
ಅಹ್ಮದಾಬಾದ್: ನಿನ್ನೆ ಇಲ್ಲಿ ನಡೆದ ಏರ್ ಇಂಡಿಯಾ ಡ್ರೀಮ್ ಲೈನರ್ ವಿಮಾನ ಅಪಘಾತದಲ್ಲಿ ಪವಾಡಸದೃಶವಾಗಿ ಬದುಕುಳಿದ 40 ವರ್ಷದ ಬ್ರಿಟಿಷ್ ಪ್ರಜೆಯಾಗಿರುವ ಭಾರತೀಯ ಮೂಲದ ವಿಶ್ವಶ್ ಕುಮಾರ್ ರಮೇಶ್ ಅವರು ಇನ್ನೂ ಆ ಆಘಾತದಿಂದ ದಿಗ್ಭ್ರಮೆಗೊಂಡಿದ್ದಾರೆ ತಾನು ಹೇಗೆ ಬದುಕುಳಿದೆ ಎಂಬುದು ನನಗೆ ಸ್ಪಷ್ಟವಾಗಿಲ್ಲ ಎಂದು ಅವರು ಹೇಳಿದ್ದಾರೆ. ಇಂದು ಬೆಳಗ್ಗೆ, ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಾಸ್ ಕುಮಾರ್ ರಮೇಶ್ ಅವರು ದಾಖಲಾಗಿರುವ ಅಹಮದಾಬಾದ್‌ನ ಆಸ್ಪತ್ರೆಗೆ ಭೇಟಿ ನೀಡಿ ಅವರ ಕ್ಷೇಮ ವಿಚಾರಿಸಿದರು.
ಈ ವೇಳೆ ರಮೇಶ್ ಅವರು, ನಾನು ಅದರಿಂದ ಹೇಗೆ ಜೀವಂತವಾಗಿ ಹೊರಬಂದೆ ಎಂದು ನನಗೆ ಗೊತ್ತಿಲ್ಲ, ಸ್ವಲ್ಪ ಸಮಯದಲ್ಲಿ ನಾನು ಸಾಯುತ್ತೇನೆ ಎಂದು ಭಾವಿಸಿದ್ದೆ. ಆದರೆ ನಾನು ಕಣ್ಣು ತೆರೆದಾಗ, ನಾನು ಜೀವಂತವಾಗಿದ್ದೇನೆ ಎಂಬುದು ಗೊತ್ತಾಯ್ತು. ನಾನು ನನ್ನ ಸೀಟ್ ಬೆಲ್ಟ್ ತೆರೆದು ಅಲ್ಲಿಂದ ಹೊರಬಂದೆ, ನನ್ನ ಜೊತೆಗಿದ್ದ ಅಂಟಿ, ಅಂಕಲ್, ಗಗನಸಖಿ ಎಲ್ಲರೂ ಕಣ್ಣೆದುರೇ ಸಾವನ್ನಪ್ಪಿದರು. ರಮೇಶ್ ಅವರ ಆಸನ 11A ಆಗಿದ್ದು, ವಿಮಾನ ಹಾಸ್ಟೆಲ್‌ಗೆ ಡಿಕ್ಕಿ ಹೊಡೆದಾಗ ತುರ್ತು ಬಾಗಿಲಿನ ಪಕ್ಕದಲ್ಲಿಯೇ ಇತ್ತು.
ವಿಮಾನ ಹಾಸ್ಟೆಲ್ ಕಟ್ಟಡಕ್ಕೆ ಡಿಕ್ಕಿ ಹೊಡೆದಾಗ ನೀವು ಹಾಸ್ಟೆಲ್ ಮೇಲೆ ಲ್ಯಾಂಡ್ ಆದ್ರಾ ಎಂದು ಕೇಳಿದಾಗ, ಇಲ್ಲ, ನಾನು ನೆಲಕ್ಕೆ ನೆಲ ಮಹಡಿಗೆ ಹತ್ತಿರವಿದ್ದೆ ಅಲ್ಲಿ ಜಾಗವಿತ್ತು. ಹಾಗಾಗಿ ನಾನು ಅಲ್ಲಿಂದ ಹೊರಬಂದೆ. ಕಟ್ಟಡದ ಗೋಡೆ ಎದುರು ಭಾಗದಲ್ಲಿತ್ತು ಮತ್ತು ಯಾರೂ ಅಲ್ಲಿಂದ ಹೊರಬರಲು ಸಾಧ್ಯವಾಗಿರಲಿಕ್ಕಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದರು.
ಕೆಲವೇ ಕ್ಷಣಗಳಲ್ಲಿ ಬೆಂಕಿ ಹೊತ್ತಿಕೊಂಡು ನನ್ನ ತೋಳಿಗೂ ವ್ಯಾಪಿಸಿತು. ನನ್ನ ಕಣ್ಣ ಮುಂದೆ ಇಬ್ಬರು ಗಗನಸಖಿಯರು... ಎಂದು ಅವನು ಉಸಿರೆಳೆದುಕೊಳ್ಳುತ್ತಾ ಭಯಾನಕ ಕ್ಷಣಗಳನ್ನು ವಿವರಿಸಿದ್ದಾರೆ. ಅಪಘಾತ ಹೇಗೆ ಸಂಭವಿಸಿತು ಎಂದು ಕೇಳಿದಾಗ, ಟೇಕ್-ಆಫ್ ಆದ ಒಂದು ನಿಮಿಷದ ನಂತರ, ವಿಮಾನವು ಸಿಲುಕಿಕೊಂಡಂತೆ ಭಾಸವಾಯಿತು. ನಂತರ ಹಸಿರು ಮತ್ತು ಬಿಳಿ ದೀಪಗಳು ಬೆಳಗಿದವು. ಅವರು (ಪೈಲಟ್‌ಗಳು) ವಿಮಾನವನ್ನು ಮೇಲಕ್ಕೆತ್ತಲು ಪ್ರಯತ್ನಿಸಿದರು ಆದರೆ ಅದು ಪೂರ್ಣ ವೇಗದಲ್ಲಿ ಹೋಗಿ ಕಟ್ಟಡಕ್ಕೆ ಅಪ್ಪಳಿಸಿತು ಎಂದು ಹೇಳಿದರು.
ಇನ್ನು ತನ್ನ ಸೋದರ ಅಜಯ್ ಕುಮಾರ್ ರಮೇಶ್, 11ಜೆ ಸೀಟಿನಲ್ಲಿ ಕುಳಿತಿದ್ದರು. ಅವರು ಈ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಈ ಸೋದರರು ಯುಕೆಯಲ್ಲಿ 15 ವರ್ಷಗಳಿಂದ ವಾಸಿಸುತ್ತಿದ್ದು, ಯುಕೆಯಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದರು.
ನಿನ್ನೆ, ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರಿದ ಕೆಲವೇ ನಿಮಿಷಗಳಲ್ಲಿ ಏರ್ ಇಂಡಿಯಾ ಡ್ರೀಮ್‌ಲೈನರ್ ವಿಮಾನವು ವಿಮಾನ ನಿಲ್ದಾಣದಿಂದ ತುಸು ದೂರದ ವೈದ್ಯಕೀಯ ಕಾಲೇಜು ಹಾಸ್ಟೆಲ್‌ಗೆ ಅಪ್ಪಳಿಸಿತು ಈ ದುರಂತದಲ್ಲಿ ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿ 241 ಜನರು ಸಾವನ್ನಪ್ಪಿದರು. ಲಂಡನ್‌ಗೆ ಇದು ನೇರ ವಿಮಾನವಾಗಿದ್ದರಿಂದ ಹಾಗೂ ಟೇಕಾಫ್ ಆಗಿ ಹೆಚ್ಚು ನಿಮಿಷವೂ ಕಳೆದಿರದ ಕಾರಣ 1.25 ಲಕ್ಷ ಲೀಟರ್‌ನಷ್ಟು ಬಹಳ ಪವರ್‌ಫುಲ್ ಆಗಿರುವ ಇಂಧನ ವಿಮಾನದ ಟ್ಯಾಂಕ್ ಫುಲ್ ಇತ್ತು. ಹೀಗಾಗಿ ವಿಮಾನವೂ ಬೆಂಕಿಯುಂಡೆಯಂತಾಗಿ ಕೆಲವೇ ಕ್ಷಣದಲ್ಲಿ ಅಲ್ಲಿ ಸ್ಮಶಾನವನ್ನು ಸೃಷ್ಟಿಸಿತ್ತು.
ಈ ಅಪಘಾತದಲ್ಲಿ ಅಹಮದಾಬಾದ್‌ನ ಬಿಜೆ ವೈದ್ಯಕೀಯ ಕಾಲೇಜಿನ ಹಾಸ್ಟೆಲ್‌ನಲ್ಲಿದ್ದ ಹಲವಾರು ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು. ಕನಿಷ್ಠ ಐದು ಎಂಬಿಬಿಎಸ್ ವಿದ್ಯಾರ್ಥಿಗಳು, ಒಬ್ಬ ಪಿಜಿ ವೈದ್ಯರು ಮತ್ತು ಸೂಪರ್‌ಸ್ಪೆಷಲಿಸ್ಟ್ ವೈದ್ಯರ ಪತ್ನಿ ಈ ದುರಂತದಲ್ಲಿ ಮಡಿದಿದ್ದು, 60 ಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಅಪಘಾತ ನಡೆದು ಕೆಲವೇ ಗಂಟೆಗಳು ಕಳೆದರೂ ಸಾವನ್ನಪ್ಪಿದವರ ಅಧಿಕೃತ ಎಣಿಕೆ ಲಭ್ಯವಾಗಿಲ್ಲ. ಎಲ್ಲಾ ಡಿಎನ್‌ಎ ಪರೀಕ್ಷೆಗಳು ಮುಗಿದ ತಕ್ಷಣ ಸಾವಿನ ಸಂಖ್ಯೆ ಲಭ್ಯವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ವಿಮಾನದಲ್ಲಿದ್ದ 230 ಪ್ರಯಾಣಿಕರಲ್ಲಿ 169 ಭಾರತೀಯರು, 53 ಬ್ರಿಟಿಷರು, ಏಳು ಪೋರ್ಚುಗೀಸರು ಮತ್ತು ಒಬ್ಬ ಕೆನಡಾದವರು ಇದ್ದರು. ವಿಮಾನದಲ್ಲಿದ್ದ ಇತರ 12 ಜನರಲ್ಲಿ ಇಬ್ಬರು ಪೈಲಟ್‌ಗಳು ಮತ್ತು 10 ಮಂದಿ ಕ್ಯಾಬಿನ್ ಸಿಬ್ಬಂದಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ