
ನವದೆಹಲಿ: ಡಿಡಿ ವಾಹಿನಿಯ ಖ್ಯಾತ ನಿರೂಪಕಿ ಸರಳ ಮಹೇಶ್ವರಿ ನಿಧನರಾಗಿದ್ದಾರೆ. 1980ರ ಕಾಲಘಟ್ಟದಲ್ಲಿ ಸರಳ ಮಹೇಶ್ವರಿ ಖ್ಯಾತ ನಿರೂಪಕಿಯಾಗಿ ಗುರುತಿಸಿಕೊಂಡಿದ್ದರು. 1980ರ ಕಾಲಘಟ್ಟದ ಜನರು ಇಂದಿಗೂ ಸರಳ ಮಹೇಶ್ವರಿ ಅವರನ್ನು ಮರೆತಿಲ್ಲ. ಹೆಸರಿಗೆ ತಕ್ಕಂತೆ ಸರಳವಾಗಿಯೇ ಕಾಣಿಸಿಕೊಳ್ಳುತ್ತಿದ್ದ ಸರಳ ಮಹೇಶ್ವರಿ ಅವರು, ತಮ್ಮ ವಾರ್ತಾ ವಚನದಿಂದಲೇ ಫೇಮಸ್ ಆಗಿದ್ದರು. ಸರಳ ಮಹೇಶ್ವರಿ ಅವರಿಗೆ 71 ವರ್ಷದ ವಯಸ್ಸು ಆಗಿತ್ತು. ಈ ಕುರಿತು ಡಿಡಿ ನ್ಯೂಸ್ ಸಂತಾಪ ಸೂಚಿಸಿ, ಎಕ್ಸ್ ಖಾತೆಯಲ್ಲಿ ಸರಳ ಮಹೇಶ್ವರಿ ಅವರ ಫೋಟೋ ಶೇರ್ ಮಾಡಿಕೊಂಡಿದ್ದಾರೆ.
ಸರಳ ಮಹೇಶ್ವರಿ ಅವರ ವಾರ್ತೆ ನಿರೂಪಣೆಗೂ ಇಂದಿನ ಆಂಕರ್ ವಾಚನಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಸರಳ ಮಹೇಶ್ವರಿ ಅವರು ರಾಜ್ಯಸಭೆ ಮಾಜಿ ಸದಸ್ಯರಾಗಿದ್ದರು.
ಆಗಿನ್ನೂ ಟಿವಿ ಎಲ್ಲರ ಮನೆಗೂ ಕಾಲಿಡುತ್ತಿದ್ದ ಸಮಯ. ಎಲ್ಲರ ಮನೆಯಲ್ಲಿಯೂ ಬ್ಲ್ಯಾಕ್ ಆ್ಯಂಡ್ ವೈಟ್ ಟಿವಿ ಸಾಮಾನ್ಯವಾಗಿ ಇರುತ್ತಿತ್ತು. ಎಲ್ಲಿಯೋ ಊರಲ್ಲಿ ಒಂದಿಬ್ಬರ ಮನೆಯಲ್ಲಿ ಟಿವಿ ಇರುತ್ತಿತ್ತು. ಅದರಲ್ಲಿಯೂ ಕಲರ್ ಟಿವಿ ಅಂದ್ರೆ ಸಾಮಾನ್ಯವಾಗಿ ಎಟುಕದ ನಕ್ಷತ್ರ. ಅಂಥ ಟೈಮಲ್ಲಿ ವಾರದಲ್ಲೊಮ್ಮೆ ಪ್ರಸಾರವಾಗುತ್ತಿದ್ದ ರಾಮಾಯಣ, ಮಹಾಭಾರತ ಧಾರಾವಾಹಿಗಳ ಜೊತೆ ದಿನಕ್ಕೊಂದೆರಡು ಸಲ ಪ್ರಸಾರವಾಗುವ ಬುಲೆಟೆನ್ಸ್‌ಗೆ ಜನರು ಕಾತುರದಿಂದ ಕಾಯುತ್ತಿದ್ದರು.
ಹಿಂದಿ ಹಾಗೂ ಇಂಗ್ಲಿಷಲ್ಲಿ ಸುದ್ದಿಗಳು ಪ್ರಸಾರವಾಗುತ್ತಿದ್ದವು. ಪ್ರಾದೇಶಿಕ ಭಾಷೆ ಕಾಲಿಟ್ಟಿದ್ದು ಸುಮಾರು ವರ್ಷಗಳ ನಂತರ. ಟಿವಿಯೇ ಒಂದು ಕೌತುಕ ಎಂಬಂತೆ ನೋಡುತ್ತಿದ್ದ ಜಮಾನದಲ್ಲಿ ಸರಳಾ ಮಹೇಶ್ವರಿ ಹೆಸರಿಗೆ ತಕ್ಕಂತೆ ಸರಳವಾಗಿ, ಸೀರೆಯುಟ್ಟು, ಸ್ಪಷ್ಟವಾಗಿ ಸುದ್ದಿ ಓದುತ್ತಿದ್ದು ಎಲ್ಲರನ್ನೂ ಮನ ಮುಟ್ಟುವಂತಿತ್ತು. ಅದರಲ್ಲಿಯೂ ಜರ್ನಲಿಸಂ ಅಂದ್ರೆ ಹೆಣ್ಣು ಮಕ್ಕಳು ದೂರವೇ ಉಳಿಯುತ್ತಿದ್ದ ಕಾಲದಲ್ಲಿ, ಎಲ್ಲರಿಗೂ ನ್ಯೂಸ್ ಆ್ಯಂಕರ್ ಆಗಬೇಕೆಂಬ ಆಸೆ ಹುಟ್ಟಿಸಿದ ಕೆಲವೇ ಕೆಲವು ನ್ಯೂಸ್ ರೀಡರ್ಸ್‌ನಲ್ಲಿ ಇವರು ಪ್ರಮುಖರು.
ದೂರದರ್ಶನದಲ್ಲಿ ಸ್ಕ್ರೀನ್ ರೈಟರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ ಸರಳಾ ಮಹೇಶ್ವರಿಯವರು , ಅಲ್ಲಿಯೇ ನ್ಯೂಸ್ ರೀಡರ್ ಆಗಿ ಮುಂದುವರಿದರು. ನಂತರ ದಿಲ್ಲಿ ವಿಶ್ವವಿದ್ಯಾಲಯದಲ್ಲಿ ಪಾಠ ಮಾಡುತ್ತಿದ್ದ ಸರಳಾ ಅವರು, ಸಂಜೆ ವೇಳೆ ದೂರದರ್ಶನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. 80ರ ದಶಕದಲ್ಲಿ ಬ್ಲ್ಯಾಕ್ ಆ್ಯಂಡ್ ವೈಟ್ ಟಿವಿಯಿಂದ ಕಲರ್ ಟಿವಿಗೆ ಜನರು ಶಿಫ್ಟ್ ಆಗುತ್ತಿದ್ದ ವೇಳೆಯಲ್ಲಿ ಭಾರತದಲ್ಲಿ ನಡೆದ ಏಷ್ಯನ್ ಗೇಮ್ಸ್ ಅನ್ನು ರಸವತ್ತಾಗಿ ಆ್ಯಂಕರ್ ಮಾಡುತ್ತಿದ್ದರು.
1991ರಲ್ಲಿ ರಾಜೀವ್ ಗಾಂಧಿಯವರನ್ನು ಹಂತಕರು ಗುಂಡಿಕ್ಕು ಹತ್ಯೆಗೈದಿದ್ದಾಗ, ಇದೇ ಸರಳಾ ಅವರು ಇಡೀ ದೇಶಕ್ಕೆ ಈ ನೋವಿನ ಸುದ್ದಿ ಓದಿ ಹೇಳಿದ್ದರು. ಅಲ್ಲದೇ ಸ್ಥಳಕ್ಕೇ ಧಾವಿಸಿ, ರಾಜೀವ್ ಹತ್ಯೆ ವರದಿಯನ್ನು ಜನರ ಮುಂದಿಟ್ಟಿದ್ದರು. 1997ರಲ್ಲಿ ನೊಬೇಲ್ ಪ್ರಶಸ್ತಿ ಪುರಸ್ಕೃತೆ ಮದರ್ ಥೆರೆಸಾ ಕೊನೆಯುಸಿರೆಳೆದಾಗಲೂ ಪಶ್ಚಿಮ ಬಂಗಾಳಕ್ಕೆ ತೆರಳಿ, ಅಂತ್ಯ ಸಂಸ್ಕಾರವನ್ನು ವರದಿ ಮಾಡಿದ್ದರು. ತಮ್ಮ ಯಶಸ್ಸಿನ ಹಿಂದೆ ತಂದೆಯವರ ಪ್ರೋತ್ಸಾಹವಿದೆ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಇದೀಗ ನ್ಯೂಸ್ ಚಾನೆಲ್‌ಗಳ ಭರಾಟೆ. ಹೇಳಿದ್ದನ್ನೇ ದಿನಪೂರ್ತಿ ಕಿರುಚುವ ನ್ಯೂಸ್ ಆ್ಯಂಕರ್ಸ್ ಮುಂದೆ, ನ್ಯೂಸ್ ರೀಡಿಂಗ್‌ಗೆ ಘನತೆ ತಂದು ಕೊಟ್ಟವರಾಗಿದ್ದರು ಸರಳಾ ಮಹೇಶ್ವರಿಯವರಂಥ ನ್ಯೂಸ್ ರೀಡರ್ಸ್. ಅಲ್ಲದೇ ರಿನಿ ಖನ್ನಾ, ನೀತಿ ರವೀಂದ್ರನ ಸೇರಿ ಹಲವರು ದೂರದರ್ಶನದ ಕೀರ್ತಿ ಪತಾಕೆ ಹಾರಿಸಿದವರಲ್ಲಿ ಪ್ರಮುಖರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ