
ಬೆಂಗಳೂರು (ಜು.22): ಇಬ್ಬರು ಯುವತಿಯರ ಬೆತ್ತಲೆ ಪರೇಡ್ ಮಾಡಿದ ಪ್ರಕರಣದೊಂದಿಗೆ ಇಡೀ ಮಣಿಪುರ ಹಿಂಸಾಚಾರ ಮತ್ತೆ ಮುನ್ನಲೆಗೆ ಬಂದಿದೆ. ಎರಡು ತಿಂಗಳ ಹಿಂದಿನ ಘಟನೆ ಇದಾದರೂ, ಇಲ್ಲಿಯವರೆಗೂ ಈ ಘಟನೆಯ ಕುರಿತಾಗಿ ಕ್ರಮ ಕೈಗೊಳ್ಳದ ಕಾರಣಕ್ಕೆ ಮಣಿಪುರ ಸರ್ಕಾರವನ್ನು ಟೀಕೆ ಮಾಡುತ್ತಿರುವುದು ಸರಿಯಾಗಿಯೇ ಇದೆ. ಇದರ ನಡುವೆ ಕೇಂದ್ರ ಸರ್ಕಾರ, ಪ್ರಧಾನಿ ಮೋದಿ, ಅಮಿತ್ ಶಾ, ಮಣಿಪುರ ರಾಜ್ಯ ಸರ್ಕಾರ ಹಾಗೂ ಮಣಿಪುರ ಸಿಎಂ ಬೀರೇನ್ ಸಿಂಗ್ ಹಿಂಸಾಚಾರವನ್ನು ಹತ್ತಿಕ್ಕಲು ಏನೇನೂ ಕ್ರಮಕೈಗೊಂಡಿಲ್ಲ ಅನ್ನೋದು ಸುಳ್ಳಾಗುತ್ತದೆ. ಇಷ್ಟೆಲ್ಲಾ ಹಿಂಸಾಚಾರದ ನಡುವೆಯೂ ಈಶಾನ್ಯ ರಾಜ್ಯದಲ್ಲಿ ಇಂದಿಗೂ ಕಾನೂನು-ಸುವ್ಯವಸ್ಥೆ ಸರಿಯಾಗಿದ್ದರೆ ಅದಕ್ಕೆ ಕಾರಣ ಸ್ಥಳೀಯ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ತಾಳಮೇಳ. ಆದರೆ, ಮಣಿಪುರಕ್ಕೆ ಮಾಡಿದಂತ ಸಹಾಯವನ್ನು ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರವಾಗಲಿ ಎಲ್ಲಿಯೂ ಎದೆ ತಟ್ಟಿಕೊಂಡು ಹೇಳಿಕೊಳ್ಳಲಿಲ್ಲ. ಇದನ್ನೇ ಲಾಭ ಮಾಡಿಕೊಂಡ ವಿಪಕ್ಷ ಹಾಗೂ ಕೆಲ ಎಡ ನಾಯಕರು ಮಣಿಪುರ ವಿಚಾರದಲ್ಲಿ ಮೋದಿ ಮೌನವನ್ನು ಪ್ರಶ್ನೆ ಮಾಡಿದ್ದಾರೆ. ಆದರೆ, ಮಣಿಪುರ ವಿಚಾರದಲ್ಲಿ ಮೋದಿ ಎಂದೂ ಮೌನವಾಗಿರಲಿಲ್ಲ. ದೇಶದ ನ್ಯಾಯವ್ಯವಸ್ಥೆಗೆ ಗೌರವ ತೋರುತ್ತಲೇ ಮುಂದಾಗಬಹುದಾದ ಅನಾಹುತಗಳನ್ನು ಸರ್ಕಾರ ಪತ್ತೆ ಮಾಡಿತ್ತು ಅನ್ನೋದಕ್ಕೆ ದಾಖಲೆಗಳಿವೆ.
ಮೇಯಟಿ ಸಮುದಾಯವನ್ನು ಎಸ್‌ಟಿ ಲಿಸ್ಟ್‌ಗೆ ಸೇರಿಸುವಂತೆ ಮಣಿಪುರ ಹೈಕೋರ್ಟ್ ಏಪ್ರಿಲ್ 19ರಂದು ಆದೇಶ ನೀಡಿತ್ತು. ಅದರ ಬೆನ್ನಲ್ಲಿಯೇ ಸರ್ಕಾರ ಆಗಬಹುದಾದ ಅನಾಹುತಗಳನ್ನು ಸರ್ಕಾರ ಅಂದಾಜು ಮಾಡಿತ್ತು. ಸೇನೆಗೆ ಈ ಕುರಿತಾಗಿ ಮಾಹಿತಿಯನ್ನೂ ನೀಡಿತ್ತು. ಇದರಿಂದಾಗಿ ಮೇ 3 ರಂದು ಮೊದಲ ಬಾರಿಗೆ ಮಣಿಪುರದಲ್ಲಿ ಹಿಂಸಾಚಾರ ನಡೆದಾಗ ಅದೇ ದಿನ, ಕೇಂದ್ರ ಸರ್ಕಾರ ಸೇನೆಯ ಬರೋಬ್ಬರಿ 55 ತುಕಡಿಗಳನ್ನು ಮಣಿಪುರಕ್ಕೆ ವರ್ಗಾವಣೆ ಮಾಡಿತ್ತು. ಅದೇ ದಿನ ಭಾರತೀಯ ಸೇನೆ ಅಂದಾಜು 9 ಸಾವಿರ ಜನರನ್ನು ರಕ್ಷಣೆ ಮಾಡಿ ಶಿಬಿರಕ್ಕೆ ವರ್ಗಾವಣೆ ಮಾಡಿತ್ತು. ಸಹಜ ಸ್ಥಿತಿಗೆ ತರಲು ಅವಿರತ ಪ್ರಯತ್ನವನ್ನೂ ನಡೆಸಲಾಗಿತ್ತು.
ಮಣಿಪುರದಲ್ಲಿ ಆಹಾರಧಾನ್ಯಗಳ ಕೊರತೆ ಉಂಟಾಗುವುದನ್ನು ಸರ್ಕಾರ ಗಮನಿಸಿತ್ತು. ಕರ್ನಾಟಕ ಸೇರಿದಂತೆ ರಾಜ್ಯಗಳಿಗೆ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿಯ ಹರಾಜನ್ನು ಸರ್ಕಾರ ನಿಲ್ಲಿಸಲು ಇದೂ ಕೂಡ ಕಾರಣವಾಗಿತ್ತು. ಗುಡ್ಡಗಾಡು ರಾಜ್ಯಕ್ಕೆ ಸರ್ಕಾರ ಉಚಿತ ಆಹಾರಧಾನ್ಯಗಳನ್ನು ನೀಡುವುದನ್ನು ಇಂದಿಗೂ ಮುಂದುವರಿಸಿದೆ. ಆಹಾರ ಧಾನ್ಯಗಳ ಕೊರತೆಯಾಗದಂತೆ ನೋಡಿಕೊಳ್ಳಲು ದಾಸ್ತಾನುಗಳ ನಿಯಮಿತ ಒಳಹರಿವು ಕಾಯ್ದುಕೊಳ್ಳಲಾಗಿದೆ. ರೈತರ ಸುರಕ್ಷತೆಗಾಗಿ, ಅಕ್ರಮ ಶಸ್ತ್ರಾಸ್ತ್ರಗಳೊಂದಿಗೆ ತಿರುಗಾಡುವ ಜನರ ವಿರುದ್ಧ ಅವರನ್ನು ರಕ್ಷಿಸಲು ಸುಮಾರು 2000 ಪಡೆಗಳನ್ನು ನಿಯೋಜಿಸಲಾಗಿತ್ತು, ಅದದೊಂದಿಗೆ ಬೆಳೆಯ ಋತುವಾಗಿದ್ದ ಕಾರಣಕ್ಕೆ ರೈತರಿಗೆ ಉಗ್ರಗಾಮಿಗಳಿಂದ ಯಾವುದೇ ತೊಂದರೆಯಾಗದಿರಲು ಮಣಿಪುರ ಪೊಲೀಸರಿಂದ ರಕ್ಷಣೆ ನೀಡಲಾಗಿತ್ತು.
ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ಅಸ್ಸಾಂ ರೈಫಲ್ಸ್, ಇಲ್ಲಿಯವರೆಗೆ ಸುಮಾರು 50,000 ಜನರನ್ನು ಹಿಂಸಾಚಾರ ಪೀಡಿತ ಸ್ಥಳದಿಂದ ಸ್ಥಳಾಂತರಿಸಿದೆ. ಈ ಅರೆಸೈನಿಕ ಪಡೆ ಅವರಿಗೆ ಸುರಕ್ಷಿತ ಮಾರ್ಗ, ವಸತಿ, ಆಹಾರ ಮತ್ತು ಔಷಧಿಗಳನ್ನು ಒದಗಿಸಿದೆ ಮತ್ತು ಸಂಪೂರ್ಣ ಭದ್ರತೆಯನ್ನು ಖಾತ್ರಿಪಡಿಸಿದೆ.
ಅಸ್ಸಾಂ ರೈಫಲ್ಸ್ ಸಿವಿಲ್ ಟ್ರಕ್‌ಗಳ ಬೆಂಗಾವಲು ಪಡೆಗೆ ಸಂಪೂರ್ಣ ರಕ್ಷಣೆ ನೀಡುವಲ್ಲಿಯೂ ಮುಂದಾಳತ್ವ ವಹಿಸಿದೆ. ರಾಷ್ಟ್ರೀಯ ಹೆದ್ದಾರಿ 37 ಮೂಲಕ ಇಂಫಾಲ್ ಕಣಿವೆಗೆ ಔಷಧಿಗಳು, ತೈಲದಂತಹ ಅಗತ್ಯ ವಸ್ತುಗಳನ್ನು ಸಾಗಿಸುವ 9000 ಟ್ರಕ್‌ಗಳು ಯಾವುದೇ ತೊಂದರೆಯಿಲ್ಲದೆ ಚಲಿಸಿದ್ದರು. ಈ ವೇಳೆ ಮಾನವೀಯ ಮೌಲ್ಯಗಳು, ಸಹಾನುಭೂತಿ ಮತ್ತು ಬದ್ಧತೆಗೆ ಆದ್ಯತೆ ನೀಡಲಾಗಿತ್ತು.
ಹಿಂಸಾಚಾರ ಪ್ರದೇಶದಲ್ಲಿ ಆರೋಗ್ಯ ಸಮಸ್ಯೆಗಳಾಗುವುದು ಸಾಮಾನ್ಯ. ಇದರ ಎಚ್ಚರಿಕೆಯಲ್ಲಿದ್ದ ಕೇಂದ್ರ ಸರ್ಕಾರ, ಏಮ್ಸ್-ಕಲ್ಯಾಣಿ, ಏಮ್ಸ್-ಗುವಾಹಟಿ ಮತ್ತು NEIGRIHMS-ಶಿಲ್ಲಾಂಗ್‌ನ ವೈದ್ಯರನ್ನು ಮಣಿಪುರಕ್ಕೆ ರವಾನೆ ಮಾಡಿದೆ. ಗಾಯಗೊಂಡವರು ಮತ್ತು ಸ್ಥಳಾಂತರಿಸಲ್ಪಟ್ಟವರ ಯೋಗಕ್ಷೇಮ, ಶಸ್ತ್ರಚಿಕಿತ್ಸೆ, ಮನೋವೈದ್ಯಶಾಸ್ತ್ರ, ಪ್ರಸೂತಿ, ತುರ್ತು ಆರೈಕೆಯಂತ ವಿಭಾಗಗಳಲ್ಲಿ ವೈದ್ಯರನ್ನು ಬಳಸಿಕೊಳ್ಳಲಾಗಿದೆ.
ವಿಶೇಷ ವೈದ್ಯರ ಸಕಾಲಿಕ ನಿಯೋಜನೆಯು ರಾಜ್ಯದ ಆರೋಗ್ಯ ಸೌಲಭ್ಯಗಳಿಗೆ ಹೆಚ್ಚುವರಿ ಸಹಾಯವನ್ನು ನೀಡಿತು. ರಕ್ಷಿಸಲ್ಪಟ್ಟ ಗರ್ಭಿಣಿಯರು ಸೇನಾ ಶಿಬಿರದಲ್ಲಿ ಮಗುವಿಗೆ ಜನ್ಮ ನೀಡಿದ ವರದಿಗಳು ಬಿತ್ತರವಾಗಿದ್ದವು. ಮೋದಿ ಸರ್ಕಾರ ಮತ್ತು ಬಿರೇನ್ ಸಿಂಗ್ ಮೋದಿ ಅವರು ಮಣಿಪುರದ ಜನರನ್ನು ರಕ್ಷಿಸಲು ಮತ್ತು ಒದಗಿಸಲು ಎಲ್ಲಾ ಸರ್ಕಾರಿ ಸೌಲಭ್ಯವನ್ನು ಬಳಸಿಕೊಂಡಿದ್ದರು.
ಶಿಬಿರಗಳಲ್ಲಿ ಪೋಷಕರಿಂದ ಕೈತಪ್ಪಿಹೋದ 50 ಮಣಿಪುರ ಮಕ್ಕಳನ್ನು ಎಚ್ಚರಿಕೆಯಿಂದ ಬೇರೆ ಶಬಿರಕ್ಕೆ ಸ್ಥಳಾಂತರಿಸಲಾಯಿತು. ಸರ್ಕಾರವು ಈ ವಿಚಾರದಲ್ಲಿ ಸಂವೇದನಾಶೀಲವಾಗಿ ವರ್ತಿಸಿತು ಮತ್ತು ಮಕ್ಕಳನ್ನು ಅಂತರ್ಯುದ್ಧದ ಅಪರಾಧಿಗಳ ಕೈಗೆ ಬೀಳದಂತೆ ರಕ್ಷಣೆ ಮಾಡಿತ್ತು. ಈ ನಡುವೆ ಅಮಿತ್ ಶಾ ಅಧಿಕಾರಿಗಳು ಮತ್ತು ಸಮುದಾಯದ ಮುಖಂಡದೊಂದಿಗೆ ಯೋಜನೆ, ಸೂಚನೆ ಮತ್ತು ಸಮನ್ವಯ ಸಾಧಿಸುತ್ತಿದ್ದರು. ರಾಜ್ಯದಲ್ಲಿ ಸಹಜತೆಯನ್ನು ಪುನಃಸ್ಥಾಪಿಸಲು ಸರ್ಕಾರದ ಉಪಕ್ರಮಗಳಿಗೆ ನಾಗರಿಕ ಸಮಾಜದ ಗುಂಪುಗಳು ಬಲವಾದ ಬೆಂಬಲವನ್ನು ನೀಡಿದ್ದವು.
ಮಣಿಪುರ ಮಹಿಳೆಯರ ಮೇಲಿನ ದೌರ್ಜನ್ಯ: ತಪ್ಪಿತಸ್ಥರ ವಿರುದ್ಧ ಕಠಿಣ ಶಿಕ್ಷೆಗೆ ಬಾಲಿವುಡ್ ಆಗ್ರಹ
ಇದೆಲ್ಲವೂ ನಡೆಯುತ್ತಿರುವಾಗ, ಪ್ರಧಾನಿ ಮೋದಿಯವರಿಗೆ ಸಂಪೂರ್ಣ ವಿವರಗಳನ್ನು ಕಾಲಕಾಲಕ್ಕೆ ತಿಳಿಸಲಾಗಿತ್ತು. ಪ್ರಧಾನಿ ಮೋದಿ ಕೂಡ ನಿರಂತರವಾಗಿ ಪರಿಸ್ಥಿತಿಯನ್ನು ಅವಲೋಕಿಸಿದರು. ಸಹಜ ಸ್ಥಿತಿಗೆ ಮರಳುವ ಕ್ರಮಗಳ ಭಾಗವಾಗಿ ಮಣಿಪುರದಲ್ಲಿ ಪೆಟ್ರೋಲ್ ಮತ್ತು ಅಡುಗೆ ಅನಿಲ ಸೇರಿದಂತೆ ಅಗತ್ಯ ಸಂಪನ್ಮೂಲಗಳ ವಿತರಣೆಯನ್ನು ಖಾತರಿಪಡಿಸುವಲ್ಲಿ ಸರ್ಕಾರವು ಯಾವುದೇ ರಾಜಿ ಮಾಡಿಕೊಂಡಿರಲಿಲ್ಲ. ಮಣಿಪುರಕ್ಕೆ ಅಮಿತ್ ಶಾ ಭೇಟಿ ನೀಡಿದ ಬಳಿಕ ಸರ್ವಪಕ್ಷ ಸಭೆ ಕರೆಯಲಾಗಿತ್ತು. ರಾಜ್ಯದಲ್ಲಿ ತೆಗೆದುಕೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ಕಾಂಗ್ರೆಸ್ ಮತ್ತು ಇತರ ಪಕ್ಷಗಳಿಗೆ ಅವರು ವಿವರಿಸಿದ್ದರು. ಈವರೆಗೂ ಆಗಿರುವ ಬಂಧನಗಳು, ಎಫ್‌ಐಆರ್‌ಗಳ ಸಂಖ್ಯೆ ಎಲ್ಲವನ್ನೂ ತಿಳಿಸಿದ್ದರೂ, ಈಗ ಅದೇ ವಿಪಕ್ಷಗಳು ಸರ್ಕಾರ ಏನೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸುತ್ತಿವೆ.
ಮಣಿಪುರ ಹಿಂಸಾಚಾರದ ಬಗ್ಗೆ ಹೊರಗೆ ಬೇಡ, ಸಂಸತ್ತಿನ ಒಳಗೆ ಹೇಳಿಕೆ ನೀಡಿ: ಮೋದಿಗೆ ಖರ್ಗೆ
ಈ ನಡುವೆ ಸಂತ್ರಸ್ತರಿಗೆ ಸರ್ಕಾರ ಪೂರ್ವ-ನಿರ್ಮಿತ ಮನೆಗಳನ್ನು ನಿರ್ಮಿಸಲು ಯೋಜಿಸುತ್ತಿದೆ. ಆರಂಭದಲ್ಲಿ 3 ರಿಂದ 4 ಸಾವಿರ ಮನೆಗಳ ನಿರ್ಮಾಣವಾಗಲಿದೆ.ಹಿಂಸಾಚಾರದ ಸಮಯದಲ್ಲಿ ಅನೇಕ ಮನೆಗಳು ನಾಶವಾದವು, ಹೊಸ ಮನೆಗಳನ್ನು ನಿರ್ಮಿಸುವವರೆಗೆ ಅವರು ಶಿಬಿರದಲ್ಲಿಯೇ ಸರ್ಕಾರದ ಆಶ್ರಯದಲ್ಲಿ ಇರಲಿದ್ದಾರೆ. ಒಂದು ನೆನಪಿರಲಿ, ಮಣಿಪುರ ಸರ್ಕಾರವನ್ನು ರಾಜಕೀಯದ ಯಾವುದೇ ಅಸಮರ್ಥ ನಾಯಕ ಮುನ್ನಡೆಸುತ್ತಿಲ್ಲ. ಅನುಭವಿ ನಾಯಕ, ಅಧಿಕಾರಿಗಳು ಇಡೀ ಮಣಿಪುರದ ಪರಿಸ್ಥಿತಿಯ ಮೇಲೆ ಕಣ್ಣಿಟ್ಟಿದ್ದಾರೆ. ಮಣಿಪುರ ಸರ್ಕಾರವು ಭಾರತ ಸರ್ಕಾರದ ನೆರವಿನೊಂದಿಗೆ ಅಮಾಯಕರ ಜೀವಗಳನ್ನು ರಕ್ಷಿಸಲು ಎಲ್ಲಾ ಸಹಾಯವನ್ನೂ ಮಾಡುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ