
ಪುಣೆ(ಜು.01) ಪ್ರವಾಸಿ ತಾಣದಲ್ಲಿ ನೀರಿನಲ್ಲಿ ಕೊಚ್ಚಿ ಹೋದ ಕುಟುಂಬದ ಘಟನೆ ಕಣ್ಣೆದುರಿಗೆ ಇರುವಾಗಲೇ ಇದೀಗ ಮತ್ತೊಂದು ದುರಂತ ನಡದಿದೆ. ಧುಮ್ಮಿಕ್ಕುತ್ತಿರುವ ಜಲಪಾತ ನೀರಿಗೆ ಹಾರಿ ಸಾಹಸ ಮಾಡಲು ಮುಂದಾದ ಯುವಕ ನೀರಿನಲ್ಲಿ ಕೊಚ್ಚಿ ಹೋದ ಘಟನೆ ಪುಣೆಯಲ್ಲಿ ನಡೆದಿದೆ. ನೀರಿನ ರಭಸದ ನಡುವೆ ಈಜಿ ದಡ ಸೇರುವ ನಡೆಸಿದ ಪ್ರಯತ್ನ ಕೈಗೂಡಲಿಲ್ಲ. ಇನ್ನೇನು ದಡ ಸೇರಬೇಕು ಅನ್ನುವಷ್ಟರಲ್ಲೇ ಕೊಚ್ಚಿ ಹೋಗಿದ್ದಾನೆ. ಆತನ ಗೆಳೆಯರು ನೋಡುತ್ತಿದ್ದಂತೆ ನೀರಿನಲ್ಲಿ ಕಣ್ಮರೆಯಾಗಿದ್ದಾನೆ. ಈ ಭೀಕರ ಘಟನೆ ವಿಡಿಯೋ ಸೆರೆಯಾಗಿದೆ.
ಪುಣೆಯ ಭೋಸಾರಿ ಗ್ರಾಮದ ಸ್ವಪ್ನಿಲ್ ಧಾವಡೆ ನೀರಿನಲ್ಲಿ ಕೊಚ್ಚಿ ಹೋದ ದುರ್ದೈವಿ. ಸ್ವಪ್ನಿಲ್ ಸೇರಿದಂತೆ 32 ಮಂದಿ ಜಿಮ್ ಅಭ್ಯಾಸ ಮಾಡುತ್ತಿದ್ದ ಪರಿಚಯಸ್ಥರು ವೀಕೆಂಡ್ ಟ್ರಿಪ್ ಹೊರಟಿದ್ದಾರೆ. ಪುಣೆಯ ತಮ್ಹಿನಿ ಘಾಟ್‌ಗೆ ಟ್ರೆಕ್ ಮಾಡಿ ನೀರಿನಲ್ಲಿ ಆಟವಾಡಲು ತೆರಳಿದ್ದಾರೆ. ಪುಣೆಯ ಅಪಾಯಾಕಾರಿ ಜಲಪಾತಗಳಲ್ಲಿ ತಮ್ಹಿನಿ ಘಾಟ್ ಕೂಡ ಒಂದು.
ಕೊನೆಯ ಕ್ಷಣದ ಭೀಕರ ದೃಶ್ಯ, ಏಕಾಏಕಿ ಹೆಚ್ಚಾದ ನೀರಿನಲ್ಲಿ ಕೊಚ್ಚಿ ಹೋದ 4 ಮಕ್ಕಳು, ಮಹಿಳೆ!
32 ಸದಸ್ಯರ ತಂಡ ಈ ಜಲಪಾತ ವೀಕ್ಷಣೆ ಹಾಗೂ ವೇಕೆಂಡ್ ಎಂಜಾಯ್ ಮಾಡಲು ತೆರಳಿದ್ದಾರೆ. ನೀರಿನಲ್ಲಿ ಆಡುತ್ತಾ ಸಾಹಸ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಈ ವೇಳೆ ಗೆಳೆಯರು ವಿಡಿಯೋ ಶೂಟ್ ಮಾಡಿದ್ದಾರೆ. ಸಾಹಸದ ರೀಲ್ಸ್ ಮಾಡಲು ಮುಂದಾಗ ಸ್ವಪ್ನಿಲ್ ಧಾವಡೆ ಧುಮ್ಮಿಕ್ಕುತ್ತಿದ್ದ ಜಲಪಾತದ ನೀರಿಗೆ ಹಾರಿದ್ದಾನೆ.
ಹಾರಿದ ಬಳಿಕ ನೀರಿನ ಮೇಲಕ್ಕೆ ಬಂದು ಈಜಲು ಆರಂಭಿಸಿದ್ದಾನೆ. ಆದರೆ ನೀರಿನ ರಭಸ ಹೆಚ್ಚಾದ ಕಾರಣ ಸುಲಭಾಗಿರಲಿಲ್ಲ. ಕೆಲವೇ ಅಂತರದಲ್ಲಿ ದಡದ ಕಲ್ಲು ಬಂಡೆ ಹಿಡಿದು ದಡ ಸೇರಲು ಪ್ರಯತ್ನಿಸಿದ್ದಾನೆ. ಆದರೆ ಸಾಧ್ಯವಾಗಿಲ್ಲ. ಬಂಡೆ ಹಿಡಿದರೂ ದಡ ಸೇರಲು ಸಾಧ್ಯವಾಗಲಿಲ್ಲ. ಪರಿಣಾಮ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ.
ಪುಣೆಯಲ್ಲಿ ನೀರಿನ ಪ್ರವಾಹದಲ್ಲಿ ಒಂದೇ ಕುಟುಂಬದ ಐವರು ಕೊಚ್ಚಿ ಹೋದ ಬೆನ್ನಲ್ಲೇ ಇದೀಗ ಪುಣೆಯಲ್ಲೇ ನಡೆದ ಈ ಘಟನೆ ಬೆಳಕಿಗೆ ಬಂದಿದೆ. ಭಾನುವಾರ ಲೋನಾವಳದ ಭೂಶಿ ಅಣೆಕಟ್ಟಿನ ಹಿನ್ನೀರಿನಲ್ಲಿ ಉಂಟಾದ ಪ್ರವಾಹದಲ್ಲಿ 4 ಮಕ್ಕಳು, ಓರ್ವ ಮಹಿಳೆ ಸೇರಿ ಐವರು ಭಾನುವಾರ ಮಧ್ಯಾಹ್ನ ಕೊಚ್ಚಿಕೊಂಡು ಹೋಗಿದ್ದರು. ಜನಪ್ರಿಯ ಪ್ರವಾಸಿ ತಾಣದಲ್ಲಿ ನೀರಿನ ಮಟ್ಟದಲ್ಲಿ ಹಠಾತ್ ಏರಿಕೆಯಿಂದಾಗಿ ಘಟನೆ ಸಂಭವಿಸಿತ್ತು. 36 ವರ್ಷದ ಮಹಿಳೆ ಮತ್ತು 13 ಮತ್ತು 8 ವರ್ಷದ ಇಬ್ಬರು ಬಾಲಕಿಯರ ಶವಗಳು ಪತ್ತೆಯಾಗಿವೆ. 9 ವರ್ಷದ ಬಾಲಕ ಮತ್ತು 4 ವರ್ಷದ ಬಾಲಕಿಗಾಗಿ ಶೋಧ ಮುಂದವರಿದಿತ್ತು.
ಮಳೆಗಾಲದಲ್ಲಿ ಕರ್ನಾಟಕದ 1763 ಗ್ರಾಮಗಳಲ್ಲಿ ಪ್ರವಾಹ ಭೀತಿ..!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ