
ನವದೆಹಲಿ (ಜು.21) ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಕಳುಹಿಸಿದ್ದಾರೆ. ಆಗಸ್ಟ್ 11, 2022 ಉಪರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ್ದ ಜಗದೀಪ್ ಧನ್ಕರ್, ಇನ್ನು ಎರಡು ವರ್ಷ ಅವಧಿ ಇದ್ದರೂ ದಿಢೀರ್ ರಾಜೀನಾಮೆ ನೀಡಿದ್ದಾರೆ. ಆರೋಗ್ಯದ ಕಾರಣದಿಂದ ರಾಜೀನಾಮೆ ನೀಡುತ್ತಿರುವುದಾಗಿ ಧನ್ಕರ್ ಹೇಳಿದ್ದಾರೆ. 2027ರ ವರೆಗೆ ಧನ್ಕರ್ ಅವಧಿ ಇದ್ದರೂ ಆರೋಗ್ಯದ ಕಾರಣಕ್ಕಾಗಿ ರಾಜೀನಾಮೆ ನೀಡಿದ್ದಾರೆ.
ನನ್ನ ಆರೋಗ್ಯ ದೃಷ್ಠಿಯಿಂದ ಹಾಗೂ ವೈದ್ಯರ ಸಲಹೆಯನ್ನು ಗೌರವಿಸುತ್ತಾ ಈ ತಕ್ಷಣದಿಂದಲೇ ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಸಂವಿಧಾನದ ಆರ್ಟಿಕಲ್ 67 (ಎ) ಅನುಸಾರ ರಾಜೀನಾಮೆ ನೀಡುತ್ತಿದ್ದೇನೆ ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ತಕ್ಷಣದಿಂದಲೇ ರಾಜೀನಾಮೆ ನೀಡುವುದಾಗಿ ಧನ್ಕರ್ ಹೇಳಿದ್ದಾರೆ. ಇದೇ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಕ್ಯಾಬಿನೆಟ್ ಸಚಿವರು ಸೇರಿದಂತೆ ಹಲವರು ಸಹಕಾರವನ್ನು ನೆನಪಿಸಿಕೊಂಡಿದ್ದಾರೆ. ವೈದ್ಯಕೀಯ ಕಾರಣಗಳಿಂದ ಧನ್ಕರ್ ರಾಜೀನಾಮೆ ಪತ್ರ ಶೀಘ್ರದಲ್ಲೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಗೀಕರಿಸಲಿದ್ದಾರೆ.
ಪ್ರಧಾನಿ ಮೋದಿ ಬೆಂಬಲಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ
ರಾಷ್ಟ್ರಪತಿ ದ್ರೌಪದಿ ಮುರ್ಮು ತೋರಿದ ಸಹಾಕರ, ಬೆಂಬಲಕ್ಕೆ ಋಣಿಯಾಗಿದ್ದೇನೆ. ಅವರ ಸಹಾಕಾರದಿಂದ ಸುಸೂತ್ರವಾಗಿ ಹಾಗು ಸುಲಭವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ. ಕೆಲಸದ ಜೊತೆಗಿನ ಬಾಂಧವ್ಯ ಅತ್ಯುತ್ತಮವಾಗಿತ್ತು ಎಂದು ಧನ್ಕರ್ ತಮ್ಮ ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಪ್ರಧಾನಿ ಮೋದಿ ಸಹಕಾರ ಹಾಗೂ ಬೆಂಬಲಕ್ಕೆ ಬಲೆ ಕಟ್ಟಲು ಸಾಧ್ಯವಿಲ್ಲ. ಈ ವೇಳೆ ನಾನು ಸಾಕಷ್ಟು ಕಲಿತಿದ್ದೇನೆ ಎಂದು ಧನ್ಕರ್ ಹೇಳಿದ್ದಾರೆ.
ಇದೇ ವೇಲೆ ಸಂಸತ್ತಿನ ಎಲ್ಲಾ ಸದಸ್ಯರಿಂದ ಸಿಕ್ಕಿರುವ ಗೌರವ, ನಂಬಿಕೆ, ಪ್ರೀತಿ ನನ್ನ ಜೀವವನ್ನು ಮತ್ತಷ್ಟು ಉಲ್ಲಾಸಗೊಳಿಸಿದೆ. ನನ್ನ ನೆನಪಿನ ಪುಟದಲ್ಲಿ ಸದಾ ಇರಲಿದೆ. ಶ್ರೇಷ್ಠ ಪ್ರಜಾಪ್ರಭುತ್ವದಲ್ಲಿ ಉಪ ರಾಷ್ಟ್ರಪತಿಯಾಗಿ ಸಾಕಷ್ಟು ತಿಳಿದುಕೊಂಡಿದ್ದೇನೆ, ಕಲಿತಿದ್ದೇನೆ. ಇದಕ್ಕೆ ಧನ್ಯವಾದಗಳು. ಇದೇ ಅವಧಿಯಲ್ಲಿ ಭಾರತದ ಆರ್ಥಿಕ ಬೆಳವಣಿಗೆ, ಭಾರತದಲ್ಲಿ ಆಗಿರುವ ಅಭಿವೃದ್ಧಿಗಳು ನವ ಭಾರತವನ್ನು ಸೃಷ್ಟಿಸಿದೆ. ಬದಲಾವಣೆ ಪರ್ವದ ಭಾಗವಾಗಿರುವುದಕ್ಕೆ ಹೆಮ್ಮೆ ಇದೆ. ಪ್ರತಿಷ್ಠಿತ ಕಚೇರಿಯಿಂದ ನಿರ್ಗಿಸುತ್ತಿರುವ ಈ ವೇಳೆಯಲ್ಲಿ ನನಗೆ ಅತೀವ ಹೆಮ್ಮೆಯಾಗುತ್ತಿದೆ. ಭಾರತ ಜಾಗತಿಕ ಮಟ್ಟದಲ್ಲಿ ದೈತ್ಯ ಶಕ್ತಿಯಾಗಿ ಹಾಗೂ ಸದೃಢ ದೇಶವಾಗಿ ಮಹತ್ತರ ಸಾಧನೆ ಮಾಡುತ್ತಿದೆ ಎಂದು ಧನ್ಕರ್ ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ