
ಮೀನುಗಾರರು ಬೀಸಿರುವ ಬಲೆಗೆ ಕೋಟಿ ಕೋಟಿ ಮೌಲ್ಯದ ವಾಂತಿ ಸಿಕ್ಕಿದೆ. ಈ ವಾಂತಿ ಅಂತಿಂಥದ್ದಲ್ಲ. ಕೋಟಿ ಕೋಟಿ ಬೆಲೆ ಬಾಳುವಂಥದ್ದು. ಆದರೆ ಇದರ ಪ್ರಯೋಜವಾಗಿದ್ದು ಮೀನುಗಾರರಿಗೆ ಅಲ್ಲ, ಬದಲಿಗೆ ಸರ್ಕಾರಕ್ಕೆ! ಹೌದು. ಇದೇನಿದು ಅಂತೀರಾ? ಇದೇ ತಿಮಿಂಗಲದ ವಾಂತಿ. ಈ ವಾಂತಿ ಕೋಟಿ ಬೆಲೆ ಬಾಳುವಂಥದ್ದು. ಇಂಥದ್ದೊಂದು ವಾಂತಿ ಸಿಕ್ಕಿರೋದು ಕೇರಳದ ಕೊಯಿಲಾಂಡಿಯಲ್ಲಿ. ಆದರೆ, ಭಾರತದಲ್ಲಿ ತಿಮಿಂಗಿಲ ವಾಂತಿಯನ್ನು ಮಾರಾಟ ಮಾಡಲು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಅವಕಾಶವಿಲ್ಲ. ಅದು ಅಪರಾಧ. ಇದೇ ಕಾರಣಕ್ಕೆ, ಮೀನುಗಾರರು ಅದರ ಬಗ್ಗೆ ತಕ್ಷಣ ಕರಾವಳಿ ಪೊಲೀಸರಿಗೆ ಮಾಹಿತಿ ನೀಡಿದರು. ದೋಣಿ ಕೊಯಿಲಾಂಡಿ ಬಂದರನ್ನು ತಲುಪಿದ ತಕ್ಷಣ, ಅವರು ಅದನ್ನು ಪೆರಂಬ್ರಾ ಅರಣ್ಯ ರೇಂಜ್ ಆಫೀಸರ್‌ಗೆ ಹಸ್ತಾಂತರಿಸಲಾಯಿತು. ಅಲ್ಲಿಗೆ ಸರ್ಕಾರಕ್ಕೆ ಲಾಟರಿ ಹೊಡೆದಂತೆ ಆಗಿದೆ.
ತಿಮಿಂಗಿಲ ವಾಂತಿಗೆ 'ಅಂಬರ್ಗ್ರಿಸ್' (ambergris) ಎಂದು ಕರೆಯಲಾಗುತ್ತದೆ, ಇದು ವೀರ್ಯ ಜಾತಿಯ ತಿಮಿಂಗಿಲಗಳು ಸೇವಿಸಿದ ಆಹಾರ ಜೀರ್ಣವಾಗದೆ ಹೊರಹಾಕುವ ಮೇಣದಂಥ ಘನ ವಸ್ತುವಾಗಿದೆ. ಇದೇ ವಾಂತಿಯ ರೂಪದಲ್ಲಿ ಹೊರಕ್ಕೆ ಬರುತ್ತದೆ. ಇದೇ ಕೋಟಿ ಕೋಟಿ ಬೆಲೆ ಬಾಳುತ್ತದೆ. ಇದರ ವಿರಳತೆ ಮತ್ತು ಮೌಲ್ಯದಿಂದಾಗಿ, ಇದು 'ತೇಲುವ ಚಿನ್ನ' ಎಂದೂ ಕರೆಯಲ್ಪಡುತ್ತದೆ, ಮತ್ತು ಒಂದು ಕೆ.ಜಿ.ಗೆ ಒಂದು ಕೋಟಿ ರೂಪಾಯಿಗಿಂತ ಹೆಚ್ಚು ಬೆಲೆಬಾಳುತ್ತದೆ ಎಂದು ವರದಿಯಾಗಿದೆ. ಇದನ್ನು ಹೆಚ್ಚಾಗಿ ಸುಗಂಧ ದ್ರವ್ಯ ಉದ್ಯಮದಲ್ಲಿ ಬಳಕೆ ಮಾಡಲಾಗುತ್ತಿದೆ. ಇದಕ್ಕೆ ಕಾರಣವೂ ಇದೆ. ಅದು ಸುಗಂಧಗಳನ್ನು ಹೆಚ್ಚು ಕಾಲ ಉಳಿಯುವಂತೆ ಮಾಡುತ್ತದೆ. ಇದರ ಅರ್ಥ ಎಲ್ಲರೂ ಬಳಸುವ ಬಲು ದುಬಾರಿಯ ಪರ್ಫ್ಯೂಮ್ ತಿಮಿಂಗಲದ ವಾಂತಿಯಿಂದ ಮಾಡಿರುವಂಥದ್ದಾಗಿದೆ!
ಆರಂಭದಲ್ಲಿ ಇದು ಕಪ್ಪು ಬಣ್ಣದ, ನವಿರಾದ ವಸ್ತುವೆಂದು ತೋರುತ್ತದೆ. ಆದರೆ ಸಮುದ್ರದಲ್ಲಿ ತೇಲುತ್ತಾ ಇದ್ದಂತೆ, ಸೂರ್ಯನ ಬೆಳಕಿಗೆ ಒಡ್ಡಿಕೊಂಡಾಗ ಅದು ಗಾಢ ಬೂದು ಬಣ್ಣದಿಂದ ಬಿಳಿ ಬಣ್ಣಕ್ಕೆ ಬದಲಾಗುತ್ತದೆ. ಇದರ ವಿರಳತೆ, ಮತ್ತು ಸುಗಂಧಗಳನ್ನು ದೀರ್ಘಕಾಲ ಉಳಿಯುವಂತೆ ಮಾಡುವ ಸಾಮರ್ಥ್ಯದಿಂದಾಗಿ ಇದು ತುಂಬಾ ದುಬಾರಿಯಾಗಿದೆ. ಇದರ ಬೆಲೆ ಮತ್ತು ಮೌಲ್ಯದ ಕಾರಣದಿಂದ, ಕೆಲವರು ಅಕ್ರಮವಾಗಿ ಇದರ ವ್ಯವಹಾರ ನಡೆಸುತ್ತಿರುವುದು ಕಂಡುಬಂದಿದೆ ಮತ್ತು ಹಲವರು ಇದರ ಕಳ್ಳಸಾಗಣೆ ಪ್ರಕರಣಗಳಲ್ಲಿ ಸಿಕ್ಕಿ ಜೈಲು ಸೇರಿದ್ದಾರೆ.
ಕೊಲ್ಲಂ, ಕೋಝಿಕೋಡ್‌ನ ಕೊಯಿಲಾಂಡಿಯಲ್ಲಿ ಮೀನುಗಾರರು ಕೋಝಿಕೋಡ್‌ನಲ್ಲಿ ಇದು ಕಂಡು ಬಂದಿದೆ. ಅವರು ಗುರುಕುಲಂ ಬೀಚ್‌ನ ಸುರೇಶ್ ಮತ್ತು ಬೈಜು ಒಡೆತನದ ಗ್ಯಾಲಕ್ಸಿ ದೋಣಿಯಲ್ಲಿದ್ದರು. ಇದು ತುಂಬಾ ಅಪರೂಪವಾದರೂ, ಮೀನುಗಾರರ ಬಲೆಗೆ ಆಗೊಮ್ಮೆ ಈಗೊಮ್ಮೆ ಸಿಗುವುದು ಇದೆ. ಆದರೆ ಅವರು ಅದನ್ನು ಮಾರುವಂತಿಲ್ಲ. ಅರಣ್ಯದ ಅಧಿಕಾರಿಗಳಿಗೆ ಹಸ್ತಾಂತರಿಬೇಕು. ಒಟ್ಟಿನಲ್ಲಿ ಇದು ತಂತಾನೇ ಸಿಕ್ಕರೂ ಲಾಟರಿ ಹೊಡೆದಂತೆಯೇ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ