ಉತ್ತರಾಖಂಡ ಹಿಮಕುಸಿತ: ಇನ್ನೂ 171 ಮಂದಿ ನಾಪತ್ತೆ, ಮೃತರ ಸಂಖ್ಯೆ 26ಕ್ಕೆ ಏರಿಕೆ!

By Kannadaprabha NewsFirst Published Feb 9, 2021, 7:38 AM IST
Highlights

ಉತ್ತರಾಖಂಡ ಹಿಮಕುಸಿತ: ಇನ್ನೂ 171 ಮಂದಿ ನಾಪತ್ತೆ| ದುರಂತದಲ್ಲಿ ಮೃತರ ಸಂಖ್ಯೆ 26ಕ್ಕೆ ಏರಿಕೆ| ಸುರಂಗದಿಂದ 30 ಜನರ ರಕ್ಷಣೆಗೆ ಯತ್ನ

ಡೆಹ್ರಾಡೂನ್‌(ಫೆ.09): ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆ ಉಂಟಾದ ‘ಹಿಮಸುನಾಮಿ’ಗೆ ಬಲಿಯಾದವರ ಶವಗಳನ್ನು ಹೊರತೆಗೆಯಲಾಗುತ್ತಿದ್ದು, ಈವರೆಗೆ ಮೃತಪಟ್ಟವರ ಸಂಖ್ಯೆ 26ಕ್ಕೇರಿಕೆಯಾಗಿದೆ. ಇನ್ನೂ 171 ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಮತ್ತೊಂದೆಡೆ, ಜಲ ವಿದ್ಯುತ್‌ ಯೋಜನೆಯೊಂದರ ಸುರಂಗದಲ್ಲಿ 30 ಕಾರ್ಮಿಕರು ಸಿಲುಕಿದ್ದು, ಅವರನ್ನು ಸುರಕ್ಷಿತವಾಗಿ ಹೊರಕ್ಕೆ ಕರೆತರಲು ಹಲವು ಸಂಸ್ಥೆಗಳ ಸಿಬ್ಬಂದಿ ಶ್ರಮಿಸುತ್ತಿದ್ದಾರೆ.

ನಾಪತ್ತೆಯಾಗಿರುವವರಲ್ಲಿ ಹೆಚ್ಚಿನವರು ಜಲ ವಿದ್ಯುತ್‌ ಯೋಜನೆಯ ಕಾಮಗಾರಿ ಸ್ಥಳದಲ್ಲಿ ದುಡಿಯುತ್ತಿದ್ದವರು ಹಾಗೂ ನೀರಿನ ರಭಸಕ್ಕೆ ಕೊಚ್ಚಿ ಹೋದ ಸ್ಥಳೀಯ ಗ್ರಾಮಸ್ಥರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"

‘ಜೀವಗಳನ್ನು ರಕ್ಷಿಸುವುದು ಹಾಗೂ ಮೃತ ಕುಟುಂಬಗಳಿಗೆ ಎಲ್ಲ ನೆರವು ನೀಡುವುದು ತಮ್ಮ ಸರ್ಕಾರದ ಆದ್ಯತೆಯಾಗಿದೆ’ ಎಂದು ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್‌ ರಾವತ್‌ ತಿಳಿಸಿದ್ದಾರೆ. ಈ ನಡುವೆ ವಿಪತ್ತು ಸಂಭವಿಸಿದ ಸ್ಥಳಗಳಿಗೆ ಕೇಂದ್ರ ಸಚಿವರಾದ ರಮೇಶ್‌ ಪೋಖ್ರಿಯಲ್‌ ನಿಶಾಂಕ್‌ ಹಾಗೂ ಆರ್‌.ಕೆ. ಸಿಂಗ್‌ ಸೇರಿ ಹಲವರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ನೀರಿನ ರಭಸಕ್ಕೆ ತಪೋವನ- ವಿಷ್ಣುಗಢ ಹಾಗೂ ರಿಷಿ ಗಂಗಾ ಜಲ ವಿದ್ಯುತ್‌ ಯೋಜನೆಯ ಕ್ರಮವಾಗಿ 480 ಮೆಗಾವ್ಯಾಟ್‌ ಹಾಗೂ 13.2 ಮೆಗಾವ್ಯಾಟ್‌ ಸಾಮರ್ಥ್ಯದ ವಿದ್ಯುತ್‌ ಘಟಕಗಳು ಸಂಪೂರ್ಣವಾಗಿ ಹಾನಿಯಾಗಿವೆ. ಇಲ್ಲಿ ಕೆಲಸ ಮಾಡುತ್ತಿದ್ದ ಅನೇಕ ನೌಕರರು ಸುರಂಗದಲ್ಲಿ ಸಿಲುಕಿದ್ದಾರೆ. ಈ ಎರಡೂ ಸ್ಥಾವರಗಳನ್ನು ಎನ್‌ಟಿಪಿಸಿ ನಿರ್ಮಾಣ ಮಾಡುತ್ತಿದೆ.

ಜಂಟಿ ರಕ್ಷಣಾ ಕಾರ್ಯ:

ವಿವಿಧೆಡೆ ಸಿಲುಕಿರುವವರನ್ನು ರಕ್ಷಿಸಲು ಸೇನೆ, ಇಂಡೋ- ಟಿಬೆಟ್‌ ಬಾರ್ಡರ್‌ ಪೊಲೀಸ್‌, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ರಾಜ್ಯ ವಿಪತ್ತು ನಿರ್ವಹಣಾ ಪಡೆಗಳು ಒಗ್ಗೂಡಿ ಕಾರ್ಯನಿರ್ವಹಿಸುತ್ತಿವೆ. ಮೃತದೇಹಗಳ ಶೋಧಕ್ಕೆ ಶ್ವಾನಗಳನ್ನು ಬಳಸಿಕೊಳ್ಳಲಾಗುತ್ತಿದೆ. ರಕ್ಷಣಾ ಕಾರ್ಯಾಚರಣೆಗೆ ಬುಲ್ಡೋಜರ್‌, ಜೆಸಿಬಿಯಂತಹ ದೊಡ್ಡ ಉಪಕರಣಗಳನ್ನು ನಿಯೋಜಿಸಲಾಗಿದೆ.

ಈ ಘೋರ ವಿಪತ್ತಿಗೆ ಏನು ಕಾರಣ ಎಂಬುದು ಈವರೆಗೂ ಸ್ಪಷ್ಟವಾಗಿಲ್ಲ. ಹವಾಮಾನ ಬದಲಾವಣೆಯೇ ಇದಕ್ಕೆ ಕಾರಣ ಎಂದು ತಜ್ಞರು ಹೇಳುತ್ತಿದ್ದಾರೆ. ಈ ನಡುವೆ, ಕೆಲವು ವಿಜ್ಞಾನಿಗಳು ಚಮೋಲಿಗೆ ಭೇಟಿ ನೀಡಿ ಅಧ್ಯಯನ ನಡೆಸಿದ್ದಾರೆ.

ನಂದಾದೇವಿ ನೀರ್ಗಲ್ಲಿನ ಒಂದು ಭಾಗ ಜೋಶಿಮಠದಲ್ಲಿ ಭಾನುವಾರ ಕುಸಿದಿತ್ತು. ಈ ಹಿಮಕುಸಿತದಿಂದ ಘೋರ ಪ್ರವಾಹ ಉಂಟಾಗಿ ಅಲಕನಂದಾ ಸೇರಿ ವಿವಿಧ ನದಿಗಳಲ್ಲಿ ನೀರಿನ ಮಟ್ಟಭಾರಿ ಪ್ರಮಾಣದಲ್ಲಿ ಏರಿಕೆಯಾಗಿತ್ತು. ನೀರಿನ ರಭಸದಲ್ಲಿ ಜಲ ವಿದ್ಯುತ್‌ ಯೋಜನೆಗಳು ಹಾನಿಯಾಗಿದ್ದವು. ಅನೇಕರು ಕೊಚ್ಚಿ ಹೋಗಿದ್ದರು.

click me!