
ನವದೆಹಲಿ: ಭಾರತೀಯ ನೌಕಾಪಡೆಗೆ ಐಎನ್‌ಎಸ್‌ವಿ ಕೌಂಡಿನ್ಯ ಹೆಸರಿನ ಹೊಸ ಯುದ್ಧನೌಕೆಯೊಂದು ಔಪಾಚಾರಿಕವಾಗಿ ಸೇರ್ಪಡೆಯಾಗಿದೆ. ರಾಜ್ಯದ ಕಾರವಾರ ಕದಂಬ ನೌಕಾ ನೆಲೆಯಲ್ಲಿ ಐಎನ್‌ಎಸ್‌ವಿ ಕೌಂಡಿನ್ಯ ಯುದ್ಧನೌಕೆಯನ್ನು ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರ ಸಮ್ಮುಖದಲ್ಲಿ ಲೋಕಾರ್ಪಣೆ ಮಾಡಲಾಯಿತು. ಈ ಐಎನ್‌ಎಸ್‌ವಿ ಕೌಂಡಿನ್ಯ ಹಡಗನ್ನು ಬಹಳ ಸಂಪ್ರದಾಯಿಕ ಶೈಲಿಯಲ್ಲಿ ಅಂದರೆ 5ನ ಶತಮಾನಗಳಷ್ಟು ಹಳೆಯ ಭಾರತೀಯ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಇದರ ನಿರ್ಮಾಣಕ್ಕೆ ಮರದ ಹಲಗೆ, ತೆಂಗಿನ ನಾರು ಸೇರಿದಂತೆ ಕೆಲ ಸಂಪ್ರದಾಯಿಕ ವಸ್ತುಗಳನ್ನು ಬಳಸಿ ಸಂಪೂರ್ಣವಾಗಿ ನಿರ್ಮಿಸಲಾಗಿದೆ.
ಅಜಂತಾ ಗುಹೆಗಳ ಭಿತ್ತಿಚಿತ್ರಗಳಲ್ಲಿ ಚಿತ್ರಿಸಲಾದ 5 ನೇ ಶತಮಾನದ ಸಿಇ ಹಡಗಿನಿಂದ ( 5th-century CE vessel)ಸ್ಫೂರ್ತಿ ಪಡೆದು ನಿರ್ಮಿಸಲಾದ INSV ಕೌಂಡಿನ್ಯವೂ ಭಾರತದ ಪ್ರಾಚೀನ ಸಮುದ್ರ ಮತ್ತು ಹಡಗು ನಿರ್ಮಾಣ ಪರಂಪರೆಗೆ ಗೌರವವಾಗಿ ನಿಂತಿದೆ. ಈ ಯೋಜನೆಯನ್ನು ಭಾರತದ ಸಂಸ್ಕೃತಿ ಸಚಿವಾಲಯ, ಭಾರತೀಯ ನೌಕಾಪಡೆ ಮತ್ತು ಹೊಡಿ ಇನ್ನೋವೇಶನ್ಸ್ ನಡುವೆ ಜುಲೈ 2023 ರಲ್ಲಿ ಸಹಿ ಮಾಡಿದ ತ್ರಿಪಕ್ಷೀಯ ಒಪ್ಪಂದದಂತೆ ಜಂಟಿಯಾಗಿ ನಿರ್ಮಿಸಲಾಗಿದೆ. ಕೇರಳದ ನುರಿತ ಹಡಗು ತಯಾರಕ ಬಾಬು ಶಂಕರನ್ ಮತ್ತು ಅವರ ತಂಡವು ಐಎನ್‌ಎಸ್‌ವಿ ಕೌಂಡಿನ್ಯವನ್ನು ನಿರ್ಮಿಸಲು ಸಾಂಪ್ರದಾಯಿಕ ನಿರ್ಮಾಣ ವಿಧಾನವನ್ನು ಬಳಸಿದರು ಮತ್ತು ಈ ವರ್ಷದ ಫೆಬ್ರವರಿಯಲ್ಲಿ ಈ ಹಡಗನ್ನು ಗೋವಾದಲ್ಲಿ ಬಿಡುಗಡೆ ಮಾಡಲಾಯ್ತು.
ಒಮನ್‌ಗೆ ತೆರಳಲಿರುವ ಐಎನ್‌ಎಸ್‌ವಿ ಕೌಂಡಿನ್ಯ:
ಭಾರತೀಯ ನೌಕಾ ನೌಕಾಪಡೆಯ ನೌಕಾಯಾನ ಹಡಗು INSV ಕೌಂಡಿನ್ಯ ಕಾರ್ಯಾರಂಭ ಪ್ರಕ್ರಿಯೆ ಪೂರ್ಣಗೊಂಡ ನಂತರ, ಹೊಸ ಐತಿಹಾಸಿಕ ಪ್ರಯಾಣವನ್ನು ಆರಂಭಿಸಲಿದೆ. ಈ ವರ್ಷದ ಕೊನೆಯಲ್ಲಿ, ಇದು ಗುಜರಾತ್‌ನಿಂದ ಒಮನ್‌ಗೆ ಪ್ರಾಚೀನ ಸಮುದ್ರ ವ್ಯಾಪಾರ ಮಾರ್ಗವನ್ನು ಪತ್ತೆಹಚ್ಚುವ ಮೂಲಕ ಭಾರತೀಯ ಸಾಗರದಾಚೆಯ ಪ್ರಯಾಣ ನಡೆಸಲಿದೆ. . ಈ ಮೂಲಕ ಹಡಗು ಭಾರತದ ಪ್ರಾಚೀನ ಕಡಲ ಸಂಪ್ರದಾಯಗಳ ಪ್ರಬಲ ಸಂಕೇತವಾಗಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಅದರ ಪರಿಶೋಧನೆ, ವ್ಯಾಪಾರ ಮತ್ತು ಸಾಂಸ್ಕೃತಿಕ ವಿನಿಮಯದ ಐತಿಹಾಸಿಕ ಪರಂಪರೆಯನ್ನು ಒತ್ತಿಹೇಳುತ್ತದೆ.
ಐಎನ್‌ಎಸ್‌ವಿ ಕೌಂಡಿನ್ಯ ಹೆಸರಿನ ಹಿಂದಿರುವ ದಂತಕಥೆ ಯಾರು
ಹಾಗಿದ್ರೆ ಈಗ ಈ ಐಎನ್‌ಎಸ್‌ವಿ ಕೌಂಡಿನ್ಯ ಹೆಸರಿನ ಹಿಂದಿರುವ ದಂತಕಥೆ ಯಾರು ಎಂಬುದನ್ನು ನೀವು ತಿಳಿದುಕೊಳ್ಳಲೇಬೇಕು. ಸಮುದ್ರಯಾನಗಳಿಗೆ ಹೆಸರುವಾಸಿಯಾದ ಒಬ್ಬ ಐತಿಹಾಸಿಕ ಭಾರತೀಯ ನಾವಿಕನ ಸ್ಮರಣಾರ್ಥ ಈ ಕೌಂಡಿನ್ಯ ಹೆಸರನ್ನು ಈ ಹೊಸ ಸಂಪ್ರದಾಯಿಕ ಹಡಗಿಗೆ ನೀಡಲಾಗಿದೆ. ಈ ಕೌಂಡಿನ್ಯ ಹಿಂದೂ ಮಹಾಸಾಗರದಲ್ಲಿ ಸಾಗಿ ಆಗ್ನೇಯ ಏಷ್ಯಾಕ್ಕೆ ಪ್ರಯಾಣ ಮಾಡಿದರು. ಅವರ ಗೌರವಾರ್ಥವಾಗಿ ಹಡಗಿಗೆ ಈ ಹೆಸರಿಡಲಾಗಿದೆ.
ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಕೌಂಡಿನ್ಯ ಆಗ್ನೇಯ ಏಷ್ಯಾದಲ್ಲಿ ಫುನಾನ್ ಸಾಮ್ರಾಜ್ಯದ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು, ಇದು ಮೆಕಾಂಗ್ ಡೆಲ್ಟಾ ಪ್ರದೇಶದಲ್ಲಿದೆ ಅಂದರೆ ಇಂದಿನ ಕಾಂಬೋಡಿಯಾ ಮತ್ತು ದಕ್ಷಿಣ ವಿಯೆಟ್ನಾಂ ಪ್ರದೇಶ. ಕೌಂಡಿನ್ಯ ಇತಿಹಾಸವೂ ಐತಿಹಾಸಿಕ ಸಂಗತಿ ಮತ್ತು ಪೌರಾಣಿಕ ಕಥೆಗಳ ಮಿಶ್ರಣವಾಗಿದ್ದು, ಭಾರತ ಮತ್ತು ಆಗ್ನೇಯ ಏಷ್ಯಾದ ನಡುವಿನ ಆಳವಾದ ಸಾಂಸ್ಕೃತಿಕ ಮತ್ತು ಕಡಲ ಸಂಪರ್ಕಗಳನ್ನು ಸಂಕೇತಿಸುತ್ತದೆ.
ನುರಿತ ನಾವಿಕನಾಗಿ ತನ್ನ ಸಾಧನೆಗಳ ಹೊರತಾಗಿ ಕೌಂಡಿನ್ಯ ಒಬ್ಬ ವಿದ್ವಾಂಸನಾಗಿದ್ದರು, ವೈದಿಕ ಜ್ಞಾನದಲ್ಲಿ ಪಾರಂಗತನಾಗಿದ್ದ ಮತ್ತು ಸಮರ ಕಲೆಗಳಲ್ಲಿ ತರಬೇತಿ ಪಡೆದಿದ್ದು, ಪ್ರಾಚೀನ ಭಾರತೀಯ ಪರಿಶೋಧಕರ ಬಹುಮುಖ ಪರಂಪರೆಯನ್ನು ಸಾಕಾರಗೊಳಿಸಿದ್ದರು. ಪ್ರಾಚೀನ ಚೀನೀ ದಾಖಲೆಗಳ ಪ್ರಕಾರ, ಕೌಂಡಿನ್ಯ ಬಂಗಾಳ ಕೊಲ್ಲಿಯನ್ನು ದಾಟಿ ಸಮುದ್ರಯಾನ ಕೈಗೊಂಡಿದ್ದರು, ಆ ಸಮಯದಲ್ಲಿ ಒಬ್ಬ ದೇವದೂತನು ಅವನಿಗೆ ಬಿಲ್ಲು ನೀಡಿ ದೂರದ ದೇಶಕ್ಕೆ ನೌಕಾಯಾನ ಮಾಡಲು ಸೂಚಿಸಿದ್ದರು ಈ ದೈವಿಕ ಕನಸಿನಿಂದ ಅವರು ನೌಕಾಯಾನಕ್ಕೆ ಮಾರ್ಗದರ್ಶನ ಪಡೆದರು ಎಂಬ ಮಾಹಿತಿ ಇದೆ.
ಮೆಕಾಂಗ್ ಡೆಲ್ಟಾದಲ್ಲಿ ಸಂಚರಿಸುವಾಗ, ಕೌಂಡಿನ್ಯ ಮತ್ತು ಅವನ ಸಿಬ್ಬಂದಿಯ ಮೇಲೆ ಕಡಲ್ಗಳ್ಳರು ದಾಳಿ ಮಾಡಿ ಅವರ ಹಡಗನ್ನು ಹಾನಿಗೊಳಿಸಿದರು. ದುರಸ್ತಿಗಾಗಿ ಅವರು ದೋಣಿಯನ್ನು ದಡಕ್ಕೆ ಇಳಿಸಿದಾಗ, ಸ್ಥಳೀಯ ನಾಗ (ಸರ್ಪ) ಕುಲದ ಮುಖ್ಯಸ್ಥನ ಮಗಳು ರಾಣಿ ಸೋಮ ಕೌಂಡಿನ್ಯನನ್ನು ಸುತ್ತುವರೆದರು. ವೀರ ಹೋರಾಟ ನಡೆಸಿದರೂ, ಕೌಂಡಿನ್ಯನ ಸಿಬ್ಬಂದಿ ಅಂತಿಮವಾಗಿ ಸೋಮನ ಪಡೆಗಳಿಂದ ಸೋಲಿಸಲ್ಪಟ್ಟರು. ಆದಾಗ್ಯೂ, ಕೌಂಡಿನ್ಯನ ಧೈರ್ಯ ಮತ್ತು ಸಮರ ಕೌಶಲ್ಯದಿಂದ ತೀವ್ರವಾಗಿ ಪ್ರಭಾವಿತಳಾದ ರಾಣಿ ಸೋಮ ಮದುವೆಯ ಪ್ರಸ್ತಾಪವನ್ನು ಆತನ ಮುಂದಿಟ್ಟಳು ಹಾಗೂ ಕೌಂಡಿನ್ಯ ಇದಕ್ಕೆ ಒಪ್ಪಿಕೊಂಡರು ಮತ್ತು ಒಟ್ಟಾಗಿ ಫ್ಯೂನಾನ್ ರಾಜ್ಯವನ್ನು ಸ್ಥಾಪಿಸಿದರು ವ್ಯಾಧಪುರವನ್ನು ಅದರ ರಾಜಧಾನಿಯಾಗಿ ಮಾಡಿದರು. ಅಂದರೆ ಇಂದಿನ ಕಾಂಬೋಡಿಯಾದ ಬಾ ಫ್ನೋಮ್ ಅನ್ನು ರಾಜಧಾನಿಯಾಗಿ ಮಾಡಿದರು ಎಂಬ ಕತೆ ಇದೆ.
ಕೌಂಡಿನ್ಯ ಮತ್ತು ರಾಣಿ ಸೋಮನ ವಿವಾಹವನ್ನು ಭಾರತೀಯ ಮತ್ತು ಸ್ಥಳೀಯ ಖಮೇರ್ ಸಂಸ್ಕೃತಿಗಳ ಸಾಂಕೇತಿಕ ಸಮ್ಮಿಲನವೆಂದು ವ್ಯಾಪಕವಾಗಿ ಪರಿಗಣಿಸಲಾಗಿದೆ. ಹೊಸದಾಗಿ ಸ್ಥಾಪಿತವಾದ ಫುನಾನ್ ರಾಜ್ಯದಲ್ಲಿ, ಕೌಂಡಿನ್ಯ ಬ್ರಾಹ್ಮಣ ಧರ್ಮ, ಸಂಸ್ಕೃತ ಭಾಷೆ ಮತ್ತು ಭಾರತೀಯ ಆಡಳಿತ ವ್ಯವಸ್ಥೆಗಳನ್ನು ಪರಿಚಯಿಸಿದನು. ಮತ್ತೊಂದೆಡೆ, ರಾಣಿ ಸೋಮ ತನ್ನ ಸ್ಥಳೀಯ ಸಂಪ್ರದಾಯಗಳನ್ನು ಜೊತೆಗೆ ಜಾರಿಗೆ ತಂದಳು ಮುಖ್ಯವಾಗಿ ತನ್ನ ಜನರು ಆಚರಿಸುತ್ತಿದ್ದ ಸರ್ಪ (ನಾಗ) ಪೂಜೆಯನ್ನು ಆಕೆ ಪಾಲಿಸಿಕೊಂಡು ಬಂದಳು ಎಂದು ಪ್ರಾಚೀನ ಚೀನಿ ಕತೆ ಹೇಳುತ್ತದೆ.
ಈ ಸಾಂಸ್ಕೃತಿಕ ಏಕೀಕರಣವು ಅಭಿವೃದ್ಧಿ ಹೊಂದುತ್ತಿರುವ ನಾಗರಿಕತೆಗೆ ಅಡಿಪಾಯ ಹಾಕಿತು. ಮುಂದೆ ಕಾಲಾನಂತರದಲ್ಲಿ,ಕಾಂಬೋಡಿಯಾದ ಫುನಾನ್ ಭಾರತ ಮತ್ತು ಚೀನಾವನ್ನು ಸಂಪರ್ಕಿಸುವ ಸಮುದ್ರ ವ್ಯಾಪಾರದ ಪ್ರಮುಖ ಕೇಂದ್ರವಾಗಿ ವಿಕಸನಗೊಂಡಿತು ಮತ್ತು ಬೆಳೆಯುತ್ತಿರುವ ಬೌದ್ಧ ಸಂಪ್ರದಾಯಗಳ ಜೊತೆಗೆ ಶಿವ ಮತ್ತು ವಿಷ್ಣುವಿನಂತಹ ಹಿಂದೂ ದೇವತೆಗಳನ್ನು ಒಳಗೊಂಡಂತೆ ಧಾರ್ಮಿಕ ಪ್ರಭಾವಗಳ ಶ್ರೀಮಂತ ಸಂಸ್ಕೃತಿಯನ್ನು ಅಳವಡಿಸಿಕೊಂಡಿತು. ಈ ಕೌಂಡಿನ್ಯ ಹಾಗೂ ರಾಣಿ ಸೋಮನ ರ ಒಕ್ಕೂಟ ಮತ್ತು ಫುನಾನ್ ರಾಜ್ಯದ ಸ್ಥಾಪನೆಯನ್ನು ಐತಿಹಾಸಿಕ ಚೀನೀ ದಾಖಲೆಗಳಲ್ಲಿ ದಾಖಲಿಸಲಾಗಿದೆ, ಇದರಲ್ಲಿ 3 ನೇ ಶತಮಾನದ ಬರಹಗಾರನದ ಕಾಂಗ್ ಟೈ ಅವರ ಬರಹಗಳು ಮತ್ತು 10 ನೇ ಶತಮಾನದ ಟೈ ಪಿಂಗ್ ಲು ಯುವಾನ್ ಅವರ ಬರಹಗಳಲ್ಲಿ ಈ ವಿವಾಹವೂ ಸಾಮ್ರಾಜ್ಯದ ಆರಂಭಕ್ಕೆ ಮೂಲಾಧಾರವಾಯ್ತು ಎಂದು ದೃಢಪಡಿಸುತ್ತದೆ.
ಪ್ರಾಚೀನ ಕಡಲ ಪರಂಪರೆಯನ್ನು ಪುನರುಜ್ಜೀವನಗೊಳಿಸುವಲ್ಲಿ ಭಾರತೀಯ ನೌಕಾಪಡೆಯ ನಿರ್ಣಾಯಕ ಪಾತ್ರ
ಐಎನ್‌ಎಸ್‌ವಿ ಕೌಂಡಿನ್ಯ ಯೋಜನೆಯಲ್ಲಿ ಭಾರತೀಯ ನೌಕಾಪಡೆಯು ಪ್ರಮುಖ ಪಾತ್ರ ವಹಿಸಿದ್ದು, ಹಡಗಿನ ವಿನ್ಯಾಸ, ತಾಂತ್ರಿಕ ದೃಢೀಕರಣ ಮತ್ತು ನಿರ್ಮಾಣವನ್ನು ನೋಡಿಕೊಳ್ಳುತ್ತಿದೆ. ಪ್ರಾಚೀನ ಕಾಲದ ಹೊಲಿದ ಹಾಯಿ ದೋಣಿಗಳ ಯಾವುದೇ ನೀಲನಕ್ಷೆಗಳು ಉಳಿದಿಲ್ಲದ ಕಾರಣ, ಈ ಕೌಂಡಿನ್ಯ ಹಡಗಿನ ವಿನ್ಯಾಸವನ್ನು ಪ್ರಾಚೀನ ವರ್ಣಚಿತ್ರಗಳು ಮತ್ತು ಶಿಲ್ಪಗಳಂತಹ ಪ್ರತಿಮಾಶಾಸ್ತ್ರೀಯ ಮೂಲಗಳಿಂದ ಪುನರ್ನಿರ್ಮಿಸಬೇಕಾಯಿತು.
ಸಾಂಪ್ರದಾಯಿಕ ಹಡಗು ನಿರ್ಮಾಣಕಾರರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಾ, ನೌಕಾಪಡೆಯು ಆ ಯುಗದ ಹೊಸ ರೂಪವನ್ನು ಮರುಸೃಷ್ಟಿಸಲು ಸಹಾಯ ಮಾಡಿದೆ. ಸಮುದ್ರದಲ್ಲಿ ಹಡಗಿನ ಯೋಗ್ಯತೆ ಮತ್ತು ಕ್ಷಮತೆಯ ದೃಢೀಕರಣವನ್ನು ಖಚಿತಪಡಿಸಿಕೊಳ್ಳಲು ಈ ಹಡಗನ್ನು ಮದ್ರಾಸ್‌ನ ಐಐಟಿಯ ಸಾಗರ ಎಂಜಿನಿಯರಿಂಗ್ ವಿಭಾಗದಲ್ಲಿ ಹೈಡ್ರೊಡೈನಾಮಿಕ್ ಮಾದರಿ ಪರೀಕ್ಷೆಗೆ ಒಳಪಡಿಸಿ ಕಠಿಣ ಆಂತರಿಕ ತಾಂತ್ರಿಕ ಮೌಲ್ಯಮಾಪನಗಳನ್ನು ನಡೆಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ