* ಲಸಿಕೆಗೂ ಮಣಿಯಲ್ಲ ಭಾರತದ ಬಿ.1.617 ತಳಿಯ ವೈರಸ್?
* ಲಸಿಕೆಯ ರಕ್ಷಣಾ ಕವಚದಿಂದಲೂ ಈ ವೈರಸ್ ಬಚಾವ್ ಸಾಧ್ಯತೆ
* ಭಾರತದಲ್ಲಿ ಸೋಂಕಿನ ತೀವ್ರತೆ ಹೆಚ್ಚಲು ಇದೇ ತಳಿ ಕಾರಣ
ಜಿನೆವಾ(ಮೇ.10): ಭಾರತದಲ್ಲಿ ಕೊರೋನಾ ಸೋಂಕಿನ 2ನೇ ಭಾರೀ ಪ್ರಮಾಣದಲ್ಲಿ ಸ್ಫೋಟಗೊಳ್ಳುತ್ತಿರುವುದಕ್ಕೆ ವೈರಸ್ ಹೆಚ್ಚು ಸೋಂಕುಕಾರಕವಾಗಿರುವುದು ಮತ್ತು ಅದರ ಲಸಿಕೆಯ ರಕ್ಷಣಾ ಕೋಟೆಯನ್ನು ಮುರಿಯುವ ಸಾಮರ್ಥ್ಯ ಹೊಂದಿರುವುದೇ ಕಾರಣವಾಗಿರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಭಾನುವಾರ ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿದ ಸೌಮ್ಯ ಸ್ವಾಮಿನಾಥನ್ ಅವರು, ‘ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಭಾರತದಲ್ಲಿ ಕಾಣಿಸಿಕೊಂಡ ಬಿ.1.617 ಹೆಸರಿನ ಕೊರೋನಾ ವೈರಸ್ ಹೆಚ್ಚು ತೀವ್ರವಾಗಿ ಹರಡುವ ಲಕ್ಷಣಗಳನ್ನು ಒಳಗೊಂಡಿದ್ದು, ಕೊರೋನಾ ಮೂಲ ವೈರಸ್‌ಗಿಂತಲೂ ಹೆಚ್ಚು ಅಪಾಯಕಾರಿಯಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಆದರೆ ಭಾರತದಲ್ಲಿನ ಕೊರೋನಾ ಹರಡುವಿಕೆ ಮತ್ತು ಸಾವು-ನೋವುಗಳಿಗೆ ಕೇವಲ ಬಿ.1.617 ತಳಿಯ ಕೊರೋನಾ ವೈರಸ್ ಕಾರಣವಲ್ಲ. ಬದಲಾಗಿ ಕೊರೋನಾ ವಿರುದ್ಧದ ಹೋರಾಟವನ್ನು ಭಾರತದಲ್ಲಿ ಸಂಪೂರ್ಣವಾಗಿ ಕೈಚೆಲ್ಲಲಾಯಿತು. ಅಲ್ಲದೆ ಭಾರತ ಈಗಾಗಲೇ ಕೊರೋನಾ ಗೆದ್ದಿದೆ ಎಂಬ ಭ್ರಮೆ ಹುಟ್ಟಿಕೊಂಡಿತು. ಭಾರೀ ಜನಸಂದಣಿ ಒಳಗೊಂಡ ಬೃಹತ್ ಕಾರ್ಯಕ್ರಮಗಳು ಆಯೋಜನೆಗೊಂಡವು. ಆ ಕಾರ್ಯಕ್ರಮಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಸೇರಿದಂತೆ ಕೊರೋನಾ ಮಾರ್ಗಸೂಚಿಗಳು ಮಾಯವಾದವು. ಈ ಎಲ್ಲಾ ಕಾರಣಗಳಿಂದ ಭಾರತದಲ್ಲಿ ಸೋಂಕಿನ ತೀವ್ರತೆ ಹೆಚ್ಚಾಯಿತು ಎಂದು ಹೇಳಿದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona