ಕೇಂದ್ರ, ಮೋದಿ ಮಾಡಿದ್ದೆಲ್ಲ ತಪ್ಪು ಎನ್ನಲಾಗದು, Vote Chori ಆರೋಪದಿಂದ ಕಾಂಗ್ರೆಸ್‌ನ ನೈತಿಕತೆ ಕುಸಿತ!

Kannadaprabha News   | Kannada Prabha
Published : Dec 16, 2025, 10:54 AM IST
What did the former Congress leader say about Rahul Gandhi s vote chori

ಸಾರಾಂಶ

ಮಾಜಿ ಕಾಂಗ್ರೆಸ್ ನಾಯಕರೊಬ್ಬರು, ದೇಶಕ್ಕೆ ಪರಿಣಾಮಕಾರಿ ವಿಪಕ್ಷದ ಅಗತ್ಯವನ್ನು ಒತ್ತಿಹೇಳಿದ್ದಾರೆ. ಕಾಂಗ್ರೆಸ್ ಪಕ್ಷವು ಆತ್ಮವಿಮರ್ಶೆ ಮಾಡಿಕೊಂಡು ತನ್ನನ್ನು ತಾನು ಬಲಪಡಿಸಿಕೊಳ್ಳುವುದು ರಾಷ್ಟ್ರೀಯ ಕರ್ತವ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. \

ಅಶ್ವನಿ ಕುಮಾರ್‌,

ಮಾಜಿ ಕೇಂದ್ರ ಸಚಿವ ಮತ್ತು ಮಾಜಿ ಕಾಂಗ್ರೆಸ್‌ ನಾಯಕ

ದೇಶದಲ್ಲಿ ಒಂದು ಪರಿಣಾಮಕಾರಿ ವಿರೋಧ ಪಕ್ಷ ಇರಬೇಕಾದುದು ಅತ್ಯಗತ್ಯ. ಇಂದು ವಿಪಕ್ಷ ಸ್ಥಾನದಲ್ಲಿರುವ ಕಾಂಗ್ರೆಸ್ ತನ್ನ ಗಟ್ಟಿತನವನ್ನು ಕಳೆದುಕೊಂಡಿದೆ. ಆ ಪಕ್ಷವನ್ನು ಮತ್ತೆ ಪುನರುಜ್ಜೀವನಗೊಳಿಸುವುದು ಒಂದು ರಾಷ್ಟ್ರೀಯ ಕರ್ತವ್ಯ ಎಂದು ನಾನು ಭಾವಿಸುತ್ತೇನೆ. ಮಾಜಿ ಕೇಂದ್ರ ಸಚಿವ ಮತ್ತು ಮಾಜಿ ಕಾಂಗ್ರೆಸ್ ನಾಯಕನಾಗಿ, ಕಾಂಗ್ರೆಸ್‌ ಅನ್ನು ಒಳಗಿನಿಂದ ಬಲಗೊಳಿಸಲು ಮತ್ತು ತನ್ನನ್ನು ತಾನು ಆತ್ಮವಿಮರ್ಶೆ ಮಾಡಿಕೊಳ್ಳಲು ಒತ್ತಾಯಿಸುವುದು ನನ್ನ ಕರ್ತವ್ಯವೆಂದು ಭಾವಿಸುತ್ತೇನೆ.

ರಾಹುಲ್ ಗಾಂಧಿ ಪರಿಶುದ್ಧ ಹೃದಯವುಳ್ಳವರು. ಅವರು ಆದರ್ಶವಾದಿಯೂ ಹೌದು. ಜನರ ಪರವಾಗಿ ಮಾತನಾಡುತ್ತಾರೆ. ನನಗೆ ಅದು ಇಷ್ಟ. ಆದರೆ ಕಾಂಗ್ರೆಸ್‌ನ ಸಂದೇಶದಲ್ಲಿ ಎಲ್ಲೋ ತಪ್ಪಾಗಿದೆ. ಅದು ಯಾವುದೆಂದು ನನಗೆ ಗೊತ್ತಿಲ್ಲ. ಆ ವಿಷಯದ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ. ನಾನು ಕಾಂಗ್ರೆಸ್‌ ಪಕ್ಷವನ್ನು ತೊರೆದಿದ್ದೇನೆ ನಿಜ. ಆದರೆ ಇವತ್ತಿಗೂ ನನಗೆ ಕಾಂಗ್ರೆಸ್‌ನ ಆದರ್ಶ ದೃಷ್ಟಿಕೋನದ ಬಗ್ಗೆ ಅಪಾರ ಗೌರವವಿದೆ. ಕಾಂಗ್ರೆಸ್‌ನ ಈಗಿನ ಹಿರಿಯ ನಾಯಕರ ಮೇಲೂ ನನಗೆ ಗೌರವಾಭಿಮಾನಗಳಿವೆ. ಆದರೆ ಕೇಂದ್ರ ಸರ್ಕಾರ ಮಾಡುವುದೆಲ್ಲವೂ ತಪ್ಪು, ಪ್ರಧಾನಿ ನರೇಂದ್ರ ಮೋದಿ ಮಾಡಿದ್ದೆಲ್ಲವೂ ತಪ್ಪು ಎಂಬ ಭಾವನೆ ಸರಿಯಲ್ಲ.

ನಾಯಕರಲ್ಲಿ ಉದಾರತೆ ಅಗತ್ಯ:

ಪ್ರಜಾಸತ್ತಾತ್ಮಕ ನಾಯಕತ್ವದಲ್ಲಿ ಹಲವು ಉತ್ತಮ ಗುಣಗಳನ್ನು ಹೊಂದಿರಬೇಕಾಗುತ್ತದೆ. ಅದರಲ್ಲಿ ಬಹುಮುಖ್ಯವಾದ ಒಂದು ಗುಣವೆಂದರೆ ಉದಾರತೆ. ನಾಯಕರಾದವರಿಗೆ ಸಣ್ಣ ಬುದ್ಧಿ ಇರಬಾರದು. ಅವರು ವಿಶಾಲ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು. ಉದಾರ ಹೃದಯದಿಂದ ವರ್ತಿಸಬೇಕು. ಈ ನಾಯಕತ್ವದ ಗುಣ ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್ ಮತ್ತು ಜವಾಹರಲಾಲ್ ನೆಹರು ಅವರಲ್ಲಿತ್ತು. ನಾನು ಇಂದು ಪಕ್ಷವನ್ನು ತೊರೆದಿರಬಹುದು. ಆದರೆ ಹಿರಿಯ ನಾಯಕಿ ಸೋನಿಯಾ ಗಾಂಧಿಯವರ ಬಗ್ಗೆ ನನಗೆ ವಿಶೇಷ ಗೌರವವಿದೆ. ಅವರು ಸಾರ್ವಜನಿಕ ಜೀವನದಲ್ಲಿ ಸದಾ ಉತ್ತಮ ನಾಗರಿಕ ಪ್ರವೃತ್ತಿ ಮತ್ತು ಸಭ್ಯತೆಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಆ ಕಾರಣಕ್ಕಾಗಿ ಅವರ ಮೇಲೆ ನನಗೆ ದೊಡ್ಡ ಗೌರವವಿದೆ.

ಸೋನಿಯಾ ಗಾಂಧಿಯವರ ಜೊತೆ ದೀರ್ಘಕಾಲ ಒಡನಾಡಿದ ಅನುಭವ ನನ್ನದು. ನಾನು ಯಾವತ್ತೂ ಅವರು ಕೋಪಗೊಂಡಿದ್ದಾಗಲೀ, ಅಹಂಕಾರದಿಂದ ವರ್ತಿಸಿದ್ದಾಗಲೀ ನೋಡಿಲ್ಲ. ಅವರಿಗೆ ದೃಢವಾದ ಯೋಚನೆ, ದೃಷ್ಟಿಕೋನವಿದೆ. ತನಗೆ ಇಂಥದ್ದು ಇಷ್ಟ, ಇಂಥದ್ದು ಇಷ್ಟವಿಲ್ಲ ಎಂದು ಅವರು ಸ್ಪಷ್ಟವಾಗಿ ತಿಳಿದುಕೊಂಡಿದ್ದಾರೆ. ಇದನ್ನು ನಾನು ಒಪ್ಪುತ್ತೇನೆ. ಅವರು ಗೌರವ ಮತ್ತು ನಾಗರಿಕತೆಯನ್ನು ಪ್ರತಿನಿಧಿಸುತ್ತಾರೆ. ಅವರಿಗೆ ತಾವೇ ಪ್ರಧಾನಿ ಆಗಬಹುದಾದ ಆಯ್ಕೆಯಿತ್ತು. ಆದರೆ ಅವರು ಸಭ್ಯತೆ ಮತ್ತು ಗೌರವಯುತ ವ್ಯಕ್ತಿತ್ವವುಳ್ಳ ಮನಮೋಹನ್ ಸಿಂಗ್ ಅವರನ್ನು ಆಯ್ಕೆ ಮಾಡಿದರು. ಈ ಎಲ್ಲ ಕಾರಣಗಳಿಂದಾಗಿ ಸೋನಿಯಾ ಗಾಂಧಿಯವರ ವ್ಯಕ್ತಿತ್ವದ ಬಗ್ಗೆ ನನಗೆ ಅಪಾರ ಅಭಿಮಾನವಿದೆ.

ಕಾಂಗ್ರೆಸ್‌ಗೆ ಆತ್ಮವಿಮರ್ಶೆ ಅಗತ್ಯ:

ಕಾಂಗ್ರೆಸ್‌ ಒಂದು ಶ್ರೇಷ್ಠವಾದ ಪಕ್ಷ. ಕಾಂಗ್ರೆಸ್‌ ಇಲ್ಲದೆ ದೇಶದಲ್ಲಿ ಅತ್ಯಂತ ಪ್ರಭಾವಶಾಲಿಯಾದ ಪ್ರತಿಪಕ್ಷವಿರಲು ಸಾಧ್ಯವಿಲ್ಲ ಎಂಬುದಂತೂ ಖಚಿತ. ದೇಶಾದ್ಯಂತ ಕಾಂಗ್ರೆಸ್‌ ಇವತ್ತಿಗೂ ತನ್ನ ಪ್ರಭಾವವನ್ನು ಉಳಿಸಿಕೊಂಡಿದೆ. ಆದರೆ ಎಲ್ಲೋ ಅದು ಹಳಿ ತಪ್ಪಿದೆ. ಅದನ್ನು ಆತ್ಮವಿಮರ್ಶೆ ಮಾಡಿಕೊಂಡು ತಾನೇ ಸರಿಪಡಿಸಿಕೊಳ್ಳಬೇಕು. ತನ್ನ ವಿರೋಧಿ ಪಕ್ಷಗಳ ದೋಷಗಳನ್ನು ಎತ್ತಿ ಆಡುವುದಕ್ಕಿಂತ ತನ್ನನ್ನೇ ತಾನು ಮೊದಲು ಪರೀಕ್ಷಿಸಿಕೊಳ್ಳಬೇಕು. ತನ್ನ ದೋಷಗಳನ್ನು ಅರ್ಥಮಾಡಿಕೊಂಡು, ಅದನ್ನು ಸರಿಪಡಿಸಲು ಪ್ರಯತ್ನಿಸಬೇಕು. ಈ ವಿಷಯದಲ್ಲಿ ತೀರ್ಪು ನೀಡಲು ನನಗೆ ಯಾವ ಅಧಿಕಾರವೂ ಇಲ್ಲ. ಕಾಂಗ್ರೆಸ್‌ನಲ್ಲಿ ಬುದ್ಧಿವಂತ, ಚತುರ ನಾಯಕರಿದ್ದಾರೆ. ಅವರು ಇದನ್ನೆಲ್ಲ ತಾವೇ ತಿಳಿದುಕೊಳ್ಳಬೇಕು. ಕಾಂಗ್ರೆಸ್‌ನ ಪುನರುಜ್ಜೀವನ ಒಂದು ರಾಷ್ಟ್ರೀಯ ಕರ್ತವ್ಯ. ನಾನು ಅದಕ್ಕೆ ಶುಭ ಕೋರುತ್ತೇನೆ.

ಮತಚೋರಿ ಆರೋಪದಿಂದ ಕಾಂಗ್ರೆಸ್‌ ನೈತಿಕತೆ ಕುಸಿತ:

ವಿರೋಧ ಪಕ್ಷವು ಮತಚೋರಿಯ ಆರೋಪ ಮಾಡುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ. ಆದರೆ ವಿದ್ಯುನ್ಮಾನ ಮತಯಂತ್ರಗಳ ಮೂಲಕ (ಇವಿಎಂ) ಚುನಾವಣೆ ನಡೆದು, ಅದರ ಫಲಿತಾಂಶಗಳ ಆಧಾರದ ಮೇಲೆ ಸರ್ಕಾರ ರಚನೆಯಾದಾಗ ಈ ರೀತಿ ಆರೋಪ ಮಾಡಿದರೆ, ಅದನ್ನು ನಂಬುವುದು ಕಷ್ಟ. ಚುನಾವಣೆಗಳನ್ನು ಕಳ್ಳತನ ಮಾಡಲಾಗುತ್ತಿದೆ ಎಂದು ವಿರೋಧ ಪಕ್ಷವು ದಿನದಿಂದ ದಿನಕ್ಕೆ ಘೋಷಿಸುತ್ತಲೇ ಇದೆ. ನಾನು ಇದರ ಬಗ್ಗೆ ಹೆಚ್ಚು ಚರ್ಚಿಸಿಲ್ಲ. ಇವಿಎಂಗಳನ್ನು ತಿರುಚಲಾಗಿದೆಯೇ ಅಥವಾ ತಿರುಚಬಹುದೇ ಎಂಬುದು ನನಗೆ ಗೊತ್ತಿಲ್ಲ. ಆದರೆ ವಿರೋಧ ಪಕ್ಷವು ಏನಾದರೂ ಹೇಳುತ್ತಿದ್ದರೆ, ಅದನ್ನು ಖಂಡಿತವಾಗಿ ಪರಿಗಣಿಸಬೇಕು. ಈ ಸಾಧ್ಯತೆಯನ್ನು ನ್ಯಾಯಯುತ ಚುನಾವಣೆಗಳನ್ನು ಖಚಿತಪಡಿಸುವ ಜವಾಬ್ದಾರಿಯನ್ನು ಹೊಂದಿರುವವರು ಗಂಭೀರವಾಗಿ ತೆಗೆದುಕೊಳ್ಳಬೇಕು.

ಇಲ್ಲೊಂದು ವಿಪರ್ಯಾಸವಿದೆ. ಯಾವುದೇ ಪಕ್ಷ ತನ್ನ ಪರವಾಗಿ ಫಲಿತಾಂಶ ಬಂದರೆ ಅದನ್ನು ಸ್ವೀಕರಿಸುತ್ತದೆ. ಸರ್ಕಾರವನ್ನು ರಚಿಸಲು ಆ ಫಲಿತಾಂಶವನ್ನು ಆಯ್ಕೆ ಮಾಡಿಕೊಳ್ಳುತ್ತದೆ, ಉದಾಹರಣೆಗೆ ಕಾಂಗ್ರೆಸ್ ಹಿಮಾಚಲ ಪ್ರದೇಶ, ಕರ್ನಾಟಕದಲ್ಲಿ ಚುನಾವಣಾ ಫಲಿತಾಂಶನ್ನು ಸ್ವೀಕರಿಸಿ ಸರ್ಕಾರ ರಚನೆ ಮಾಡಿದೆ. ಆದರೆ ತಾನು ಸೋತ ಚುನಾವಣೆಗಳ ಬಗ್ಗೆ ಮಾತ್ರ ಪ್ರಶ್ನೆ ಕೇಳುತ್ತಿದೆ. ಇದರಿಂದಾಗಿ ಆ ಪಕ್ಷದ ನೈತಿಕ ನಂಬಿಕೆ ಕಡಿಮೆಯಾಗುತ್ತದೆ. ತನಗೆ ಬೇಕಾದದ್ದನ್ನು ಒಪ್ಪಿ, ಬೇಡದ್ದನ್ನು ಗೇಲಿ ಮಾಡುವುದು ಸರಿಯಲ್ಲ. ಚುನಾವಣೆಗಳನ್ನು ಕಳವು ಮಾಡುವುದು ಸರಿ ಎಂದು ಅಪ್ಪಿತಪ್ಪಿಯೂ ನಾನು ಹೇಳುತ್ತಿಲ್ಲ. ನಾನು ಸಲಹೆ ಕೊಡುವುದಿಷ್ಟೆ. ನೀವು ನೈತಿಕವಾಗಿ ಉನ್ನತ ಸ್ಥಾನದಲ್ಲಿ ನಿಲ್ಲಲು ಇಚ್ಛಿಸಿದರೆ, ನೀವು ನಿಮ್ಮ ಮಾತಿಗೆ ತಕ್ಕಂತೆ ನಡೆದುಕೊಳ್ಳಬೇಕು. ಇಲ್ಲವಾದರೆ, ನಿಮಗೆ ನೈತಿಕತೆ ಇರುವುದಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪಿಯುಸಿ ಸರ್ಟಿಫಿಕೇಟ್ ಇದ್ದರೆ ಮಾತ್ರ ವಾಹನಕ್ಕೆ ಪೆಟ್ರೋಲ್ -ಡೀಸೆಲ್, ಡಿ.18ರಿಂದ ಹೊಸ ನಿಯಮ
ಕಿಡ್ನಾಪ್ ಮಾಡಿದವರ ಸ್ಮಾರ್ಟ್‌ವಾಚ್ ಬಳಸಿ ಬಚಾವ್ ಆದ ಹೊಟೆಲ್ ಮ್ಯಾನೇಜರ್, ಕೈಹಿಡಿದ SOS