ವಾಹನ ಚಲಾಯಿಸುವವರಿಗೆ ಮಾಸ್ಕ್, ನಿಯಮ ಮತ್ತಷ್ಟು ಕಠಿಣ!

By Suvarna NewsFirst Published Oct 28, 2020, 7:33 AM IST
Highlights

 ಕಾರಲ್ಲಿ ಗ್ಲಾಸ್‌ ಏರಿಸಿದ್ರೂ ಮಾಸ್ಕ್‌ ಕಡ್ಡಾಯ!| ಒಬ್ಬರೇ ಕಾರಲ್ಲಿದ್ದರೂ ಮಾಸ್ಕ್‌ ಧರಿಸಲೇಬೇಕು| 5 ವರ್ಷದ ಒಳಗಿನ ಮಕ್ಕಳಿಗೆ ಕಡ್ಡಾಯವಲ್ಲ|‘ಮಾಸ್ಕ್‌ ಧಾರಣೆ’ ಗೊಂದಲಗಳ ಬಗ್ಗೆ ಬಿಬಿಎಂಪಿ ಸ್ಪಷ್ಟನೆ

 ಬೆಂಗಳೂರು(ಅ.28): ಕಾರಿನಲ್ಲಿ ಒಬ್ಬರೇ ಸಂಚಾರ ಮಾಡುತ್ತಿದ್ದರೂ ಮಾಸ್ಕ್‌ ತೊಡುವುದು ಕಡ್ಡಾಯ. ಕಾರಿನಲ್ಲಿ ಒಂಟಿ ಪ್ರಯಾಣದ ವೇಳೆಯೂ ಮಾಸ್ಕ್‌ ಧರಿಸುವುದು ಕಡ್ಡಾಯ. ಇಲ್ಲದಿದ್ದರೆ, ದಂಡ ಬೀಳಲಿದೆ.

- ಹೀಗಂತ ಕೊರೋನಾ ಸೋಂಕು ತಡೆಗೆ ಮಾಸ್ಕ್‌ ಸಂಬಂಧಿ ದಂಡ ನಿಯಮ ಪರಿಷ್ಕರಿಸಿರುವ ಬಿಬಿಎಂಪಿ ಮಂಗಳವಾರ ಸ್ಪಷ್ಟಪಡಿಸಿದೆ.

ಕಾರು ಚಲಾಯಿಸುವಾಗ ಹಾಗೂ ಕಾರಿನ ಗಾಜು ಮುಚ್ಚಿದ ಸಂದರ್ಭದಲ್ಲಿ, ಒಬ್ಬರೇ ಕಾರು ಚಲಾಯಿಸುವಾಗ, ಕಾರು ನಿಲುಗಡೆ ಸಂದರ್ಭದಲ್ಲಿ ಮಾಸ್ಕ್‌ ಕಡ್ಡಾಯವಾಗಿ ಧರಿಸಿರಬೇಕು. ಬೈಕ್‌ ಸವಾರರು ಎಲ್ಲ ಸಂದರ್ಭದಲ್ಲಿಯೂ ಮಾಸ್ಕ್‌ ಧರಿಸುವುದು ಕಡ್ಡಾಯ ಎಂದು ಪಾಲಿಕೆ ಅಯುಕ್ತ ಮಂಜುನಾಥ್‌ ಪ್ರಸಾದ್‌ ಸ್ಪಷ್ಟಪಡಿಸಿದ್ದಾರೆ.

ಈ ಸ್ಪಷ್ಟನೆಗಳ ಮೂಲಕ ಮಾಸ್ಕ್‌ ಧಾರಣೆ ಬಗ್ಗೆ ಇದ್ದ ಗೊಂದಲಗಳ ಪರಿಹಾರಕ್ಕೆ ಯತ್ನಿಸಿದ್ದಾರೆ.

5 ವರ್ಷದೊಳಗಿನವರಿಗೆ ಕಡ್ಡಾಯವಲ್ಲ:

5 ವರ್ಷದ ಒಳಗಿನ ಮಕ್ಕಳಿಗೆ ಮಾಸ್ಕ್‌ ಧಾರಣೆ ಕಷ್ಟವಾಗುವ ಹಿನ್ನೆಲೆಯಲ್ಲಿ ಮಕ್ಕಳ ದೈಹಿಕ ಬೆಳವಣಿಗೆ ಹಾಗೂ ಈ ಹಂತದಲ್ಲಿ ಮಕ್ಕಳಿಗೆ ತಿಳವಳಿಕೆಯ ಕೊರತೆಯೂ ಇರುವ ಹಿನ್ನೆಲೆಯಲ್ಲಿ ಐದು ವರ್ಷದ ಒಳಗಿನ ಮಕ್ಕಳಿಗೆ ಮಾಸ್ಕ್‌ ಹಾಕುವುದು ಕಡ್ಡಾಯವಲ್ಲ.

ಎಲ್ಲೆಲ್ಲಿ ಕಡ್ಡಾಯ?:

ಶಾಲಾ-ಕಾಲೇಜು, ಪಾರ್ಕ್, ಸಾರ್ವಜನಿಕ ಶೌಚಾಲಯ, ಚಿತ್ರಮಂದಿರ, ಬಸ್‌, ರೈಲು, ವಿಶ್ರಾಂತಿ ಕೇಂದ್ರ, ಕ್ರೀಡಾಂಗಣ, ಮಾಲ್‌, ಮಾರುಕಟ್ಟೆ, ಅಂಗಡಿ ಮಳಿಗೆ, ಕಚೇರಿ, ಮದುವೆ, ಸಭೆ ಸಮಾರಂಭ ಸೇರಿದಂತೆ ಇನ್ನಿತರೆ ಕಡೆ ಮಾಸ್ಕ್‌ ಧರಿಸುವುದು ಕಡ್ಡಾಯ. ಮನೆಯಲ್ಲಿ ಪ್ರಾಥಮಿಕ ಸಂಪರ್ಕಿತರು, ರೋಗ ಲಕ್ಷಣ ಇರುವವರು ಇದ್ದರೆ ಮಾಸ್ಕ್‌ ಧರಿಸುವುದು ಕಡ್ಡಾಯ. ಆದರೆ, ಆರೋಗ್ಯವಂತ ಕುಟುಂಬದಲ್ಲಿ ಮಾಸ್ಕ್‌ ಧರಿಸುವುದು ಕಡ್ಡಾಯವಲ್ಲ.

ಸಿಬ್ಬಂದಿಗೆ ಮಾಸ್ಕ್‌ ಕಡ್ಡಾಯ:

ರೆಸ್ಟೋರೆಂಟ್‌ ಹಾಗೂ ಹೋಟೆಲ್‌ಗಳಲ್ಲಿ ಊಟ ಮಾಡುವ ಸಂದರ್ಭದಲ್ಲಿ ಮಾಸ್ಕ್‌ ಧರಿಸುವುದಕ್ಕೆ ವಿನಾಯಿತಿ ನೀಡಲಾಗಿದೆ. ಆದರೆ, ಸ್ಪಾ, ಕಟ್ಟಿಂಗ್‌ ಶಾಪ್‌, ರೆಸ್ಟೋರೆಂಟ್‌, ಬಾರ್‌ ಸೇರಿದಂತೆ ಇನ್ನಿತರೆ ಕಡೆ ಸೇವೆ ಒದಗಿಸುವ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು.

click me!