ಕೊರೋನಾ ಹಾವಳಿ ಮಧ್ಯೆ ಕಸದ ಲಾರಿಯಲ್ಲಿ ವೆಂಟಿಲೇಟರ್ಸ್‌ ರವಾನೆ!

By Suvarna NewsFirst Published Apr 6, 2021, 3:46 PM IST
Highlights

ಕೊರೋನಾ ಅಬ್ಬರದ ನಡುವೆ ಕಸದ ಲಾರಿಯಲ್ಲಿ ವೆಂಟಿಲೇಟರ್‌ ರವಾನೆ| ಪಾಲಿಕೆ ಸಿಬ್ಬಂದಿ ನಿರ್ಲಕ್ಷ್ಯ| ತನಿಖೆ ಮಾಡುವುದಾಗಿ ಕಲೆಕ್ಟರ್‌ ಭರವಸೆ

ಅಹಮದಾಬಾದ್(ಏ.06): ದೇಶಾದ್ಯಂತ ಕೊರೋನಾ ಹಾವಳಿ ಮತ್ತೆ ಜನರ, ಸರ್ಕಾರದ ನಿದ್ದೆಗೆಡಿಸಿದೆ. ಸೋಂಕು ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಅನೇಕ ರಾಜ್ಯಗಳಲ್ಲಿ ನೈಟ್‌ ಕರ್ಫ್ಯೂ ಕೂಡಾ ಘೋಷಿಸಲಾಗಿದೆ. ಹೀಗಿರುವಾಗಲೇ ಗುಜರಾತ್‌ನ ಸೂರತ್‌ನಲ್ಲಿ 34 ವೆಂಟಿಲೇಟರ್ಸ್‌ಗಳನ್ನು ಕಸದ ಲಾರಿಯಲ್ಲಿ ಆಸ್ಪತ್ರೆಗೆ ಸಾಗಿಸಿರುವ ಘಟನೆ ಬೆಳಕಿಗೆ ಬಂದಿದೆ.

ಗುಜರಾತ್‌ನಲ್ಲಿ ಸೋಮವಾರ ಒಂದೇ ದಿನ ಮೂರು ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದು, ಇಲ್ಲಿನ ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ಗಳ ಕೊರತೆ ಕಂಡು ಬಂದಿದೆ. ಹೀಗಿರುವಾಗ ಈ ಸಮಸ್ಯೆಯನ್ನು ಆಲಿಸಿದ ಗುಜರಾತ್‌ ಸರ್ಕಾರ ಇಲ್ಲಿನ ವಲ್ಸಾದ್‌ನಿಂದ ಸೂರತ್‌ಗೆ ವೆಂಟಿಲೇಟರ್‌ ರವಾನಿಸುವಂತೆ ಆದೇಶಿಸಿದೆ. ಆದರೆ ಪಾಲಿಕೆ ಅಧಿಕಾರಿಗಳು ಸರ್ಕಾರದ ಈ ಆದೇಶವನ್ನೇನೋ ಪಾಲಿಸಿದ್ದಾರೆ. ಆದರೆ ವೆಂಟಿಲೇಟರ್‌ಗಳನ್ನು ಕಸದ ಲಾರಿಯಲ್ಲಿ ರವಾನಿಸಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ವಲ್ಸದ್‌ನ ಕಲೆಕ್ಟರ್ ಆರ್‌. ಆರ್‌. ರಾವಲ್, ಸೂರತ್‌ ನಗರ ಪಾಲಿಕೆ ಕಳುಹಿಸಿಕೊಟ್ಟ ವಾಹನದಲ್ಲೇ ವೆಂಟಿಲೇಟರ್‌ಗಳನ್ನು ಕಳುಹಿಸಿಕೊಟ್ಟಿರುವುದಾಗಿ ನನಗೆ ನಮ್ಮ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದಿದ್ದಾರೆ. ಅಲ್ಲದೇ ಈ ಬಗ್ಗೆ ತಾವು ತನಿಖೆಗೆ ಆದೇಶಿಸುವುದಾಗಿಯೂ ತಿಳಿಸಿದ್ದಾರೆ.

ಒಟ್ಟಾರೆಯಾಘಿ ಕೊರೋನಾ ಪ್ರಕರಣಗಳು ಏರುತ್ತಿರುವ ಮಧ್ಯೆ ಅಧಿಕಾರಿಗಳ ಇಂತಹ ನಿರ್ಲಕ್ಷ್ಯ ಈ ಸೋಂಕು ಹಬ್ಬಲು ಮತ್ತಷ್ಟು ಕಾರಣವಾಗಲಿದೆ ಎಂಬುವುದರಲ್ಲಿ ಅನುಮಾನವಿಲ್ಲ. 

click me!