ಉತ್ತರಾಖಂಡ ಮೇಘಸ್ಫೋಟ ದುರಂತ: 35 ವರ್ಷದ ಬಳಿಕ ಒಂದಾಗಿದ್ದ 24 ಸ್ನೇಹಿತರು ಗುಂಪು ನಾಪತ್ತೆ

Published : Aug 08, 2025, 06:52 PM IST
Uttarakhand Landslide Image

ಸಾರಾಂಶ

ಉತ್ತರಾಖಂಡದಲ್ಲಿ ಭೀಕರ ಮೇಘಸ್ಫೋಟದಿಂದಾಗಿ ಮಹಾರಾಷ್ಟ್ರದ ಪ್ರವಾಸಿಗರ ತಂಡವೊಂದು ಸಿಲುಕಿಕೊಂಡಿದೆ. ಚಾರ್ ಧಾಮ್ ಯಾತ್ರೆಗೆ ತೆರಳಿದ್ದ ಈ ತಂಡದ ಸದಸ್ಯರ ಸಂಪರ್ಕ ಕಡಿತಗೊಂಡಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಡೆಹ್ರಾಡೂನ್: ಕಂಡು ಕೇಳರಿಯದ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡವು ಅನೇಕ ದುರಂತಗಳಿಗೆ ಸಾಕ್ಷಿಯಾಗಿದೆ. 1990ರಲ್ಲಿ ಪುಣೆಯಲ್ಲಿ 10ನೇ ತರಗತಿಯಲ್ಲಿ ಓದಿದ್ದ 24 ಮಂದಿ ಸ್ನೇಹಿತರು, 35 ವರ್ಷಗಳ ಬಳಿಕ ಒಂದಾಗಿ ಚಾರ್‌ಧಾಮ ಯಾತ್ರೆ ನಿಮಿತ್ತ ಉತ್ತರಾಖಂಡಕ್ಕೆ ತೆರಳಿದ್ದರು. ಸೋಮವಾರ ಸಂಜೆ, ಗಂಗೋತ್ರಿಯಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿ ಅವರು ಸಿಲುಕಿಕೊಂಡಿದ್ದರು. ಆ ಬಳಿಕ ಇವರ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದ್ದು, ಅವರಲ್ಲಿ ಒಬ್ಬರ ಪುತ್ರ ಸಂಪರ್ಕ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಉತ್ತರಕಾಶಿಯಲ್ಲಿ ನಡೆಯುತ್ತಿರುವ ಸೇನೆಯ ರಕ್ಷಣಾ ಕಾರ್ಯದಲ್ಲಿ, ಗುರುವಾರ 70 ಜನರನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ. ಇನ್ನೂ 50 ಜನರ ಪತ್ತೆಯಾಗಬೇಕಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಈವರೆಗೆ ಒಟ್ಟು 276 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಇದೇ ವೇಳೆ, ಮೇಘಸ್ಫೋಟದಿಂದ ತೀವ್ರ ಹಾನಿಗೊಳಗಾದ ಧರಾಲಿ ಪ್ರದೇಶದಲ್ಲಿ ರಕ್ಷಣಾ ಕಾರ್ಯ ಚುರುಕುಗೊಳಿಸಲು ಅತ್ಯಾಧುನಿಕ ಉಪಕರಣಗಳನ್ನು ಏರ್‌ಲಿಫ್ಟ್‌ ಮಾಡಲು ಸೇನೆ ಸಿದ್ಧತೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯ ವಿಪತ್ತು ನಿರ್ವಹಣಾ ಇಲಾಖೆಯ ಮಾಹಿತಿಯಂತೆ, ಒಟ್ಟು 149 ಮಹಾರಾಷ್ಟ್ರ ಪ್ರವಾಸಿಗರು ಉತ್ತರಾಖಂಡದಲ್ಲಿ ಸಿಲುಕಿಕೊಂಡಿದ್ದಾರೆ. ಅವಸರಿ ಖುರ್ದ್ ನಿವಾಸಿ ಅಶೋಕ್ ಭೋರ್ ಹಾಗೂ ಅವರ 23 ಹಳೆಯ ತರಗತಿ ಸ್ನೇಹಿತರು 35 ವರ್ಷಗಳ ನಂತರ ‘ಚಾರ ಧಾಮ್ ಯಾತ್ರೆ’ಗಾಗಿ ಮತ್ತೆ ಒಂದಾಗಿದ್ದರು. ಮುಂಬೈನಂತಹ ನಗರಗಳಲ್ಲಿ ವಾಸಿಸುತ್ತಿರುವ ಈ ಗುಂಪು, ಆಗಸ್ಟ್ 1ರಂದು ಮುಂಬೈನಿಂದ ರೈಲು ಮೂಲಕ ಪ್ರಯಾಣ ಆರಂಭಿಸಿ, ಆಗಸ್ಟ್ 12ರಂದು ದೆಹಲಿಯಿಂದ ವಿಮಾನದಲ್ಲಿ ಹಿಂತಿರುಗುವ ಯೋಜನೆ ಮಾಡಿಕೊಂಡಿತ್ತು.

ಭೋರ್ ಅವರ ಕುಟುಂಬವು ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ಕೊನೆಯ ಬಾರಿ ಅವರೊಂದಿಗೆ ಮಾತನಾಡಿತ್ತು ಎಂದು ಮಗ ಆದಿತ್ಯ ತಿಳಿಸಿದ್ದಾರೆ. ಆಗ ಗುಂಪು ಗಂಗೋತ್ರಿಯಿಂದ 10 ಕಿ.ಮೀ ದೂರದಲ್ಲಿ, ಮರಗಳು ಬಿದ್ದಿದ್ದರಿಂದ ಹಾಗೂ ಸಣ್ಣ ಭೂಕುಸಿತಗಳಿಂದಾಗಿ ಸಿಲುಕಿಕೊಂಡಿತ್ತು. ಅಂದಿನಿಂದ ನಾವು ಯಾರನ್ನೂ ಸಂಪರ್ಕಿಸಲು ಸಾಧ್ಯವಾಗಿಲ್ಲ, ಅವರ ಮೊಬೈಲ್‌ಗಳು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಅವರು ಹೇಳಿದರು.

ಉತ್ತರಕಾಶಿ ಜಿಲ್ಲೆಯ ಗಂಗೋತ್ರಿಯಿಂದ 15–20 ಕಿ.ಮೀ ದೂರದಲ್ಲಿರುವ ಧರಾಲಿ ಗ್ರಾಮದ ಬಳಿ ನಡೆದ ಮೇಘಸ್ಫೋಟದಲ್ಲಿ ಕನಿಷ್ಠ ಐವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮಹಾರಾಷ್ಟ್ರದಿಂದ ಸಿಲುಕಿರುವ ಪ್ರವಾಸಿಗರಲ್ಲಿ 76 ಮಂದಿ ಮುಂಬೈನವರು, 17 ಮಂದಿ ಛತ್ರಪತಿ ಸಂಭಾಜಿನಗರದವರು, 15 ಮಂದಿ ಪುಣೆಯವರು, 13 ಮಂದಿ ಜಲಗಾವ್‌ನವರು, 11 ಮಂದಿ ನಾಂದೇಡ್‌ನವರು, 5 ಮಂದಿ ಥಾಣೆಯವರು, 4 ಮಂದಿ ನಾಸಿಕ್ ಮತ್ತು ಸೋಲಾಪುರದವರು, 3 ಮಂದಿ ಮಾಲೆಗಾಂವ್‌ನವರು ಮತ್ತು ಒಬ್ಬರು ಅಹಮದ್‌ನಗರದವರಾಗಿದ್ದಾರೆ. ಇವರಲ್ಲಿ 61 ಮಂದಿ ಸುರಕ್ಷಿತವಾಗಿ ಹನುಮಾನ್ ಆಶ್ರಮದಲ್ಲಿ ಇರುವುದಾಗಿ ತಿಳಿದುಬಂದಿದೆ. ಆದರೆ 75 ಮಂದಿ ಇನ್ನೂ ಸಂಪರ್ಕಕ್ಕೆ ಸಿಗದೇ, ಮೊಬೈಲ್‌ಗಳು ಆಫ್ ಆಗಿದೆ.

ಮಲ್ಹಾರಿ ಅಭಾಂಗ್ ಎಂಬ ಹಳೆಯ ತರಗತಿ ಸ್ನೇಹಿತರು, ನಾನು ಸೋಮವಾರ ಮಧ್ಯಾಹ್ನ ಕೊನೆಯ ಬಾರಿ ವೀಡಿಯೋ ಕಾಲ್‌ನಲ್ಲಿ ಮಾತನಾಡಿದ್ದೆ. ನಂತರ ಸಾಮಾಜಿಕ ಮಾಧ್ಯಮದಲ್ಲಿ ಕೆಲವರು ಗಂಗೋತ್ರಿ ಕುರಿತ ವಿಷಯಗಳನ್ನು ಹಂಚಿಕೊಂಡಿದ್ದರು. ಆದರೆ ಆ ಬಳಿಕ ಯಾವುದೇ ಸಂಪರ್ಕ ಸಾಧ್ಯವಾಗಲಿಲ್ಲ ಎಂದು ಹೇಳಿದರು.

ಅವರು ಆಗಸ್ಟ್ 5ರಂದು ಉತ್ತರಕಾಶಿಯಲ್ಲಿ ತಂಗಿ, ಮರುದಿನ ಗೌರಿಕುಂಡಿಗೆ ತೆರಳುವ ಯೋಜನೆ ಮಾಡಿಕೊಂಡಿದ್ದರು. ಸ್ಥಳೀಯ ಪ್ರಯಾಣಕ್ಕಾಗಿ ಹರಿದ್ವಾರದಿಂದ ಬಸ್ ಬುಕ್ ಮಾಡಿದ್ದರು ಮತ್ತು ಸ್ಥಳೀಯ ನಿರ್ವಾಹಕರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದರು, ಆದರೆ ಇದುವರೆಗೆ ಯಾವುದೇ ಸಂಪರ್ಕ ಸಾಧ್ಯವಾಗಿಲ್ಲ ಎಂದು ಅಭಾಂಗ್ ಹೇಳಿದರು.

ಸಾಮಾಜಿಕ ಮಾಧ್ಯಮದಲ್ಲಿ ಮೇಘಸ್ಫೋಟದ ವೀಡಿಯೊಗಳು ಹರಿದಾಡುತ್ತಿದ್ದಂತೆ, ಪ್ರವಾಸಿಗರ ಕುಟುಂಬ ಸದಸ್ಯರ ಆತಂಕ ಹೆಚ್ಚಾಗಿದೆ. ಎಲ್ಲರೂ ಸುರಕ್ಷಿತ ಎಂದು ಹೇಳಿಕೆ ಬಂದರೂ, ಘಟನೆಯ ನಂತರ ಯಾರೊಂದಿಗೂ ನೇರವಾಗಿ ಮಾತನಾಡಿಲ್ಲ. ಇದರಿಂದ ನಾವು ಎಲ್ಲರೂ ಭಯಭೀತರಾಗಿದ್ದೇವೆ ಎಂದು ಮಹೇಂದ್ರ ಜಂಗಮ್ ಹೇಳಿದ್ದಾರೆ. ಅವರ ಸಹೋದರಿ ಸಮೃದ್ಧಿ, ಮುಂಬೈ ನಿವಾಸಿ, ಈ ಗುಂಪಿನ ಭಾಗವಾಗಿದ್ದಾರೆ.

ಬುಧವಾರ ಬೆಳಿಗ್ಗೆ, ಬಾರಾಮತಿ ಸಂಸದೆ ಸುಪ್ರಿಯಾ ಸುಳೆ, ತಮ್ಮ ‘ಎಕ್ಸ್’ ಖಾತೆಯಲ್ಲಿ ಪ್ರವಾಸಿಗರ ವಿವರಗಳನ್ನು ಹಂಚಿ, ಅವರನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಮನೆಗೆ ತರುವಂತೆ ರಾಜ್ಯ ಸರ್ಕಾರ ಮತ್ತು ಉತ್ತರಾಖಂಡ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದರು. ಪುಣೆ ಜಿಲ್ಲಾ ವಿಪತ್ತು ನಿರ್ವಹಣಾ ಕಚೇರಿ, ಗುಂಪಿನ ವಿವರಗಳನ್ನು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆಗೆ ಕಳುಹಿಸಿರುವುದಾಗಿ ತಿಳಿಸಿದೆ. “ಬಹುತೇಕ ಪ್ರವಾಸಿಗರು ಸುರಕ್ಷಿತರಾಗಿದ್ದಾರೆ ಎನ್ನಲಾಗಿದೆ, ಆದರೆ ಪ್ರತಿಯೊಬ್ಬರೊಂದಿಗೆ ನೇರ ಸಂಪರ್ಕ ಇನ್ನೂ ಸ್ಥಾಪಿಸಿಲ್ಲ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉಪಮುಖ್ಯಮಂತ್ರಿ ಅಜಿತ್ ಪವಾರ್, “ರಾಜ್ಯ ಸರ್ಕಾರ ಉತ್ತರಾಖಂಡ ಆಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪ್ರವಾಸಿಗರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ, ಅವರ ಸುರಕ್ಷಿತ ವಾಪಸನ್ನು ಖಚಿತಪಡಿಸುತ್ತಿದೆ” ಎಂದು ಹೇಳಿದ್ದಾರೆ. ಕುಟುಂಬಗಳು ಭಯಪಡದಂತೆ ಮನವಿ ಮಾಡಿರುವ ಅವರು, “ಅವಶ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ” ಎಂದು ಭರವಸೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್