
ನವದೆಹಲಿ (ಜ. 27): ಚುನಾವಣೆ ಘೋಷಣೆ ಆದ ರಾಜ್ಯದಲ್ಲಿ ಜನನಾಯಕರು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹಾರೋದು ಕಾಮನ್. ಪ್ರಸ್ತುತ ದೇಶದ ಅತೀದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ (Uttar Pradesh) ಟಿಕೆಟ್ ಗಾಗಿ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹಾರುವ ಕೆಲಸ ನಡೆಯುತ್ತಿದೆ. 2008ರಲ್ಲಿ ಸಮಾಜವಾದಿ ಪಕ್ಷವನ್ನು ತೊರೆದು ಕಾಂಗ್ರೆಸ್ ಗೆ ಸೇರಿದ್ದ ಬಾಲಿವುಡ್ ನಟ ರಾಜ್ ಬಬ್ಬರ್ ಘರ್ ವಾಪ್ಸಿ ಮಾಡೋಕೆ ರೆಡಿಯಾಗಿದ್ದಾರೆ. ಎಲ್ಲಾ ಅಂದುಕೊಂಡಂತೆ ನಡೆದಲ್ಲಿ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಗೆ ಮತ್ತೊಂದು ದೊಡ್ಡ ಆಘಾತ ಎದುರಾಗಲಿದ್ದು, ರಾಜ್ ಬಬ್ಬರ್ (Raj Babbar) ಮರಳಿ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತದೆ.
2008ರಲ್ಲಿ ಸಮಾಜವಾದಿ ಪಕ್ಷವನ್ನು (Samajwadi Party) ತೊರೆದು ಕಾಂಗ್ರೆಸ್ (Congress)ಸೇರಿದ್ದ ರಾಜ್ ಬಬ್ಬರ್, 2009ರ ಫಿರೋಜಾಬಾದ್ ಚುನಾವಣೆಯನ್ನು ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ( Akhilesh Yadav) ಅವರ ಪತ್ನಿ ಡಿಂಪಲ್ ಯಾದವ್ ರನ್ನು (Dimple Yadav) ಸೋಲಿಸುವ ಮೂಲಕ ಗಮನಸೆಳೆದಿದ್ದರು. ಈಗ ಮತ್ತೊಮ್ಮೆ ಸೈಕಲ್ ಸವಾರಿ ಮಾಡಲು ರಾಜ್ ಬಬ್ಬರ್ ಸಿದ್ಧವಾಗಿದ್ದಾರೆ. ಕಾಂಗ್ರೆಸ್ ನಾಯಕತ್ವದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳಾಗಬೇಕು ಎಂದು ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದ ಕಾಂಗ್ರೆಸ್ ನ ಹಿರಿಯ ನಾಯಕರ ಕೂಟ ಜಿ-23 ಭಾಗವಾಗಿದ್ದ ರಾಜ್ ಬಬ್ಬರ್, ಕೆಲ ದಿನಗಳ ಹಿಂದೆ ಗುಲಾಂ ನಬಿ ಆಜಾದ್ ಗೆ ಪದ್ಮ ಭೂಷಣ ಪ್ರಶಸ್ತಿ ಘೋಷಣೆ ಆಗಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷ ಮೈತ್ರಿಮಾಡಿಕೊಂಡು ಹೋರಾಟ ನಡೆಸಿದ್ದವು. ಆ ಸಮಯದಲ್ಲಿ ರಾಜ್ ಬಬ್ಬರ್ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಆದರೆ, ಪ್ರಿಯಾಂಕಾ ವಾದ್ರಾ (Priyanaka Vadra) ಉತ್ತರ ಪ್ರದೇಶ ಚುನಾವಣೆಯ ಕೆಲಸಗಳನ್ನು ನೋಡಿಕೊಳ್ಳಲು ಆರಂಭಿಸಿದ ಬಳಿಕ ರಾಜ್ ಬಬ್ಬರ್ ಎಲ್ಲಿಯೂ ಕಾಣುತ್ತಿಲ್ಲ. 2019ರ ಲೋಕಸಭಾ ಚುನಾವಣೆಯ ಬೆನ್ನಲ್ಲಿಯೇ ರಾಜ್ ಬಬ್ಬರ್, ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
UP Elections : ಸೀತಾಪುರ ಜೈಲಿನಿಂದಲೇ ನಾಮಪತ್ರ ಸಲ್ಲಿಸಿದ ಅಜಮ್ ಖಾನ್!
80ರ ದಶಕದಲ್ಲಿ ಬಾಲಿವುಡ್ ಮಾರ್ಗವಾಗಿ ರಾಜಕೀಯಕ್ಕೆ ಸೇರಿದ್ದರು. 1989ರಲ್ಲಿ ವಿಪಿ ಸಿಂಗ್ ನೇತೃತ್ವದಲ್ಲಿ ಜನತಾ ದಳ ಸೇರಿದ್ದ ರಾಜ್ ಬಬ್ಬರ್, ಆ ಬಳಿಕ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಮೂರು ಬಾರಿ ಲೋಕಸಭಾ ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ. 1994ರಲ್ಲಿ ರಾಜ್ಯಸಭಾ ಸಂಸದರಾಗಿ ಸಂಸತ್ ಗೆ ತೆರಳಿದ್ದ ರಾಜ್ ಬಬ್ಬರ್, 2004ರಲ್ಲಿ ಸಮಾಜವಾದಿ ಪಕ್ಷದ ಟಿಕೆಟ್ ನಲ್ಲಿ ಮೊದಲ ಬಾರಿಗೆ ಲೋಕಸಭಾ ಸಂಸದರಾಗಿ ಆಯ್ಕೆಯಾಗಿದ್ದರು. 2006ರಲ್ಲಿ ಸಮಾಜವಾದಿ ಪಕ್ಷವನ್ನು ತೊರೆದಿದ್ದ ರಾಜ್ ಬಬ್ಬರ್, ಎರಡು ವರ್ಷದ ವಿಶ್ರಾಂತಿಯ ಬಳಿಕ 2008ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದ್ದರು.
ಸಮಾಜವಾದಿ ಪಕ್ಷದ ವಕ್ತಾರ ಫಕ್ರುಲ್ ಹಸನ್ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಒಂದು ಪೋಸ್ಟ್ ಈ ಊಹಾಪೋಹಗಳಿಗೆ ಕಾರಣವಾಗಿದೆ. "ಉತ್ತರ ಪ್ರದೇಶ ಕಾಂಗ್ರೆಸ್ ನ ಮಾಜಿ ಅಧ್ಯಕ್ಷ, ಮಾಜಿ ಸಮಾಜವಾದಿ ನಾಯಕ ಹಾಗೂ ನಟ ಶೀಘ್ರದಲ್ಲೇ ಮತ್ತೆ ಸಮಾಜವಾದಿಯಾಗಲಿದ್ದಾರೆ' ಎಂದು ಬರೆದುಕೊಂಡಿರುವುದು ರಾಜ್ ಬಬ್ಬರ್ ಅವರ ಮೇಲೆ ಅನುಮಾನಕ್ಕೆ ಕಾರಣವಾಗಿದೆ.
UP Elections: ಬಿಜೆಪಿ ಗೆಲ್ಲಲು ಅಸಾಧ್ಯವಾದ ಆ ಒಂದು ಕ್ಷೇತ್ರ, ಎರಡು ಕುಟುಂಬದ ನಡುವೆ ನಡೆಯುತ್ತೆ ಪೈಪೋಟಿ!
ಮಾಜಿ ಕೇಂದ್ರ ಸಚಿವ ಆರ್ ಪಿಎನ್ ಸಿಂಗ್, ಕಾಂಗ್ರೆಸ್ ಅನ್ನು ತೊರೆದು ಬಿಜೆಪಿ ಪಕ್ಷ ಸೇರ್ಪಡೆಯಾದ ದಿನದಿಂದಲೂ ಕಾಂಗ್ರೆಸ್ ಪಕ್ಷದಲ್ಲಿ ನಾಯಕರ ರಾಜೀನಾಮೆ ಪರ್ವ ಆರಂಭವಾಗಿದೆ. ಪದ್ರೌನಾ ಕ್ಷೇತ್ರಕ್ಕೆ ಟಿಕೆಟ್ ಪಡೆದುಕೊಂಡಿದ್ದ ಮನೀಶ್ ಜೈಸ್ವಾಲ್, ಕುಶೀನಗರ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ರಾಜ್ ಕುಮಾರ್ ಸಿಂಗ್, ಮಾಜಿ ಸಂಸದ ರಾಕೇಶ್ ಸಾಚನ್ ಈಗಾಗಲೇ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಯನ್ನು ಸೇರಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ