
ನವದೆಹಲಿ: ಕೇಂದ್ರ ಚುನಾವಣಾ ಆಯೋಗದ ಕಮಿಷನರ್ ಜ್ಞಾನೇಶ್ ಕುಮಾರ್ ಅವರು ರಾಜೀನಾಮೆ ನೀಡಬೇಕು ಎಂದು ಕಾಕ್ರೋಚ್ ಜನತಾ ಪಕ್ಷ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ನಡುವೆಯೇ ದೆಹಲಿಯ ಆರ್‌ಕೆ ಆಶ್ರಮದ ಬಳಿ ಪ್ರತಿಭಟನೆ ನಡೆಸುತ್ತಿದ್ದ ಅಖಿಲ ಭಾರತ ವಿದ್ಯಾರ್ಥಿ ಸಂಘ (ಎಐಎಸ್‌ಎ)ದ ರಾಷ್ಟ್ರೀಯ ಅಧ್ಯಕ್ಷೆ ನೇಹಾ ಬೋರಾ ಅವರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದ್ದರು.
ಇದಕ್ಕೂ ಮುನ್ನ ನೀಟ್ ಪೇಪರ್ ಲೀಕ್ ಪ್ರಕರಣದಲ್ಲಿ ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು ಎಂಬ ಪ್ರತಿಭಟನೆ ನಡೆದ ಸಂದರ್ಭದಲ್ಲಿ ನೇಹಾ ಬೋರಾ ಉಪವಾಸ ಪ್ರತಿಭಟನೆಯಲ್ಲಿ ಭಾಗಿಯಾಗಿ ಎಲ್ಲರ ಗಮನಸೆಳೆದಿದ್ದರು. ಸಿಪಿಐ (ಎಂಎಲ್) ಲಿಬರೇಷನ್ ವಿದ್ಯಾರ್ಥಿ ಸಂಘವಾಗಿರುವ ಇಂಡಿಯಾ ಸ್ಟೂಡೆಂಟ್ಸ್ ಆಸೋಸಿಯೇಷನ್ ರಾಷ್ಟ್ರೀಯ ಅಧ್ಯಕ್ಷರಾಗಿರುವ ನೇಹಾ, ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಕಳೆದ ಕೆಲವು ವರ್ಷಗಳಿಂದ ವಿದ್ಯಾರ್ಥಿ ರಾಜಕೀಯದಲ್ಲಿ ಸಕ್ರೀಯರಾಗಿರುವ ನೇಹಾ, ಹಲವರಿಗೆ ಧ್ವನಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ತೀವ್ರ ಹೋರಾಟ, ನೇರ ಪ್ರಶ್ನಿಸುವ ಗುಣಗಳಿಂದ ನೇಹಾ ಬೋರಾ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದಾರೆ. ನೇಹಾ ಬೋರಾ, ಉತ್ತರಖಾಂಡದ ಮೂಲದವರಾಗಿದ್ದು, ದೆಹಲಿ ಯೂನಿವರ್ಸಿಟಿಯಲ್ಲಿ ಪದವಿ ಪೂರ್ಣಗೊಳಿಸಿದ್ದಾರೆ. ಆ ಬಳಿಕ ದೆಹಲಿಯ ಅಂಬೇಡ್ಕರ್ ವಿವಿಯಲ್ಲಿ ಎಂಎ ಪದವಿ ಪೂರ್ಣಗೊಳಿಸಿದ್ದಾರೆ. ಸದ್ಯ ದೆಹಲಿಯ ಜವಾರ್‌ಲಾಲ್ ನೆಹರು ವಿವಿಯಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ.
ಇತ್ತೀಚೆಗೆ ಸಂದರ್ಶವೊಂದರಲ್ಲಿ ಮಾತನಾಡಿದ್ದ ನೇಹಾ, ನಾವು ಭಗತ್ ಸಿಂಗ್ ಅವರನ್ನು ನಂಬುತ್ತೇವೆ. ಸದ್ಯ ಅಧಿಕಾರದಲ್ಲಿರುವ ವ್ಯವಸ್ಥೆ ಬದಲಾವಣೆಯಾಗಬೇಕು. ಈ ಪ್ರತಿಘಟನೆ ನಮಗೆ ಹಲವು ಪಾಠಗಳನ್ನು ಕಲಿಸಿದೆ. ಆದ್ದರಿಂದಲೇ ಇಂದು ನಿಮ್ಮ ಮುಂದೆ ಬಂದು ಮಾತನಾಡುತ್ತಿದ್ದೇನೆ. ಯುವಕರು ಇದನ್ನು ಗಮನಿಸಬೇಕು. ಒಬ್ಬ ವ್ಯಕ್ತಿಗೆ ಮತ್ತೊಬ್ಬರು ವಿರೋಧಗಳಾಗದೆ, ಒಬ್ಬರಿಗೆ ಒಬ್ಬರು ಬೆಂಬಲ ಕೊಟ್ಟು ಹೋರಾಟ ಮಾಡಬೇಕು ಎಂಬ ಭಾವನೆ ಇರ್ಬೇಕು ಎಂದು ಹೇಳಿದ್ದರು.
ಅಂದಹಾಗೇ, ನೇಹಾ ಅವರ ಕುಟುಂಬ ಬಿಜೆಪಿ ಬೆಂಬಲ ನೀಡುವ ಹಿನ್ನೆಲೆಯನ್ನು ಹೊಂದಿದೆ ಎಂದು ಬಿಬಿಸಿ ವರದಿ ಮಾಡಿದ್ದು, ನನ್ನ ಕುಟುಂಬದಲ್ಲಿಯೇ ಬಿಜೆಪಿಗೆ ಬೆಂಬಲ ನೀಡುವ ಸದಸ್ಯರು ಇದ್ದಾರೆ. ನಮ್ಮ ಮನೆಯಲ್ಲಿ ಭಿನ್ನ ಅಭಿಪ್ರಾಯಗಳು ಇದೆ. ನಾನು ದೆಹಲಿಗೆ ಬಂದು ಹೋರಾಟಕ್ಕೆ ಸೇರ್ಪಡೆಯಾದ ಸಮಯದಿಂದಲೇ ನಮ್ಮ ಮನೆಯಲ್ಲಿ ಭಿನ್ನಾಭಿಪ್ರಾಯಗಳು ಮೂಡಿದೆ ಎಂದು ಸಂದರ್ಶನವೊಂದರಲ್ಲಿ ನೇಹಾ ಹೇಳಿದ್ದರು.
ಬಿಜೆಪಿ ಬೆಂಬಲ ನೀಡುವ ತಂದೆ-ತಾಯಿ, ಪೋಷಕರು ಕೂಡ ನೀಟ್ ಪರೀಕ್ಷೆಯ ಪ್ರತಿಘಟನೆಯ ಸಂದರ್ಭದಲ್ಲಿ ನಮ್ಮ ಬಳಿ ಬಂದು ಕಣ್ಣೀರಿಟ್ಟಿದ್ದರು. ಹಲವರು ನಮ್ಮ ಕ್ಷಮೆ ಕೇಳಿದ್ದರು ಎಂದು ನೇಹಾ ಹೇಳಿದ್ದರು. ಫ್ರಂಟ್ ಲೈನ್‌ಗೆ ನೀಡಿದ್ದ ಸಂದರ್ಶನದಲ್ಲಿ ತನ್ನ ಕುಟುಂಬವನ್ನೇ ಉದಾಹರಣೆಯಾಗಿ ನೀಡಿ ಮಾತನಾಡಿದರು. ಬಿಜೆಪಿ ಬೆಂಬಲ ನೀಡುವ ನನ್ನ ಪೋಷಕರು ಕೂಡ ಪೊಲೀಸರ ವರ್ತನೆ ಕಂಡು ನಮ್ಮ ಪ್ರಯತ್ನಗಳಿಗೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಇಂತಹ ಬದಲಾವಣೆಗಳು ನಮ್ಮ ಹೋರಾಟದಿಂದ ಸಮಾಜದ ಮೇಲೆ ಆಗುತ್ತಿರುವ ಪ್ರಭಾವವನ್ನು ಉಂಟು ಮಾಡುತ್ತದೆ ಎಂದು ವಿವರಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ