
ನವದೆಹಲಿ: ಭಾನುವಾರ ಇಲ್ಲಿನ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ನಡೆಸಿದ ಮತಗಳವು ವಿರೋಧಿ ಪ್ರತಿಭಟನೆಯಲ್ಲಿ, ‘ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಮಾಧಿ ಮಾಡುತ್ತೇವೆ’ ಎಂಬ ಉದ್ಘೋಷ ಕೇಳಿಬಂದಿದ್ದವು. ಹೀಗಾಗಿ ಕಾಂಗ್ರೆಸ್ ಕ್ಷಮೆಗೆ ಆಗ್ರಹಿಸಿ ಬಿಜೆಪಿ ಸಂಸದರು ಸೋಮವಾರ ಕಲಾಪದ ವೇಳೆ ಭಾರೀ ಗದ್ದಲ ಎಬ್ಬಿಸಿದ ಕಾರಣ ಮಧ್ಯಾಹ್ನದ ವರೆಗೆ ಉಭಯ ಸದನ ನಡೆಯಲೇ ಇಲ್ಲ.
ಲೋಕಸಭೆಯಲ್ಲಿ ಮಾತನಾಡಿದ ಸಂಸದೀಯ ಸಚಿವ ಕಿರಣ್ ರಿಜಿಜು, ‘ಜಾಗತಿಕ ಮಟ್ಟದಲ್ಲಿ ಅತಿ ಪ್ರಭಾವಶಾಲಿ ಹಾಗೂ 140 ಕೋಟಿ ದೇಶವಾಸಿಗಳ ನಾಯಕರಾಗಿರುವ ಮೋದಿಗೆ ಸಮಾಧಿ ತೋಡುವುದಾಗಿ ಘೋಷಣೆ ಕೂಗಲಾಯಿತು. ಇದು ದುರದೃಷ್ಟಕರ. ಇದಕ್ಕೆ ಕಾಂಗ್ರೆಸ್ ಕ್ಷಮೆ ಯಾಚಿಸಬೇಕು’ ಎಂದು ಆಗ್ರಹಿಸಿದರು. ಈ ವೇಳೆ ಗದ್ದಲ ಉಂಟಾಗಿದ್ದರಿಂದ ಕಲಾಪ ಮುಂದೂಡಿಕೆ ಆಯಿತು.
ಅತ್ತ ರಾಜ್ಯಸಭೆಯಲ್ಲೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಇತರೆ ಹಿರಿಯ ನಾಯಕರ ಕ್ಷಮೆಗೆ ಒತ್ತಾಯಿಸಿ ಗುಲ್ಲೆದ್ದ ಪರಿಣಾಮ ಕಲಾಪವನ್ನು ಕೆಲಕಾಲ ಮುಂದೂಡಲಾಯಿತು.
ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೋಮವಾರ ಭಾರತದ ಜತೆಗಿನ ಪ್ರಮುಖ ಮಿಲಿಟರಿ ಒಪ್ಪಂದದ ಫೆಡರಲ್ ಕಾನೂನಿಗೆ ಸಹಿ ಹಾಕಿದ್ದಾರೆ. ಒಪ್ಪಂದದ ಪ್ರಕಾರ ಯುದ್ಧನೌಕೆಗಳು, ಮಿಲಿಟರಿ ವಿಮಾನ ಹಾಗೂ ಇತರ ಸೇನಾ ಸಲಕರಣೆಗಳನ್ನು ಭಾರತಕ್ಕೆ ಕಳಿಸಲಾಗುತ್ತದೆ. ಇತ್ತೀಚೆಗೆ ಭಾರತಕ್ಕೆ ಬಂದಾಗ ಮೋದಿ ಜತೆ ಪುಟಿನ್ ಈ ಒಪ್ಪಂದ ಮಾಡಿಕೊಂಡಿದ್ದರು.
ಇಂಡಿಗೋ ಕಂಪನಿಯು ಸಾವಿರಾರು ವಿಮಾನಗಳ ರದ್ದತಿ ಮಾಡಿದ್ದರ ಕುರಿತು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ ಅರ್ಜಿದಾರರು ದೆಹಲಿ ಹೈಕೋರ್ಟ್‌ಗೆ ಹೋಗಬೇಕೆಂದು ತಿಳಿಸಿದೆ. ಒಂದು ವೇಳೆ ಹೈಕೋರ್ಟ್‌ನಲ್ಲಿ ನ್ಯಾಯ ಸಿಗದಿದ್ದರೆ, ಇಲ್ಲಿಗೆ ಬರಬಹುದೆಂದು ಸುಪ್ರೀಂ ತಿಳಿಸಿದೆ.
ಅರ್ಜಿದಾರ ನರೇಂದ್ರ ಮಿಶ್ರಾ ಅವರು ವಿಮಾನಗಳ ರದ್ದತಿ, ಟಿಕೆಟ್ ರೀಫಂಡ್ ಸೇರಿದಂತೆ ಹಲವು ವಿಷಯಗಳಿಗೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಪಿಐಎಲ್ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಸಿಜೆಐ ಸೂರ್ಯಕಾಂತ್ ಅವರ ತ್ರಿಸದಸ್ಯ ಪೀಠ, ‘ಇದೊಂದು ಗಂಭೀರ ಸಮಸ್ಯೆ ನಿಜ. ಆದರೆ ಈಗಾಗಲೇ ದೆಹಲಿ ಹೈಕೋರ್ಟ್ ಅರ್ಜಿ ವಿಚಾರಣೆ ನಡೆಸುತ್ತಿದೆ. ಹೀಗಾಗಿ ನೀವು ಅದರ ಮಧ್ಯದಲ್ಲಿ ಹೋಗಬಹುದು. ಒಂದು ವೇಳೆ ಅಲ್ಲಿ ನ್ಯಾಯ ಸಿಗದಿದ್ದಲ್ಲಿ ಇಲ್ಲಿಗೆ ಮರಳಿ’ ಎಂದು ಸೂಚಿಸಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ