ಉತ್ತರ ಪ್ರದೇಶದಲ್ಲಿ ಬೀದಿಗಳಲ್ಲಿ ನಮಾಜ್ ನಿಷೇಧಿಸಿರುವುದಕ್ಕೆ ಎಸ್‌ಪಿ ಶಾಸಕ ಅಬು ಅಜ್ಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಅವರು ಟೀಕಿಸಿದ್ದಾರೆ. ತಾಜ್ ಮಹಲ್ ಕುರಿತ ವಿವಾದ ಮತ್ತು ಸಲ್ಮಾನ್ ರಶ್ದಿಗೆ ರೆಡ್ ಕಾರ್ಪೆಟ್ ಹಾಕುವ ವಿಚಾರವನ್ನೂ ಅವರು ಪ್ರಶ್ನಿಸಿದ್ದಾರೆ.
ಮಹಾರಾಷ್ಟ್ರ (ಮಾ.27): ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಬೀದಿಗಳಲ್ಲಿ ನಮಾಜ್ ಮಾಡುವುದನ್ನು ನಿಷೇಧಿಸಲಾಗಿದೆ. ಈ ಬಗ್ಗೆ ಎಸ್‌ಪಿ ಶಾಸಕ ಅಬು ಅಜ್ಮಿ ಪ್ರತಿಕ್ರಿಯಿಸಿ, 'ಕೇವಲ ಐದು ನಿಮಿಷಗಳ ಕಾಲ ಬೀದಿಯಲ್ಲಿ ನಮಾಜ್ ಮಾಡಿದ್ದಕ್ಕೆ ಇಂತಹ ಕಠಿಣ ಶಿಕ್ಷೆ ಏಕೆ? ಉತ್ತರ ಪ್ರದೇಶವನ್ನು ಮುಸ್ಲಿಮರಿಗೆ ಸುರಕ್ಷಿತ ಸ್ಥಳ ಎಂದು ಹೇಳ್ತಾರೆ. ಆದರೆ ಅದು ನಿಜವಾಗಿಯೂ ಸುರಕ್ಷಿತವೇ? ಮಸೀದಿಗಳು ಚಿಕ್ಕದಾಗಿದ್ದು, ಸ್ಥಳಾವಕಾಶ ಕಡಿಮೆ ಇರುವ ಕಾರಣ ನಾವು ಹೊರಗೆ ನಮಾಜ್ ಮಾಡುತ್ತೇವೆ. ಬೇಸಿಗೆಯಲ್ಲಿಯೂ, ಚಳಿಗಾಲದಲ್ಲಿಯೂ ಇದು ಕೇವಲ ಕೆಲವೇ ನಿಮಿಷಗಳ ವಿಷಯ. ಆದರೆ ಕೆಲವರ ಮನಸು ತುಂಬಾ ಕೆಟ್ಟದಾಗಿದೆ. ಅವರು ತಮ್ಮ ಇಚ್ಛೆಯಂತೆ ಮಾಡಿ, ಮಸೀದಿಯೊಳಗೆ ನಮಾಜ್ ಮಾಡಿದರೂ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ' ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ರಾಜಕೀಯ ಬೇಳೆ ಬೇಯಿಸಿಕೊಳ್ಳೋರಿಗೆ ಮಾತ್ರ ಸಮಸ್ಯೆ:
ಬೇರೆ ಯಾರಿಗೂ ಯಾವುದೇ ಸಮಸ್ಯೆ ಇಲ್ಲ, ರಾಜಕೀಯವಾಗಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಬಯಸುವವರಿಗೆ ಮಾತ್ರ ಇದು ತೊಂದರೆಯಾಗಿದೆ. ಮುಸ್ಲಿಮರನ್ನು ಗುರಿಯಾಗಿಸಿಕೊಂಡವರು ತಾವೇ ಸಮಸ್ಯೆಗಳನ್ನು ಎದುರಿಸುತ್ತಾರೆ' ಎಂದರು. ಇದೇ ವಿಚಾರದಲ್ಲಿ ಮಹಾರಾಷ್ಟ್ರದಲ್ಲಿ ಬೀದಿ ನಮಾಜ್ ನಿಷೇಧಿಸಬೇಕೆಂದು ಸಂಜಯ್ ನಿರುಪಮ್ ಒತ್ತಾಯಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅಜ್ಮಿ, 'ಸಂಜಯ್ ನಿರುಪಮ್ ತೀವ್ರ ಅಸಮಾಧಾನದಲ್ಲಿದ್ದಾರೆ. ಅಂತಹ ಹೇಳಿಕೆ ನೀಡಿದರೆ, ಎಂಎಲ್‌ಸಿ ಅಥವಾ ಸಚಿವರನ್ನಾಗಿ ಮಾಡುತ್ತಾರೆ ಎಂದು ಭಾವಿಸಿದ್ದಾರೆ. ಹೀಗಾಗಿ ಆ ಆಸೆಯಿಂದ ಅವರು ಅಂಥ ಮಾತುಗಳನ್ನಾಡುತ್ತಿದ್ದಾರೆ' ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: ಈ ದೇಶ ಧರ್ಮಶಾಲೆಯಲ್ಲ..; ರೋಹಿಂಗ್ಯಾ, ಬಾಂಗ್ಲಾದೇಶಿಗಳಿಗೆ ಅಮಿತ್ ಶಾ ಎಚ್ಚರಿಕೆ!
ಹಜ್ ಸಬ್ಸಿಡಿ ತೆಗೆದು ಈಗ ಉಡುಗೊರೆ ನೀಡುತ್ತಿದ್ದಾರೆ:
ಪ್ರಧಾನಿ ಮೋದಿ ಅವರ ಮುಸ್ಲಿಮರಿಗೆ ಸಂಬಂಧಿಸಿದ ನೀತಿಗಳ ಬಗ್ಗೆ ಅಜ್ಮಿ ಅಸಮಾಧಾನ ವ್ಯಕ್ತಪಡಿಸಿದ್ದು, 'ಒಂದೆಡೆ ನಮಾಜ್ ಬಗ್ಗೆ ಮಾತನಾಡುತ್ತಾರೆ, ಮತ್ತೊಂದೆಡೆ ಉಡುಗೊರೆ ನೀಡುತ್ತಿರುವುದು ಹಾಸ್ಯಾಸ್ಪದ. ಚುನಾವಣೆ ಸಮೀಪಿಸಿದಾಗ ಏನಾದರೂ ಕೇಳಿದರೆ ಏನಾದರೂ ಸಿಗುತ್ತದೆ ಎಂಬ ಮಾತಿದೆ. ಈಗ ಬಿಹಾರ ಚುನಾವಣೆ ಹತ್ತಿರದಲ್ಲಿದೆ. ಮುಸ್ಲಿಮರಿಗೆ ಕಿಟ್‌ಗಳ ಅಗತ್ಯವಿಲ್ಲ, ಸಂವಿಧಾನದಡಿ ಅವರ ಹಕ್ಕುಗಳನ್ನು ಮಾತ್ರ ನೀಡಿ. ಜೈಲಿನಲ್ಲಿರುವ ಅಮಾಯಕ ಮುಸ್ಲಿಮರನ್ನು ಬಿಡುಗಡೆ ಮಾಡಿ, ಅವರು ತಮ್ಮ ಕುಟುಂಬದೊಂದಿಗೆ ಈದ್ ಆಚರಿಸಲಿ. ಹಜ್ ಸಬ್ಸಿಡಿ ಇದ್ದಾಗ, ಉಚಿತ ಏಕೆ ಕೊಡ್ತೀರಿ ಎಂದು ಆರೋಪಿಸಿದವರು ಈಗ ಉಡುಗೊರೆಗಳನ್ನು ನೀಡುತ್ತಿದ್ದಾರೆ' ಎಂದರು.
ತಾಜ್ ಮಹಲ್ ಕುರಿತು ವಿವಾದ
ತಾಜ್ ಮಹಲ್ ಬಗ್ಗೆ ಮಾಡಲಾದ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಅಜ್ಮಿ, 'ಶೀಘ್ರದಲ್ಲಿ ತಾಜ್ ಮಹಲ್ ತೆಗೆದು, ಅದರ ಮೇಲೆ ಛತ್ರಪತಿ ಶಿವಾಜಿ ಮಹಾರಾಜರ ಫೋಟೋ ಇರಿಸುತ್ತಾರೆ. ಈ ದೇಶದಲ್ಲಿ ಕೆಂಪು ಕೋಟೆ, ಕುತುಬ್ ಮಿನಾರ್ ಸೇರಿದಂತೆ ಎಲ್ಲವನ್ನೂ ನಿರ್ಮಿಸಿದವರ ವಿರುದ್ಧವೇ ದ್ವೇಷ ಇದೆ. ಆದರೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಮಾಡಿದವರ ವಿರುದ್ಧ ಅಲ್ಲ, ಕೇವಲ ಮುಸ್ಲಿಮರ ವಿರುದ್ಧ ಮಾತ್ರ' ಎಂದು ಟೀಕಿಸಿದರು.
ಇದನ್ನೂ ಓದಿ: 'ನಿಮಗೆ ಧೈರ್ಯವಿದ್ರೆ KFC ಮುಚ್ಚಿಸಿ..'; ನವರಾತ್ರಿಗೆ ಮಾಂಸದಂಗಡಿ ಮುಚ್ಚಬೇಕೆಂಬ ಬಿಜೆಪಿ ಒತ್ತಾಯಕ್ಕೆ ಎಎಪಿ ಸಂಸದ ಸವಾಲ್!
'ಸಲ್ಮಾನ್ ರಶ್ದಿಗೆ ರೆಡ್ ಕಾರ್ಪೆಟ್ ಏಕೆ?'
ಕುನಾಲ್ ಕಮ್ರಾ ವಿವಾದದ ಬಗ್ಗೆಯೂ ಅಜ್ಮಿ ಮಾತನಾಡಿದ್ದು,'ಸಲ್ಮಾನ್ ರಶ್ದಿ ಮತ್ತು ತಸ್ಲೀಮಾ ನಸ್ರೀನ್ ಅವರಂತಹ ಮುಸ್ಲಿಮರ ವಿರುದ್ಧ ಪುಸ್ತಕ ಬರೆಯುವವರಿಗೆ ನೀವು ರೆಡ್ ಕಾರ್ಪೆಟ್ ಹಾಸುತ್ತೀರಿ, ಅವರಿಗೆ ದೇಶದಲ್ಲಿ ಸ್ಥಳ ನೀಡುತ್ತೀರಿ. ನಮ್ಮ ವಿರುದ್ಧ ಎಷ್ಟು ಮಾತನಾಡಿದರೂ ಕ್ರಮ ತೆಗೆದುಕೊಳ್ಳುವುದಿಲ್ಲ. ಇದು ರಾಜಾಶಾಹಿ ಅಲ್ಲ, ಪ್ರಜಾಪ್ರಭುತ್ವ. ಯಾರಾದರೂ ಏನಾದರೂ ಮಾಡಿದರೆ, ಮೊದಲು ಪಾಕಿಸ್ತಾನ ಮತ್ತು ಐಎಸ್‌ಐನಿಂದ ಹಣ ಬರುತ್ತಿದೆ ಎಂದು ಹೇಳುತ್ತಾರೆ. ಅದನ್ನು ಮೊದಲು ಪರಿಶೀಲಿಸಿ' ಎಂದು ಆಗ್ರಹಿಸಿದರು.