ ಮುನೀರ್ ಅವರಿಗೆ ಈ ಜೂಜು ದುಬಾರಿಯಾಗಬಲ್ಲದು. ಒಂದು ವೇಳೆ ಮಿಲಿಟರಿ ಕ್ರಮಕ್ಕಿಂತಲೂ ರಾಜತಾಂತ್ರಿಕತೆಗೆ ಚೀನಾ ಆದ್ಯತೆ ನೀಡಿದರೆ, ಚೀನಾದ ಬೆಂಬಲದ ಕುರಿತ ಮುನೀರ್ ಲೆಕ್ಕಾಚಾರಗಳು ತಲೆಕೆಳಗಾಗಬಹುದು. ಪಾಕಿಸ್ತಾನದ ಆಂತರಿಕ ಕೋಲಾಹಲ ಮತ್ತು ಬಾಹ್ಯ ಸಹಯೋಗಿಗಳ ಮೇಲಿನ ಅದರ ಅವಲಂಬನೆ ಪಾಕಿಸ್ತಾನವನ್ನು ಬಹಳಷ್ಟು ದುರ್ಬಲಗೊಳಿಸಿದೆ. ಚೀನಾ ಅನವಶ್ಯಕ ಗೋಜಲಿನೊಳಗೆ ಎಳೆಯಲ್ಪಡುವ ಸಾಧ್ಯತೆಗಳ ಕುರಿತು ಎಚ್ಚರಿಕೆ ಹೊಂದಿದ್ದು, ಸಾಧ್ಯವಾದಷ್ಟೂ ಇದರಿಂದ ದೂರ ಉಳಿದು, ಕೇವಲ ಮಾತಿನ ಬೆಂಬಲ ಒದಗಿಸುವ ಸಾಧ್ಯತೆಗಳು ಹೆಚ್ಚು.

ಮುಂದಿನ ದೊಡ್ಡ ಚಿತ್ರಣ

ಚೀನಾ ಮತ್ತು ಪಾಕಿಸ್ತಾನಗಳ ಸ್ನೇಹ ಗಾಢವಾಗಿದ್ದರೂ, ಅದು ಯಾವುದೇ ಷರತ್ತು ರಹಿತ ಸ್ನೇಹವೇನಲ್ಲ. ಬೀಜಿಂಗ್ ನಡೆ ಇಸ್ಲಾಮಾಬಾದ್ ಕುರಿತ ಕುರುಡು ನಿಷ್ಠೆಗಿಂತಲೂ ಸ್ಥಿರತೆ ಮತ್ತು ತನ್ನ ಹಿತಾಸಕ್ತಿಗಳೇ ತನಗೆ ಮುಖ್ಯ ಎಂದು ಸ್ಪಷ್ಟಪಡಿಸಿದೆ. ಪಾಕಿಸ್ತಾನಕ್ಕೆ ಇದೊಂದು ಎಚ್ಚರಿಕೆಯಾಗಿದ್ದು, ತನ್ನನ್ನು ರಕ್ಷಿಸಿಕೊಳ್ಳಲು ಚೀನಾ ಮೇಲಿನ ಅವಲಂಬನೆ 1971ರಂತೆಯೇ ಈಗಲೂ ನಿರಾಸೆಗೆ ಕಾರಣವಾಗಬಹುದು. ಭಾರತಕ್ಕೆ ಸ್ಥಿರವಾಗಿ ಪ್ರತಿಕ್ರಿಯೆ ನೀಡುವ ಅವಶ್ಯಕತೆ ಇದ್ದು, ಇದರಿಂದ ಪ್ರಾದೇಶಿಕ ಸ್ಥಿರತೆಗೆ ತೊಂದರೆಯಾಗದಂತೆ, ಯುದ್ಧ ನಡೆಯದಂತೆ ನೋಡಿಕೊಳ್ಳುವ ಅಗತ್ಯವಿದೆ.

ಚೀನಾ ಮತ್ತು ಪಾಕಿಸ್ತಾನಗಳ ಸ್ನೇಹ ಎಷ್ಟೇ ಗಟ್ಟಿಯಾಗಿದೆ ಎಂದರೂ, ಭಾರತ - ಪಾಕಿಸ್ತಾನಗಳ ನಡುವೆ ಪೂರ್ಣ ಪ್ರಮಾಣದ ಯುದ್ಧ ನಡೆದರೆ ಆಗಲೂ ಚೀನಾ ಸ್ನೇಹಿತನ ಪರ ನಿಲ್ಲುತ್ತದೆ ಎನ್ನಲು ಸಾಧ್ಯವಿಲ್ಲ. ಕ್ಸಿ ಜಿನ್‌ಪಿಂಗ್ ಗಮನ ಆಂತರಿಕ ಸವಾಲುಗಳು ಮತ್ತು ಜಾಗತಿಕ ಆದ್ಯತೆಗಳತ್ತ ಇದ್ದು, ಪಾಕಿಸ್ತಾನ ಅಂತಿಮವಾಗಿ ಏಕಾಂಗಿಯಾಗಿ ನಿಲ್ಲಬೇಕಾದೀತು. ಪಾಕಿಸ್ತಾನಕ್ಕೆ ನಿನ್ನ ಜೊತೆ ನಾನಿದ್ದೇನೆ ಎಂಬ ಮಾತಿನ ಭರವಸೆಗಳಷ್ಟೇ ಚೀನಾದಿಂದ ಲಭಿಸಬಹುದು.

(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..