ಮೆಡಲ್‌ ಗೆಲ್ಲೋಕೆ ಹರ್ಯಾಣ, ಗೇಮ್ಸ್‌ ಆತಿಥ್ಯಕ್ಕೆ ಗುಜರಾತ್ಯಾಕೆ?: ಪಾರ್ಲಿಮೆಂಟ್‌ನಲ್ಲಿ ಹರ್‍ಯಾಣ ಸಂಸದ ಪ್ರತಿಭಟನೆ

Kannadaprabha News   | Kannada Prabha
Published : Aug 05, 2026, 09:40 AM IST
Deepender Singh Hooda

ಸಾರಾಂಶ

ಹರ್ಯಾಣದ ಕ್ರೀಡಾಪಟುಗಳು ದೇಶಕ್ಕೆ ಪದಕಗಳನ್ನು ಗೆದ್ದರೂ, ಪ್ರಮುಖ ಕ್ರೀಡಾಕೂಟಗಳ ಆತಿಥ್ಯವನ್ನು ಗುಜರಾತ್‌ಗೆ ನೀಡಲಾಗುತ್ತಿದೆ ಎಂದು ಕಾಂಗ್ರೆಸ್ ಸಂಸದ ದೀಪೆಂದರ್‌ ಹೂಡಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕ್ರೀಡಾ ಮೂಲಸೌಕರ್ಯ ಹರ್ಯಾಣಕ್ಕೆ ಸಿಗಬೇಕು ಮತ್ತು 2030ರ ಕಾಮನ್‌ವೆಲ್ತ್‌ ಗೇಮ್ಸ್‌ ಆತಿಥ್ಯವನ್ನು ಹರ್ಯಾಣಕ್ಕೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ನವದೆಹಲಿ: ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಹರ್ಯಾಣದ ಕ್ರೀಡಾಪಟುಗಳು ಪದಕ ಗೆಲ್ಲಿಸಿಕೊಡುತ್ತಿದ್ದರೂ, ಪ್ರಮುಖ ಕ್ರೀಡಾಕೂಟಗಳ ಆತಿಥ್ಯಕ್ಕೆ ಗುಜರಾತನ್ನೇ ಏಕೆ ಆಯ್ಕೆ ಮಾಡುತ್ತೀರಿ ಎಂದು ಹರ್ಯಾಣದ ಕಾಂಗ್ರೆಸ್‌ ಸಂಸದ ದೀಪೆಂದರ್‌ ಹೂಡಾ ಪ್ರಶ್ನಿಸಿದ್ದಾರೆ. ಈ ಬಗ್ಗೆ ಮಂಗಳವಾರ ಅವರು ಸಂಸತ್‌ ಆವರಣದಲ್ಲಿ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.

 ‘ಕಳೆದ 15-20 ವರ್ಷಗಳಲ್ಲಿ ಭಾರತ ಜಾಗತಿಕ ಮಟ್ಟದ ಗೇಮ್ಸ್‌ಗಳಲ್ಲಿ ಗೆಲ್ಲುತ್ತಿರುವ ಪದಕಗಳಲ್ಲಿ ಪೈಕಿ ಶೇ.50ರಷ್ಟು ಹರ್ಯಾಣದ ಅಥ್ಲೀಟ್‌ಗಳ ಪಾಲು ಇದೆ. ದೇಶದ ಯಾವುದಾದರೂ ನಿರ್ದಿಷ್ಟ ಜಾಗಕ್ಕೆ ಕ್ರೀಡಾ ಮೂಲಸೌಕರ್ಯ ಹೆಚ್ಚಳಕ್ಕಾಗಿ ಲಕ್ಷ ಕೋಟಿಗಳನ್ನು ವ್ಯಯಿಸುವುದಿದ್ದರೆ ಅದು ಹರ್ಯಾಣಕ್ಕೆ ಆಗಬೇಕು. ಆದರೆ ಪದಕ ಗೆಲ್ಲಲು ಮಾತ್ರ ಹರ್ಯಾಣ ಬೇಕು. ಎಲ್ಲಾ ಯೋಜನೆಗಳು, ಗೇಮ್ಸ್‌ಗಳು ಗುಜರಾತ್‌ಗೆ ಸೀಮಿತವಾಗುತ್ತಿದೆ’ ಎಂದು ಕಿಡಿಕಾರಿದರು. 

‘2030ರ ಕಾಮನ್‌ವೆಲ್ತ್‌ ಗೇಮ್ಸ್‌ಗೆ ಭಾರತ ಆತಿಥ್ಯ ವಹಿಸುತ್ತಿರುವುದಕ್ಕೆ ಖುಷಿಯಿದೆ. ಆದರೆ ಅದಕ್ಕೆ ಹರ್ಯಾಣವನ್ನು ಪರಿಗಣಿಸಬೇಕಿತ್ತು. ಕನಿಷ್ಠ ಪಕ್ಷ ಸಹ ಆತಿಥ್ಯ ರಾಜ್ಯವನ್ನಾಗಿಯಾದರೂ ಹರ್ಯಾಣವನ್ನು ಆಯ್ಕೆ ಮಾಡಿ’ ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರ ಯಾವ ತೀರ್ಮಾನ ತೆಗೆದುಕೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಇತ್ತೀಚಿಗಿನ ವರ್ಷಗಳಲ್ಲಿ 2023ರ ಐಸಿಸಿ ಏಕದಿನ ವಿಶ್ವಕಪ್, 2026ರ ಟಿ20 ವಿಶ್ವಕಪ್, ಕಳೆದೆರಡು ಐಪಿಎಲ್ ಫೈನಲ್‌ಗಳು ಕೂಡಾ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿಯೇ ನಡೆದಿದ್ದವು. 

ಕಾಮನ್ವೆಲ್ತ್‌ ಪದಕ ಗೆದ್ದ ಭಾರತೀಯರಲ್ಲಿ ಶೇ.46 ಮಂದಿ ಸೇನೆಯವರು!

ನವದೆಹಲಿ: ಈ ಬಾರಿ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತ 39 ಪದಕಗಳನ್ನು ಗೆದ್ದಿದೆ. ಈ ಪೈಕಿ ಶೇ.46ರಷ್ಟು ಪದಕಗಳು ಭಾರತೀಯ ಸೇನೆಗೆ ಸೇರಿದ ಅಥ್ಲೀಟ್ಸ್‌ಗೆ ಲಭಿಸಿದೆ. ಭಾರತೀಯ ಸೇನೆಯ 16, ನೌಕಾಪಡೆಯ 2 ಮಂದಿ ಪದಕ

ಗೆದ್ದಿದ್ದಾರೆ. ‘ಭಾರತೀಯ ಸೇನೆಯ 20 ಮಂದಿ ಗೇಮ್ಸ್‌ನಲ್ಲಿ ಪಾಲ್ಗೊಂಡಿದ್ದರು. ಈ ಪೈಕಿ 16 ಮಂದಿ ಪದಕ ಗೆದ್ದಿದ್ದಾರೆ’ ಎಂದು ಭಾರತೀಯ ಸೇನೆ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ. 16ರಲ್ಲಿ 8 ಚಿನ್ನ, 7 ಬೆಳ್ಳಿ ಹಾಗೂ 1 ಕಂಚು ಲಭಿಸಿದೆ. ಬಾಕ್ಸಿಂಗ್‌ ತಾರೆ ಪ್ರೀತಿ, ಜಾಸ್ಮೀನ್‌, ಸಾಕ್ಷಿ, ಅರುಂಧತಿ, ಸಚಿನ್‌, ಅಂಕುಶ್‌, ಜುಡೋ ಪಟು ಹರ್ಷ್‌, ಪ್ಯಾರಾ ಅಥ್ಲೀಟ್‌ ಸೋಮನ್‌ ಸೇರಿದಂತೆ ಹಲವರು ಭಾರತೀಯ ಸೇನೆಯಲ್ಲಿ ಹವಾಲ್ದಾರ್‌, ಸುಬೇದಾರ್‌ಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಲಾಸನ್‌ ಡೈಮಂಡ್ ಲೀಗ್: ನೀರಜ್‌ಗೆ ಕಠಿಣ ಸವಾಲು

ಲಾಸನ್‌(ಸ್ವಿಜರ್‌ಲೆಂಡ್‌): ಲಾಸನ್‌ ಡೈಮಂಡ್‌ ಲೀಗ್‌ ಆ.21ರಂದು ನಡೆಯಲಿದ್ದು, ಭಾರತದ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾಗೆ ಶ್ರೀಲಂಕಾದ ರುಮೇಶ್‌ ಪತಿರಗೆ ಅವರಿಂದ ಕಠಿಣ ಸವಾಲು ಎದುರಾಗುವ ಸಾಧ್ಯತೆಯಿದೆ. ಉಳಿದಂತೆ ಒಲಿಂಪಿಕ್‌ ಚಾಂಪಿಯನ್‌ ಅರ್ಶದ್ ನದೀಂ, ಹಾಲಿ ವಿಶ್ವ ಚಾಂಪಿಯನ್‌ ಕೆಶೋರ್ನ್‌ ವಾಲ್ಕೊಟ್‌, ಮಾಜಿ ವಿಶ್ವ ಚಾಂಪಿಯನ್‌ ಆಂಡರ್ಸನ್ ಪೀಟರ್ಸ್‌, ಜಾಕುಬ್‌ ವೆಡ್ಲೆಚ್‌, ಜೂಲಿಯನ್‌ ವೆಬೆರ್‌ ಕೂಡಾ ಸ್ಪರ್ಧಿಸಲಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪಾಲ್ಗೊಂಡಿದ್ದ ಪಾಕಿಸ್ತಾನದ ಬಾಕ್ಸರ್‌ ಗ್ಲಾಸ್ಗೋದಲ್ಲಿ ಕಾಣೆ!

ಗ್ಲಾಸ್ಗೋ: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪಾಲ್ಗೊಂಡಿದ್ದ ಪಾಕಿಸ್ತಾನದ ಬಾಕ್ಸರ್‌ ಖುದ್ರತುಲ್ಲಾ ಗ್ಲಾಸ್ಗೋದಲ್ಲಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. 21 ಸದಸ್ಯರ ಪಾಕ್‌ ತಂಡವು ತವರಿಗೆ ವಾಪಸಾಗಲು ಕೆಲವೇ ಗಂಟೆಗಳು ಬಾಕಿ ಇರುವಾಗ ಖುದ್ರತುಲ್ಲಾ ನಾಪತ್ತೆ ವಿಷಯ ಗೊತ್ತಾಗಿದೆ. ಖುದ್ರತುಲ್ಲಾ ಬೆಳಗ್ಗಿನ ಜಾವ 2 ಗಂಟೆಗೆ ಹೊಟೇಲ್ ಕೋಣೆಯಲ್ಲಿ ಕೊನೆ ಬಾರಿ ಕಾಣಿಸಿಕೊಂಡಿದ್ದರು. ನಂತರ ಅಧಿಕಾರಿಗಳು ಕೊಠಡಿಯನ್ನು ಪರಿಶೀಲಿಸಿದಾಗ ಅಲ್ಲಿ ಅವರು ಇರಲಿಲ್ಲ. ಖುದ್ರತುಲ್ಲಾರ ಪಾಸ್‌ಪೋರ್ಟ್ ಹಾಗೂ ರಿಟರ್ನ್ ಟಿಕೆಟ್ ಈಗಲೂ ತಂಡದ ಮ್ಯಾನೇಜರ್ ಬಳಿ ಇದೆ. ಕಳೆದ ವರ್ಷ ಇಟಲಿಯಲ್ಲಿ ಒಲಿಂಪಿಕ್‌ ಕ್ವಾಲಿಫೈಯರ್‌ ವೇಳೆ ಪಾಕಿಸ್ತಾನದ ಬಾಕ್ಸರ್ ರೊಹೈಬ್ ನಾಪತ್ತೆಯಾಗಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇನ್ಮುಂದೆ ವಿಮೆ ಇಲ್ಲದಿದ್ರೆ ಪೆಟ್ರೋಲ್ ಸಿಗೋಲ್ಲ; ಪ್ರಾಯೋಗಿಕ ಜಾರಿಗೆ ಸುಪ್ರೀಂ ನಿರ್ದೇಶನ, ಹೊಸ ವಾಹನ ಖರೀದಿಸಿದವರು ಈ ವಿಷ್ಯ ತಿಳಿದಿರಲಿ!
ತೆಲಂಗಾಣದಲ್ಲಿ ಮಳೆ ತಡೆಗೆ ಶಿವಮೊಗ್ಗದಲ್ಲಿ ಮಾಟಮಂತ್ರ: ಶಾಸಕನ ವಿರುದ್ಧ ಗಂಭೀರ ಆರೋಪ