ದೀದಿ ಅಧಿಕಾರ ಸ್ವೀಕಾರಕ್ಕೆ ಕ್ಷಣಗಣನೆ, ಸತತ 3ನೇ ಬಾರಿಗೆ ಪ.ಬಂಗಾಳ ಸಿಎಂ!

By Kannadaprabha NewsFirst Published May 4, 2021, 8:05 AM IST
Highlights

ನಾಳೆ ಮಮತಾ ಬ್ಯಾನರ್ಜಿ ಅಧಿಕಾರ ಸ್ವೀಕಾರ| ಸತತ 3ನೇ ಬಾರಿಗೆ ಪ.ಬಂಗಾಳ ಮುಖ್ಯಮಂತ್ರಿ| ಟಿಎಂಸಿ ಶಾಸಕಾಂಗ ನಾಯಕಿಯಾಗಿ ಆಯ್ಕೆ

ಕೋಲ್ಕತಾ(ಮೇ.04): ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ ಅಭೂತಪೂರ್ವ ದಾಖಲೆಯ ದಿಗ್ವಿಜಯ ಸಾಧಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯಾಗಿ ಮಮತಾ ಬ್ಯಾನರ್ಜಿ ಬುಧವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಮೂಲಕ ಹ್ಯಾಟ್ರಿಕ್‌ ಅವಧಿಗೆ ಅವರು ಮುಖ್ಯಮಂತ್ರಿಯಾಗಿ ಗದ್ದುಗೆ ಏರಲಿದ್ದಾರೆ.

ಸೋಮವಾರ ನಡೆದ ಸಭೆಯಲ್ಲಿ ಮಮತಾ ಅವರನ್ನು ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಶಾಸಕಾಂಗ ಪಕ್ಷದ ನಾಯಕಿಯನ್ನಾಗಿ ಆಯ್ಕೆ ಮಾಡಲಾಯಿತು ಎಂದು ಪಕ್ಷದ ಹಿರಿಯ ನಾಯಕ ಪಾರ್ಥ ಚಟರ್ಜಿ ತಿಳಿಸಿದ್ದಾರೆ.

ಮೇ 6ರಂದು ನೂತನ ಶಾಸಕರ ಪ್ರಮಾಣವಚನ ಕೂಡ ನಿಗದಿಯಾಗಿದೆ. ನಿರ್ಗಮಿತ ವಿಧಾನಸಭಾಧ್ಯಕ್ಷ ಬಿಮನ್‌ ಬ್ಯಾನರ್ಜಿ ಅವರನ್ನು ಹಂಗಾಮಿ ಸ್ಪೀಕರ್‌ ಸ್ಥಾನಕ್ಕೆ ಸೂಚಿಸಲು ಕೂಡ ಸಭೆ ನಿರ್ಧರಿಸಿತು ಎಂದು ಚಟರ್ಜಿ ಹೇಳಿದ್ದಾರೆ.

ಪ.ಬಂಗಾಳದಲ್ಲಿ ಟಿಎಂಸಿ ಗೆದ್ದರೂ ನಂದಿಗ್ರಾಮದಲ್ಲಿ ಮಮತಾ ಅವರು ತಮ್ಮ ಮಾಜಿ ಆಪ್ತ, ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ವಿರುದ್ಧ ಸುಮಾರು 1900 ಮತಗಳಿಂದ ಸೋತಿದ್ದರು. ಹೀಗಾಗಿ ಅವರು ಮುಖ್ಯಮಂತ್ರಿಯಾಗಲು ಒಪ್ಪುತ್ತಾರಾ ಎಂಬ ಪ್ರಶ್ನೆ ಉದ್ಭವವಾಗಿತ್ತು. ಆದರೆ ಸೋಮವಾರದ ಶಾಸಕಾಂಗ ಸಭೆ ಈ ಎಲ್ಲ ಊಹಾಪೋಹಕ್ಕೆ ತೆರೆ ಇಳಿದಿದೆ.

ದೀದಿ ಮಂದೇನು?:

ಪಶ್ಚಿಮ ಬಂಗಾಳದಲ್ಲಿ ವಿಧಾನ ಪರಿಷತ್ತು ಇಲ್ಲ. ಹೀಗಾಗಿ ಅನ್ಯ ರಾಜ್ಯಗಳ ಕೆಲವು ಮುಖ್ಯಮಂತ್ರಿಗಳಂತೆ (ಉದಾ: ಉದ್ಧವ್‌ ಠಾಕ್ರೆ, ನಿತೀಶ್‌ ಕುಮಾರ್‌) ಮಮತಾ ಅವರಿಗೆ ಪರಿಷತ್‌ ಸದಸ್ಯೆಯಾಗಿ ಸದನ ಪ್ರವೇಶಿಸಲು ಸಾಧ್ಯವಿಲ್ಲ. ಹೀಗಾಗಿ ಮುಂದಿನ 6 ತಿಂಗಳಲ್ಲಿ ಅವರು ವಿಧಾನಸಭೆಗೆ ಆಯ್ಕೆಯಾಗಲೇಬೇಕು. ಅಭ್ಯರ್ಥಿಗಳ ನಿಧನದ ಕಾರಣ ಬಂಗಾಳದಲ್ಲಿ 2 ಕ್ಷೇತ್ರದಲ್ಲಿ ಚುನಾವಣೆ ನಡೆದಿಲ್ಲ. ಅಲ್ಲಿ ಅವರು ಸ್ಪರ್ಧಿಸಬೇಕು ಅಥವಾ ತಮ್ಮದೇ ಯಾರಾದರೂ ಶಾಸಕರ ರಾಜೀನಾಮೆ ಕೊಡಿಸಿ ಅವರು ಚುನಾವಣೆಗೆ ನಿಲ್ಲಬೇಕು ಹಾಗೂ ಆಯ್ಕೆಯಾಗಬೇಕು.

click me!