
ಕೋಲ್ಕತಾ (ಜು.25): ಶಿಕ್ಷಕರ ನೇಮಕಾತಿ ಹಗರಣದಲ್ಲಿ ಬಂಧಿತ ಬಂಗಾಳದ ಸಚಿವ ಪಾರ್ಥ ಚಟರ್ಜಿಯ ಮತ್ತಷ್ಟುಅವತಾರಗಳು ಬೆಳಕಿಗೆ ಬಂದಿವೆ. ಪಾರ್ಥ ಮನೆ ಮೇಲೆ ನಡೆಸಿದ ದಾಳಿ ವೇಳೆ ಶಿಕ್ಷಕ ನೇಮಕಾತಿ ಪರೀಕ್ಷೆಯ ಪ್ರವೇಶ ಪತ್ರ, ನೇಮಕಾತಿ ಪತ್ರ ಮತ್ತು ಆಸ್ತಿ ಪತ್ರಗಳು ಪತ್ತೆಯಾಗಿವೆ. ಅಲ್ಲದೇ ಅವರ ಆಪ್ತೆ ಅರ್ಪಿತಾ ಮುಖರ್ಜಿ ಮತ್ತು ಅವರ ಕಂಪನಿಯ ಹೆಸರಿನಲ್ಲಿರುವ ಅನೇಕ ದಾಖಲೆಗಳನ್ನು ಸಹ ವಶ ಪಡಿಸಿಕೊಳ್ಳಲಾಗಿದೆ ಎಂದು ಇ.ಡಿ. ತಿಳಿಸಿದೆ. ಗ್ರೂಪ್ ಸಿ ಮತ್ತು ಡಿ ನೇಮಕಾತಿಗೆ ಸಂಬಂಧಿಸಿದ ದಾಖಲಾತಿಗಳು, ಅಭ್ಯರ್ಥಿಗಳ ಅಡ್ಮಿಟ್ ಕಾರ್ಡ್, ಪರೀಕ್ಷೆಯ ಅಂತಿಮ ಫಲಿತಾಂಶ, ವೆರಿಫಿಕೇಶನ್‌ಗಾಗಿ ಕಳುಹಿಸುವ ಸೂಚನಾ ಪತ್ರಗಳು ಸೇರಿದಂತೆ ಹಲವು ದಾಖಲೆಗಳನ್ನು ಪಾರ್ಥ ಚಟರ್ಜಿ ಅವರ ಮನೆಯಲ್ಲೇ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ ಇತ್ತೀಚೆಗೆ 20 ಕೋಟಿ ನಗದು ಪತ್ತೆಯಾದ ಪಾರ್ಥ ಚಟರ್ಜಿ ಆಪ್ತೆ ಅರ್ಪಿತಾ, ತನ್ನ ಹೆಸರಲ್ಲಿ 12 ನಕಲಿ ಕಂಪನಿಗಳನ್ನು ಹೊಂದಿದ್ದಾಳೆ. ಇದನ್ನು ನಕಲಿ ವ್ಯವಹಾರಗಳಿಗೆ ಮತ್ತು ಅಕ್ರಮ ಹಣ ವರ್ಗಕ್ಕೆ ಬಳಸುತ್ತಿದ್ದ ಶಂಕೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನಾಯಿಗಳಿಗೆ ಏರ್ ಕಂಡೀಷನ್ ಫ್ಲ್ಯಾಟ್ ಒದಗಿಸಿದ್ದ ಪಾರ್ಥ!
ಪಾರ್ಥ ಚಟರ್ಜಿ ತಾನು ಸಾಕಿದ್ದ ನಾಯಿಗಳಿಗಾಗಿಯೇ ಹವಾ ನಿಯಂತ್ರಿತ ಫ್ಲಾಟ್ ಒದಗಿಸಿದ್ದರು. ಅಲ್ಲದೇ ಈ ನಾಯಿಗಳನ್ನು ನೋಡಿಕೊಳ್ಳುವುದಕ್ಕಾಗಿ ಇಬ್ಬರು ಉಸ್ತುವಾರಿಗಳನ್ನು ನೇಮಿಸಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ. ಚಟರ್ಜಿ ದಕ್ಷಿಣ ಕೋಲ್ಕತಾದ ನಕ್ತಾಲಾ ಬಳಿ ಐಶಾರಾಮಿ ಫ್ಲಾಟ್ ಹೊಂದಿದ್ದು, ಇದನ್ನು ಕೇವಲ ನಾಯಿಗಳಿಗಾಗಿಯೇ ಮೀಸಲಿಟ್ಟಿದ್ದರು. ಸಚಿವರು ಈ ಫ್ಲಾಟ್‌ನಲ್ಲಿ ವಾಸಿಸುತ್ತಿರಲಿಲ್ಲ. ಆದರೆ 3 ನಾಯಿಗಳಿಗಾಗಿ ದಿನದ 24 ಗಂಟೆಯೂ ಎ.ಸಿ. ಚಾಲನೆಯಲ್ಲಿಡುತ್ತಿದ್ದರು ಎಂದು ತಿಳಿದುಬಂದಿದೆ.
ಸಿಎಂ ದೀದಿಗೆ ಪಾರ್ಥ ನಡುರಾತ್ರಿ 3 ಕರೆ: ಹಗರಣದಲ್ಲಿ ಬಂಧಿತರಾಗಿರುವ ಪಾರ್ಥ ಚಟರ್ಜಿ ಮಧ್ಯರಾತ್ರಿ ಬಂಗಾಳ ಮುಖ್ಯಮಂತ್ರಿ ಮಮತಾಗೆ 3 ಬಾರಿ ಕರೆ ಮಾಡಿದ್ದಾರೆ. ಆದರೆ ಮೂರೂ ಕರೆಗಳಿಗೂ ಮಮತಾ ಉತ್ತರಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರಿಗೆ ಕುಟುಂಬಕ್ಕೆ ಕರೆ ಮಾಡಿ ಬಂಧನವಾಗಿರುವ ವಿಷಯ ತಿಳಿಸಲು ನೀಡಿರುವ ಅವಕಾಶ ಬಳಸಿಕೊಂಡು ಪಾರ್ಥ ಅವರು ಮಮತಾ ಅವರಿಗೆ ಕರೆ ಮಾಡಿದ್ದಾರೆ. ಮೊದಲ ಬಾರಿಗೆ ಅವರು ಮಧ್ಯರಾತ್ರಿ 2.33ಕ್ಕೆ ನಂತರ 3.37 ಮತ್ತು ಮುಂಜಾನೆ 9.35ಕ್ಕೆ ಕರೆಗಳನ್ನು ಮಾಡಿದ್ದಾರೆ. ಆದರೆ ಯಾವುದೇ ಕರೆಗೂ ಮುಖ್ಯಮಂತ್ರಿ ಉತ್ತರಿಸಿಲ್ಲ.
ಪಶ್ಚಿಮ ಬಂಗಾಳದಲ್ಲಿ ಸರ್ಕಾರದ ಹಣದ ಲೂಟಿ: ಸಚಿವ ರಾಜೀವ್ ಚಂದ್ರಶೇಖರ್ ವಾಗ್ದಾಳಿ
ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ: ಶಿಕ್ಷಕ ನೇಮಕಾತಿ ಹಗರಣದಲ್ಲಿ ಸಚಿವ ಪಾರ್ಥ ಚಟರ್ಜಿ ಬಂಧನವಾದ 2 ದಿನದ ಬಳಿಕ, ಯಾರೇ ತಪ್ಪು ಮಾಡಿದ್ದರೂ ಅವರು ಶಿಕ್ಷೆ ಅನುಭವಿಸಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ನಮಗೆ ನ್ಯಾಯಾಂಗದ ಮೇಲೆ ಸಂಪೂರ್ಣ ವಿಶ್ವಾಸವಿದೆ. ಕಾಲಮಿತಿಯೊಳಗೆ ಸತ್ಯ ಮತ್ತು ನ್ಯಾಯಾಲಯದ ತೀರ್ಪು ಹೊರಬೀಳಬೇಕು. ಯಾರಾದರೂ ತಪ್ಪು ಮಾಡಿರುವುದು ಸಾಬೀತಾದರೆ, ಶಿಕ್ಷೆ ಅನುಭವಿಸಬೇಕು. ಪಕ್ಷವೂ ಕ್ರಮ ಕೈಗೊಳ್ಳುತ್ತದೆ. ನನ್ನ ವಿರುದ್ಧದ ದುರುದ್ದೇಶಪೂರಿತ ಅಪಪ್ರಚಾರವನ್ನು ನಾನು ಖಂಡಿಸುತ್ತೇನೆ’ ಎಂದು ಹೇಳಿದ್ದಾರೆ.
ಇಡಿ ಕಸ್ಟಡಿ ಬೆನ್ನಲ್ಲೇ ಆಸ್ಪತ್ರೆಗೆ ದಾಖಲಾದ ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ
21 ಕೋಟಿ ಹಣ ಹೊಂದಿದ್ದ ಪಾರ್ಥ ಆಪ್ತೆ ತ್ರಿಭಾಷಾ ನಟಿ
21 ಕೋಟಿ ರು. ನಗದಿನ ರಾಶಿಯ ಕಾರಣಕ್ಕೆ ಸುದ್ದಿಯಲ್ಲಿರುವ ಅರ್ಪಿತಾ ಮುಖರ್ಜಿ ಬಂಗಾಳ, ಒಡಿಯಾ ಹಾಗೂ ತಮಿಳು ಭಾಷೆ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಪಾರ್ಥ ಚಟರ್ಜಿ ಅವರ ‘ಅತ್ಯಂತ ನಿಕಟವರ್ತಿ’. ಕೋಲ್ಕತಾದಲ್ಲಿ ನಾಕ್ತಲ ಉದಯನ್ ಸಂಘ ಎಂಬ ದುರ್ಗಾ ಪೂಜಾ ಸಮಿತಿ ಇದೆ. ಅದಕ್ಕೆ ಪಾರ್ಥ ಚಟರ್ಜಿಯೇ ಮುಖ್ಯಸ್ಥ. 10 ವರ್ಷಗಳ ಹಿಂದಿನಿಂದಲೂ ಅರ್ಪಿತಾ ಹಾಗೂ ಪಾರ್ಥ ಅವರ ನಡುವೆ ಒಡನಾಟವಿತ್ತು. ದುರ್ಗಾ ಪೂಜೆಯ ಪ್ರಚಾರ ಅಭಿಯಾನಗಳಲ್ಲಿ ಪಾರ್ಥ ಕೃಪೆಯಿಂದಾಗಿ ಅರ್ಪಿತಾ ಸ್ಥಾನ ಪಡೆದಿದ್ದರು. ಅರ್ಪಿತಾ ಮನೆಗೂ ಪದೇ ಪದೇ ಪಾರ್ಥ ಭೇಟಿ ಕೊಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ