ಮಣಿಪುರ ಚರ್ಚೆಗೆ ವಿಪಕ್ಷಗಳ ಪಟ್ಟು: 2ನೇ ದಿನವೂ ಸಂಸತ್‌ ಕಲಾಪ ಬಲಿ

Published : Jul 22, 2023, 08:44 AM IST
ಮಣಿಪುರ ಚರ್ಚೆಗೆ ವಿಪಕ್ಷಗಳ ಪಟ್ಟು:  2ನೇ ದಿನವೂ ಸಂಸತ್‌ ಕಲಾಪ ಬಲಿ

ಸಾರಾಂಶ

ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರ ಹಾಗೂ ಮಹಿಳೆಯರ ನಗ್ನ ಪರೇಡ್‌ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನಲ್ಲಿ ಹೇಳಿಕೆ ನೀಡಬೇಕೆಂದು ಆಗ್ರಹಿಸಿ ವಿಪಕ್ಷಗಳು ಕೋಲಾಹಲ ಸೃಷ್ಟಿಸಿದ್ದರಿಂದ ಉಭಯ ಸದನಗಳ ಕಲಾಪ ಸತತ ಎರಡನೇ ದಿನವಾದ ಶುಕ್ರವಾರವೂ ಯಾವುದೇ ಚರ್ಚೆಯಿಲ್ಲದೆ ಮುಂದೂಡಿಕೆಯಾಗಿದೆ.

ನವದೆಹಲಿ: ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರ ಹಾಗೂ ಮಹಿಳೆಯರ ನಗ್ನ ಪರೇಡ್‌ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನಲ್ಲಿ ಹೇಳಿಕೆ ನೀಡಬೇಕೆಂದು ಆಗ್ರಹಿಸಿ ವಿಪಕ್ಷಗಳು ಕೋಲಾಹಲ ಸೃಷ್ಟಿಸಿದ್ದರಿಂದ ಉಭಯ ಸದನಗಳ ಕಲಾಪ ಸತತ ಎರಡನೇ ದಿನವಾದ ಶುಕ್ರವಾರವೂ ಯಾವುದೇ ಚರ್ಚೆಯಿಲ್ಲದೆ ಮುಂದೂಡಿಕೆಯಾಗಿದೆ.

ಮಹಿಳೆಯರ ನಗ್ನ ಮೆರವಣಿಗೆ ದೃಶ್ಯ ಬುಧವಾರ ವೈರಲ್‌ ಆದ ಮೇಲೆ ಗುರುವಾರ ಆರಂಭವಾದ ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನದ ಕಲಾಪದಲ್ಲಿ ವಿಪಕ್ಷಗಳು ಈ ಘಟನೆ ವಿರುದ್ಧ ಪ್ರತಿಭಟನೆ ನಡೆಸಿದ್ದವು. ಪರಿಣಾಮ ಯಾವುದೇ ಚರ್ಚೆಯಾಗದೆ ಕಲಾಪ ಮುಂದೂಡಿಕೆಯಾಗಿತ್ತು. ಶುಕ್ರವಾರವೂ ಉಭಯ ಸದನಗಳಲ್ಲಿ ಮಣಿಪುರದ ಘಟನೆ ಬಗ್ಗೆ ಪ್ರಧಾನಿ ಖುದ್ದಾಗಿ ಹೇಳಿಕೆ ನೀಡಬೇಕು ಹಾಗೂ ಬೇರೆಲ್ಲಾ ಕಲಾಪ ರದ್ದುಪಡಿಸಿ ಮಣಿಪುರದ (Manipur) ವಿಷಯ ಮಾತ್ರ ಸುದೀರ್ಘವಾಗಿ ಚರ್ಚಿಸಬೇಕು ಎಂದು ಆಗ್ರಹಿಸಿ ವಿಪಕ್ಷಗಳು (Opposition Party) ಉಭಯ ಸದನಗಳ ಬಾವಿಗಿಳಿದು ಧರಣಿ ನಡೆಸಿದವು. ಈ ವೇಳೆ ಭಿತ್ತಿ ಪತ್ರಗಳನ್ನು ಹಿಡಿದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದವು. ಸರ್ಕಾರವು ಮಣಿಪುರದ ವಿಷಯದ ಬಗ್ಗೆ ಚರ್ಚೆಗೆ ಸಿದ್ಧರಿದ್ದೇವೆ ಎಂದು ಎಂದು ಪ್ರಕಟಿಸಿದರೂ ವಿಪಕ್ಷಗಳ ಧರಣಿಯಿಂದಾಗಿ ಕಲಾಪ ನಡೆಸಲು ಸಾಧ್ಯವಾಗದೆ ಉಭಯ ಸದನಗಳ ಮುಖ್ಯಸ್ಥರು ಕಲಾಪವನ್ನು ಸೋಮವಾರಕ್ಕೆ ಮುಂದೂಡಿಕೆ ಮಾಡಿದರು.

Loksabha election 2024: ಎನ್‌ಡಿಎ ಜತೆ ಕೈಜೋಡಿಸಲು ಎಚ್‌ಡಿಕೆಗೆ ಸಂಪೂರ್ಣ ಅಧಿಕಾರ

ವಿಪಕ್ಷಗಳು ನಿಯಮ 267ರಡಿ ಮಣಿಪುರ ವಿಷಯದ ಬಗ್ಗೆ ಚರ್ಚೆಗೆ ಆಗ್ರಹಿಸುತ್ತಿದ್ದರೆ, ಸರ್ಕಾರವು ನಿಯಮ 176ರಡಿ ಚರ್ಚೆಗೆ ಒಪ್ಪಿದೆ. ಅದಕ್ಕೆ ವಿಪಕ್ಷಗಳು ಒಪ್ಪಿಗೆ ನೀಡದಿದ್ದುದರಿಂದ ಕಲಾಪ ನಡೆಯುತ್ತಿಲ್ಲ ಎಂದು ತಿಳಿದುಬಂದಿದೆ.

ಚರ್ಚೆ ನಡೆಯಬೇಕು-ರಾಜನಾಥ್‌:

ಲೋಕಸಭೆಯಲ್ಲಿ ಶುಕ್ರವಾರ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್‌ (Congress), ಡಿಎಂಕೆ (DMK) ಹಾಗೂ ಎಡಪಕ್ಷಗಳು ಸರ್ಕಾರದ ವಿರುದ್ಧ ಧರಣಿ ಆರಂಭಿಸಿ ಘೋಷಣೆಗಳನ್ನು ಕೂಗಿದವು. ಕಲಾಪವನ್ನು ಎರಡು ಬಾರಿ ಮುಂದೂಡಿದರೂ ಧರಣಿ ನಿಲ್ಲಲಿಲ್ಲ. ರಾಜ್ಯಸಭೆಯಲ್ಲೂ ಇದೇ ಪರಿಸ್ಥಿತಿಯಿಂದಾಗಿ ಕಲಾಪ ಮುಂದೂಡಿಕೆಯಾಯಿತು. ಲೋಕಸಭೆಯಲ್ಲಿ ಈ ಕುರಿತು ಸರ್ಕಾರದ ನಿಲುವು ತಿಳಿಸಿದ ಆಡಳಿತ ಪಕ್ಷದ ಉಪನಾಯಕ ಹಾಗೂ ರಕ್ಷಣಾ ಸಚಿವ ರಾಜನಾಥ ಸಿಂಗ್‌, ‘ಮಣಿಪುರದ ಬಗ್ಗೆ ಚರ್ಚೆ ನಡೆಯಬೇಕು ಎಂದು ನಾವು ಬಯಸುತ್ತೇವೆ. ಇದನ್ನೇ ಸರ್ವಪಕ್ಷಗಳ ಸಭೆಯಲ್ಲೂ ಹೇಳಿದ್ದೇವೆ. ಪ್ರಧಾನಿ ಮೋದಿ ಸ್ವತಃ ಮಣಿಪುರದ ಘಟನೆ ಇಡೀ ದೇಶವನ್ನು ತಲೆತಗ್ಗಿಸುವಂತೆ ಮಾಡಿದೆ ಎಂದಿದ್ದಾರೆ. ಆದರೂ ವಿಪಕ್ಷಗಳು ಅನಗತ್ಯವಾಗಿ ಗದ್ದಲ ಮಾಡಿ ಕಲಾಪ ನಡೆಯದಂತೆ ನೋಡಿಕೊಳ್ಳುತ್ತಿವೆ. ವಿಪಕ್ಷಗಳು ಈ ವಿಷಯ ಗಂಭೀರವಾಗಿ ಪರಿಗಣಿಸಬೇಕು’ ಎಂದು ಹೇಳಿದರು.

ವಿಪಕ್ಷಗಳ ಗೈರಿನಲ್ಲಿ ಮೇಲ್ಮನೆಯಲ್ಲೂ ಬಜೆಟ್‌ ಪಾಸ್‌

ಸಂಸತ್ತಿನಲ್ಲಿ ಬಿಕ್ಕಟ್ಟು ಏಕೆ?

ವಿಪಕ್ಷಗಳು ನಿಯಮ 267ರ ಅಡಿ ಮಣಿಪುರದ ಬಗ್ಗೆ ಚರ್ಚೆಗೆ ಆಗ್ರಹಿಸುತ್ತಿವೆ. ಆದರೆ ಸರ್ಕಾರವು ನಿಯಮ 176ರ ಅಡಿ ಚರ್ಚೆಗೆ ಸಿದ್ಧರಿದ್ದೇವೆ ಎಂದು ಹೇಳುತ್ತಿದೆ. ನಿಯಮ 267ರ ಅಡಿ ಚರ್ಚಿಸಿದರೆ ರಾಜ್ಯಸಭಾಧ್ಯಕ್ಷರು ಪೂರ್ವನಿರ್ಧರಿತ ಎಲ್ಲ ಕಲಾಪ ರದ್ದುಗೊಳಿಸಿ ಇದೊಂದೇ ವಿಷಯದ ಚರ್ಚೆಗೆ ಅವಕಾಶ ನೀಡಲು ಸಾಧ್ಯವಿದೆ. ಆದರೆ 176ರಡಿ ಚರ್ಚಿಸಿದರೆ ಗರಿಷ್ಠ ಎರಡೂವರೆ ತಾಸು ಮಾತ್ರ ನಿರ್ದಿಷ್ಟವಿಷಯದ ಬಗ್ಗೆ ಚರ್ಚಿಸಬಹುದು. ವಿಪಕ್ಷಗಳು ಸಂಪೂರ್ಣ ಮಣಿಪುರದ ವಿಷಯದ ಬಗ್ಗೆಯೇ ಚರ್ಚಿಸಲು ಆಗ್ರಹಿಸುತ್ತಿದ್ದು, ಸರ್ಕಾರ ಅದಕ್ಕೆ ಒಪ್ಪದಿರುವುದರಿಂದ ಬಿಕ್ಕಟ್ಟು ಸೃಷ್ಟಿಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೇವಲ 2 ನಿಮಿಷ ಮಗಳ ನೋಡಲು 11ಗಂಟೆಗೆ ಸ್ಟೇಶನ್‌ಗೆ ಬಂದ ತಂದೆ, ಭಾವುಕ ಕ್ಷಣದ ವಿಡಿಯೋ
ಬೀದಿಯಲ್ಲಿ ಬಿದ್ದಿದ್ದ ಕಲ್ಲಿಂದ ಹಣ ಮಾಡೋದು ಹೇಗೆ ಎಂದು ತೋರಿಸಿಕೊಟ್ಟ ಹುಡುಗ: ವೀಡಿಯೋ ಭಾರಿ ವೈರಲ್