ಜಾಲತಾಣ, ಒಟಿಟಿಗಳಿಗೆ ಕೇಂದ್ರದ ಮೂಗುದಾರ!

By Kannadaprabha News  |  First Published Nov 12, 2020, 7:24 AM IST

ಜಾಲತಾಣ, ಒಟಿಟಿಗಳಿಗೆ ಕೇಂದ್ರದ ಮೂಗುದಾರ| ಅಮೆಜಾನ್‌ ಪ್ರೈಮ್‌, ನೆಟ್‌ಫ್ಲಿಕ್ಸ್‌, ಫೇಸ್‌ಬುಕ್‌, ಟ್ವೀಟರ್‌, ಇನ್‌ಸ್ಟಾ,| ಆನ್‌ಲೈನ್‌ ಸುದ್ದಿತಾಣಗಳು ಕೇಂದ್ರ ವಾರ್ತಾ ಸಚಿವಾಲಯ ವ್ಯಾಪ್ತಿಗೆ| ಕೇಂದ್ರ ಸರ್ಕಾರದ ಅಧಿಸೂಚನೆಗೆ ರಾಷ್ಟ್ರಪತಿ ಅಂಕಿತ, ನಿನ್ನೆಯಿಂದಲೇ ಜಾರಿ


 

ನವದೆಹಲಿ(ನ.12): ಇದುವರೆಗೆ ಸರ್ಕಾರದ ಯಾವುದೇ ನಿಯಂತ್ರಣಕ್ಕೆ ಒಳಪಡದ ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್‌, ಡಿಸ್ನಿ+ಹಾಟ್‌ಸ್ಟಾರ್‌ನಂತಹ ಒಟಿಟಿ ಸೇವೆಗಳು, ಆನ್‌ಲೈನ್‌ ಸುದ್ದಿ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ವ್ಯಾಪ್ತಿಗೆ ತಂದು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದರಿಂದಾಗಿ ಇವುಗಳು ಇನ್ನು ಮುಂದೆ ಕೇಂದ್ರ ಸರ್ಕಾರದ ನೀತಿ- ನಿಯಂತ್ರಣಗಳಿಗೆ ಒಳಪಡಲಿವೆ.

Latest Videos

undefined

ರಾಷ್ಟ್ರಪತಿಗಳ ಸಹಿ ಪಡೆದು ಕೇಂದ್ರ ಸರ್ಕಾರ ಮಂಗಳವಾರ ಹೊರಡಿಸಿರುವ ಅಧಿಸೂಚನೆ ಅನ್ವಯ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಟ್ವೀಟರ್‌ನಂಥ ಸಾಮಾಜಿಕ ಜಾಲತಾಣಗಳು, ನೆಟ್‌ಫ್ಲಿಕ್ಸ್‌, ಹಾಟ್‌ಸ್ಟಾರ್‌, ಅಮೆಜಾನ್‌ ಪ್ರೈಮ್‌ನಂಥ ಒಟಿಟಿ ವೇದಿಕೆಗಳು, ಆನ್‌ಲೈನ್‌ನಲ್ಲಿ ಸುದ್ದಿ ನೀಡುವ ಮಾಧ್ಯಮಗಳು, ಪ್ರಚಲಿತ ವಿದ್ಯಮಾನದ ಸೇವೆ ನೀಡುವ ವೇದಿಕೆಗಳು ಇನ್ನು ಮುಂದೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ವ್ಯಾಪ್ತಿಗೆ ಒಳಪಡಲಿವೆ.

ಪ್ರಸಕ್ತ ಚಲನಚಿತ್ರಗಳ ಮೇಲೆ ಕಣ್ಗಾವಲಿಗೆ ಸೆನ್ಸಾರ್‌ ಮಂಡಳಿ, ಮುದ್ರಣ ಮಾಧ್ಯಮದ ಮೇಲೆ ಕಣ್ಗಾವಲಿಗೆ ಪ್ರೆಸ್‌ ಕೌನ್ಸಿಲ್‌ ಆಫ್‌ ಇಂಡಿಯಾ, ಸುದ್ದಿ ವಾಹಿನಿಗಳ ಮೇಲೆ ಕಣ್ಗಾವಲಿಗೆ ನ್ಯೂಸ್‌ ಬ್ರಾಡ್‌ಕಾಸ್ಟ​ರ್‍ಸ್ ಅಸೋಸಿಯೇಷನ್‌ ಮತ್ತು ಜಾಹೀರಾತುಗಳ ಮೇಲೆ ಕಣ್ಗಾವಲಿಗೆ ಜಾಹೀರಾತು ಗುಣಮಟ್ಟಮಂಡಳಿ ಇವೆ. ಆದರೆ ಈ ಡಿಜಿಟಲ್‌ ಮಾಧ್ಯಮಗಳ ಮೇಲೆ ಕಣ್ಗಾವಲು ಇಡಲು ಯಾವುದೇ ಸ್ವಾಯತ್ತ ಸಂಸ್ಥೆಗಳು ಇರಲಿಲ್ಲ. ಹೀಗಾಗಿ ಇಂಥ ಡಿಜಿಟಲ್‌ ಮಾಧ್ಯಮಗಳಲ್ಲಿ ಪ್ರಸಾರವಾಗುವ ಸುದ್ದಿಗಳು, ಚಲನಚಿತ್ರಗಳು ಸಾಕಷ್ಟುವಿವಾದಕ್ಕೆ ಕಾರಣವಾಗಿದ್ದವು. ಬಹಳಷ್ಟುಪ್ರಕರಣಗಳು ಕೋರ್ಟ್‌ ಮೆಟ್ಟಿಲು ಕೂಡ ಏರಿದ್ದವು.

ಇದರ ಬೆನ್ನಲ್ಲೇ, ಇವುಗಳ ಮೇಲೆ ನಿಯಂತ್ರಣ ಕೋರಿ ಸುಪ್ರೀಂಕೋರ್ಟ್‌ಗೆ ಕೆಲ ಸಮಯದ ಹಿಂದೆ ಅರ್ಜಿಯೊಂದು ಸಲ್ಲಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್‌ ಜಾರಿ ಮಾಡಿತ್ತು. ಅದರ ಬೆನ್ನಲ್ಲೇ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಕಳೆದ ವರ್ಷ ಬೇರೊಂದು ಪ್ರಕರಣದ ವಿಚಾರಣೆ ವೇಳೆ, ‘ಡಿಜಿಟಲ್‌ ಮಾಧ್ಯಮಗಳನ್ನು ನಿಯಂತ್ರಿಸುವ ಅವಶ್ಯಕತೆ ಇದೆ. ಆದರೆ ಅದಕ್ಕೂ ಮೊದಲು ಸಮಿತಿಯೊಂದನ್ನು ರಚಿಸಿ ಮಾರ್ಗಸೂಚಿ ರಚಿಸಲಾಗುವುದು’ ಎಂದು ಕೇಂದ್ರ ಸರ್ಕಾರ ಕೋರ್ಟ್‌ಗೆ ಮಾಹಿತಿ ನೀಡಿತ್ತು. ಜೊತೆಗೆ ಮಾಧ್ಯಮಗಳ ಸ್ವಾತಂತ್ರ್ಯ ಹರಣ ಮಾಡುವ ಯಾವುದೇ ಕೆಲಸವನ್ನು ಸರ್ಕಾರ ಮಾಡುವುದಿಲ್ಲ. ಆದರೆ ಮುದ್ರಣ, ದೃಶ್ಯ ಮತ್ತು ಚಲನಚಿತ್ರಗಳ ಮೇಲೆ ಇರುವಂತೆ ಮೇಲ್ಕಂಡ ವೇದಿಕೆಗಳು ಕೂಡ ಯಾವುದಾದರೊಂದು ನಿಯಂತ್ರಣಕ್ಕೆ ಒಳಪಟ್ಟಿರುವುದು ಸೂಕ್ತ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್‌ ಜಾವಡೇಕರ್‌ ಹೇಳಿದ್ದರು.

ಏಕೆ ನಿರ್ಧಾರ? ಪರಿಣಾಮ ಏನು?

ಒಟಿಟಿ, ಡಿಜಿಟಲ್‌ ಮಾಧ್ಯಮ, ಜಾಲತಾಣಗಳ ನಿಯಂತ್ರಣಕ್ಕೆ ದೇಶದಲ್ಲಿ ಯಾವುದೇ ಕಾನೂನು ಅಥವಾ ಸಂಸ್ಥೆ ಇರಲಿಲ್ಲ. ಸೆನ್ಸಾರ್‌ ಇಲ್ಲದೇ ಇವುಗಳಲ್ಲಿ ಮಾಹಿತಿಗಳು ಪ್ರಸಾರವಾಗುತ್ತಿವೆ. ಇದರ ಬಗ್ಗೆ ಹಲವಾರು ದೂರುಗಳು ಬಂದಿತ್ತು. ಹೀಗಾಗಿ ಇವುಗಳನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನಕ್ಕೆ ತರಲಾಗಿದೆ. ವಾರ್ತಾ ಸಚಿವಾಲಯದ ನೀತಿ, ನಿಯಂತ್ರಣಗಳಿಗೆ ಇವು ಬದ್ಧವಾಗಿರಬೇಕಾಗುತ್ತದೆ.

click me!