8 ವರ್ಷದ ಬಾಲಕಿ ಚಲಿಸುತ್ತಿದ್ದ ರೈಲಿನ ಎಮರ್ಜೆನ್ಸಿ ಕಿಟಕಿಯಿಂದ ಹೊರಗೆ ಬಿದ್ದು ಪವಾಡಸದೃಶವಾಗಿ ಬದುಕುಳಿದಿದ್ದಾಳೆ. ದಟ್ಟ ಅರಣ್ಯದಲ್ಲಿ ಪೊದೆಗಳ ನಡುವೆ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ.
ನವದೆಹಲಿ (ಅ.15): ಉತ್ತರ ಪ್ರದೇಶ ಮಥುರಾದಲ್ಲಿ 8 ವರ್ಷದ ಬಾಲಕಿಯೊಬ್ಬಳು ಚಲಿಸುತ್ತಿದ್ದ ರೈಲಿನ ಎಮರ್ಜೆನ್ಸಿ ಕಿಟಿಕಿಯಿಂದ ಹೊರಗೆ ಬಿದ್ದಿರುವ ಘಟನೆ ನಡೆದಿದೆ. ಪ್ರಯಾಣದ ವೇಳೆ ಮಗು ಎಮರ್ಜೆನ್ಸಿ ಕಿಟಿಕಿಯ ಬಳಿ ಕುಳಿತುಕೊಂಡಿತ್ತು. ಅಂದಾಜು ಗಂಟೆಗೆ 100 ಕಿಲೋಮೀಟರ್ ವೇಗದಲ್ಲಿ ರೈಲು ಚಲಿಸುತ್ತಿರುವಾಗ ಕಿಟಿಕಿಯ ಪಕ್ಕದಲ್ಲಿ ಕುಳಿತಿದ್ದ ಮಗು ನಾಪತ್ತೆಯಾಗಿರುವುದು ತಂದೆ-ತಾಯಿಗೆ ಗೊತ್ತಾಗಿದೆ. ದಟ್ಟ ಅರಣ್ಯದ ನಡುವೆ ರೈಲು ಚಲಿಸುತ್ತಿದ್ದ ಸಮಯದಲ್ಲಿ ರೈಲನ್ನು ನಿಲ್ಲಿಸಲಾಗಿದ್ದು,ಮಗುವಿನ ಹುಡುಕಾಟ ನಡೆಸಲಾಗಿದೆ. ಈ ಹಂತದಲ್ಲಿ ಪೊದೆಗಳ ನಡುವೆ ಬಾಲಕಿ ಸಿಕ್ಕಿದ್ದಾಳೆ. ಆಕೆಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಆದರೆ, ಮಗು ಬದುಕಿರುವ ರೀತಿಯೇ ದೇವರ ಪವಾಡ ಎಂದು ಪ್ರಯಾಣಿಕರು ಹೇಳಿದ್ದಾರೆ.
ಮಗು ಹೊರಗೆ ಬಿದ್ದ ಸ್ಥಳದಿಂದ 10-15 ಕಿಲೋಮೀಟರ್ ದೂರ ರೈಲು ಚಲಿಸಿದಾಗ ಈ ವಿಚಾರ ಗೊತ್ತಾಗಿದೆ. ತಕ್ಷಣವೇ ರೈಲನ್ನು ನಿಲ್ಲಿಸಲಾಗಿದೆ. ಅಂದಾಜು 17 ಕಿಲೋಮೀಟರ್ ದೂರದಲ್ಲಿ 8 ವರ್ಷದ ಮಗು ಸಿಕ್ಕಿದೆ. ಮಗುವಿನ ಒಂದು ಕಾಲು ಮುರಿದುಹೋಗಿದೆ. ಭಾನುವಾರ ಸಂಜೆಯ ವೇಳೆಗೆ ಮಗುವಿಗೆ ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಮಾಡಲಾಗಿದೆ.
ವೃಂದಾವನದ ರಂಗನಾಥ ದೇವಸ್ಥಾನದ ಬಳಿ ವಾಸಿಸುವ ಅರವಿಂದ್ ತಿವಾರಿ ಅವರು ತಮ್ಮ ಪತ್ನಿ ಅಂಜಲಿ, 8 ವರ್ಷದ ಮಗಳು ಗೌರಿ ಮತ್ತು 5 ವರ್ಷದ ಮಗ ಮೃದುಲ್ ಅವರೊಂದಿಗೆ ಮಧ್ಯಪ್ರದೇಶದ ಟಿಕಮ್‌ಗಢ್‌ನಲ್ಲಿರುವ ತಮ್ಮ ಪೂರ್ವಜರ ಹಳ್ಳಿಯಲ್ಲಿ ನವರಾತ್ರಿಯನ್ನು ಆಚರಿಸಲು ಹೋಗಿದ್ದರು. ಅಷ್ಟಮಿ ಪೂಜೆ ಮುಗಿಸಿ ಶುಕ್ರವಾರ ಗೀತಾ ಜಯಂತಿ ಎಕ್ಸ್ ಪ್ರೆಸ್ ರೈಲಿನಲ್ಲಿ ಮಥುರಾಗೆ ಬರುತ್ತಿದ್ದರು. ಈ ವೇಳೆ ಲಲಿತಪುರ ರೈಲು ನಿಲ್ದಾಣದಿಂದ 7-8 ಕಿ.ಮೀ ದೂರದಲ್ಲಿ ಈ ಅಪಘಾತ ಸಂಭವಿಸಿದೆ.
ರೈಲಿನ ತುರ್ತು ಕಿಟಕಿಯಿಂದ ಬಿದ್ದ ಗೌರಿ ಮಾತನಾಡಿದ್ದು, ರೈಲಿನ ಕಿಟಿಕಿಯ ಬಳಿ ನಾನು ಕುಳಿತಿದ್ದೆ. ತಮ್ಮನ ಜೊತೆ ಆಟ ಆಡ್ತಿದ್ದೆ. ರೈಲಿನ ಕಿಟಕಿ ತೆರೆದಿತ್ತು. ಇದ್ದಕ್ಕಿಂದ್ದಂತೆ ರೈಲು ದೊಡ್ಡದಾಗಿ ತಿರುಗಿಕೊಂಡಿತು. ಸ್ಪೀಡ್ ಆಗಿ ಗಾಳಿ ಬೀಸುತ್ತಾ ಇದ್ದ ಕಾರಣಕ್ಕೆ ನಾನು ಕಿಟಕಿಯಿಂದ ಹೊರಗೆ ಬಿದ್ದೆ. ನನ್ನ ಕಾಲಿಗೆ ಗಾಯವಾಗಿತ್ತು. ಆದ್ದರಿಂದ ನನಗೆ ಎದ್ದು ನಿಲ್ಲಲು ಕೂಡ ಸಾಧ್ಯವಾಗಲಿಲ್ಲ. ನಾನು ಸುಮಾರು ಎರಡು ಗಂಟೆಗಳ ಕಾಲ ಪೊದೆಯಲ್ಲಿ ಅಳುತ್ತಾ ಮಲಗಿದ್ದೆ. ಕತ್ತಲೆ ಇದ್ದ ಕಾರಣದಿಂದ ನನಗೆ ಭಯವಾಗಿತ್ತು. ನಂತರ ಅಪ್ಪ-ಅಮ್ಮ ಬಂದರು ಎಂದಿದ್ದಾಳೆ. ಈ ವೇಳೆ ಅಳುತ್ತಲೇ ಇದ್ದ ಗೌರಿಯ ತಾಯಿ ಅಂಜಲಿ, 'ಮಗಳು ಸುರಕ್ಷಿತವಾಗಿ ಸಿಕ್ಕಿದ್ದರಿಂದ ಖುಷಿಯಾಗಿದೆ. ನವರಾತ್ರಿಯಲ್ಲಿ ದೇವಿ ಪವಾಡ ಇದು. ಅದನ್ನು ನಾವು ಎಂದಿಗೂ ಮರೆಯುವುದಿಲ್ಲ. ನನ್ನ ಮಗಳು ಮರುಜನ್ಮ ಪಡೆದಿದ್ದಾಳೆ' ಎಂದಿದ್ದಾರೆ
ಗೌರಿ ಅವರ ತಂದೆ ಅರವಿಂದ್ ಮಾತನಾಡಿ, ಎಸ್3 ಕೋಚ್‌ನಲ್ಲಿ ನಮ್ಮ ರಿಸರ್ವೇಷನ್ ಇತ್ತು. ರಾತ್ರಿ 10 ಗಂಟೆ ಸುಮಾರಿಗೆ ಕುಟುಂಬದವರು ಊಟ ಮಾಡಿದರು. ಗೌರಿ ಮತ್ತು ಮೃದುಲ್ ಎಮರ್ಜೆನ್ಸಿ ಕಿಟಕಿಯ ಬಳಿ ಕುಳಿತು ಆಟವಾಡುತ್ತಿದ್ದರು. ಇದೇ ವೇಳೆ ಎಸ್ 3 ಕೋಚ್‌ನ ಮತ್ತೊಂದು ಸೀಟಿನಲ್ಲಿದ್ದ ಪತ್ನಿಯ ಬಳಿ ಮಗ ಮೃದುಲ್‌ನನ್ನು ಬಿಡಲು ತೆರಳಿದ್ದೆ. ಮರಳಿ ಸೀಟ್‌ಗೆ ಬಂದಾಗ ಮಗಳು ಕಾಣಲಿಲ್ಲ. ಇಡೀ ರೈಲಿನಲ್ಲಿ ಆಕೆಯನ್ನು ಹುಡುಕಿದರೂ ಸಿಗಲಿಲ್ಲ. ಈ ಹಂತದಲ್ಲಿ ಸಂಪೂರ್ಣವಾಗಿ ತೆರೆದಿದ್ದ ತಿರ್ತು ಕಿಟಿಕಿಯ ಬಳಿ ತೆರಳಿತು. ಚೈನ್ ಎಳೆದು ರೈಲನ್ನು ನಿಲ್ಲಿಸಿದೆ. ಘಟನೆ ನಡೆದ ಸ್ಥಳದಿಂದ ಸುಮಾರು 10-15 ಕಿಲೋಮೀಟರ್ ಮುಂದೆ ರೈಲು ಬಂದಿತ್ತು. ಹುಡುಕಾಟದ ಸಮಯದಲ್ಲಿ, ಮಗಳು ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ ಎಂದಿದ್ದಾರೆ.
ಮೈಸೂರು-ದರ್ಭಾಂಗ ಭಾಗಮತಿ ಎಕ್ಸ್‌ಪ್ರೆಸ್ ದುರಂತದ ಆಘಾತಕಾರಿ ಚಿತ್ರಗಳು..
ಕೂಡಲೇ ಪೊಲೀಸರು ಲಲಿತ್‌ಪುರ ಜಿಆರ್‌ಪಿಗೆ ಮಾಹಿತಿ ನೀಡಿದ್ದಾರೆ ಎಂದು ರೈಲಿನಲ್ಲಿದ್ದ ಜಿಆರ್‌ಪಿ ಮತ್ತು ಇತರ ಪೊಲೀಸರು ತಿಳಿಸಿದ್ದಾರೆ. 16-17 ಕಿ.ಮೀ ಉದ್ದದ ರೈಲ್ವೇ ಹಳಿಯಲ್ಲಿ ಗೌರಿಯನ್ನು ಹುಡುಕಲು ಜಿಆರ್‌ಪಿ ಲಲಿತ್‌ಪುರ ಪೊಲೀಸ್ ಠಾಣೆ ಪ್ರಭಾರಿ ತಕ್ಷಣವೇ 4 ತಂಡಗಳನ್ನು ರಚಿಸಿದರು. ಈ ಕಡೆಯಿಂದ ಜಿಆರ್‌ಪಿ ಮತ್ತು ಕುಟುಂಬಸ್ಥರೂ ಆಕೆಯನ್ನು ಹುಡುಕಿಕೊಂಡು ಬರುತ್ತಿದ್ದರು. ಕಾಡಿನಲ್ಲಿ ರೈಲು ನಿಲ್ಲಿಸಿದ ಸ್ಥಳದಿಂದ ಸಾಕಷ್ಟು ದೂರದಲ್ಲಿ ಹಳಿಯ ಬಳಿಯ ಪೊದೆಗಳಲ್ಲಿ ಬಾಲಕಿ ಅಳುತ್ತಿದ್ದಳು. ಆಕೆಯ ಕೈ, ಕಾಲು ಮತ್ತು ದೇಹದ ಮೇಲೆ ಗಾಯದ ಗುರುತುಗಳಿದ್ದವು.
ರಸ್ತೆ ಕೆಳ ಸೇತುವೆ ಕಾಮಗಾರಿ, ಈ ಭಾಗದ ಹಲವು ರೈಲುಗಳು ರದ್ದು, ಭಾಗಶಃ ರದ್ದು!
ಬಾಲಕಿಯನ್ನು ಸುರಕ್ಷಿತವಾಗಿ ರಕ್ಷಿಸಿದ ಬಳಿಕ ರೈಲ್ವೆ ಪೊಲೀಸರು ಆ ಮೂಲಕ ಸಾಗುತ್ತಿದ್ದ ಗೂಡ್ಸ್ ರೈಲನ್ನು ತಡೆದಿದ್ದಾರೆ. ಬಾಲಕಿ ಮತ್ತು ಆಕೆಯ ಕುಟುಂಬದವರು ರೈಲು ಹತ್ತಿ ಲಲಿತ್‌ಪುರ ರೈಲು ನಿಲ್ದಾಣ ತಲುಪಿದರು. ವೈದ್ಯರು ಬಾಲಕಿಗೆ ಠಾಣೆಯಲ್ಲಿಯೇ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಬಳಿಕ ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.