
ಕೋಲ್ಕತಾ: ಎರಡಕ್ಕಿಂತ ಹೆಚ್ಚು ಮದುವೆ, ಮಕ್ಕಳಿಗೆ ಕಡ್ಡಾಯ ಲಸಿಕೆ ಹಾಕಲು ನಿರಾಕರಿಸುವವರು, ನಿರ್ದಿಷ್ಟ ಧಾರ್ಮಿಕ ಶಿಕ್ಷಣ ಸಂಸ್ಥೆಗಳಿಗೆ ಸೇರಲು ಸರ್ಕಾರಿ ಶಾಲೆ ಬಿಟ್ಟವರು ಅಥವಾ ಭಾರತೀಯ ಪ್ರಜೆಗಳಲ್ಲದವರಿಗೆ ಇನ್ನು ಮುಂದೆ ಪಶ್ಚಿಮ ಬಂಗಾಳದಲ್ಲಿ ರಾಜ್ಯ ಸರ್ಕಾರಿ ಕಲ್ಯಾಣ ಯೋಜನೆಯ ಸೌಲಭ್ಯಗಳು ಸಿಗುವುದಿಲ್ಲ!
ಸರ್ಕಾರಿ ಕಲ್ಯಾಣ ಯೋಜನೆಗಳ ಕುರಿತು ಪುನರ್ ಪರಿಶೀಲನಾ ಸಭೆ ನಡೆಸಿದ ಬಳಿಕ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಇಂಥ ನಿರ್ಧಾರ ಪ್ರಕಟಿಸಿದ್ದಾರೆ.
ಸರ್ಕಾರಿ ಕಲ್ಯಾಣ ಯೋಜನೆಗಳು ಕೇವಲ ಅರ್ಹರಿಗಷ್ಟೇ ತಲುಪಬೇಕೆಂಬ ಉದ್ದೇಶದಿಂದ ಪಶ್ಚಿಮ ಬಂಗಾಳ ಸರ್ಕಾರ ಇಂಥ ಕಠಿಣ ಷರತ್ತುಗಳನ್ನು ಹಾಕುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ.
ಮಕ್ಕಳಿಗೆ ಸರ್ಕಾರ ಕಡ್ಡಾಯ ಮಾಡಿದ ಲಸಿಕೆಗಳನ್ನು ಹಾಕಿಸದ ಪೋಷಕರು ಅಥವಾ ಪಾಲಕರು ಕರ್ನಾಟಕದ ಗೃಹ ಲಕ್ಷ್ಮಿ ಮಾದರಿಯ ಅನ್ನಪೂರ್ಣ ಯೋಜನೆಗೆ ಅನರ್ಹರಾಗುತ್ತಾರೆ. ಇದಲ್ಲದೆ ಯೋಜನೆಯ ಅರ್ಜಿಯಲ್ಲಿ 4 ಮಕ್ಕಳವರೆಗೆ ಲಸಿಕೆ ಹಾಕಿಸಿರುವ ಕುರಿತು ವಿವರ ನೀಡಬೇಕು. ಅಲ್ಲದೆ ಮಕ್ಕಳು ಯಾವ ಶಾಲೆಗೆ (ಅಂದರೆ ಸರ್ಕಾರಿ, ಸರ್ಕಾರೇತರ, ಸರ್ಕಾರಿ ಅನುದಾನಿತ ಅಥವಾ ಮದ್ರಸಾ ಶಾಲೆ) ತೆರಳುತ್ತಿದ್ದಾರೆ ಎಂಬ ಕುರಿತು ಸ್ಪಷ್ಟ ಮಾಹಿತಿ ನೀಡುವುದು ಕಡ್ಡಾಯ.
ಇನ್ನು ನಿರ್ದಿಷ್ಟ ಧಾರ್ಮಿಕ ಸಂಸ್ಥೆಗಳಿಗೆ ಸೇರುವ ಉದ್ದೇಶದಿಂದ ಶಾಲೆ ತೊರೆದಿರುವ ವ್ಯಕ್ತಿಗಳು ಹಣಕಾಸು ನೆರವನ್ನು ಕಳೆದುಕೊಳ್ಳಲಿದ್ದಾರೆ, ಇದರ ಜತೆಗೆ ಧರ್ಮದ ಆಧಾರದ ಮೇಲೆ ಜಾರಿಗೆ ತಂದಿರುವ ಎಲ್ಲಾ ಹಣಕಾಸು ಸೌಲಭ್ಯ ಯೋಜನೆಗಳನ್ನು ಇದೇ ವೇಳೆ ಸರ್ಕಾರ ರದ್ದು ಮಾಡಿದೆ.
ಸರ್ಕಾರವು 30 ಲಕ್ಷ ಅನರ್ಹಫಲಾನುಭವಿಗಳ ಪತ್ತೆಗಾಗಿ ಪರಿಶೀಲನಾ ಕಾರ್ಯವನ್ನೂ ಆರಂಭಿಸಿದೆ. ಹೊಸ ಅರ್ಜಿಯಲ್ಲಿ ಆಧಾರ್, ರೇಷನ್ ಕಾರ್ಡ್, ಆಸ್ತಿ ಮತ್ತು ಕುಟುಂಬ ಸದಸ್ಯರು ಸರ್ಕಾರಿ ನೌಕರಿಯಲ್ಲಿದ್ದಾರೆಯೇ, ಇಲ್ಲವೇ ಎಂಬ ಕುರಿತು ಮಾಹಿತಿ ನೀಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ