
ತಿರುವನಂತಪುರಂ: ದಶಕದ ಬಳಿಕ ಕೇರಳಂನಲ್ಲಿ ಯುಡಿಎಫ್ (ಸಂಯುಕ್ತ ಪ್ರಜಾಸತ್ತಾತ್ಮಕ ರಂಗ) ಬಹುಮತ ಪಡೆದಿದ್ದರೂ, ಆ ಕೂಟದ ನೇತೃತ್ವ ಹೊತ್ತಿರುವ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಆಯ್ಕೆ ವಿಷಯ ಕಗ್ಗಂಟಾಗಿದೆ. ಶಾಸಕಾಂಗ ಪಕ್ಷದ ನೂತನ ನಾಯಕನ ಆಯ್ಕೆಗಾಗಿ ಗುರುವಾರ ನಡೆದ ಸಭೆಯ ವೇಳೆ ಕಾಂಗ್ರೆಸ್‌ನ 63 ಶಾಸಕರ ಪೈಕಿ ಕನಿಷ್ಠ 46 ಮಂದಿ ವಿಧಾನಸಭೆಯ ಸದಸ್ಯರೇ ಅಲ್ಲದ ಹಾಲಿ ಸಂಸದ, ರಾಹುಲ್ ಗಾಂಧಿ ಅವರ ಆಪ್ತ ಹಾಗೂ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಪರ ಬೆಂಬಲ ಘೋಷಿಸಿದ್ದಾರೆ ಎನ್ನಲಾಗಿದೆ.
ಈ ಬೆಳವಣಿಗೆ ಸಹಜವಾಗಿಯೇ ಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿದ್ದ, ಹಿಂದಿನ ವಿಧಾನಸಭೆಯಲ್ಲಿನ ವಿಪಕ್ಷ ನಾಯಕ ವಿ.ಡಿ. ಸತೀಶನ್ ಮತ್ತು ಪಕ್ಷದ ಹಿರಿಯ ನಾಯಕ ರಮೇಶ್ ಚೆನ್ನಿತ್ತಲ ಅವರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಮುಖ್ಯಮಂತ್ರಿ ಆಯ್ಕೆಯ ಹೊಣೆಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವಹಿಸಲು ಸಭೆ ನಿರ್ಣಯ ಕೈಗೊಂಡಿದೆ.
ಎಐಸಿಸಿ ವೀಕ್ಷಕರಾದ ಮುಕುಲ್ ವಾಸ್ನಿಕ್ ಮತ್ತು ಅಜಯ್ ಮಾಕನ್ ನೇತೃತ್ವದಲ್ಲಿ ನಡೆದ ಸಭೆ ವೇಳೆ ಬಹುತೇಕ ಶಾಸಕರು ವೇಣುಗೋಪಾಲ್ ಮುಖ್ಯಮಂತ್ರಿಯಾಗುವ ಬಗ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದು ಸಿಎಂ ಹುದ್ದೆ ಮೇಲೆ ಕಣ್ಣಿಟ್ಟ ಉಳಿದಿಬ್ಬರು ನಾಯಕರ ಕೆಂಗಣ್ಣಿಗೆ ಕಾರಣವಾಗಿದೆ.
ಈ ಬಾರಿ ಚುನಾವಣೆಯಲ್ಲಿ ಸಂಸದರನ್ನು ಕಣಕ್ಕೆ ಇಳಿಸುವುದಿಲ್ಲ ಎಂದು ಪಕ್ಷ ಮೊದಲೇ ನಿರ್ಧರಿಸಿತ್ತು. ಜೊತೆಗೆ ವೇಣುಗೋಪಾಲ್ ಶಾಸಕ ಕೂಡ ಅಲ್ಲ. ಹೀಗಾಗಿ ಅವರ ಆಯ್ಕೆ ಸೂಕ್ತವಲ್ಲ. ಜೊತೆಗೆ ರಾಜ್ಯದ ಹಲವು ಕಡೆ ವೇಣುಗೋಪಾಲ್ ಅವರು ಕೂಡ ಸಿಎಂ ಅಭ್ಯರ್ಥಿ ಎಂದು ಬಿಂಬಿಸುವ ಪೋಸ್ಟರ್‌ಗಳನ್ನು ಹಾಕಲಾಗಿದೆ. ಇದು ಪಕ್ಷದಲ್ಲಿ ಆಂತರಿಕ ಸಂಘರ್ಷಕ್ಕೆ ಮುನ್ನುಡಿ ಬರೆಯುತ್ತದೆ. ಇದಕ್ಕೆ ಕೂಡಲೇ ತಡೆ ಹಾಕಬೇಕು ಎಂದು ಚೆನ್ನಿತ್ತಲ ಹಾಗೂ ಸತೀಶನ್ ನೇರವಾಗಿ ವೀಕ್ಷಕರ ಬಳಿ ಧ್ವನಿ ಎತ್ತಿದ್ದಾರೆ ಎನ್ನಾಗಿದೆ.
ಈ ಬಾರಿ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ, ಮೈತ್ರಿಕೂಟದ ನಡುವೆ ಹೊಂದಾಣಿಕೆ ಏರ್ಪಡಿಸುವಲ್ಲಿ ವೇಣು ಪ್ರಮುಖ ಪಾತ್ರ ವಹಿಸಿದ್ದಾರೆ. ಜೊತೆಗೆ ಎಲ್‌ಡಿಎಫ್ ಕೂಟದ ಅಭ್ಯರ್ಥಿಗಳ ಸೆಳೆದು ಕಾಂಗ್ರೆಸ್ ಬಲ ಹೆಚ್ಚಿಸಿದ್ದು ವೇಣುಗೋಪಾಲ್ ಪರ ಬಹುತೇಕ ಶಾಸಕರು ಒಲವು ತೋರಲು ಕಾರಣವಾಗಿದೆ. ಜೊತೆಗೆ ಹೈಕಮಾಂಡ್ ಬೆಂಬಲವೂ ಇದೆ. ಜೊತೆಗೆ ಮೈತ್ರಿಕೂಟ ಸರ್ಕಾರ ನಡೆಸಲು ದೆಹಲಿ ಮಟ್ಟದಲ್ಲಿ ಪ್ರಭಾವ ಹೊಂದಿರುವ ನಾಯಕರ ಅಗತ್ಯವಿದೆ ಎನ್ನುವ ಅಂಶವೂ ವೇಣುಗೋಪಾಲ್ ಪರವಾಗಿದೆ.
ಸತೀಶನ್ ಕಳೆದ 5 ವರ್ಷಗಳಿಂದ ವಿಪಕ್ಷ ನಾಯಕನಾಗಿ ವಿಪಕ್ಷ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದರು. ಆದರೆ ಶಬರಿಮಲೆ ವಿಷಯದಲ್ಲಿ ಕೇರಳದ ಪ್ರಭಾವಿ ನಾಯರ್ ಸಮುದಾಯದ ವಿರೋಧ ಕಟ್ಟಿಕೊಂಡಿದ್ದಾರೆ. ಹೀಗಾಗಿ ಅವರ ಆಯ್ಕೆ ಬಗ್ಗೆ ಪಕ್ಷದ ಶಾಸಕರಲ್ಲೇ ವಿರೋಧವಿದೆ ಎನ್ನಲಾಗಿದೆ.
ಪಕ್ಷದ ಹಿರಿಯ ನಾಯಕ. 4 ಬಾರಿ ಸಂಸದರಾದ ಹಿನ್ನೆಲೆ ಹೊಂದಿದ್ದಾರೆ. ಸಂಘಟನಾ ಚತುರ ಎಂಬ ಹಿರಿಮೆ ಇದೆ. ಆದರೆ ಈಗಾಗಲೇ 69 ವರ್ಷ ತುಂಬಿರುವ ನಾಯಕನ ಆಯ್ಕೆಗೆ ಪಕ್ಷದ ಶಾಸಕರು ಒಲವು ತೋರಿಲ್ಲ ಎಂದು ಹೇಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ