ಕೊಲೆ ಪ್ರಕರಣವನ್ನು ಕ್ಷಣದಲ್ಲಿ ಭೇದಿಸಿದ ಶ್ವಾನಕ್ಕೆ 'ಬೆಸ್ಟ್ ಕಾಪ್ ಅವಾರ್ಡ್‌'

By Anusha Kb  |  First Published Mar 12, 2023, 4:12 PM IST

 ಕೊಲೆ ಪ್ರಕರಣವೊಂದನ್ನು ನಿಮಿಷದಲ್ಲಿ ಭೇದಿಸಿದ ಶ್ವಾನವೀಗ ತಿಂಗಳ ಅತ್ಯುತ್ತಮ ಸಿಬ್ಬಂದಿ ಪ್ರಶಸ್ತಿಗೆ ಆಯ್ಕೆ ಆಗಿದೆ. ಉತ್ತರಾಖಂಡ್‌ನ ಉದ್ಧಾಮ್‌ ಸಿಂಗ್ ನಗರದ ಪೊಲೀಸರು, ತಮ್ಮ ಶ್ವಾನದಳದ ಶ್ವಾನ ಕ್ಯಾಟಿ (Kattie)ಯನ್ನು  ಬೆಸ್ಟ್ ಕಾಪ್ ಅವಾರ್ಡ್‌ಗೆ ಆಯ್ಕೆ ಮಾಡಿದ್ದಾರೆ.


ಡೆಹ್ರಾಡೂನ್‌:  ಕೊಲೆ ಪ್ರಕರಣವೊಂದನ್ನು ನಿಮಿಷದಲ್ಲಿ ಭೇದಿಸಿದ ಶ್ವಾನವೀಗ ತಿಂಗಳ ಅತ್ಯುತ್ತಮ ಸಿಬ್ಬಂದಿ ಪ್ರಶಸ್ತಿಗೆ ಆಯ್ಕೆ ಆಗಿದೆ. ಉತ್ತರಾಖಂಡ್‌ನ ಉದ್ಧಾಮ್‌ ಸಿಂಗ್ ನಗರದ ಪೊಲೀಸರು, ತಮ್ಮ ಶ್ವಾನದಳದ ಶ್ವಾನ ಕ್ಯಾಟಿ (Kattie)ಯನ್ನು  ಬೆಸ್ಟ್ ಕಾಪ್ ಅವಾರ್ಡ್‌ಗೆ ಆಯ್ಕೆ ಮಾಡಿದ್ದಾರೆ. ಕೊಲೆ ಪ್ರಕರಣವೊಂದರಲ್ಲಿ ಶಂಕಿತ ಆರೋಪಿಯನ್ನು  30 ಸೆಕೆಂಡ್‌ನಲ್ಲಿ ಪತ್ತೆ ಮಾಡಿದ್ದಕ್ಕಾಗಿ ಶ್ವಾನಕ್ಕೆ ಈ ಗೌರವ ನೀಡಲಾಗಿದೆ.  ಕೊಲೆ ಪ್ರಕರಣದ ತನಿಖೆಗಿಳಿದ ಪೊಲೀಸ್‌ ತಂಡದ ಭಾಗವಾಗಿದ್ದ ಈ ಶ್ವಾನ ಪೊಲೀಸರಿಗೆ ಪ್ರಕರಣ ಭೇದಿಸಲು ನೆರವಾಗಿತ್ತು. 

ಮಾರ್ಚ್ ಒಂದರಂದು ದಾಖಲಾಗಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜರ್ಮನ್ ಶೆಫರ್ಡ್‌ ತಳಿಯ ಪೊಲೀಸ್ ಶ್ವಾನ ಕ್ಯಾಟಿ,  ಶಂಕಿತ ಆರೋಪಿಯನ್ನು ಹಿಡಿದು ಹಾಕಿತ್ತು.  21 ವರ್ಷದ ಶಕೀಬ್ ಅಹ್ಮದ್‌, ಎಂಬ ವ್ಯಕ್ತಿ ಕೊಲೆಯಾಗಿದ್ದ, ಆತನ ದೇಹದಲ್ಲಿ ಗಾಯದ ಗುರುತುಗಳಿದ್ದವು. ಉದ್ಧಮ್ ಸಿಂಗ್ ನಗರ ಜಿಲ್ಲೆಯಲ್ಲಿ ಬರುವ ಜಸ್ಪುರ್ ಪೊಲೀಸ್ ಠಾಣಾ ವ್ಯಾಪ್ತಿಯ ಹೊಲವೊಂದರಲ್ಲಿ  ಶಕೀಬ್‌ನ ಮೃತದೇಹ ಪತ್ತೆಯಾಗಿತ್ತು. 

Tap to resize

Latest Videos

ಹಲವು ಪ್ರಕರಣ ಭೇದಿಸಿದ ಅರಣ್ಯ ಇಲಾಖೆ ಮುದ್ದಿನ ರಾಣಾ ಸಾವು, ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ!

 ರಕ್ತದ ಕಲೆಯಿಂದ ಕೂಡಿದ್ದ ಶಕೀಬ್‌ಗೆ ಸೇರಿದ ಬಟ್ಟೆಗಳು ಆತನ ಮೃತದೇಹ ಪತ್ತೆಯಾದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಪತ್ತೆಯಾಗಿದ್ದವು. ನಂತರ ಪೊಲೀಸರು ಶಂಕಿತರ ವಿಚಾರಣೆ ನಡೆಸಿದ್ದರು. ಕುಟುಂಬ ಸದಸ್ಯರು ಸೇರಿದಂತೆ ಎಲ್ಲರೂ ಶ್ವಾನ ಕ್ಯಾಟಿಯ ಮುಂದೆ ಸಾಲಾಗಿ ನಿಂತಿದ್ದರು. 

ಹೀಗೆ ಎಲ್ಲರ ವಾಸನೆ ಹಿಡಿದು 30 ಸೆಕೆಂಡುಗಳಲ್ಲಿ ಈ ಶ್ವಾನ ಕೊಲೆಯಾದ ಶಕೀಬ್‌ನ ಸಂಬಂಧಿ ಖಾಸೀಂ (Qasim)ನನ್ನು ನೋಡಿ ಜೋರಾಗಿ ಬೊಗಳಲು ಶುರು ಮಾಡಿತ್ತು. ಆತ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿ ನಿಂತಿದ್ದ.  ಆಕೆಯ ಗುರುತಿಸಿದಂತೆ ಖಾಸೀಂನನ್ನು ಹಿಡಿದು ತೀವ್ರವಾಗಿ ವಿಚಾರಣೆ ನಡೆಸಿದಾಗ ಆತ ಅಳಲು ಶುರು ಮಾಡಿದ್ದಲ್ಲದೇ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ.  ನಂತರ ಆತನನ್ನು ಬಂಧಿಸಲಾಯಿತು ಎಂದು ಉದ್ಧಮ್‌ ಸಿಂಗ್ ನಗರ ಜಿಲ್ಲೆಯ ಎಸ್‌ಎಸ್‌ಪಿ ಮಂಜುನಾಥ್ ಟಿಸಿ ಹೇಳಿದರು. 

ಅಲ್ಲದೇ ಪೊಲೀಸ್ ಇಲಾಖೆಯೂ ಮಾರ್ಚ್ 7 ರಂದು ಕ್ಯಾಟಿಗೆ 2500 ರೂಪಾಯಿಗಳ ನಗದು ಬಹುಮಾನವನ್ನು ಕೂಡ ಘೋಷಿಸಿದ್ದರು. ಜೊತೆಗೆ ತಿಂಗಳ ಅತ್ಯುತ್ತಮ ಸಿಬ್ಬಂದಿ ಎಂಬ ಪ್ರಶಸ್ತಿಯನ್ನು ನೀಡಿದ್ದಾರೆ. ರಾಜ್ಯ ಮಟ್ಟದ ಪ್ರಶಸ್ತಿಗೆ ಶ್ವಾನವೊಂದನ್ನು ಆಯ್ಕೆ ಮಾಡಿರುವುದು ಇದೇ ಮೊದಲು ಎಂದು ಎಸ್‌ಎಸ್‌ಪಿ ಮಂಜುನಾಥ್ ಹೇಳಿದರು.  ಕ್ಯಾಟಿಗೆ ಸ್ಮರಣಿಕೆ ಹಾಗೂ ಪದಕ ನೀಡಲಾಗುವುದು. ಅದನ್ನು ಕ್ಯಾಟಿಯನ್ನು ನಿರ್ವಹಿಸುವವರು ಜೊತೆಯಲ್ಲಿರಿಸಿಕೊಳ್ಳುವರು.  ಕ್ಯಾಟಿಯ ಸಹಾಯವಿಲ್ಲದಿದ್ದರೆ ಈ ಪ್ರಕರಣವನ್ನು ಭೇದಿಸಲು ಪೊಲೀಸರಿಗೆ ಮತ್ತಷ್ಟು ಸಮಯ ಬೇಕಾಗಿದ್ದಿರಬಹುದು ಎಂದು ಜಸ್ಪುರ್ (Jaspur) ಎಸ್‌ಹೆಚ್ಒ  ಪಿಎಸ್ ಧನು ಹೇಳಿದರು. 

ಕಣ್ಣಿಗೆ ಕೂಲಿಂಗ್ ಗ್ಲಾಸ್‌ ಕಾಲಿಗೆ ಶೂಸ್‌: ಶ್ವಾನದಳಕ್ಕೆ ವಿಶೇಷ ಸವಲತ್ತು

ನಾವು ಸಾಮಾನ್ಯವಾಗಿ ಸಿಸಿಟಿವಿ ಚೆಕ್‌ ಮಾಡುವುದು. ಕರೆ ಪರಿಶೀಲಿಸುವುದು. ಸ್ಥಳೀಯರನ್ನು ವಿಚಾರಿಸುವುದು ಹೀಗೆ ನಮ್ಮ ವಿಚಾರಣೆ ನಡೆಯುತ್ತದೆ.  ಆದರೆ ಈ ಪ್ರಕರಣದಲ್ಲಿ ಮೃತನ ಬಟ್ಟೆಯನ್ನು ಖಾಸೀಂನ ಹೊರತಾಗಿ ಬೇರೆ ಯಾರೂ ಕೂಡ ಮುಟ್ಟಿರಲಿಲ್ಲ. ಮದ್ಯಪಾನ ಸೇವಿಸಿದ್ದ ಇಬ್ಬರು ಜಗಳ ಮಾಡಿಕೊಂಡಿದ್ದು, ಮಾರ್ಚ್‌ 5 ರಂದು ರಾತ್ರಿ ಶಕೀಬ್‌ನನ್ನು ಹತ್ಯೆ ಮಾಡಿದ್ದ. 

ಕ್ಯಾಟಿಯ ಹ್ಯಾಂಡಲರ್ ಯೋಗೇಂದ್ರ ಯಾದವ್ ಮಾತನಾಡಿ, ಕ್ಯಾಟಿ ಈ ರೀತಿ ಪೊಲೀಸರಿಗೆ ಸಹಾಯ ಮಾಡಿದ್ದು, ಇದೇ ಮೊದಲೇನಲ್ಲ.  2016ರಲ್ಲಿ ಸೇವೆಗೆ ಸೇರಿದಾಗಿನಿಂದ ಒಟ್ಟು ಇದುವರೆಗೆ 7 ಕೊಲೆ ಪ್ರಕರಣವನ್ನು ಇದು ಭೇದಿಸಿದೆ. ದರೋಡೆ ಅತ್ಯಾಚಾರ ಸೇರಿದಂತೆ ಹಲವು ಗಂಭೀರ ಅಪರಾಧ ಪ್ರಕರಣಗಳನ್ನು ಭೇದಿಸಿದೆ. ಕೆಲ ದಿನಗಳ ಹಿಂದಷ್ಟೇ ಇದು ಇನ್ನೊಂದು ಕೊಲೆ ಪ್ರಕರಣದ ಆರೋಪಿಯನ್ನು ಪತ್ತೆ ಮಾಡಿತ್ತು ಎಂದರು. 

click me!