Up ಅಖಾಡದಲ್ಲಿ ಓವೈಸಿ-ಆಜಾದ್ ಮೈತ್ರಿಯ '150 ಟಾರ್ಗೆಟ್'; ಯಾರಿಗೆ ಲಾಭ? ಮತ್ಯಾರಿಗೆ ನಷ್ಟ?

Published : Nov 12, 2026, 07:37 PM IST
SP vs Owisi And Chandrashekhar Azad

ಸಾರಾಂಶ

ಉತ್ತರ ಪ್ರದೇಶದಲ್ಲಿ ಎಐಎಂಐಎಂ ಮತ್ತು ಆಜಾದ್ ಸಮಾಜ ಪಾರ್ಟಿ ಮೈತ್ರಿಕೂಟ 150 ಸ್ಥಾನಗಳ ಮೇಲೆ ಕಣ್ಣಿಟ್ಟಿದೆ. ಈ ದಲಿತ-ಮುಸ್ಲಿಂ ಸಮೀಕರಣವು ಸಮಾಜವಾದಿ ಪಕ್ಷಕ್ಕೆ ಆತಂಕ ತಂದಿದ್ದು, ಚುನಾವಣಾ ಲೆಕ್ಕಾಚಾರಗಳನ್ನು ಬದಲು ಮಾಡಲಿದೆ.

ಉತ್ತರ ಪ್ರದೇಶದ ರಾಜಕೀಯ ಅಖಾಡದಲ್ಲಿ ಈಗ ಹೊಸ ಲೆಕ್ಕಾಚಾರಗಳು ಶುರುವಾಗಿವೆ. ಒಟ್ಟು 403 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಯುಪಿಯಲ್ಲಿ, ಈಗ ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಮತ್ತು ಚಂದ್ರಶೇಖರ್ ಆಜಾದ್ ಅವರ ಆಜಾದ್ ಸಮಾಜ ಪಾರ್ಟಿ ಮೈತ್ರಿಕೂಟವು ಬರೋಬ್ಬರಿ 150 ಸ್ಥಾನಗಳ ಮೇಲೆ ಕಣ್ಣಿಟ್ಟಿದೆ. ದಲಿತ ಮತ್ತು ಮುಸ್ಲಿಂ (ಭೀಮ್-ಮೀಮ್) ಮತಗಳ ಕ್ರೋಢೀಕರಣದ ಗುರಿಯೊಂದಿಗೆ ಕಣಕ್ಕಿಳಿಯುತ್ತಿರುವ ಈ ಹೊಸ ಮೈತ್ರಿಕೂಟವು, ಮುಂಬರುವ ಚುನಾವಣೆಯಲ್ಲಿ ಯಾರಿಗೆ ಲಾಭ ಮಾಡಲಿದೆ ಮತ್ತು ಯಾರಿಗೆ ಕಂಟಕವಾಗಲಿದೆ ಎಂಬ ಚರ್ಚೆ ಜೋರಾಗಿದೆ.

ಸಮಾಜವಾದಿ ಪಕ್ಷಕ್ಕೆ (SP) ಎದುರಾಗಿದೆಯೇ ದೊಡ್ಡ ಆತಂಕ?

ರಾಜಕೀಯ ವಿಶ್ಲೇಷಕರ ಪ್ರಕಾರ, ಓವೈಸಿ ಮತ್ತು ಆಜಾದ್ ಮೈತ್ರಿಯಿಂದ ಅತಿ ಹೆಚ್ಚು ನಷ್ಟವಾಗುವ ಸಾಧ್ಯತೆ ಇರುವುದು ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷಕ್ಕೆ. ಸಾಂಪ್ರದಾಯಿಕವಾಗಿ ಉತ್ತರ ಪ್ರದೇಶದ ಮುಸ್ಲಿಂ ಮತ್ತು ದಲಿತ ಮತಗಳ ದೊಡ್ಡ ಭಾಗವು ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಪರವಾಗಿ ನಿಲ್ಲುತ್ತಿತ್ತು. ಪಶ್ಚಿಮ ಉತ್ತರ ಪ್ರದೇಶ ಮತ್ತು ಪೂರ್ವಾಂಚಲದ ಹಲವು ಕ್ಷೇತ್ರಗಳಲ್ಲಿ ಮುಸ್ಲಿಂ ಮತ್ತು ದಲಿತ ಮತದಾರರೇ ನಿರ್ಣಾಯಕರು. ಇಲ್ಲಿ ಓವೈಸಿ-ಆಜಾದ್ ಮೈತ್ರಿಕೂಟವು 150 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ, ಆಡಳಿತ ವಿರೋಧಿ ಮತಗಳು ವಿಭಜನೆಯಾಗಿ ಅಖಿಲೇಶ್ ಯಾದವ್ ಅವರ ಗೆಲುವಿನ ಹಾದಿ ಕಠಿಣವಾಗಬಹುದು.

ಬಿಜೆಪಿಗೆ ಲಾಭವೋ ಅಥವಾ ನಷ್ಟವೋ?

ಮತ್ತೊಂದೆಡೆ, ಈ ಮೈತ್ರಿಯು ಭಾರತೀಯ ಜನತಾ ಪಕ್ಷಕ್ಕೆ ಪರೋಕ್ಷವಾಗಿ ವರದಾನವಾಗಲಿದೆಯೇ ಎಂಬ ಪ್ರಶ್ನೆಯೂ ಇದೆ ವಿರೋಧ ಪಕ್ಷಗಳ ಮತಗಳು ಎಸ್‌ಪಿ-ಕಾಂಗ್ರೆಸ್ ಮತ್ತು ಓವೈಸಿ-ಆಜಾದ್ ಮೈತ್ರಿಕೂಟದ ನಡುವೆ ಹಂಚಿಹೋದರೆ, ಬಿಜೆಪಿ ಅಭ್ಯರ್ಥಿಗಳು ಕಡಿಮೆ ಮತಗಳ ಅಂತರದಲ್ಲಿ ಸುಲಭವಾಗಿ ಗೆಲ್ಲುವ ಅವಕಾಶ ಹೆಚ್ಚಾಗುತ್ತದೆ. ಚಂದ್ರಶೇಖರ್ ಆಜಾದ್ ಅವರು ಪಶ್ಚಿಮ ಯುಪಿಯ ಯುವ ದಲಿತ ಮತದಾರರಲ್ಲಿ ಉತ್ತಮ ಹಿಡಿತ ಹೊಂದಿದ್ದಾರೆ. ಇದು ಮಾಯಾವತಿ ಅವರ ಬಿಎಸ್‌ಪಿ ಮತಬ್ಯಾಂಕ್ ಜೊತೆಗೆ, ಬಿಜೆಪಿಯತ್ತ ವಾಲಿದ್ದ ಕೆಲವು ದಲಿತ ಮತಗಳ ಮೇಲೂ ಪರಿಣಾಮ ಬೀರಬಹುದು.

150 ಸ್ಥಾನಗಳ ಗುರಿಯ ಹಿಂದಿನ ತಂತ್ರವೇನು?

403 ಸ್ಥಾನಗಳ ಪೈಕಿ 150 ಕ್ಷೇತ್ರಗಳಲ್ಲಿ ಪ್ರಬಲ ಪೈಪೋಟಿ ನೀಡುವ ಮೂಲಕ, ಕನಿಷ್ಠ 20 ರಿಂದ 30 ಸ್ಥಾನಗಳನ್ನು ಗೆದ್ದು ಸರ್ಕಾರ ರಚನೆಯಲ್ಲಿ 'ಕಿಂಗ್ ಮೇಕರ್' ಆಗುವುದು ಈ ಮೈತ್ರಿಯ ಮುಖ್ಯ ಉದ್ದೇಶ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದರು ಅದೇ ಸತ್ಯ. ಇನ್ನು ಕೇವಲ ಮತಬ್ಯಾಂಕ್ ಆಗಿ ಉಳಿಯದೆ, ದಲಿತ ಮತ್ತು ಮುಸ್ಲಿಂ ಸಮುದಾಯಕ್ಕೆ ಸ್ವತಂತ್ರ ರಾಜಕೀಯ ನಾಯಕತ್ವ ನೀಡುವುದು ತಮ್ಮ ಗುರಿ ಎಂದು ಉಭಯ ನಾಯಕರು ಪ್ರತಿಪಾದಿಸುತ್ತಿದ್ದಾರೆ.

ಒಟ್ಟಾರೆ ಚಿತ್ರಣ ಏನು?

ಉತ್ತರ ಪ್ರದೇಶದ ರಾಜಕೀಯ ಇತಿಹಾಸದಲ್ಲಿ ಮತ ವಿಭಜನೆಯು ಯಾವಾಗಲೂ ನಿರ್ಣಾಯಕ ಪಾತ್ರ ವಹಿಸಿದೆ. ಓವೈಸಿ ಮತ್ತು ಆಜಾದ್ ಅವರ ಈ '150 ಟಾರ್ಗೆಟ್' ತಂತ್ರವು ಯಶಸ್ವಿಯಾದರೆ, ಅದು ಸಮಾಜವಾದಿ ಪಕ್ಷದ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡುವ ಸಾಧ್ಯತೆಯೇ ಹೆಚ್ಚು ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತ ಪೌರತ್ವಕ್ಕೆ ಸೋನಿಯಾ 15 ವರ್ಷ ಕಾದ ರಹಸ್ಯವೇನು? ಸಂಜಯ್​ ಗಾಂಧಿ ನಿಧನದ ಬಳಿಕವೇ ಮನಸ್ಸು ಮಾಡಿದ್ಯಾಕೆ
15 ಟ್ರಿಲಿಯನ್ ಡಾಲರ್ ಸಾಮ್ರಾಜ್ಯ ಆಳುತ್ತಿರುವ ಭಾರತೀಯರು: ಸುಂದರ್ ಪಿಚೈ, ಸತ್ಯ ನಾಡೆಲ್ಲಾ ಅಗ್ರಸ್ಥಾನ; ಕರ್ನಾಟಕದ 7 ಮಂದಿಗೂ ಸ್ಥಾನ!