
ನವದೆಹಲಿ (ಜು.29) ಮಳೆಗಾಲದ ಅಧಿವೇಶನದಲ್ಲಿ ಆಪರೇಶನ್ ಸಿಂದೂರ ಭಾರಿ ಸದ್ದು ಮಾಡುತ್ತಿದೆ. ವಿಪಕ್ಷ ನಾಯಕರು ಮೋದಿ ಸರ್ಕಾರದ ವಿರುದ್ದ ಹಲವು ಆರೋಪ ಮಾಡಿದ್ದಾರೆ. ಪ್ರಮುಖವಾಗಿ ಆಪರೇಶನ್ ಸಿಂದೂರ್ ಫಲಪ್ರದವಾಗಿಲ್ಲ, ಟ್ರಂಪ್ ಕದನ ವಿರಾಮ ಹೇಳಿಕೆ, ರಾಫೆಲ್ ಪತನ ಸೇರಿದಂತೆ ಹಲವು ಆರೋಪ ಹಾಗೂ ಪ್ರಶ್ನೆಗಳನ್ನು ಕೇಂದ್ರದ ಮುಂದಿಟ್ಟಿದ್ದಾರೆ. ಇದರ ನಡುವೆ ಕಾಂಗ್ರೆಸ್ ಅಧ್ಯಕ್ಷ, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಮೋದಿ ಸೇರಿದಂತೆ ಪೆಹಲ್ಗಾಂ ದಾಳಿಗೆ ಕಾರಣರಾದವರು ರಾಜೀನಾಮೆ ನೀಡಲು ಆಗ್ರಹಿಸಿದ್ದಾರೆ. ಇಷ್ಟೇ ಅಲ್ಲ ವಿಪಕ್ಷಗಳ ಮಾತನ್ನು ಕೇಳುವ ಧೈರ್ಯವಿಲ್ಲದಿದ್ದರೆ, ಸ್ಥಾನಕ್ಕೆ ಅರ್ಹರಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯನ್ನು ಕುಟುಕಿದ್ದಾರೆ.
ಮಂತ್ರಿಯೋ-ಕಂತ್ರಿಯೋ ಖರ್ಗೆ ಪ್ರಶ್ನೆ
ಆಪರೇಶನ್ ಸಿಂಧೂರ್ ಮುಂದಾಳತ್ವ ಮಹಿಸಿದ ಸೈನ್ಯಾಧಿಕಾರಿಯನ್ನು ಮಧ್ಯಪ್ರದೇಶದ ಸಚಿವರೊಬ್ಬರು ಅವಮಾನಿಸಿದ್ದಾರೆ. ಅವರು ಮಂತ್ರಿಯೋ ಅಥವಾ ಕಂತ್ರಿಯೋ. ಇದನ್ನು ಖಂಡಿಸಬೇಕಿತ್ತು. ಆದರೆ ಬಿಜೆಪಿ ಏನು ಮಾಡಿದೆ ಎಂದು ಖರ್ಗೆ ಪ್ರಶ್ನಿಸಿದ್ದಾರೆ.
ಯುದ್ಧ ನಿಲ್ಲಿಸಿದ್ದ ಟ್ರಂಪ್ ಎಂದಿದ್ದಾರೆ, ಮೋದಿ ಮೌನವೇಕೆ?
ಭಾರತ ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದ ಡೋನಾಲ್ಡ್ ಟ್ರಂಪ್ ಎಂದು ಹೇಳುತ್ತಿದ್ದಾರೆ. ಟ್ರಂಪ್ ಹಲವು ಭಾರಿ ತಮ್ಮ ಭಾಷಣದಲ್ಲಿ ಹಾಗೂ ಹಲವು ವೇದಿಕೆಗಳಲ್ಲಿ ಹೇಳಿದ್ದಾರೆ. ಒಂದು ಬಾರಿ ಅಲ್ಲ, 29 ಬಾರಿ ಟ್ರಂಪ್ ಯುದ್ಧ ನಿಲ್ಲಿಸಿರುವುದಾಗಿ ಹೇಳಿದ್ದಾರೆ. ನನ್ನ ಭಾಷಣ ಮುಗಿಯುವ ವೇಳೆಗೆ ಟ್ರಂಪ್ 30ನೇ ಬಾರಿಗೆ ಯುದ್ಧ ನಿಲ್ಲಿಸಿರುವ ಹೇಳಿಕೆ ನೀಡಬಹುದು. ಆದರೆ ಕೇಂದ್ರ ಸರ್ಕಾರ ಈ ಕುರಿತು ಸ್ಪಷ್ಟ ಹಾಗೂ ನಿಖರ ಉತ್ತರ ನೀಡಿಲ್ಲ ಎಂದು ಖರ್ಗೆ ಆರೋಪಿಸಿದ್ದಾರೆ.
ತೆರಿಗೆ ಒಪ್ಪಂದ ಮುಂದಿಟ್ಟು ಯುದ್ಧ ನಿಲ್ಲಿಸಿದ್ದೇನೆ ಎಂದ ಟ್ರಂಪ್
ತೆರಿಗೆ, ವ್ಯಾಪಾರ ವಹಿವಾಟು ಬೆದರಿಕೆ ಹಾಕಿ ಯುದ್ಧ ನಿಲ್ಲಿಸಿರುವುದಾಗಿ ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ. ಈ ವ್ಯಾಪಾರದ ಹಿಂದೆ ಇರುವವರು ಯಾರು, ಆತನ ಬೆಂಬಲಕ್ಕೆ ಯಾರಿದ್ದಾರೆ. ದೇಶ ಮಾರಿ ಪೈಸೆ ದುಡಿಯುವವರು ಯಾರಿದ್ದಾರೆ. ಮೋದಿ ದೇಶಭಕ್ತರಾಗಿರುವ ಕಾರಣ ಮೋದಿ ಸಾಧ್ಯವಿಲ್ಲ, ಅಮಿತ್ ಶಾ ಕೂಡ ಅಲ್ಲ. ಹಾಗಾಗರೆ ಯಾರು ಎಂದು ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.
ಪೆಹಲ್ಗಾಂ ಭದ್ರತಾ ಲೋಪದ ಫಲ
ಪೆಹಲ್ಗಾಂ ಉಗ್ರ ದಾಳಿ ಭದ್ರತಾ ಲೋಪದ ಪರಿಣಾಮ ಎಂದು ಖರ್ಗೆ ಹೇಳಿದ್ದಾರೆ. ಸರ್ಕಾರ ಈ ದಾಳಿಯ ಹೊಣೆ ಹೊರಬೇಕು. ಪೆಹಲ್ಗಾಂ ಭೀಕರ ದಾಳಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಮೋದಿ ಸದನದಲ್ಲಿದ್ದ ಇಲ್ಲದ ಕಾರಣ, ಪೆಹಲ್ಗಾಂ ದಾಳಿ ಪ್ರಶ್ನೆಗಳನ್ನು ಎದುರಿಸಲು ಸಾಧ್ಯವಿಲ್ಲದಿದ್ದರೆ, ಸ್ಥಾನಕ್ಕೆ ಅರ್ಹರಲ್ಲ ಎಂದು ಖರ್ಗೆ ಹೇಳಿದ್ದಾರೆ. ಪ್ರವಾಸಿಗರು ಭೇಟಿ ನೀಡುವ ಸ್ಥಳದಲ್ಲಿ ಭದ್ರತೆಯೂ ಇರಲಿಲ್ಲ. ಉಗ್ರರು ಪೆಹಲ್ಗಾಂ ವೆರೆಗೆ ಯಾವುದೇ ಅಡೆ ತಡೆ ಇಲ್ಲದೆ ಆಗಮಿಸಿದ್ದಾರೆ. ಇವೆಲ್ಲಾ ಭದ್ರತಾ ಲೋಪದ ಪರಿಣಾಮಗಳು ಎಂದು ಖರ್ಗೆ ಆರೋಪಿಸಿದ್ದಾರೆ.
ಕಾರ್ಗಿಲ್ ರೀತಿ ಪೆಹಲ್ಗಾಂ ದಾಳಿ ತನಿಖೆಯಾಗಬೇಕು
ಕಾರ್ಗಿಲ್ ಯುದ್ಧದ ಕುರಿತು ಉನ್ನತ ಮಟ್ಟದ ತನಿಖೆ ನಡೆದಿದೆ. ಇದೇ ರೀತಿ ಪೆಹಲ್ಗಾಂ ಉಗ್ರ ದಾಳಿ ಕುರಿತು ತನಿಖೆಯಾಗಬೇಕು. ಕಳೆದ 11 ವರ್ಷದಲ್ಲಿ ಮೋದಿ ಒಂದೇ ಒಂದು ಚರ್ಚೆಗೆ ಸಿದ್ಧವಿಲ್ಲ. ಭಾರತೀಯ ಸೇನೆ ಈಗಾಗಲೇ ಯುದ್ಧ ವಿಮಾನ ಪತನವಾಗಿದೆ ಎಂದು ಒಪ್ಪಿಕೊಡಿದೆ. ಇದು ರಾಜಕೀಯ ನಿರ್ಧಾರಿಂದ ಆಗಿದೆ. ಭಾರತೀಯ ಸೇನಾಧಿಕಾರಿ ಮಾತಿನ ಪ್ರಕಾರ ಪಾಕಿಸ್ತಾನ ಹಾಗೂ ಚೀನಾ ಜೊತೆ ಯುದ್ಧ ಮಾಡುತ್ತಿದ್ದೇವೆ ಎಂದಿದ್ದಾರೆ. ಆದರೆ ಮೋದಿ ಹೇಳುತ್ತಿದ್ದಾರೆ. ಚೀನಾ ಯಾವುದೇ ಪ್ರದೇಶ ಆಕ್ರಮಣ ಮಾಡಿಲ್ಲ, ಚೀನಾ ಬಂದೇ ಇಲ್ಲ ಎಂದಿದ್ದಾರೆ ಎಂದು ಖರ್ಗೆ ಹೇಳಿದ್ದಾರೆ.
ಪೆಹಲ್ಗಾಂ ದಾಳಿ ಬಳಿಕ ಜಂಟಿ ಅಧಿವೇಶನ ಕರೆಯುವ ಬದಲು ಪ್ರಧಾನಿ ಮೋದಿ ಸೌದಿ ಅರೇಬಿಯಾದಿಂದ ನೇರವಾಗಿ ಬಿಹಾರಕ್ಕೆ ತೆರಳಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಕೇಂದ್ರ ಸರ್ಕಾರ ಎಲ್ಲಾ ರೀತಿಯಲ್ಲೂ ವಿಫಲವಾಗಿದೆ. ಇದರ ಪರಿಣಾಮ ಅಮಾಯಕರು ಬಲಿಯಾಗಿದ್ದಾರೆ ಎಂದು ಖರ್ಗೆ ಆರೋಪಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ