ನೋಟ್ ಬ್ಯಾನ್ ವೇಳೆ ಗೋಲ್ಮಾಲ್ ಮಾಡಿದವರಿಗೆ ಕ್ಷಮಾದಾನ: ಕೇಂದ್ರದ ಸ್ಕೀಂ!

By Kannadaprabha News  |  First Published Feb 4, 2020, 8:49 AM IST

ಅಪನಗದೀಕರಣ ವೇಳೆ ನೋಟಿಸ್‌ ಪಡೆದವರಿಗೆ ಪಾರಾಗಲು ಸ್ಕೀಂ| ‘ವಿವಾದ್‌ ಸೇ ವಿಶ್ವಾಸ್‌’ನಡಿ ವ್ಯಾಜ್ಯ ಇತ್ಯರ್ಥ ಅವಕಾಶ


ನವದೆಹಲಿ[ಫೆ.04]: ಅಪನಗದೀಕರಣ ವೇಳೆ ಭಾರಿ ಮೊತ್ತದ ಹಣವನ್ನು ಬ್ಯಾಂಕ್‌ ಖಾತೆಗೆ ಜಮೆ ಮಾಡಿ, ಹಣದ ಮೂಲ ತಿಳಿಸಲಾಗದ ಕಾರಣ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್‌ ಪಡೆದು ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಆ ಸಮಸ್ಯೆಯಿಂದ ಪಾರಾಗಲು ಕೇಂದ್ರ ಸರ್ಕಾರ ಒಂದು ಅವಕಾಶ ನೀಡಲು ಮುಂದಾಗಿದೆ.

ತೆರಿಗೆ ವ್ಯಾಜ್ಯಗಳನ್ನು ಕಡಿತಗೊಳಿಸಲು ಕೇಂದ್ರ ಸರ್ಕಾರ ಶನಿವಾರ ಮಂಡನೆ ಮಾಡಿದ ಬಜೆಟ್‌ನಲ್ಲಿ ‘ವಿವಾದ್‌ ಸೇ ವಿಶ್ವಾಸ್‌’ ಎಂಬ ಯೋಜನೆಯನ್ನು ಪ್ರಕಟಿಸಿದೆ. ಅದರ ಪ್ರಕಾರ, ತೆರಿಗೆದಾರರು ತೆರಿಗೆ ಮೊತ್ತವನ್ನು ಪಾವತಿಸಿದರೆ ಅವರಿಗೆ ದಂಡ ಹಾಗೂ ಬಡ್ಡಿಯಿಂದ ವಿನಾಯಿತಿ ನೀಡಲಾಗುತ್ತದೆ. ಇದೇ ಯೋಜನೆಯಡಿ ಅಪನಗದೀಕರಣ ವೇಳೆ ನೋಟಿಸ್‌ ಪಡೆದವರಿಗೂ ಅವಕಾಶ ನೀಡಲು ಸರ್ಕಾರ ಮುಂದಾಗಿದೆ.

Latest Videos

undefined

ನೋಟ್ ಬ್ಯಾನ್‌ಗಿಂತಲೂ ಎನ್‌ಆರ್‌ಸಿ, ಎನ್‌ಪಿಆರ್ ಘೋರ: ರಾಹುಲ್ ಗಾಂಧಿ!

ನೋಟು ರದ್ದತಿ ವೇಳೆ ಭಾರಿ ಮೊತ್ತದ ಠೇವಣಿ ಮಾಡಿ, ಅದರ ಮೂಲ ತಿಳಿಸಲಾಗದ ಜನರಿಗೆ ಈ ಯೋಜನೆಯಡಿ ಅವಕಾಶ ಸಿಗುತ್ತದೆ. ಆದರೆ ಅಧಿಕಾರಿಗಳ ದಾಳಿ ವೇಳೆ ಭಾರಿ ಮೊತ್ತದ ಹಣ ಜಪ್ತಿ ಮಾಡಿಕೊಂಡ ಪ್ರಕರಣಗಳಿಗೆ ಇದು ಅನ್ವಯವಾಗುವುದಿಲ್ಲ. ಈಗಾಗಲೇ ಕೆಲವೊಂದು ಅಪನಗದೀಕರಣ ಪ್ರಕರಣಗಳನ್ನು ಅಂತಿಮಗೊಳಿಸಲಾಗಿದೆ. ಶೀಘ್ರದಲ್ಲೇ ನಿಯಮಗಳನ್ನು ಬಿಡುಗಡೆ ಮಾಡಲಾಗುತ್ತದೆ. ನೋಟು ಬಂಧಿ ವೇಳೆ ನೀಡಲಾದ ನೋಟಿಸ್‌ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿರುವವರು ಯೋಜನೆಯ ಲಾಭ ಪಡೆದುಕೊಳ್ಳಬಹುದು ಎಂದು ಕಂದಾಯ ಕಾರ್ಯದರ್ಶಿ ಅಜಯ್‌ ಭೂಷಣ್‌ ಪಾಂಡೆ ತಿಳಿಸಿದ್ದಾರೆ.

2016ರ ನ.8ರಂದು ಕೇಂದ್ರ ಸರ್ಕಾರ ಆಗ ಚಲಾವಣೆಯಲ್ಲಿದ್ದ 500, 1000 ರು. ಮುಖಬೆಲೆಯ ನೋಟುಗಳನ್ನು ನಿಷೇಧಿಸಿತ್ತು. ಆನಂತರ ಕೆಲವರ ಖಾತೆಗೆ ಭಾರಿ ಪ್ರಮಾಣದಲ್ಲಿ ನಿಷೇಧಿತ ನೋಟುಗಳು ಜಮೆಯಾಗಿದ್ದವು. ಆ ಹಣದ ಮೂಲ ತಿಳಿಸುವಂತೆ ತೆರಿಗೆ ಅಧಿಕಾರಿಗಳು ಸೂಚಿಸಿದ್ದರು. ವಿವರ ನೀಡಲು ನಿರಾಕರಿಸಿದವರಿಗೆ ನೋಟಿಸ್‌ ನೀಡಲಾಗಿತ್ತು.

click me!