ಅಮೆರಿಕ ಡೀಲ್‌ ಹೆಸರಿನಲ್ಲಿ ರೈತರಿಗೆ ದ್ರೋಹ : ರಾಗಾ

Kannadaprabha News   | Kannada Prabha
Published : Feb 16, 2026, 04:23 AM IST
  Rahul Gandhi

ಸಾರಾಂಶ

ಅಮೆರಿಕ ಜತೆಗಿನ ವ್ಯಾಪಾರ ಒಪ್ಪಂದ ರೈತವಿರೋಧಿ ಎಂಬ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಆರೋಪವನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ‘ಹಾಸ್ಯಾಸ್ಪದ’ ಎಂದು ಕರೆದಿದ್ದು, ಒಪ್ಪಂದಗಳ ಕುರಿತು ರಾಹುಲ್‌ರ ಹೇಳಿಕೆಗಳು ಸುಳ್ಳು ಮತ್ತು ಆಧಾರರಹಿತ’ ಎಂದಿದ್ದಾರೆ.

ನವದೆಹಲಿ: ಅಮೆರಿಕದೊಂದಿಗೆ ಜೊತೆಗೆ ಮುಕ್ತ ವ್ಯಾಪಾರ ಒಪ್ಪಂದ ವಿಷಯದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ತಮ್ಮ ವಾಗ್ದಾಳಿ ಹರಿತಗೊಳಿಸಿರುವ ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ಒಪ್ಪಂದವನ್ನು ‘ದೇಶದ ಕೃಷಿಕರಿಗೆ ಆಗುತ್ತಿರುವ ದ್ರೋಹ’ ಎಂದು ಕಿಡಿಕಾರಿದ್ದಾರೆ. ಅಲ್ಲದೆ ಈ ವಿಷಯದಲ್ಲಿ ಕೇಂದ್ರ ಸರ್ಕಾರಕ್ಕೆ 5 ಪ್ರಶ್ನೆಗಳನ್ನು ಕೇಳಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ಎಕ್ಸ್‌ನಲ್ಲಿ 5 ಪ್ರಶ್ನೆ ಕೇಳಿರುವ ರಾಹುಲ್‌ ಗಾಂಧಿ, ಇವುಗಳಿಗೆ ಸರ್ಕಾರ ಉತ್ತರಿಸಲಿದೆಯೇ ಎಂದು ಕೇಳಿದ್ದಾರೆ.

ರಾಹುಲ್‌ ಪ್ರಶ್ನೆಗಳು:

ಸರ್ಕಾರ ‘ಡ್ರೈಡ್‌ ಡಿಸ್ಟಿಲರ್ಸ್‌ ಗ್ರೇನ್ಸ್‌’ ಆಮದಿಗೆ ಒಪ್ಪಿಗೆ ನೀಡಿದೆ. ಇದರರ್ಥ ಭಾರತದ ಜಾನುವಾರುಗಳಿಗಿನ್ನು ಅಮೆರಿಕದ ಕುಲಾಂತರಿ (ಜಿಎಂ) ಜೋಳದ ಪೌಷ್ಟಿಕಾಂಶ ತಿನ್ನಿಸಬೇಕೇ?

ಇದರಿಂದ ನಮ್ಮ ಹಾಲು ಉತ್ಪಾದನೆ ಅಮೆರಿಕದ ಕೃಷಿ ಮೇಲೆ ಅವಲಂಬಿತವಾಗುವುದಿಲ್ಲವೇ?

ಕುಲಾಂತರಿ ಸೋಯಾ ಎಣ್ಣೆ ಆಮದು ಮಾಡಿಕೊಂಡರೆ, ರಾಜಸ್ಥಾನ, ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿರುವ ಸೋಯಾ ಬೆಳೆಗಾರರ ಮೇಲೇನು ಪರಿಣಾಮ ಆಗಬಹುದು?

ದೇಸೀ ಬೆಳೆಗಳ ಬೆಲೆ ಇಳಿಕೆಯನ್ನು ಅವರು ಸಹಿಸಿಕೊಳ್ಳುವುದು ಹೇಗೆ?

ಹೆಚ್ಚುವರಿ ವಸ್ತುಗಳ ಆಮದು ಎಂದರೆ ಅವು ಯಾವುವು? ತೆರಿಗೆಯೇತರ ನಿರ್ಬಂಧಗಳ ತೆರವು ಎಂದರೇನರ್ಥ?

ಒಮ್ಮೆ ಭಾರತದ ಮಾರುಕಟ್ಟೆ ಅಮೆರಿಕದ ಉತ್ಪನ್ನಗಳಿಗೆ ಮುಕ್ತವಾದರೆ, ವರ್ಷ ಕಳೆದಂತೆ ಅದು ಇನ್ನಷ್ಟು ವಿಸ್ತರಿಸುತ್ತಾ ಸಾಗುವುದೇ ಅಥವಾ ಭಾರತೀಯರ ರಕ್ಷಣೆಗೆ ಯಾವುದಾದರೂ ಕ್ರಮಗಳಿವೆಯೇ? ಎಂದು ರಾಹುಲ್‌ ಪ್ರಶ್ನಿಸಿದ್ದಾರೆ.

ರೈತ ಪರ ರಾಗಾ ಮಾತು ಕೇಳಿದ್ರೆ ನಗು ಬರುತ್ತೆ: ಶಾ

ಗಾಂಧಿನಗರ: ಅಮೆರಿಕ ಜತೆಗಿನ ವ್ಯಾಪಾರ ಒಪ್ಪಂದ ರೈತವಿರೋಧಿ ಎಂಬ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಆರೋಪವನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ‘ಹಾಸ್ಯಾಸ್ಪದ’ ಎಂದು ಕರೆದಿದ್ದು, ‘ಅಮೆರಿಕ, ಬ್ರಿಟನ್‌ ಹಾಗೂ ಐರೋಪ್ಯ ಒಕ್ಕೂಟದ ಜತೆಗಿನ ಒಪ್ಪಂದಗಳ ಕುರಿತು ರಾಹುಲ್‌ರ ಹೇಳಿಕೆಗಳು ಸುಳ್ಳು ಮತ್ತು ಆಧಾರರಹಿತ’ ಎಂದಿದ್ದಾರೆ.

‘ಕಾಂಗ್ರೆಸ್‌ನ ರಾಜಕುಮಾರ (ರಾಹುಲ್‌) ಸದನದಲ್ಲಿ ನಿಂತು ರೈತರ ರಕ್ಷಣೆ ಬಗ್ಗೆ ಮಾತನಾಡುವಾಗ ನಗು ಬರುತ್ತದೆ. ಕಾರಣ, ದೇಶವನ್ನು ದಾರಿ ತಪ್ಪಿಸಿದ ಸುದೀರ್ಘ ಇತಿಹಾಸವನ್ನು ಕಾಂಗ್ರೆಸ್‌ ಹೊಂದಿದೆ. ಈಗ ಅದೇ ಪಕ್ಷದವರು ವ್ಯಾಪಾರ ಒಪ್ಪಂದ ಕುರಿತು ಸುಳ್ಳು ಹರಡುತ್ತಿದ್ದಾರೆ. ಡೈರಿ ಉದ್ಯಮವನ್ನು ವಿಸ್ತರಿಸಿದವರು ನಾವು(ಬಿಜೆಪಿ)’ ಎಂದು ಶಾ ತಿರುಗೇಟು ನೀಡಿದರು.

ಜತೆಗೆ, ಮಾಡಿಕೊಳ್ಳಲಾದ ಪ್ರತಿಯೊಂದು ಒಪ್ಪಂದವು ಭಾರತೀಯ ರೈತರು, ಪಶುಸಂಗೋಪನೆಕಾರರು ಮತ್ತು ಮೀನುಗಾರರ ಹಿತರಕ್ಷಣೆ ಮಾಡುತ್ತದೆ’ ಎಂದು ಭರವಸೆಯಿತ್ತರು.

ವ್ಯಾಪಾರ ಒಪ್ಪಂದದ ಬಗ್ಗೆ ರಾಹುಲ್‌ ಗಾಂಧಿ ಅವರು ಬಹಿರಂಗವಾಗಿ ಚರ್ಚೆಗೆ ಬರಲಿ. ರಾಹುಲ್‌ ಅವರೇ ಸೂಕ್ತ ವೇದಿಕೆ ನಿರ್ಧರಿಸಲಿ. ದೇಶದ ರೈತರಿಗೆ ಯಾರು ತೊಂದರೆ ಕೊಟ್ಟರು, ಅವರ ಪರವಾಗಿ ಯಾರು ಕೆಲಸ ಮಾಡಿದರು ಎಂಬ ಬಗ್ಗೆ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರು ಕೂಡ ಬಂದು ಚರ್ಚೆ ಮಾಡಲು ಸಿದ್ಧರಿದ್ದಾರೆ ಎಂದು ಸವಾಲು ಹಾಕಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೇಕೆಂದೇ ಜನಪ್ರಿಯ ಘೋಷಣೆಗಳ ಕೈ ಬಿಟ್ಟೆ : ಮೋದಿ ನೇರಮಾತು
ಸಾವಲ್ಲೂ ಸಾರ್ಥಕತೆ: 10 ತಿಂಗಳ ಕಂದನಿಂದ 4 ಜನರಿಗೆ ಜೀವದಾನ