ಭಾರತ ಭೇಟಿ ವೇಳೆ ಸಾಬರಮತಿ ನದಿ ವೀಕ್ಷಿಸ್ತಾರೆ ಟ್ರಂಪ್‌!

By Suvarna NewsFirst Published Jan 30, 2020, 11:55 AM IST
Highlights

ಭಾರತಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರವಾಸ| ಭಾರತ ಭೇಟಿ ವೇಳೆ ಸಾಬರಮತಿ ನದಿ ವೀಕ್ಷಿಸ್ತಾರೆ ಟ್ರಂಪ್‌!| ದಿಲ್ಲಿಯ ಐಟಿಸಿ ಮೌರ್ಯ ಶೆರ್ಟನ್‌ ಪಂಚತಾರಾ ಹೋಟೆಲನ್ನು ಬುಕ್‌ ಮಾಡಿದ ಅಮೆರಿಕ ಸರ್ಕಾರ

ವಾಷಿಂಗ್ಟನ್[ಜ.30]: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬಹುನಿರೀಕ್ಷಿತ ಚೊಚ್ಚಲ ಭಾರತ ಭೇಟಿ 2020ರ ಫೆಬ್ರವರಿ 21ರಿಂದ 24ರವರೆಗೆ ನಡೆಯುವ ನಿರೀಕ್ಷೆಯಿದೆ. ಭಾರತ ಪ್ರವಾಸ ಕೈಗೊಳ್ಳಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಗುಜರಾತ್‌ನ ಸಾಬರಮತಿ ನದಿ ದಂಡೆಗೆ ಭೇಟಿ ನೀಡಲಿದ್ದಾರೆ ಎಂದು ಮುಖ್ಯಮಂತ್ರಿ ವಿಜಯ್‌ ರೂಪಾನಿ ಹೇಳಿದ್ದಾರೆ.

ದೆಹಲಿ ವಿಧಾನಸಭೆ ಚುನಾವಣೆ ಪ್ರಯುಕ್ತ ದೆಹಲಿಯ ಶಾಸ್ತ್ರಿ ನಗರದಲ್ಲಿ ಬುಧವಾರ ಬಿಜೆಪಿ ಪರ ಪ್ರಚಾರ ನಡೆಸಿದ ರೂಪಾನಿ ಅವರು, ಪ್ರಧಾನಿ ನರೇಂದ್ರ ಮೋದಿ ಅವರಿಂದಾಗಿ ಸಾಬರಮತಿ ನದಿಯು ಏಷ್ಯಾದ ಅತಿ ಶುಚಿತ್ವ ನದಿಯಾಗಿದೆ. ಜಪಾನ್‌, ಇಸ್ರೇಲ್‌ ರಾಷ್ಟ್ರಗಳಂಥ ಮುಖ್ಯಸ್ಥರು ಭಾರತ ಭೇಟಿ ವೇಳೆ ಈ ನದಿಗೆ ಭೇಟಿ ನೀಡಿ, ಆಶ್ಚರ್ಯ ವ್ಯಕ್ತಪಡಿಸಿದ್ದರು. ಟ್ರಂಪ್‌ ಅವರೂ ಸಹ ಇಲ್ಲಿಗೆ ಭೇಟಿ ನೀಡುತ್ತಾರೆ ಎಂದರು. ಟ್ರಂಪ್‌ ಅವರ 2 ದಿನಗಳ ಪ್ರವಾಸ ಫೆ.24-26ಕ್ಕೆ ಆರಂಭವಾಗುವ ಸಾಧ್ಯತೆಯಿದೆ.

ಕೇಮ್‌ಛೋ ಟ್ರಂಪ್‌’ ಗುಜರಾತಲ್ಲಿ ಬೇಡ, ದಿಲ್ಲಿಯಲ್ಲಾಗಲಿ: ಅಮೆರಿಕ ಪಟ್ಟು

ಇನ್ನು ಅಮೆರಿಕ ಸರ್ಕಾರವು ದಿಲ್ಲಿಯ ಐಟಿಸಿ ಮೌರ್ಯ ಶೆರ್ಟನ್‌ ಪಂಚತಾರಾ ಹೋಟೆಲನ್ನು ಬುಕ್‌ ಮಾಡಿದೆ. ಫೆಬ್ರವರಿ 21ರಿಂದ 24ರವರೆಗೆ ಬುಕಿಂಗ್‌ ಮಾಡಲಾಗಿದೆ. ಹೋಟೆಲ್‌ನಲ್ಲಿ ರಾಷ್ಟ್ರವೊಂದರ ಮುಖ್ಯಸ್ಥರು ಮಾತ್ರ ತಂಗುವ ‘ಅಧ್ಯಕ್ಷೀಯ ಕೋಣೆ’ ಇದ್ದು, ಅದನ್ನೂ ಕಾಯ್ದಿರಿಸಲಾಗಿದೆ. ಹೀಗಾಗಿ ಫೆ.21ರಿಂದ 4 ದಿನ ಟ್ರಂಪ್‌ ಭಾರತದಲ್ಲಿ ಇರುವುದು ನಿಶ್ಚಿತ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಈವರೆಗೆ ಇದರ ಅಧಿಕೃತ ಘೋಷಣೆ ಆಗಿಲ್ಲ.

ಈಗ ಬುಕ್‌ ಆಗಿರುವ ಹೋಟೆಲ್‌ನ ಕೋಣೆಯಲ್ಲೇ ಹಿಂದಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಬಿಲ್‌ ಕ್ಲಿಂಟನ್‌ ತಂಗಿದ್ದರು. ತಮ್ಮ ಭಾರತ ಪ್ರವಾಸದ ವೇಳೆ ಟ್ರಂಪ್‌ ಅವರು ಅಮೆರಿಕದಲ್ಲಿ ಪ್ರಧಾನಿ ನರೇಂದ್ರ ಮೋದಿ ನಡೆಸಿದ ‘ಹೌಡಿ ಮೋದಿ’ ರೀತಿಯಲ್ಲೇ ‘ಕೇಮ್‌ಛೋ ಟ್ರಂಪ್‌’ ಎಂಬ ಸಾರ್ವಜನಿಕ ಭಾಷಣವನ್ನು ಮಾಡುವ ನಿರೀಕ್ಷೆಯಿದೆ. ಆದರೆ ಈ ಭಾಷಣ ಅಹಮದಾಬಾದ್‌ನಲ್ಲಿ ಆಗುವುದೋ ಅಥವಾ ದಿಲ್ಲಿಯಲ್ಲೋ ಎಂಬುದು ಖಚಿತಪಟ್ಟಿಲ್ಲ.

'ಫೇಸ್ಬುಕ್‌ನಲ್ಲಿ ನಾನು ನಂ.1, ನಂ.2 ಮೋದಿ ಗೊತ್ತಾ?'

ಪ್ರಸಕ್ತ ವರ್ಷ ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಟ್ರಂಪ್‌ ಅವರಿಗೆ ಭಾರತ ಭೇಟಿ ಮಹತ್ವದೆನ್ನಿಸಿದೆ. ಅಮೆರಿಕದಲ್ಲಿ ಭಾರತೀಯ ಮೂಲದವರ ಸಂಖ್ಯೆ ಭಾರೀ ಪ್ರಮಾಣದಲ್ಲಿದ್ದು, ಚುನಾವಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಹೀಗಾಗಿಯೇ ಟ್ರಂಪ್‌ ಅವರ ಈ ಭೇಟಿಯನ್ನು ರಾಜಕೀಯವಾಗಿಯೂ ಪ್ರಮುಖವಾಗಿ ಪರಿಗಣಿಸಲಾಗಿದೆ. ಅದರ ಜೊತೆಗೆ ಟ್ರಂಪ್‌ ಭೇಟಿ ವೇಳೆ ಉಭಯ ದೇಶಗಳು ಹಲವು ಒಪ್ಪಂದಗಳಿಗೂ ಸಹಿ ಹಾಕುವ ಸಾಧ್ಯತೆ ಇದೆ.

click me!