ವಿಪಕ್ಷಗಳ ಪ್ರತಿಭಟನೆಯ ನಡುವೆಯೂ ವಕ್ಫ್ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಮಸೂದೆಯು ವಕ್ಫ್ ಮಂಡಳಿಯ ಆಡಳಿತದಲ್ಲಿ ಪಾರದರ್ಶಕತೆ ತರಲು ಮತ್ತು ಮುಸ್ಲಿಂ ಸಮುದಾಯದ ಎಲ್ಲಾ ಪಂಗಡಗಳಿಗೆ ಅವಕಾಶ ಕಲ್ಪಿಸುವ ಗುರಿಯನ್ನು ಹೊಂದಿದೆ.
ನವದೆಹಲಿ: ವಿಪಕ್ಷಗಳ ಪ್ರತಿಭಟನೆಯ ನಡುವೆಯೇ ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಮೂಲಗಳ ಪ್ರಕಾರ ಏ.2ರಂದೇ ಲೋಕಸಭೆಯಲ್ಲಿ ಮಸೂದೆ ಮಂಡನೆ ಸಾರ್ಧಯತೆ ಇದೆ.
ಹೌದು, ಏ.4ರಂದು ಸಂಸತ್ತಿನ ಬಜೆಟ್ ಅಧಿವೇಶನ ಮುಕ್ತಾಯವಾಗಲಿದೆ. ಅದಕ್ಕೂ ಮೊದಲೇ ಮಸೂದೆ ಮಂಡಿಸಿ, ಚರ್ಚಿಸಿ ಅಂಗೀಕರಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎನ್ನಲಾಗಿದೆ.
ವಕ್ಫ್ ಮಂಡಳಿಯ ಆಡಳಿತದಲ್ಲಿ ಪಾರದರ್ಶಕತೆ ತರಲು, ವಕ್ಫ್ ಮಂಡಳಿಯಲ್ಲಿ ಮುಸ್ಲಿಂ ಸಮುದಾಯದ ಎಲ್ಲಾ ಪಂಗಡಗಳು, ಮಹಿಳೆಯರಿಗೆ ಅವಕಾಶ ಕಲ್ಪಿಸುವುದು ಸೇರಿದಂತೆ ಹಲವು ಮಹತ್ವದ ಉದ್ದೇಶಗಳಿಂದ ಮಸೂದೆಗೆ ಸರ್ಕಾರ ತಿದ್ದುಪಡಿ ತಂದಿದೆ.
ಇದನ್ನೂ ಓದಿ: ಧರ್ಮದ ಆಧಾರದಲ್ಲಿ ಮೀಸಲಿಗೆ ಅವಕಾಶವಿಲ್ಲ : ಆರ್‌ಎಸ್‌ಎಸ್ ಸರ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ
ವಕ್ಫ್ ತಿದ್ದುಪಡಿ ಮಸೂದೆಗೆ ಕ್ಯಾಥೋಲಿಕ್ ಬಿಷಪ್‌ಗಳ ಸಂಘಟನೆ ಬೆಂಬಲ
ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿರುವ ವಕ್ಫ್ ತಿದ್ದುಪಡಿ ಮಸೂದೆಗೆ ಕ್ಯಾಥೋಲಿಕ್ ಬಿಷಪ್‌ಗಳ ಸಂಘಟನೆಯು ಬೆಂಬಲ ಸೂಚಿಸಿದೆ. ದಿ ಕ್ಯಾಥೋಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ (ಸಿಬಿಸಿಐ) ಮಸೂದೆಗೆ ಬೆಂಬಲ ಸೂಚಿಸಿದ್ದು, ‘ಕೇರಳದ ವಕ್ಫ್ ಮಂಡಳಿಯು ಮುನಂಬಮ್ ಪ್ರದೇಶದ 600ಕ್ಕೂ ಹೆಚ್ಚು ಕುಟುಂಬಗಳ ಪಿತ್ರಾರ್ಜಿತ ಆಸ್ತಿಗಳನ್ನು ವಕ್ಫ್ ಭೂಮಿ ಎಂದು ಘೋಷಿಸಲು ಈಗ ಅಸ್ತಿತ್ವದಲ್ಲಿರುವ ಕಾನೂನನ್ನು ಬಳಸಿಕೊಂಡಿತ್ತು. ಕಳೆದ 3 ವರ್ಷಗಳಿಂದ ಈ ಸಮಸ್ಯೆ ಬೆಳೆಯುತ್ತಲೇ ಇದೆ. ಇಂಥ ಸಮಸ್ಯೆಗಳ ನಿವಾರಣೆ ಸರಿಯಾದ ಕಾನೂನಿನಿಂದ ಮಾತ್ರ ಸಾಧ್ಯ. ಜನಪ್ರತಿನಿಧಿಗಳು ಒಟ್ಟಾಗಿ ನಿಂತು, ನಿಷ್ಪಕ್ಷಪಾತವಾಗಿ ಕಾನೂನು ತಿದ್ದುಪಡಿಗೆ ಸಹಕರಿಸಬೇಕು’ ಎಂದು ಒತ್ತಾಯಿಸಿದೆ.