ದಕ್ಷಿಣ ಭಾರತದ ಅಭಿವೃದ್ಧಿಗೆ ಬೆಂಗಳೂರು-ಹೊಸೂರು ಮೆಟ್ರೋ ಮಾರ್ಗ ಅಗತ್ಯ: ತಮಿಳುನಾಡು ಸಿಎಂ ಜೋಸೆಫ್‌ ವಿಜಯ್‌

Published : Aug 22, 2026, 12:54 PM IST
Bengaluru Hosur Metro Link

ಸಾರಾಂಶ

ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್, ದಕ್ಷಿಣ ವಲಯ ಮಂಡಳಿ ಸಭೆಯಲ್ಲಿ ಬೆಂಗಳೂರಿನ ಬೊಮ್ಮಸಂದ್ರದಿಂದ ಹೊಸೂರಿಗೆ ಮೆಟ್ರೋ ವಿಸ್ತರಿಸುವಂತೆ ಒತ್ತಾಯಿಸಿದ್ದಾರೆ. ಈ ಅಂತರ್‌ರಾಜ್ಯ ಮೆಟ್ರೋ ಯೋಜನೆಯು ಎರಡೂ ರಾಜ್ಯಗಳ ಆರ್ಥಿಕತೆಗೆ ಬಲ ನೀಡಲಿದೆ ಎಂದಿದ್ದಾರೆ.

ಮಹಾಬಲಿಪುರಂ (ಆ.22): ದಕ್ಷಿಣ ಭಾರತದ ರಾಜ್ಯಗಳು ಒಂದೇ ಸಮಗ್ರ ಆರ್ಥಿಕ ವಲಯವಾಗಿ (Single, integrated economic region) ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿರುವ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್, ಬೆಂಗಳೂರಿನ ಬೊಮ್ಮಸಂದ್ರದಿಂದ ತಮಿಳುನಾಡಿನ ಹೊಸೂರಿಗೆ ಮೆಟ್ರೋ ಜಾಲವನ್ನು ವಿಸ್ತರಿಸುವ ಯೋಜನೆಯನ್ನು ಶೀಘ್ರ ಜಾರಿಗೊಳಿಸುವಂತೆ ಹೇಳಿದ್ದಾರೆ. ಮಹಾಬಲಿಪುರಂನಲ್ಲಿ ನಡೆದ 31ನೇ ದಕ್ಷಿಣ ವಲಯ ಮಂಡಳಿ ಸಭೆಯಲ್ಲಿ (Southern Zonal Council meeting) ಮಾತನಾಡಿದ ವಿಜಯ್, ಈ ಮೆಟ್ರೋ ಯೋಜನೆಯು ದಕ್ಷಿಣ ಭಾರತದ ಮೊದಲ ಅಂತರ್‌ರಾಜ್ಯ ಮೆಟ್ರೋ ಸಂಪರ್ಕವಾಗಲಿದ್ದು, ರಾಜ್ಯ ಗಡಿಗಳನ್ನು ಮೀರಿ ಕೈಗೊಳ್ಳುವ ಸಹಕಾರ ಮೂಲಸೌಕರ್ಯ ಯೋಜನೆಗಳಿಗೆ (Cooperative infrastructure) ಅತ್ಯುತ್ತಮ ಮಾದರಿಯಾಗಲಿದೆ ಎಂದು ಹೇಳಿದರು.

ಬಿಎಂಆರ್‌ಸಿಎಲ್ ತಿರಸ್ಕರಿಸಿದ್ದ ಯೋಜನೆಯಿಟ್ಟುಕೊಂಡು ಪ್ರತಿಪಾದನೆ

ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಈ ಅಂತರ್‌ರಾಜ್ಯ ಮೆಟ್ರೋ ಸಂಪರ್ಕ ಯೋಜನೆಯು ಕಾರ್ಯಸಾಧ್ಯವಲ್ಲ (Not feasible) ಎಂದು ತಿರಸ್ಕರಿಸಿದ ಬೆನ್ನಲ್ಲೇ ತಮಿಳುನಾಡು ಸಿಎಂ ಈ ಹೇಳಿಕೆ ನೀಡಿರುವುದು ಮಹತ್ವ ಪಡೆದುಕೊಂಡಿದೆ. ಪ್ರಸ್ತುತ ಹಳದಿ ಮಾರ್ಗದ ಕೊನೆಯ ನಿಲ್ದಾಣವಾಗಿರುವ ಬೊಮ್ಮಸಂದ್ರದಿಂದ ತಮಿಳುನಾಡು ಗಡಿಗೆ ಹತ್ತಿರವಿರುವ ಬೆಂಗಳೂರಿನ ಪ್ರಮುಖ ಉಪನಗರ ಅತ್ತಿಬೆಲೆಯವರೆಗೆ ಮಾತ್ರ ಮೆಟ್ರೋ ವಿಸ್ತರಿಸಲು ಬಿಎಂಆರ್‌ಸಿಎಲ್ ಪರಿಶೀಲಿಸುತ್ತಿದೆ.

ಕರ್ನಾಟಕ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಒಪ್ಪಿಗೆಯೊಂದಿಗೆ ತಮಿಳುನಾಡು ಸರ್ಕಾರವೇ ಧನಸಹಾಯ ನೀಡಿ ಸಿದ್ಧಪಡಿಸಿದ ವಿಸ್ತೃತ ಯೋಜನಾ ವರದಿ (DPR) ಪ್ರಕಾರ, ಬೆಂಗಳೂರು ಮತ್ತು ಹೊಸೂರು ನಡುವೆ 23 ಕಿಲೋಮೀಟರ್ ಉದ್ದದ ಮೆಟ್ರೋ ಕಾರಿಡಾರ್ ನಿರ್ಮಿಸಲು ಪ್ರಸ್ತಾಪಿಸಲಾಗಿತ್ತು. ಈ ಪೈಕಿ 12 ಕಿ.ಮೀ. ಕರ್ನಾಟಕದ ವ್ಯಾಪ್ತಿಯಲ್ಲಿದ್ದರೆ, ಬಾಕಿ 11 ಕಿ.ಮೀ. ತಮಿಳುನಾಡು ವ್ಯಾಪ್ತಿಗೆ ಬರುತ್ತದೆ. ಯೋಜನೆಗೆ ಒಟ್ಟು 12 ನಿಲ್ದಾಣಗಳನ್ನು ಪ್ರಸ್ತಾಪಿಸಲಾಗಿತ್ತು. ತಮಿಳುನಾಡು ಭಾಗದಲ್ಲಿ ಕಾರಿಡಾರ್ ಉದ್ದವನ್ನು 2.5 ಕಿ.ಮೀ. ವಿಸ್ತರಿಸಿ, ಕೈಗಾರಿಕಾ ನಗರವಾದ ಹೊಸೂರಿನ ಹೊರವಲಯದಲ್ಲಿ ಕೊನೆಯ ನಿಲ್ದಾಣವನ್ನು ಯೋಜಿಸಲಾಗಿತ್ತು.

'ದಕ್ಷಿಣದ ರಾಜ್ಯಗಳಿಗೆ ಬಲ ತುಂಬಲಿದೆ'

ತಮ್ಮ ಭಾಷಣದಲ್ಲಿ ಈ ಯೋಜನೆಯ ಪ್ರಾಮುಖ್ಯತೆಯನ್ನು ವಿವರಿಸಿದ ಮುಖ್ಯಮಂತ್ರಿ ವಿಜಯ್, "ಈ ಯೋಜನೆಯು ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿ ಕಾರಿಡಾರ್ ಅನ್ನು ವೇಗವಾಗಿ ಬೆಳೆಯುತ್ತಿರುವ ಹೊಸೂರಿನ ಕೈಗಾರಿಕಾ ಹಬ್‌ನೊಂದಿಗೆ ಜೋಡಿಸಲಿದೆ. ಇದರಿಂದ ಎರಡೂ ರಾಜ್ಯಗಳ ಶ್ರಮಿಕ ವರ್ಗ ಮತ್ತು ಆರ್ಥಿಕತೆಗೆ ದೊಡ್ಡ ಬಲ ಸಿಗಲಿದೆ," ಎಂದರು.

"ರಾಜ್ಯ ಗಡಿಗಳನ್ನು ಮೀರಿ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಈ ಮಾದರಿ ಯೋಜನೆಯನ್ನು ನಾನು ಸ್ವಾಗತಿಸುತ್ತೇನೆ. ಕೇಂದ್ರ ಸರ್ಕಾರ ಮತ್ತು ಎರಡೂ ರಾಜ್ಯ ಸರ್ಕಾರಗಳ ಬೆಂಬಲದೊಂದಿಗೆ ಇದನ್ನು ತ್ವರಿತವಾಗಿ ಮುನ್ನಡೆಸಬೇಕು. ದಕ್ಷಿಣದ ರಾಜ್ಯಗಳ ನಡುವೆ ಇಂತಹ ಇನ್ನಷ್ಟು ಸಂಪರ್ಕ ಜಾಲಗಳಿಗೆ ಇದು ಮುನ್ನುಡಿಯಾಗಲಿ," ಎಂದು ವಿಜಯ್ ಆಶಯ ವ್ಯಕ್ತಪಡಿಸಿದರು.

ಹೊಸೂರು ಮೂಲಸೌಕರ್ಯ ಅಭಿವೃದ್ಧಿಗೆ ಕಣ್ಣು

ತಮಿಳುನಾಡು ಸರ್ಕಾರದ ಪ್ರಕಾರ, ಈ ಮೆಟ್ರೋ ವಿಸ್ತರಣೆಯು ಹೊಸೂರಿನ ಕೈಗಾರಿಕಾ ಪ್ರಗತಿಯನ್ನು ಹೆಚ್ಚಿಸುವುದಲ್ಲದೆ ಎರಡೂ ರಾಜ್ಯಗಳ ನಡುವೆ ಸುಲಭ ಸಂಚಾರಕ್ಕೆ ನೆರವಾಗಲಿದೆ. ಸುಮಾರು 500 ಬೃಹತ್ ಕೈಗಾರಿಕೆಗಳು ಮತ್ತು 3,000 ಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳನ್ನು (MSME) ಹೊಂದಿರುವ ಹೊಸೂರಿಗಾಗಿ, ಕೃಷ್ಣಗಿರಿ ಜಿಲ್ಲೆಯ ಬೇರಿಗೈ-ಬಾಗಲೂರಿನಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಿಸಲು ತಮಿಳುನಾಡು ಸರ್ಕಾರ ಯೋಜನೆ ರೂಪಿಸುತ್ತಿದೆ.

ದಕ್ಷಿಣ ರಾಜ್ಯಗಳ ಉದ್ಯಮ ಸಾಮರ್ಥ್ಯವು ಕೇವಲ ರಾಜ್ಯದ ಗಡಿಗಳಿಗೆ ಸೀಮಿತವಾಗಿಲ್ಲ ಎಂಬುದನ್ನು ಮನಗಂಡು, ಎಲ್ಲರೂ ಒಂದಾಗಿ ಆಲೋಚಿಸಬೇಕು. ಪ್ರತ್ಯೇಕವಾಗಿ ಬೆಳೆಯುವುದಕ್ಕಿಂತ, ರಾಜ್ಯಗಳ ನಡುವಿನ ಸಂಪರ್ಕವನ್ನು ಬಲಪಡಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬಲ್ಲ ಬಲವಾದ ಸರಪಳಿಯನ್ನು ನಿರ್ಮಿಸಬಹುದು ಎಂದು ವಿಜಯ್ ಹೇಳಿದರು. ಇದರೊಂದಿಗೆ ದಕ್ಷಿಣ ರಾಜ್ಯಗಳಲ್ಲಿ ಜಂಟಿ ಉತ್ಪಾದನಾ ವಲಯಗಳು, ಸಾರಿಗೆ ಪಾರ್ಕ್‌ಗಳು ಹಾಗೂ ಉತ್ಪಾದನಾ ಕೇಂದ್ರಗಳಿಂದ ಬಂದರುಗಳಿಗೆ ಸುಲಭವಾಗಿ ಸರಕು ಸಾಗಿಸುವ ಜಂಟಿ 'ಆರ್ಥಿಕ ಮತ್ತು ಲಾಜಿಸ್ಟಿಕ್ಸ್ ಕ್ಲಸ್ಟರ್'ಗಳನ್ನು ನಿರ್ಮಿಸುವ ಪ್ರಸ್ತಾಪವನ್ನೂ ಅವರು ಸಭೆಯ ಮುಂದಿಟ್ಟರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

SSLCಯಲ್ಲಿ ಬಂದದ್ದು 54%: ಇವನ ಹಣೆಬರಹ ಇಷ್ಟೇ ಎಂದೋರ ಎದುರೇ JEE ನಲ್ಲಿ ಟಾಪರ್​ ಆಗಿ ಮೆರೆದ ಯುವಕ
ಸಕ್ಕರೆ ಬೆಲೆ ಮತ್ತೆ 30 ರೂ ಏರಿಕೆ, ಎಥೆನಾಲ್‌ನಿಂದ ಶುಗರ್ ದರ ಹೆಚ್ಚಳವಾಯ್ತಾ? ಕೇಂದ್ರದ ಉತ್ತರವೇನು?