
ಸಂತ್ ಕಬೀರ್ ನಗರ (ಉತ್ತರ ಪ್ರದೇಶ): ಪ್ರೀತಿಯ ಪತ್ನಿ ಮತ್ತೊಬ್ಬನ ಪ್ರೇಮಪಾಶಕ್ಕೆ ಬಿದ್ದಾಗ ಪತಿಯೊಬ್ಬರು ಸಾಮಾನ್ಯವಾಗಿ ಏನು ಮಾಡುತ್ತಾರೆ? ಜಗಳವಾಡುತ್ತಾರೆ ಅಥವಾ ವಿಚ್ಛೇದನ ನೀಡುತ್ತಾರೆ. ಆದರೆ ಉತ್ತರ ಪ್ರದೇಶದ ಈ ಪತಿ ಮಾತ್ರ ಎಲ್ಲರಿಗಿಂತ ಭಿನ್ನವಾಗಿ ಯೋಚಿಸಿದ್ದಾರೆ. ದಿನನಿತ್ಯದ ಸಂಸಾರ ಕಲಹಕ್ಕೆ ಬೇಸತ್ತು ತನ್ನ ಪತ್ನಿಗೆ ಅವಳ ಪ್ರೇಮಿಯ ಜೊತೆಗೇ ದೇವಸ್ಥಾನದಲ್ಲಿ ಮದುವೆ ಮಾಡಿಸಿಕೊಟ್ಟಿದ್ದಾರೆ!
ದೇವರಿ ಗ್ರಾಮದ ಬುದ್ಧಿರಾಮ್ ನಿಶಾದ್ (45) ಮತ್ತು ಫೂಲ್ಮತಿ (37) ಸುಮಾರು 21 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಇವರಿಗೆ 18 ವರ್ಷದ ಮಗ ಸೇರಿದಂತೆ ಒಟ್ಟು ಐವರು ಮಕ್ಕಳಿದ್ದಾರೆ. ಎಲ್ಲವೂ ಚೆನ್ನಾಗಿಯೇ ಸಾಗುತ್ತಿತ್ತು. ಆದರೆ, ಇತ್ತೀಚೆಗೆ 37 ವರ್ಷದ ಫೂಲ್ಮತಿಗೆ 26 ವರ್ಷದ ಅವಧೇಶ್ ಎಂಬ ಯುವಕನ ಮೇಲೆ ಪ್ರೇಮ ಅಂಕುರಿಸಿದೆ.
ಪತ್ನಿ ಫೂಲ್ಮತಿ ಪರಪುರುಷನ ಜೊತೆ ಪ್ರೇಮದಲ್ಲಿರುವುದು ತಿಳಿಯುತ್ತಿದ್ದಂತೆಯೇ ಮನೆಯಲ್ಲಿ ಪ್ರತಿದಿನ ಜಗಳಗಳು ಆರಂಭವಾದವು. ಎರಡು ತಿಂಗಳ ಹಿಂದೆ ಫೂಲ್ಮತಿ ತನ್ನ ಪ್ರೇಮಿಯ ಜೊತೆ ಮನೆ ಬಿಟ್ಟು ಓಡಿ ಹೋಗಿದ್ದರು. ಕುಟುಂಬದವರು ಹಾಗೂ ಗ್ರಾಮಸ್ಥರು ತಿಳಿಹೇಳಿ ಅವರನ್ನು ಮನೆಗೆ ವಾಪಸ್ ಕರೆತಂದಿದ್ದರೂ, ಅವರ ಮನಸ್ಸು ಮಾತ್ರ ಬದಲಾಗಿರಲಿಲ್ಲ. ಮನೆಯಲ್ಲಿ ಸದಾ ಅಸಮಾಧಾನ ಮತ್ತು ಜಗಳಗಳು ಮುಂದುವರಿದಿದ್ದವು.
ಕೊನೆಗೂ ದಿನನಿತ್ಯದ ಕಿರಿಕಿರಿಗೆ ಬೇಸತ್ತ ಬುದ್ಧಿರಾಮ್, ಒಂದು ದೊಡ್ಡ ನಿರ್ಧಾರ ತೆಗೆದುಕೊಂಡರು. ಪತ್ನಿ ಫೂಲ್ಮತಿ ಯಾರ ಜೊತೆ ಇರಲು ಬಯಸುತ್ತಾಳೆಯೋ ಅವರಿಗೇ ಅವಳನ್ನು ಒಪ್ಪಿಸಲು ನಿರ್ಧರಿಸಿದರು. ಅದರಂತೆ ಮಂಗಳವಾರ ಅಶ್ರಫ್‌ಪುರ ಗ್ರಾಮದ ಶಿವನ ದೇವಸ್ಥಾನದಲ್ಲಿ ಗ್ರಾಮಸ್ಥರ ಸಮ್ಮುಖದಲ್ಲಿ ಪತ್ನಿ ಫೂಲ್ಮತಿ ಮತ್ತು ಅವಳ ಪ್ರೇಮಿ ಅವಧೇಶ್ ಮದುವೆಯನ್ನು ಬುದ್ಧಿರಾಮ್ ನೆರವೇರಿಸಿಕೊಟ್ಟಿದ್ದಾರೆ.
ಈ ಅಪರೂಪದ ಮದುವೆಗೆ ಪತಿ ಬುದ್ಧಿರಾಮ್ ಮಾತ್ರವಲ್ಲದೆ ಇಡೀ ಗ್ರಾಮವೇ ಸಾಕ್ಷಿಯಾಗಿದೆ. ಮದುವೆಯ ನಂತರ ಸಾಂಪ್ರದಾಯಿಕವಾಗಿ ಪತ್ನಿಯನ್ನು ಪ್ರೇಮಿಯ ಜೊತೆ ಕಳುಹಿಸಿಕೊಡುವ (ಬೀಳ್ಕೊಡುಗೆ) ಕಾರ್ಯದಲ್ಲೂ ಪತಿ ಪಾಲ್ಗೊಂಡಿದ್ದರು. ಮನೆಯಲ್ಲಿ ದಿನನಿತ್ಯದ ಜಗಳದಲ್ಲಿ ಬದುಕುವುದು ನನಗೆ ಇಷ್ಟವಿಲ್ಲ. ಅವಳು ಯಾರ ಜೊತೆ ಸಂತೋಷವಾಗಿರುತ್ತಾಳೆಯೋ ಅಲ್ಲಿಗೇ ಹೋಗಲಿ ಎಂದು ನಾನು ಈ ನಿರ್ಧಾರ ಕೈಗೊಂಡೆ ಎಂದು ಬುದ್ಧಿರಾಮ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಪತಿಯ ತಾಳ್ಮೆ ಮತ್ತು ದೊಡ್ಡ ಗುಣದ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಪೊಲೀಸರಿಗೆ ಯಾವುದೇ ದೂರು ಬಂದಿಲ್ಲ ಎಂದು ವರದಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ