Vice-President Venkaiah Naidu : ನಿಮ್ಮ ಧರ್ಮವನ್ನ ಪಾಲಿಸಿ ಆದರೆ, ದ್ವೇಷ ಭಾಷಣ ಬೇಡ!

By Suvarna NewsFirst Published Jan 4, 2022, 11:26 AM IST
Highlights

ದ್ವೇಷ ಭಾಷಣಕ್ಕೆ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ವಿರೋಧ
ನಿಮ್ಮ ಧರ್ಮವನ್ನ ಪಾಲಿಸಿ, ಬೇರೆ ಧರ್ಮವನ್ನು ತೆಗಳಬೇಡಿ
ಕೇರಳದ ಕೊಟ್ಟಾಯಂನಲ್ಲಿ ಮಾತನಾಡಿದ ವೆಂಕಯ್ಯ ನಾಯ್ಡು

ಕೊಟ್ಟಾಯಂ (ಜ.4): ದೇಶದಲ್ಲಿರುವ ಪ್ರತಿ ವ್ಯಕ್ತಿಗೂ ತನ್ನ ಧರ್ಮವನ್ನು ಆಚರಿಸುವ ಹಾಗೂ ಅದನ್ನು ಭೋಧನೆ ಮಾಡುವ ಹಕ್ಕಿದೆ. ಆದರೆ, ಇತರ ಧರ್ಮಗಳನ್ನು ಅಪಹಾಸ್ಯ ಮಾಡುವ, ಸಮಾಜದಲ್ಲಿ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸುವ ಪ್ರಯತ್ನಗಳಿಂದ ದೂರವಿರಬೇಕು ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು (Vice-President Venkaiah Naidu )  ಹೇಳಿದ್ದಾರೆ. ಸೋಮವಾರ ಕೇರಳದ ಕೊಟ್ಟಾಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದ್ವೇಷ ಭಾಷಣವು ದೇಶದ ಸಂಸ್ಕೃತಿ, ಸಂವಿಧಾನ ಹಾಗೂ ನಮ್ಮ ನೀತಿಗೆ ವಿರುದ್ಧವಾಗಿದೆ ಎಂದು ಹೇಳಿದರು. ಜಾತ್ಯಾತೀತತೆ ಪ್ರತಿಯೊಬ್ಬ ಭಾರತೀಯನ ರಕ್ತದಲ್ಲಿದೆ. ನಮ್ಮ ದೇಶದ ಸಂಸ್ಕೃತಿ ಹಾಗೂ ಪರಂಪರೆಯ ಕಾರಣದಿಂದಾಗಿ ಇಂದು ಪ್ರಪಂಚದಾದ್ಯಂತ ಗೌರವವನ್ನು ಪಡೆದುಕೊಳ್ಳುತ್ತಿದೆ ಎಂದರು.

ಕೇರಳ ಕ್ಯಾಥೋಲಿಕ್ ಸಮುದಾಯದ ಆಧ್ಯಾತ್ಮಿಕ ನಾಯಕ ಮತ್ತು ಸಮಾಜ ಸುಧಾರಕರಾಗಿದ್ದ ಸಂತ ಕುರಿಯಾಕೋಸ್ ಎಲಿಯಾಸ್ ಚವರ 150ನೇ ಪುಣ್ಯತಿಥಿಯ (150th death anniversary of Saint Kuriakose Elias Chavara)ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ನಿಮ್ಮ ಧರ್ಮವನ್ನು ನೀವು ಅಭ್ಯಾಸ ಮಾಡಿ, ಆದರೆ ದ್ವೇಷ ಭಾಷಣ (hate speech) ಹಾಗೂ ಬರಹಗಳನ್ನು ಬರೆಯುವ ಮೂಲಕ ಬೇರೆ ಧರ್ಮವನ್ನು ಟೀಕಿಸುವ ಕೆಲಸ ಮಾಡಬೇಡಿ' ಎಂದರು. ದ್ವೇಷ ಭಾಷಣಗಳು ಮತ್ತು ಬರಹಗಳು ಸಂಸ್ಕೃತಿ, ಪರಂಪರೆ, ಸಂಪ್ರದಾಯಗಳು, ಸಾಂವಿಧಾನಿಕ ಹಕ್ಕುಗಳು ಮತ್ತು ನೈತಿಕತೆಗೆ ವಿರುದ್ಧವಾಗಿವೆ ಎಂದು ತಿಳಿಸಿದರು.

ಇದೇ ವೇಳೆ, ಭಾರತೀಯ ಮೌಲ್ಯವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಇನ್ನಷ್ಟು ಕ್ರಮಗಳು ಜಾರಿಯಾಗಬೇಕು ಎಂದು ಹೇಳಿದ ಅವರು, "ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸಮುದಾಯ ಸೇವೆಯನ್ನು (community service) ಕಡ್ಡಾಯಗೊಳಿಸಬೇಕು. ಇದರ ಇತರ ವ್ಯಕ್ತಿಗಳೊಂದಿಗೆ ಪರಸ್ಪರ ಹಂಚಿಕೊಳ್ಳುವ ಹಾಗೂ ಕಾಳಜಿಯ ಮನೋಭಾವವನ್ನು ಬೆಳೆಸಲು ಸಹಾಯ ಮಾಡುತ್ತದೆ' ಎಂದರು. “ಇಂದು, ಈ ದೇಶದ ಯುವಜನರಲ್ಲಿ ಚಿಕ್ಕ ವಯಸ್ಸಿನಿಂದಲೇ ಸೇವಾ ಮನೋಭಾವವನ್ನು ಬೆಳೆಸುವ ಅವಶ್ಯಕತೆಯಿದೆ. ಒಮ್ಮೆ ಈ ಸಾಂಕ್ರಾಮಿಕ ವೈರಸ್ ನಮ್ಮ ನಡುವೆ ಮರೆಯಾಗಿ ಪರಿಸ್ಥಿತಿಗಳೆಲ್ಲವೂ ಸಹಜ ಸ್ಥಿತಿಗೆ ಬಂದ ಬಳಿಕ ಸರ್ಕಾರಿ ಹಾಗೂ ಖಾಸಗಿ ಶಾಲೆಗಳು ಕಡ್ಡಾಯವಾಗಿ ಸಮುದಾಯ ಸೇವೆಗಳಲ್ಲಿ ತೊಡಗಿಕೊಳ್ಳಬೇಕು ಎಂದು ನಾನು ಸಲಹೆ ನೀಡುತ್ತೇನೆ. ವಿದ್ಯಾರ್ಥಿಗಳಿಗೆ ಕನಿಷ್ಠ ಎರಡರಿಂದ ಮೂರು ವಾರಗಳ ಕಾಲ ಸಮುದಾಯ ಸೇವೆಯನ್ನು ಕಡ್ಡಾಯಗೊಳಿಸಿ" ಎಂದು ಹೇಳಿದರು.

Dharma Sansad Hate Speech: ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಭಾಷಣ, ಭಾರತೀಯ ರಾಜತಾಂತ್ರಿಕನಿಗೆ ಪಾಕಿಸ್ತಾನ ಸಮನ್ಸ್
 "ವಾಸ್ತವವಾಗಿ, ಶೇರ್ ಮತ್ತು ಕೇರ್ ತತ್ವವು ಭಾರತದ ಪ್ರಾಚೀನ ಸಂಸ್ಕೃತಿಯ ತಿರುಳಾಗಿದೆ ಮತ್ತು ಅದನ್ನು ವ್ಯಾಪಕವಾಗಿ ಪ್ರಚಾರ ಮಾಡಬೇಕು. ನಮಗೆ, ಇಡೀ ಪ್ರಪಂಚವು ನಮ್ಮ ಕಾಲಾತೀತ ಆದರ್ಶವಾದ 'ವಸುಧೈವ ಕುಟುಂಬಕಂ'ನಲ್ಲಿ ಒಳಗೊಂಡಿರುವ ಒಂದು ಕುಟುಂಬವಾಗಿದೆ. ಈ ಮನೋಭಾವದಿಂದ ನಾವು ಒಟ್ಟಾಗಿ ಮುನ್ನಡೆಯಬೇಕು ಎಂದು ನಾಯ್ಡು ಹೇಳಿದರು.
ಯೋಗ ಅಥವಾ ಇತರ ಯಾವುದೇ ರೀತಿಯ ದೈಹಿಕ ವ್ಯಾಯಾಮವನ್ನು ಮಾಡುವುದರ ಮೂಲಕ ಮತ್ತು "ಪ್ರಕೃತಿಯನ್ನು ಪ್ರೀತಿಸಿ ಮತ್ತು ಬದುಕಲು" ಯುವಕರು ದೈಹಿಕವಾಗಿ ಸದೃಢರಾಗಿರಲು ನಾಯ್ಡು ಸಲಹೆ ನೀಡಿದರು. ಉತ್ತಮ ಭವಿಷ್ಯಕ್ಕಾಗಿ ಪ್ರಕೃತಿಯನ್ನು ಸಂರಕ್ಷಿಸಿ ಸಂಸ್ಕೃತಿಯನ್ನು ಸಂರಕ್ಷಿಸಿ ಎಂದು ಅವರು ಹೇಳಿದರು.

Hate Speech: ಧರ್ಮ ಸಂಸತ್ತಿನಲ್ಲಿ ಪ್ರಚೋದನಕಾರಿ ಭಾಷಣ, ಹರಿದ್ವಾರದಲ್ಲಿ ದಾಖಲಾಯ್ತು ಕೇಸ್!
ಇತ್ತೀಚೆಗೆ ಹರಿದ್ವಾರದಲ್ಲಿ ಡಿಸೆಂಬರ್ 17 ರಿಂದ 19 ರವರೆಗೆ ಧರ್ಮ ಸಂಸದ್ ಆಯೋಜಿಸಲಾಗಿತ್ತು. ಇದರಲ್ಲಿ ಜಿತೇಂದ್ರ ನಾರಾಯಣ ತ್ಯಾಗಿ ಮುಸ್ಲಿಂ ಸಮುದಾಯದ ಬಗ್ಗೆ ವಿವಾದಾತ್ಮಕ ಭಾಷಣ ಮಾಡಿದ್ದಾರೆ ಎಂಬ ಆರೋಪವಿದೆ. ಅನೇಕ ಸಂತರಲ್ಲದೆ, ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಕೂಡ ಈ ಸಮಾವೇಶದಲ್ಲಿ ಭಾಗವಹಿಸಿದ್ದರು. ಈ ಸಮಾವೇಶಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಆರ್‌ಟಿಐ ಕಾರ್ಯಕರ್ತ ಮತ್ತು ತೃಣಮೂಲ ಕಾಂಗ್ರೆಸ್‌ನ ಸಾಕೇತ್ ಗೋಖಲೆ ಪ್ರತಿಭಟನೆ ನಡೆಸಿದ್ದರು.

click me!