
ನವದೆಹಲಿ: ರಾಜ್ಯದಲ್ಲಿ ಟಿಎಂಸಿ ಪಕ್ಷ ನೆಲೆ ಕಳೆದುಕೊಂಡ ಬಳಿಕ ಬಂಡಾಯವೆದ್ದಿರುವ ಲೋಕಸಭೆಯ 19 ಸಂಸದರು ಇದೀಗ ತಮ್ಮ ಬಣವನ್ನೇ ಅಸಲಿ ಟಿಎಂಸಿ ಎಂದು ಗುರುತಿಸುವಂತೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾರ ಬಳಿ ಸೋಮವಾರ ಮನವಿ ಮಾಡಲು ಸಜ್ಜಾಗಿದ್ದಾರೆ. ಒಂದು ವೇಳೆ ಇದಕ್ಕೆ ಸ್ಪೀಕರ್ ಸಮ್ಮತಿಸಿದರೆ 28 ವರ್ಷಗಳ ಹಿಂದೆ ತಾವೇ ಸ್ಥಾಪಿಸಿದ್ದ ಪಕ್ಷದಿಂದ ಮಮತಾ ಹೊರಬೀಳುವುದು ಬಹುತೇಕ ಖಚಿತವಾಗಲಿದೆ.
ಈ ಬಗ್ಗೆ ಬಂಡಾಯ ಬಣದ ಸಂಸದ ಜಗದೀಶ್ ಚಂದ್ರ ಬರ್ಮಾ ಮಾತನಾಡಿ, ‘ಈ ಬಗ್ಗೆ ಈಗಾಗಲೇ ಪತ್ರ ಸಲ್ಲಿಸಿದ್ದೇವೆ. ಸೋಮವಾರ ನಾವು ಸ್ಪೀಕರ್ ಬಳಿ ಹೋಗಿ ನಿಜವಾದ ಟಿಎಂಸಿ ಸಂಸದೀಯ ಗುಂಪನ್ನು ರಚಿಸಲು ಹಕ್ಕು ಮಂಡಿಸುತ್ತೇವೆ ಹಾಗೂ ನಮಗೆ ಮಾನ್ಯತೆ ಕೊಡುವಂತೆ ವಿನಂತಿಸುತ್ತೇವೆ’ ಎಂದು ಹೇಳಿದ್ದಾರೆ. ಈ ಸಂಬಂಧ ಈಗಾಗಲೇ 19 ಸಂಸದರ ಸಹಿ ಸಂಗ್ರಹಿಸಲಾಗಿದೆ ಎಂದೂ ತಿಳಿಸಿದ್ದಾರೆ. ಇವರ ಸಂಖ್ಯೆ 3ನೇ 2ಕ್ಕಿಂತ ಅಧಿಕವಿರುವ ಕಾರಣ ಮಾನ್ಯತೆ ಸಿಗುವ ಸಾಧ್ಯತೆ ಹೆಚ್ಚಿದೆ. ಕಾಕೋಲಿ ಘೋಷ್ ಈ ಬಣದ ನೇತೃತ್ವ ವಹಿಸಲಿದ್ದಾರೆ ಎನ್ನಲಾಗಿದೆ.
ಅತ್ತ ಸಂಸದೆ ಶತಾಬ್ದಿ ರಾಯ್, ‘ಮಮತಾ ಬ್ಯಾನರ್ಜಿ ಅವರು ನಮ್ಮನ್ನು ಸಂಪರ್ಕಿಸಿಲ್ಲ. ಅವರ ಬಳಿಯೀಗ ಕೇವಲ 6-7 ಸಂಸದರಿದ್ದಾರೆ’ ಎಂದು ಹೇಳಿದ್ದಾರೆ.
ಇದುವರೆಗೂ ಬಂಡಾಯ ಬಣದ ಸಂಸದರು, ಮಮತಾರನ್ನು ಪಕ್ಷದಿಂದ ಹೊರಹಾಕುವ ಬಗ್ಗೆ ಬಹಿರಂಗವಾಗಿ ಎಲ್ಲೂ ಹೇಳಿಲ್ಲ. ಆದರೆ ಒಂದು ವೇಳೆ ಸ್ಪೀಕರ್ ಬಂಡಾಯ ಬಣಕ್ಕೆ ಮಾನ್ಯತೆ ನೀಡಿದರೆ ಆಗ ಮಮತಾ ಕೋರ್ಟ್ ಮೆಟ್ಟಿಲೇರಬಹುದು. ಅಲ್ಲೂ ಸೋಲಾದರೆ ಆಗ ಬಂಡಾಯ ಬಣ ಮಮತಾರನ್ನು ಹೊರಹಾಕಬಹುದು ಇಲ್ಲವೇ ಅವರೇ ಪಕ್ಷದಿಂದ ಹೊರಬೀಳಬಹುದು.
ಮಾರ್ಚ್‌ನಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣಾ ಪ್ರಚಾರದ ವೇಳೆ ಪ್ರಚೋದನಾತ್ಮಕ ಮತ್ತು ಕೋಮು ಸಂಘರ್ಷಕ್ಕೀಡು ಮಾಡುವ ಹೇಳಿಕೆ ನೀಡಿದ ಆರೋಪದಲ್ಲಿ ಬಂಗಾಳದ ಮಾಜಿ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಧರ್ಮತಾಲದಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಒಂದು ನಿರ್ದಿಷ್ಟ ಸಮುದಾಯ ಹಿಂದೂಗಳ ಮೇಲೆ ದಾಳಿ ಮಾಡಿದರೆ ಹಿಂದೂಗಳನ್ನು 5 ನಿಮಿಷದಲ್ಲಿ ಮುಗಿಸಿ ಬಿಡಬಹುದು ಎಂದಿದ್ದರು. ಇದು ಸಾಮಾಜಿಕ ಶಾಂತಿ ಮತ್ತು ಕೋಮು ಸೌಹಾರ್ದತೆಯನ್ನು ಕದಡುತ್ತದೆ ಎಂದು ಮಮತಾ ವಿರುದ್ಧ ಉದ್ಯಮಿಯೊಬ್ಬರು ದೂರು ದಾಖಲಿಸಿದ್ದರು. ಈ ದೂರಿನ ಆಧಾರದಲ್ಲಿ ಹರೇ ಸ್ಟ್ರೀಟ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಪ್ರಬಲ ಪಕ್ಷವಾಗಿ ಬೆಳೆದು 15 ವರ್ಷ ಅಧಿಕಾರ ನಡೆಸಿದ ಟಿಎಂಸಿ ಇಬ್ಭಾಗವಾಗುವ ಅಂಚಿನಲ್ಲಿರುವ ಹೊತ್ತಿನಲ್ಲಿ, ಅದರ ಯಾವ ಬಣವನ್ನು ಅಸಲಿಯೆಂದು ಗುರುತಿಸಲಾಗುವುದು ಹಾಗೂ ಆಸ್ತಿಯು ಯಾರ ಪಾಲಾಗುತ್ತದೆ ಎಂಬ ಪ್ರಶ್ನೆ ಎದ್ದಿದೆ.
2025ರಲ್ಲಿ ಸಲ್ಲಿಸಿದ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡುವ ವೇಳೆ, 2024-25ರಲ್ಲಿ ತನ್ನ ಆದಾಯ 219.35 ಕೋಟಿ ರು. ಎಂದು ಟಿಎಂಸಿ ಘೋಷಿಸಿತ್ತು. ಇದರಲ್ಲಿ 184.08 ಕೋಟಿ ರು. ದೇಣಿಗೆ, 33.685 ಕೋಟಿ ರು. ಎಫ್‌ಡಿಯ ಬಡ್ಡಿ ಆಗಿದೆ. ಚುನಾವಣಾ ಬಾಂಡ್‌ಗಳು ರದ್ದಾಗುವ ಮುನ್ನ 2029-24ರ ನಡುವೆ ಅವುಗಳ ಮೂಲಕ ಟಿಎಂಸಿ 1,609.5 ಕೋಟಿ ರು. ಸಂಗ್ರಹಿಸಿತ್ತು. 2025-26ನೇ ಸಾಲಿನ ಗಳಿಕೆ ಘೋಷಣೆಯಾಗಿಲ್ಲವಾದರೂ, ಎಡಿಆರ್ ವರದಿಯಲ್ಲಿ, ದೇಶದಲ್ಲಿರುವ 36 ಪ್ರಾದೇಶಿಕ ಪಕ್ಷಗಳ ಪೈಕಿ ಟಿಡಿಪಿಯ ಬಳಿಕ ಅತಿಹೆಚ್ಚು ಆಸ್ತಿ ಇರುವುದು ಟಿಎಂಸಿಯ ಬಳಿ ಎನ್ನಲಾಗಿತ್ತು.
ಈಗಾಗಲೇ 56 ಶಾಸಕರೊಂದಿಗೆ ಬಂಡಾಯ ಎದ್ದಿದ್ದ ಋತಬ್ರತ ಬ್ಯಾನರ್ಜಿ ಅವರನ್ನು ವಿಪಕ್ಷ ನಾಯಕನೆಂದು ಘೋಷಿಸಲಾಗಿದೆ. ಹೀಗಿರುವಾಗ ಪಕ್ಷವು ಅಧಿಕೃತವಾಗಿ 2 ಭಾಗವಾದರೆ, ಯಾವುದಾದರೂ ಒಂದು ಬಣಕ್ಕೆ ಚುನಾವಣಾ ಆಯೋಗವು 2 ಹೂಗಳ ಚಿಹ್ನೆಯನ್ನು ನೀಡುತ್ತದೆ. ಆಗ ಪಕ್ಷದ ಪೂರ್ಣ ಆಸ್ತಿ ಆ ಬಣಕ್ಕೇ ಸೇರುತ್ತದೆ. ಒಂದೊಮ್ಮೆ ಬಂಡಾಯವೆದ್ದವರ ಬಣವೇ ಅಸಲಿ ಟಿಎಂಸಿ ಎಂದು ಗುರುತಿಸಲ್ಪಟ್ಟು, ಅದು ಮುಂದೆ ಬಿಜೆಪಿ ಜತೆ ವಿಲೀನವಾದರೆ, ಟಿಎಂಸಿಯ ನಿಧಿಯೂ ಬಿಜೆಪಿ ಪಾಲಾಗುತ್ತದೆ.
ಇತ್ತೀಚಿನ ವಿಧಾನಸಭೆ ಚುನಾವಣೆ ಬಳಿಕ ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ನಾಟಕೀಯ ಬೆಳವಣಿಗೆಗಳು ಆಗುತ್ತಿರುವ ನಡುವೆ 4 ಸಾವಿರ ಮತಪೆಟ್ಟಿಗೆಗಳನ್ನು(ಇವಿಎಂ) ಇಟ್ಟಿದ್ದ ಕಟ್ಟಡಕ್ಕೆ ಬುಧವಾರ ಬೆಂಕಿ ಬಿದ್ದಿದೆ. ಇವುಗಳಲ್ಲಿ 10 ಕ್ಷೇತ್ರಗಳ ಮತ ಶೇಖರಣೆಯಾಗಿದ್ದವು ಎಂದು ತಿಳಿದುಬಂದಿದೆ. 24 ತಾಸಿನ ಬಳಿಕ ನಂದಿದ ಬೆಂಕಿಯು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ತನಿಖೆಗೆ ಕೋಲ್ಕತಾ ಪೊಲೀಸರು ಎಸ್‌ಐಟಿ ರಚಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಸಚಿವ ಕೌಶಿಕ್ ಚೌಧರಿ, ‘ಇದು ಸಹಜವಾಗಿ ಉಂಟಾದ ಬೆಂಕಿಯಂತೆ ಕಾಣುತ್ತಿಲ್ಲ. ಮೊದಲಿಗೆ ಕಟ್ಟಡದ 2 ಮತ್ತು 3ನೇ ಮಹಡಿಯಲ್ಲಿ ಕಾಣಿಸಿಕೊಂಡ ಅಗ್ನಿ, ಮಧ್ಯದ ಅಂತಸ್ತುಗಳಿಗೆ ಹಾನಿ ಮಾಡದೆ 7 ಮತ್ತು 8ನೇ ಮಹಡಿ ತಲುಪಿದ್ದು ಹೇಗೆ?’ ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ