ಉತ್ತರಾಖಂಡದಲ್ಲಿ ನಿರ್ಮಾಣ ಹಂತದ ಸುರಂಗ ಮಾರ್ಗ ಕುಸಿದು ಇದೀಗ 60 ಗಂಟೆಗಳು ಕಳೆದಿದೆ. 40 ಕಾರ್ಮಿಕರು ಈ ಸುರಂಗದೊಳಗೆ ಸಿಲುಕಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇದೀಗ ಪೈಪ್ ಮೂಲಕ ಸುಲಿಕಿರುವ ಕಾರ್ಮಿಕರಿಗೆ ಆಹಾರ, ನೀರು, ಆಮ್ಲಜನಕ ಒದಗಿಸಲಾಗಿದೆ. ಇದೇ ವೇಳೆ ಕಾರ್ಮಿಕನೋರ್ವ ತನ್ನ ಮಗನೊಂದಿಗೆ ಪೈಪ್ ಮೂಲಕ ಮಾತನಾಡಿದ್ದಾರೆ.
ಉತ್ತರಕಾಶಿ(ನ.14) ಉತ್ತರಖಂಡದಲ್ಲಿ ನಡೆಗ ಸುರಂಗ ದುರಂತದಲ್ಲಿ 40 ಮಂದಿ ಕಾರ್ಮಿಕರು ಒಳಗೆ ಸುಲಿಕಿದ್ದಾರೆ. ಸಿಲ್‌ಕ್ಯಾರಾ ಮತ್ತು ದಾಂಡಲ್‌ಗಾಂವ್ ಮಧ್ಯೆ ನಿರ್ಮಾಣ ಹಂತದಲ್ಲಿದ್ದ ರಾಷ್ಟ್ರೀಯ ಹೆದ್ದಾರಿಯ ಸುರಂಗ ಕುಸಿತಗೊಂಡಿದೆ. ಈ ಸುರಂಗದೊಳಗೆ ಕಾಮಗಾರಿ ನಡೆಸುತ್ತಿದ್ದ 40 ಕಾರ್ಮಿಕರು ಸಿಲುಕಿದ್ದಾರೆ. ಕಳೆದ 60 ಗಂಟೆಯಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸದ್ಯ ಪೈಪ್ ಮೂಲಕ ಕಾರ್ಮಿಕರಿಗೆ ಆಹಾರ, ನೀರು, ಆಮ್ಲಜನಕ ಒದಗಿಸಲಾಗಿದೆ. 40 ಮಂದಿ ಕಾರ್ಮಿಕರು ಸುರಕ್ಷಿತವಾಗಿದ್ದಾರೆ ಎಂದು ರಕ್ಷಣಾ ತಂಡಗಳು ಹೇಳಿವೆ. ರಕ್ಷಣೆಗೆ ಇನ್ನೂ 24 ಗಂಟೆ ಅವಶ್ಯಕತೆ ಇದೆ ಎಂದಿದ್ದಾರೆ. ಇದೇ ವೇಳೆ ಪೈಪ್ ಮೂಲಕ ಸುರಂಗದೊಳಗೆ ಸಿಲುಕಿರುವ ಕಾರ್ಮಿಕ, ತನ್ನ ಮಗನ ಜೊತೆ ಮಾತನಾಡಿ ಅಭಯ ನೀಡಿದ್ದಾರೆ.
ಗಬ್ಬರ್ ಸಿಂಗ್ ನೇಗಿ ಸೇರಿದಂತೆ 40 ಮಂದಿ ಕಾರ್ಮಿಕರು ಸುರಂಗದೊಳಗೆ ಸಿಲುಕಿದ್ದಾರೆ. ಸತತ ಕಾರ್ಯಾಚರಣೆ ಬಳಿಕ ಕಾರ್ಮಿಕರ ಇರುವಲ್ಲಿಗೆ ಪೈಪ್ ಇಳಿಸಲಾಗಿದೆ. ಇದೇ ಪೈಪ್ ಮೂಲಕ ಕಾರ್ಮಿಕ ಗಬ್ಬರ್ ಸಿಂಗ್ ತನ್ನ ಮಗನ ಜೊತೆ ಕೂಗಿ ಮಾತನಾಡಿದ್ದಾರೆ. ಇಲ್ಲಿ ನಾವು ಒಟ್ಟು 40 ಮಂದಿ ಇದ್ದೇವೆ. ಎಲ್ಲರೂ ಸುರಕ್ಷಿತವಾಗಿದ್ದಾರೆ. ಮನೆಯಲ್ಲಿ ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ. ನೀವು ಎದೆಗುಂದಬೇಡಿ ಎಂದು ಕಾರ್ಮಿಕ ತನ್ನ ಪುತ್ರನಿಗೆ ಧೈರ್ಯ ತುಂಬಿದ ಘಟನೆ ನಡೆದಿದೆ.
ಸುರಂಗ ಕುಸಿದು ಒಳಗೆ ಸಿಲುಕಿದ 40 ಕಾರ್ಮಿಕರು: ಯಮುನೋತ್ರಿಗೆ ಸಂಪರ್ಕ ಕಲ್ಪಿಸುವ ಸುರಂಗ
ತಂದೆ ಜೊತೆ ಮಾತನಾಡಿದ ಪುತ್ರ ಅಕಾಶ್ ಮಾಧ್ಯಮದ ಜೊತೆ ಮಾತನಾಡಿದ್ದಾರೆ. ನನ್ನ ತಂದೆ ಸುಪರ್‌ವೈಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ತಂದೆ ಜೊತೆಗೆ 39 ಕಾರ್ಮಿಕರು ಇದ್ದಾರೆ. ಎಲ್ಲರು ಸುರಕ್ಷಿತವಾಗಿದ್ದಾರೆ. ನೀವು ಆತಂಕದಿಂದ ಇರಬೇಡಿ. ಇಲ್ಲಿನ ಎಲ್ಲಾ ಕಾರ್ಮಿಕರ ಆತ್ಮಸ್ಥೈರ್ಯ ಕುಗ್ಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ನನ್ನದು. ಹೀಗಾಗಿ ಎಲ್ಲರೂ ಧೈರ್ಯದಿಂದ ಇರಿ. ಸುರಕ್ಷಿತವಾಗಿ ಹೊರಬರುತ್ತೇವೆ ಎಂದು ತಂದೆ ಹೇಳಿದ್ದಾರೆ. ಯಾರೂ ಕೂಡ ಗಾಯಗೊಂಡಿಲ್ಲ. ಎಲ್ಲರಿಗೂ ಆಹಾರ, ನೀರು, ಆಮ್ಲಜನಕ ಸಿಗುತ್ತಿದೆ ಎಂದು ತಂದೆ ಹೇಳಿದ್ದಾರೆ. ತಂದೆ ಮಾತುಗಳನ್ನು ಮಾಧ್ಯಮದ ಮುಂದೆ ಇಟ್ಟ ಆಕಾಶ್, ಆದಷ್ಟು ಬೇಗ ಸುರಕ್ಷಿತವಾಗಿ ಎಲ್ಲರೂ ಹೊರಬರಲಿ ಎಂದು ಪ್ರಾರ್ಥಿಸಿದ್ದಾರೆ.
ಕಳೆದ 22 ವರ್ಷದಿಂದ ಸುರಂಗ ನಿರ್ಮಾಣ ಕಾರ್ಯದಲ್ಲಿ ಗಬ್ಬರ್ ಸಿಂಗ್ ನೇಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಆತನ ಜೊತೆಗಿರುವ ಎಲ್ಲಾ ಕಾರ್ಮಿಕರು ಸುರಕ್ಷಿತವಾಗಿರುವ ನಂಬಿಕೆ ಇದೆ ಎಂದು ನೇಗಿ ಸಹೋದರ ಮಹಾರಾಜ್ ಹೇಳಿದ್ದಾರೆ.
ಭಾರತದ ಮೊದಲ ಬುಲೆಟ್ ರೈಲು ಮಾರ್ಗದ ಸುರಂಗ ನಿರ್ಮಾಣ ಯಶಸ್ವಿ
ಕಾರ್ಮಿಕರನ್ನು ರಕ್ಷಿಸುವ ಮಾರ್ಗ ಸಿದ್ಧಪಡಿಸಲಾಗುತ್ತಿದೆ. ರಕ್ಷಣಾ ಪಡೆಗಳು ಅವರಿಗೆ ರಾತ್ರಿಯಿಡೀ ಆಹಾರ ಮತ್ತು ನೀರನ್ನು ಒದಗಿಸಿವೆ. ಹೀಗಾಗಿ ಎಲ್ಲ ಕಾರ್ಮಿಕರು ಸುರಕ್ಷಿತವಾಗಿದ್ದಾರೆ. ಅವರನ್ನು ವಾಕಿ-ಟಾಕಿಯಲ್ಲಿ ಹಲವಾರು ಬಾರಿ ಸಂಪರ್ಕಿಸಲಾಗಿದೆ. ಮತ್ತು ಅವರಿಗೆ ಖಾದ್ಯಗಳು ಮತ್ತು ಕುಡಿವ ನೀರು ಸರಬರಾಜು ಮಾಡಲಾಗಿದೆ. ನೀರಿನ ಪೈಪ್‌ಲೈನ್ ಮೂಲಕ ಸಾಕಷ್ಟು ಆಮ್ಲಜನಕ ಲಭ್ಯವಾಗಿರುವುದರಿಂದ ಕಾರ್ಮಿಕರ ಸುರಕ್ಷತೆ ಬಗ್ಗೆ ಭರವಸೆ ಇದೆ. ಮಂಗಳವಾರ ರಾತ್ರಿ ಇಲ್ಲವೇ ಬುಧವಾರದ ವೇಳೆಗೆ ಕಾರ್ಮಿಕರ ರಕ್ಷಣೆ ಆಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.