ಲಷ್ಕರ್‌ ನಂಟು: ಶಿರಸಿಯಲ್ಲಿ ಶಂಕಿತ ಉಗ್ರ ಸೆರೆ!

Published : Nov 12, 2020, 07:31 AM IST
ಲಷ್ಕರ್‌ ನಂಟು: ಶಿರಸಿಯಲ್ಲಿ ಶಂಕಿತ ಉಗ್ರ ಸೆರೆ!

ಸಾರಾಂಶ

ಲಷ್ಕರ್‌ ನಂಟು: ಶಿರಸಿಯಲ್ಲಿ ಶಂಕಿತ ಉಗ್ರ ಸೆರೆ| ಎನ್‌ಐಎದಿಂದ ಇದ್ರಿಸ್‌ನ ಬಂಧನ| ಉಗ್ರರ ಜಾಲತಾಣದಲ್ಲಿ ಈತ ಭಾಗಿ| ಶಿರಸೀಲಿ ಚಿಕನ್‌ ಮಾರುತ್ತಿದ್ದ ಇದ್ರಿಸ್‌| ಇದ್ರೀಸ್‌ನನ್ನು ಕೋಲ್ಕತಾಗೆ ಕರೆದೊಯ್ದ ಎನ್‌ಐಎ

ನವದೆಹಲಿ/ಶಿರಸಿ(ನ.12): ಭಾರತದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸುವ ಸಲುವಾಗಿ ಯುವಕರನ್ನು ನೇಮಕಾತಿ ಮಾಡಿಕೊಳ್ಳಲು ನಿಷೇಧಿತ ಲಷ್ಕರ್‌ ಎ ತೊಯ್ಬಾ ಸಂಘಟನೆಯ ಪಾಕಿಸ್ತಾನ ಮೂಲದ ನಿಯಂತ್ರಕರು ನಡೆಸುತ್ತಿದ್ದ ವಿವಿಧ ಸಾಮಾಜಿಕ ಜಾಲತಾಣಗಳ ಭಾಗವಾಗಿದ್ದ ಆರೋಪದ ಮೇರೆಗೆ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಯುವಕನೊಬ್ಬನನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಂಧಿಸಿದೆ.

ಶಿರಸಿ ತಾಲೂಕಿನ ಆರೆಕೊಪ್ಪದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರೊಬ್ಬರ ಪುತ್ರ ಸಯ್ಯದ್‌ ಇದ್ರಿಸ್‌ ಸಾಬ್‌ ಮುನ್ನಾ (28) ಎಂಬಾತನೇ ಬಂಧಿತ ಯುವಕ. ಈತನನ್ನು ಬುಧವಾರ ನಸುಕಿನ ಜಾವ ಎನ್‌ಐಎ ತಂಡ ಬಂಧಿಸಿದೆ. ಈ ಕುರಿತು ಎನ್‌ಐಎ ವಕ್ತಾರರು ದೆಹಲಿಯಲ್ಲಿ ಹೇಳಿಕೆಯೊಂದನ್ನು ಬುಧವಾರ ಬಿಡುಗಡೆ ಮಾಡಿದ್ದಾರೆ.

ಲಷ್ಕರ್‌ ಎ ತೊಯ್ಬಾ ಉಗ್ರಗಾಮಿ ಸಂಘಟನೆಯ ಪಾಕಿಸ್ತಾನ ಮೂಲದ ನಿಯಂತ್ರಕರು ವಿವಿಧ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡುತ್ತಿದ್ದಾರೆ. ಅವರ ಗುರಿ ಭಾರತದಲ್ಲಿನ ಯುವಕರನ್ನು ಸೆಳೆದು ಮೂಲಭೂತವಾದಿಗಳನ್ನಾಗಿಸಿ, ಭಾರತದಲ್ಲಿ ಅಕ್ರಮ ಚಟುವಟಿಕೆಗಳನ್ನು ನಡೆಸುವ ಸ್ಲೀಪರ್‌ ಸೆಲ್‌ಗಳಿಗೆ ಯುವಕರನ್ನು ನೇಮಕಾತಿ ಮಾಡಿಕೊಳ್ಳುವುದಾಗಿದೆ ಎಂದು ಕಳೆದ ಮಾ.18ರಂದು ಪಶ್ಚಿಮ ಬಂಗಾಳದಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಲಷ್ಕರ್‌ ಸಂಘಟನೆಯ ಸ್ಲೀಪರ್‌ ಸೆಲ್‌ಗಳಿಗೆ ಯುವಕರನ್ನು ನೇಮಕ ಮಾಡಿಕೊಳ್ಳಲು ಉಗ್ರ ಸಂಘಟನೆಯ ನಿಯಂತ್ರಕರು ನಡೆಸುತ್ತಿದ್ದ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಇದ್ರಿಸ್‌ ಕೂಡ ಭಾಗವಾಗಿದ್ದ ಎಂದು ಎನ್‌ಐಎ ಹೇಳಿದೆ.

ಇದ್ರಿಸ್‌ನನ್ನು ಬಂಧಿಸಿ ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಕೋಲ್ಕತಾದ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಕರೆದೊಯ್ಯಲಾಗುತ್ತದೆ ಎಂದು ತಿಳಿಸಿದೆ.

ಉಗ್ರರ ಜತೆ ಸಂಪರ್ಕ?:

ಲಷ್ಕರ್‌ ಎ ತೊಯ್ಬಾ ಉಗ್ರಗಾಮಿ ಸಂಘಟನೆಯ ಸದಸ್ಯರೊಂದಿಗೆ ಇದ್ರಿಸ್‌ ದೂರವಾಣಿ ಮೂಲಕ ಸಂಪರ್ಕ ಹೊಂದಿದ್ದ ಎನ್ನಲಾಗಿದ್ದು, ನಿರಂತರ ವಾಟ್ಸಾಪ್‌ ಚಾಟಿಂಗ್‌ ಕೂಡ ನಡೆಸಿದ್ದ ಎಂದು ಹೇಳಲಾಗಿದೆ.

ಈ ಕುರಿತು ಎನ್‌ಐಎ ಅಧಿಕಾರಿಗಳು ಕಳೆದ ತಿಂಗಳು ಎರಡು ಬಾರಿ ಈತನ ಬಗ್ಗೆ ಮಾಹಿತಿ ಕಲೆಹಾಕಿದ್ದರು. ನಂಟು ಹೊಂದಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮಂಗಳವಾರ ಶಿರಸಿಗೆ ಆಗಮಿಸಿದ್ದ ಎನ್‌ಐಎ ತಂಡ ಯುವಕನನ್ನು ಬಂಧಿಸಿ ಬುಧವಾರ ನಸುಕಿನ ಜಾವ ಕರೆದೊಯ್ದಿದೆ. ಈ ವೇಳೆ ಸ್ಥಳೀಯ ಸಿಪಿಐ, ಪೊಲೀಸ್‌ ಅಧಿಕಾರಿಗಳು ಆಗ​ಮಿಸಿದ್ದರು ಎನ್ನಲಾಗಿದೆ.

ತಂದೆಯಿಂದ ಬೂಟಿನೇಟು:

ಸಯ್ಯದ್‌ ಇದ್ರಿಸ್‌ ಸಾಬ್‌ ಮುನ್ನಾ ಹೆಚ್ಚು ಓದಿಲ್ಲ. ಪ್ರಾಥಮಿಕ ಶಿಕ್ಷಣವನ್ನು ಅರ್ಧಕ್ಕೇ ಮೊಟಕುಗೊಳಿಸಿದ್ದ ಆತ ಅರೇಕೊಪ್ಪದ ಹಂಚಿನಕೇರಿಯಲ್ಲಿ ಚಿಕನ್‌ ಅಂಗಡಿ ನಡೆಸುತ್ತಿದ್ದ. ಈ ಉಗ್ರರ ಜತೆ ಭಾಗಿ ಆಗಿದ್ದು ಮನೆಯವರಿಗೂ ವಿಳಂಬವಾಗಿ ತಿಳಿದಿದೆ. ಮಗನ ಕೃತ್ಯದಿಂದ ಕೋಪಗೊಂಡಿದ್ದ ತಂದೆ, ಬೂಟಿನಲ್ಲಿಯೂ ಹೊಡೆದಿದ್ದ ಎನ್ನಲಾಗಿದೆ.

ಸ್ಥಳೀಯರ ಆತಂಕ:

ಉಗ್ರ ಸಂಘಟನೆಯ ಜೊತೆ ಇದ್ರಿಸ್‌ ಸಂಪರ್ಕ ಹೊಂದಿರುವ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಸ್ಥಳೀಯರು ಉಗ್ರರ ಜೊತೆ ಸಂಪರ್ಕ ಹೊಂದಿದ ಘಟನೆ ಶಿರಸಿ ತಾಲೂಕಿನಲ್ಲಿ ಇದುವರೆಗೂ ನಡೆದಿರಲಿಲ್ಲ. ಕೆಲ ತಿಂಗಳ ಹಿಂದೆ ಮತೀನ್‌ ಎಂಬ ಯುವಕನ ಹೆಸರಿನಲ್ಲಿದ್ದ ಸಿಮ್‌ ಕಾರ್ಡ್‌ ಉಗ್ರ ಸಂಘಟನೆಯಲ್ಲಿ ಬಳಕೆಯಾಗಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಗರಕ್ಕೆ ಆಗಮಿಸಿದ್ದ ತನಿಖಾ ತಂಡ, ಸಿಮ್‌ ಈ ವ್ಯಕ್ತಿಯ ಹೆಸರಿನಲ್ಲಿದ್ದರೂ ಬೇರೊಬ್ಬರಿಂದ ದುರ್ಬಳಕೆ ಆಗಿರುವುದನ್ನು ಮನಗಂಡಿದ್ದರಲ್ಲದೇ ಮತೀನ್‌ ನಿರಪರಾಧಿ ಎಂಬುದನ್ನು ಅರಿತಿದ್ದರು. ಈಗ ಮತ್ತೆ ಉಗ್ರರ ಸಂಪರ್ಕ ಸ್ಥಳೀಯ ವ್ಯಕ್ತಿಯಿಂದ ಆಗಿರುವುದು ಆತಂಕಕ್ಕೆ ಕಾರಣವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?